ಅಧಿಕಾರದ ಆಸೆಗೆ ಮಾತೃಭಾಷೆ ಅಸ್ಮಿತೆ, ಆದರ್ಶ ಕಟ್ಟಿಟ್ಟ ಶಿವಸೇನೆಗೆ ಇದೆಂಥಾ ಗತಿ!

By Santosh Naik  |  First Published Jun 24, 2022, 7:50 PM IST

ಬಹುಶಃ 'ಸರ್ಕಾರ್'' ಬಾಳಾಸಾಹೇಬ್ ಠಾಕ್ರೆ ಇದ್ದಿದ್ದರೆ, ಇಂದು ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಇಂಥ ಗತಿ ಖಂಡಿತಾ ಬರುತ್ತಿರಲಿಲ್ಲ. ಬದುಕಿದ್ದಷ್ಟು ದಿನ ಮಾತೃಭಾಷೆ ಮರಾಠಿಯ ಅಸ್ಮಿತೆ, ಹಿಂದುತ್ವ ಹಾಗೂ ಆದರ್ಶಕ್ಕಾಗಿ ಇಡೀ ಜೀವನ ಪೂರ್ತಿ ಹೋರಾಟ ನಡೆಸಿ ಬಾಳಾ ಠಾಕ್ರೆ ಕಟ್ಟಿದ್ದ ಶಿವಸೇನೆ ಇಂದು ಮಹಾರಾಷ್ಟ್ರದಲ್ಲಿ ಬಹುತೇಕ ಕುಸಿದು ಹೋಗುವ ಸ್ಥಾನಕ್ಕೆ ಬಂದಿದೆ. ಅಧಿಕಾರದ ಆಸೆಗೆ ಸಿದ್ಧಾಂತವನ್ನು ಬಿಟ್ಟು ಎನ್‌ಸಿಪಿ ಹಾಗೂ ಕಾಂಗ್ರೆಸ್ ಜೊತೆ ಸೇರಿದ್ದ ಉದ್ಧವ್ ಠಾಕ್ರೆ ನಿರ್ಧಾರವೀಗ ಅವರಿಗೆ ಮುಳುವಾಗಿದೆ.


ಮುಂಬೈ (ಜೂನ್ 24): ಮಹಾರಾಷ್ಟ್ರದಲ್ಲಿ (maharashtra ) ಬಂಡಾಯವೆದ್ದ ಏಕನಾಥ್ ಶಿಂಧೆ (Eknath Shinde), ರೆಬಲ್ ಆದ ಬಳಿಕ ಮಾಡಿದ ಮೊದಲ ಟ್ವೀಟ್ ನಲ್ಲಿ ತಾವು ಬಾಳಾಸಾಹೇಬ್ ಅವರ ಸಿದ್ಧಾಂತವನ್ನು ನಂಬಿದ ಶಿವಸೈನಿಕರು. ಅಧಿಕಾರಕ್ಕಾಗಿ ನಮ್ಮತನವನ್ನು ನಾವೆಂದೂ ಕಳೆದುಕೊಳ್ಳೋದಿಲ್ಲ ಎಂದಿದ್ದರು. ಇದಕ್ಕೆ ಪ್ರತಿಯಾಗಿ ಉದ್ಧವ್ ಠಾಕ್ರೆ (uddhav thackeray) ಕೂಡ, ಬಾಳಾ ಠಾಕ್ರೆ ಇದ್ದ ಶಿವಸೇನೆಯೇ ಈಗಲೂ ಇದೆ ಎಂದಿದ್ದರು. ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನದ ನಡುವೆ ಪ್ರತಿಬಾರಿಯೂ ಬಾಳಾ ಠಾಕ್ರೆ ಕಟ್ಟಿ ಬೆಳೆಸಿದ ಶಿವಸೇನೆಯ ಬಗ್ಗೆಯೇ ಮಾತುಗಳು ಬರುತ್ತಿವೆ.

60ರ ದಶಕದಲ್ಲಿ ಮುಂಬೈನ ದೊಡ್ಡ ಉದ್ಯಮವನ್ನು ಗುಜರಾತಿಗಳು ಆಕ್ರಮಿಸಿಕೊಂಡಿದ್ದರು. ಅದೇ ಸಮಯದಲ್ಲಿ, ಸಣ್ಣ ವ್ಯಾಪಾರದಲ್ಲಿ ದಕ್ಷಿಣ ಭಾರತೀಯರು ಮತ್ತು ಮುಸ್ಲಿಮರ ಪಾಲು ತುಂಬಾ ಹೆಚ್ಚಿತ್ತು. ಮರಾಠಿಗರ ಮೂಲ ನೆಲವಾದ ಮಹಾರಾಷ್ಟ್ರದಲ್ಲಿ ಅವರಿಗೆ ಕೆಲಸಗಳಿರಲಿಲ್ಲ. ಈ ವೇಳೆ ಆಶಾಕಿರಣವಾಗಿ ಬಂದಿದ್ದು ಬಾಳಾಸಾಹೇಬ್ ಠಾಕ್ರೆ (Balasaheb Thackeray). ಇದೇ ವಿಚಾರವನ್ನು ಬಂಡವಾಳ ಮಾಡಿಕೊಂಡ ಬಾಳಾ ಠಾಕ್ರೆ 1966ರಲ್ಲಿ ಮರಾಠಿ ಮಾನುಸ್ ( Marathi Manush) ಬಗ್ಗೆ ಮಾತನಾಡುತ್ತಾ ಶಿವಸೇನೆಯನ್ನು (Shiv Sena) ಸ್ಥಾಪನೆ ಮಾಡಿದರು.

ಆ ಸಮಯದಲ್ಲಿ ಮುಂಬೈನಲ್ಲಿ, ಮರಾಠಿಗರು ಜನಸಂಖ್ಯೆಯ ಸುಮಾರು ಶೇ.43ರಷ್ಟಿತ್ತು. ಆದರೆ ಅವರು ಬಾಲಿವುಡ್‌ನಿಂದ ವ್ಯಾಪಾರ ಮತ್ತು ಉದ್ಯೋಗಗಳವರೆಗೆ ಎಲ್ಲದರಲ್ಲೂ ಮರಾಠಿಗರ ಸಂಖ್ಯೆ ಕಡಿಮೆ ಇತ್ತು. ಮತ್ತೊಂದೆಡೆ, ಜನಸಂಖ್ಯೆಯ 14% ಹೊಂದಿರುವ ಗುಜರಾತಿಗಳು ಇಲ್ಲಿನ ದೊಡ್ಡ ಉದ್ಯಮಗಳ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿದರು. ಸಣ್ಣ ವ್ಯಾಪಾರಗಳು ಮತ್ತು ಉದ್ಯೋಗಗಳಲ್ಲಿ ದಕ್ಷಿಣ ಭಾರತೀಯರು ಪ್ರಾಬಲ್ಯ ಹೊಂದಿದ್ದರು, ಅವರು ಜನಸಂಖ್ಯೆಯ 9% ರಷ್ಟಿದ್ದರು. 1966 ರ ಪ್ರಣಾಳಿಕೆಯಲ್ಲಿ ದಕ್ಷಿಣ ಭಾರತೀಯರು ಮರಾಠಿಗಳಿಂದ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದ ಠಾಕ್ರೆ,  ಮರಾಠಿ ಮಾತನಾಡುವ ಸ್ಥಳೀಯ ಜನರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕೆಂದು ಒತ್ತಾಯಿಸಿ ಅವರು ಆಂದೋಲನವನ್ನು ಪ್ರಾರಂಭಿಸಿದರು. ದಕ್ಷಿಣ ಭಾರತೀಯರ ವಿರುದ್ಧ 'ಪುಂಗಿ ಬಜಾವೋ ಔರ್ ಲುಂಗಿ ಹಟಾವೋ' ಅಭಿಯಾನವನ್ನು ಆರಂಭಿಸಿದ್ದರು. ಠಾಕ್ರೆ ತಮಿಳು ಭಾಷೆಯ ಬಗ್ಗೆ ಅಪಹಾಸ್ಯ ಮಾಡುತ್ತಾ ಅವರನ್ನು ‘ಯಂಡುಗುಂಡು’ ಎಂದು ಕರೆಯುತ್ತಿದ್ದರು.

1987ರಿಂದ ಹಿಂದುತ್ವ: 1980ರ ವೇಳೆ ಮುಂಬೈ ಹಾಗೂ ಮಹಾರಾಷ್ಟ್ರದಲ್ಲಾಗುವ ಪ್ರತಿ ಸಮಸ್ಯೆಗಳಿಗೆ ಪರಿಹಾರ ಬಾಳಾ ಠಾಕ್ರೆಯಿಂದ ಮಾತ್ರ ಸಿಗುತ್ತಿತ್ತು. ಯುವಕರ ಪಾಲಿಗೆ ಗಾಡ್‌ ಫಾದರ್ ಎನಿಸಿಕೊಂಡ ಬಾಳಾ ಠಾಕ್ರೆ 1987ರ ಸಮಯದಲ್ಲಿ ಶಿವಸೇನೆಯ ಅಜೆಂಡಾದಲ್ಲಿ ಹಿಂದುತ್ವವನ್ನು ಸೇರಿಸಿಕೊಂಡು ಅದರಿಂದ ಲಾಭ ಪಡೆಯಲು ಆರಂಭಿಸಿದರು.  ಡಿಸೆಂಬರ್ 1987 ರಲ್ಲಿ ಮುಂಬೈನ ವಿಲೇಪಾರ್ಲೆ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಮೊದಲ ಬಾರಿಗೆ, ಶಿವಸೇನೆ ಹಿಂದುತ್ವದ ಕುರಿತಾಗಿ ಆಕ್ರಮಣಕಾರಿಯಾಗಿ ಪ್ರಚಾರ ಮಾಡಿತು. ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ನಟರಾದ ಮಿಥುನ್ ಚಕ್ರವರ್ತಿ ಮತ್ತು ನಾನಾ ಪಾಟೇಕರ್ ಶಿವಸೇನೆಯ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದರು. ಚುನಾವಣೆಯಲ್ಲಿ ಹಿಂದುತ್ವದ ಹೆಸರಿನಲ್ಲಿ ಮತ ಯಾಚಿಸಿದ್ದ ಕಾರಣಕ್ಕೆ ಚುನಾವಣಾ ಆಯೋಗ 6 ವರ್ಷಗಳ ಕಾಲ ಠಾಕ್ರೆಯಿಂದ ಮತದಾನದ ಹಕ್ಕನ್ನು ಕಸಿದುಕೊಂಡಿತ್ತು. 2006 ರಲ್ಲಿ, ಶಿವಸೇನೆಯ 40 ನೇ ಸಂಸ್ಥಾಪನಾ ದಿನದಂದು, ಬಾಳ್ ಠಾಕ್ರೆ ಮುಸ್ಲಿಮರನ್ನು ದೇಶ ವಿರೋಧಿಗಳು ಎಂದು ಬಣ್ಣಿಸಿದ್ದರು. ಷಣ್ಮುಖಾನಂದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮುಸ್ಲಿಮರನ್ನು ‘ಹಸಿರು ವಿಷ’ ಎಂದು ಕರೆದಿದ್ದರು. 

ಬಾಳಾ ಸಾಹೇಬ್ ಇರುವ ಅಷ್ಟೂ ದಿನ ಮಹಾರಾಷ್ಟ್ರದ ರಾಜಕೀಯದಲ್ಲಿ ಶಿವಸೇನೆಯೇ ದೊಡ್ಡಣ್ಣನಾಗಿತ್ತು. 1989ರ ಲೋಕಸಭೆ ಚುನಾವಣೆಗೂ ಮುನ್ನ ಮೊದಲ ಬಾರಿಗೆ ಹಿಂದುತ್ವದ ನೆರಳಿನಲ್ಲಿ ಬಿಜೆಪಿ ಮತ್ತು ಶಿವಸೇನೆ ನಡುವೆ ಮೈತ್ರಿ ಏರ್ಪಟ್ಟಿತ್ತು. 1990ರ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆ 183 ಸ್ಥಾನಗಳಲ್ಲಿ ಸ್ಪರ್ಧಿಸಿ 52ರಲ್ಲಿ ಗೆಲುವು ಸಾಧಿಸಿದರೆ, ಬಿಜೆಪಿ 104 ಸ್ಥಾನಗಳಲ್ಲಿ ಸ್ಪರ್ಧಿಸಿ 42ರಲ್ಲಿ ಗೆಲುವು ಸಾಧಿಸಿತ್ತು. ಆಗ ಶಿವಸೇನೆಯ ಮನೋಹರ ಜೋಶಿ ವಿರೋಧ ಪಕ್ಷದ ನಾಯಕರಾದರು. 1995ರಲ್ಲಿ ಬಿಜೆಪಿ-ಶಿವಸೇನೆ ಒಟ್ಟಾಗಿ ಚುನಾವಣೆ ಎದುರಿಸಿದ್ದವು. ಶಿವಸೇನೆ 73, ಬಿಜೆಪಿ 65 ಸ್ಥಾನಗಳನ್ನು ಗೆದ್ದಿವೆ. ಬಾಳಾಸಾಹೇಬ್ ಠಾಕ್ರೆ ಯಾವ ಪಕ್ಷ ಹೆಚ್ಚು ಸ್ಥಾನ ಪಡೆಯುತ್ತದೋ ಅವರೇ ಮುಖ್ಯಮಂತ್ರಿ ಎಂಬ ಸೂತ್ರವನ್ನು ನೀಡಿದ್ದರು. ಇದರ ಆಧಾರದ ಮೇಲೆ ಮನೋಹರ್ ಜೋಶಿ ಅವರಿಗೆ ಸಿಎಂ ಕುರ್ಚಿ ಹಾಗೂ ಬಿಜೆಪಿಯ ಗೋಪಿನಾಥ್ ಮುಂಡೆ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಲಭಿಸಿತ್ತು.

ಯಾವ ಘಟನೆಗೂ ನಾನು ಕಣ್ಣೀರು ಹಾಕೋದಿಲ್ಲ: ಮುಂಬೈ ಗಲಭೆಯ (Mumbai Roits) ಬಳಿಕ ಎಲ್ಲಾ ಕಡೆ ಠಾಕ್ರೆ ಕುರಿತಾಗಿ ಮಾತುಗಳು ಬರುತ್ತಿದ್ದವು. ಇದೇ ವಿಚಾರವನ್ನಿಟ್ಟುಕೊಂಡು 1995ರಲ್ಲಿ ಮಣಿರತ್ನಂ "ಬಾಂಬೆ' ಎನ್ನುವ ಚಿತ್ರ ಮಾಡಿದ್ದರು. ಈ ಚಿತ್ರದಲ್ಲಿ ಶಿವ ಸೈನಿಕರನ್ನು ಗಲಭೆಕೋರರ ರೀತಿ ಚಿತ್ರಿಸಲಾಗಿತ್ತು.ಚಿತ್ರದ ಕೊನೆಯಲ್ಲಿ ಬಾಳಾ ಠಾಕ್ರೆ ರೀತಿಯ ಪಾತ್ರವನ್ನು ಪೋಷಿಸಿದ್ದ ವ್ಯಕ್ತಿ ಗಲಭೆಯ ಕುರಿತಾಗಿ ಕಣ್ಣೀರು ಹಾಕಿ ಬೇಸರ ವ್ಯಕ್ತಪಡಿಸುವ ದೃಶ್ಯವಿತ್ತು. ಈ ಚಿತ್ರಕ್ಕೆ ಬಾಳಾ ಸಾಹೇಬ್ ಠಾಕ್ರೆ ವಿರೋಧ ವ್ಯಕ್ತಪಡಿಸಿ, ಮುಂಬೈನಲ್ಲಿ ಈ ಚಿತ್ರ ಬಿಡುಗಡೆಯಾಗಕೂಡದು ಎಂದಿದ್ದರು. ಮಹಾರಾಷ್ಟ್ರದಲ್ಲಿ ಈ ಚಿತ್ರದ ವಿತರಣೆ ಪಡೆದುಕೊಂಡಿದ್ದ ನಟ ಅಮಿತಾಭ್ ಬಚ್ಛನ್, ಮಾತೋಶ್ರೀಗೆ ಬಂದು ಠಾಕ್ರೆ ಅವರನ್ನು ಭೇಟಿಯಾಗಿದ್ದರು. ಶಿವಸೈನಿಕರ ಬಗ್ಗೆ ಕೆಟ್ಟದಾಗಿ ತೋರಿಸಿದ್ದಲ್ಲಿ ಮಹಾರಾಷ್ಟ್ರದಲ್ಲಿ ಇದರ ವಿತರಣೆ ಮಾಡುವುದಿಲ್ಲ ಎಂದು ಠಾಕ್ರೆಗೆ ಹೇಳಿದ್ದರು. ಅದಕ್ಕೆ ಉತ್ತರಿಸಿದ್ ಠಾಕ್ರೆ, ನನಗೆ ಅದಕ್ಕೆ ಬೇಸರವಿಲ್ಲ. ಚಿತ್ರದ ಕೊನೆಯಲ್ಲಿ ನನ್ನ ರೀತಿಯ ಪಾತ್ರ ಮಾಡಿರುವ ವ್ಯಕ್ತಿ ಬೇಸರ ವ್ಯಕ್ತಪಡಿಸುತ್ತಾನೆ. ನಾನು ಇಂಥ ಗಲಭೆಗಳ ವಿಚಾರವಾಗಿ ಎಂದಿಗೂ ಕಣ್ಣೀರು ಹಾಕೋದಿಲ್ಲ ಎನ್ನುವುದು ನಿಮಗೆ ಗೊತ್ತಿಲ್ವೇ ಎಂದು ಪ್ರಶ್ನೆ ಮಾಡಿದ್ದರು.

ಮೋದಿ ಹೋದ್ರೆ, ಗುಜರಾತ್ ಕೂಡ ಹೋಗುತ್ತೆ ಅಂತಾ ಆಡ್ವಾಣಿಗೆ ಹೇಳಿದ್ರು ಬಾಳಾಸಾಹೇಬ್ ಠಾಕ್ರೆ!

ಸಚಿನ್ ಗೆ ಬಾಯ್ಮುಚ್ಚಿಕೊಂಡಿರಬೇಕು ಎಂದಿದ್ದ ಠಾಕ್ರೆ: 2009ರಲ್ಲಿ ಎಲ್ಲಾ ಭಾರತೀಯರಿಗೂ ಮುಂಬೈನಲ್ಲಿ ಸಮಾನ ಹಕ್ಕಿದೆ ಎಂದು ಕ್ರಿಕೆಟಿಗ ಸಚಿನ್ ತೆಂಡುಲ್ಕರ್ (Sachin Tendulkar) ಹೇಳಿದ್ದ ಮಾತಿಗೆ ಕಿಡಿಕಿಡಿಯಾಗಿದ್ದ ಬಾಳಾ ಠಾಕ್ರೆ, "ನಿಮ್ಮ ಸಿಕ್ಸರ್ ಹಾಗೂ ಬೌಂಡರಿಗಳನ್ನು ನಾವು ಇಷ್ಟಪಡುತ್ತೇವೆ. ಆದರೆ, ನಿಮ್ಮ ನಾಲಿಗೆಯನ್ನು ಇಲ್ಲಿ ಬಳಸಲು ಬರಬೇಡಿ. ನಾವು ಇದನ್ನು ಸಹಿಸೋದಿಲ್ಲ' ಎಂದು ಖಡಕ್ ಆಗಿ ಹೇಳಿದ್ದರು.

ತಂದೆ ಕಟ್ಟಿದ್ದ ಶಿವಸೈನ್ಯವೇ ಮಗನಿಗೆ ಮುಳುವಾಗಿದ್ದು ಏಕೆ?

ಸಿಎಂ ನೀನೇ ಆದರೆ ರಿಮೋಟ್‌ ನನ್ನ ಹತ್ರ ಇರುತ್ತೆ: 1995ರಲ್ಲಿ ಆಪ್ತ ಮನೋಹರ್ ಜೋಶಿ ಅವರನ್ನು ಸಿಎಂ ಆದ ಬಳಿಕ ಬಾಳಾ ಠಾಕ್ರೆ ಅವರಿಗೆ ನೇರವಾಗಿ ಒಂದು ಮಾತು ಹೇಳಿದ್ದರು. ನೀನು ಸಿಎಂ ಇರಬಹುದು. ಆದರೆ, ಸರ್ಕಾರದ ರಿಮೋಟ್ ಕಂಟ್ರೋಲ್ ನ್ನ ಹತ್ರ ಇರುತ್ತೆ. ನನಗೆ ಅನಿಸಿದ ಹಾಗೆ ಸರ್ಕಾರ ನಡೆಸ್ತೀನಿ' ಎಂದು ನೇರವಾಗಿ ಹೇಳಿದ್ದರು.

Tap to resize

Latest Videos

click me!