ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ದಾಖಲಾಗಿರುವ ಕೇಸು ಹಿಂಪಡೆಯುವ ವಿಚಾರದ ಬಗ್ಗೆ ಬಿಜೆಪಿ ನಾಯಕರಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿರುಗೇಟು ನೀಡಿದ್ದು, ‘ಕೇಸು ಹಿಂಪಡೆಯುವ ಬಗ್ಗೆ ಯಾವುದೇ ಪ್ರಕ್ರಿಯೆ ನಡೆದಿಲ್ಲ.
ಬೆಂಗಳೂರು (ಅ.05): ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ದಾಖಲಾಗಿರುವ ಕೇಸು ಹಿಂಪಡೆಯುವ ವಿಚಾರದ ಬಗ್ಗೆ ಬಿಜೆಪಿ ನಾಯಕರಿಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿರುಗೇಟು ನೀಡಿದ್ದು, ‘ಕೇಸು ಹಿಂಪಡೆಯುವ ಬಗ್ಗೆ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಹೀಗಿದ್ದರೂ ಟೀಕೆ ಮಾಡುತ್ತಿರುವ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳು ಎಷ್ಟು ಕೇಸು ಹಿಂಪಡೆದಿದ್ದಾರೆ ಎಂಬ ಅಂಕಿ-ಅಂಶ ಬಿಚ್ಚಿಡಲೇ?‘ ಎಂದು ಪ್ರಶ್ನಿಸಿದ್ದಾರೆ.
ಯಾರದೋ ಮನವಿ ಆಧಾರದಮೇಲೆ ಉಪಮುಖ್ಯಮಂತ್ರಿಗಳು ಶಿಫಾರಸು ಪತ್ರ ಬರೆದಿದ್ದಾರೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಇವರಿಗೆ ಕೇಸು ಹಿಂಪಡೆಯಲು ಎಷ್ಟೆಲ್ಲಾ ಪ್ರಕ್ರಿಯೆ ಇರುತ್ತದೆ ಎಂಬುದು ಗೊತ್ತಿಲ್ಲವೇ? ಎಂದು ಕಿಡಿ ಕಾರಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ಯಾವುದೇ ಗಲಭೆ ಪ್ರಕರಣಗಳಲ್ಲಿ ಆರೋಪಿಗಳ ಮೇಲಿನ ಪ್ರಕರಣ ಹಿಂಪಡೆಯಬೇಕಾಗಿದ್ದರೆ ಶಾಸಕರು ಸಚಿವರಿಗೆ ಅಥವಾ ಗೃಹ ಇಲಾಖೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾರೆ. ಅದನ್ನು ನಾವು ಸಚಿವ ಸಂಪುಟ ಉಪ ಸಮಿತಿ ಮುಂದಿಟ್ಟು ಚರ್ಚೆ ನಡೆಸುತ್ತೇವೆ.
ಸಾಧಕ-ಬಾಧಕಗಳನ್ನು ಚರ್ಚೆ ಮಾಡಿ ಕಾನೂನು ಪ್ರಕಾರ ತೆಗೆಯಬಹುದಾ? ತೆಗೆಯಬಾರದಾ? ಏನೇನು ಸೆಕ್ಷನ್ ಹಾಕಿರುತ್ತಾರೆ ಎಲ್ಲವನ್ನು ಪರಿಶೀಲನೆ ಮಾಡುತ್ತೇವೆ ಎಂದರು. ಬಳಿಕ ಅವರು ಅಮಾಯಕರು, ಗಲಭೆಗೂ ಅವರಿಗೂ ಸಂಬಂಧವಿಲ್ಲ. ಹೀಗಾಗಿ ಅವರ ಮೇಲಿನ ಪ್ರಕರಣಗಳನ್ನು ತೆಗೆಯಬಹುದು ಎಂಬ ಅಭಿಪ್ರಾಯ ಬಂದರೆ ಆ ಕುರಿತ ನಡಾವಳಿಗಳನ್ನು ಸಚಿವ ಸಂಪುಟ ಸಭೆಗೆ ತೆಗೆದುಕೊಂಡು ಹೋಗುತ್ತೇವೆ. ಅದನ್ನು ಸಚಿವ ಸಂಪುಟ ಅಂಗೀಕರಿಸಬೇಕು. ಸಚಿವ ಸಂಪುಟ ನಿರಾಕರಿಸಲೂಬಹುದು. ಹೀಗಿದ್ದಾಗ ಒಂದು ಪತ್ರ ಬರೆದರು ಎಂದು ಬೊಬ್ಬೆ ಹೊಡೆದರೆ ಏನು ಮಾಡಬೇಕು? ಎಂದು ಪ್ರಶ್ನಿಸಿದರು.
ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಕ್ಷಣಗಣನೆ: ಅರಮನೆಯಲ್ಲಿ ಯಾವ ದಿನ ಏನೇನು ಕಾರ್ಯಕ್ರಮ ಗೊತ್ತಾ?
ಒಂದು ವೇಳೆ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಕೊಟ್ಟಿದ್ದರೆ ಅದನ್ನು ನಮಗೆ ಕಳುಹಿಸುತ್ತಾರೆ. ನಾವು ಅದನ್ನು ಪರಿಶೀಲಿಸಿ ಸಚಿವ ಸಂಪುಟ ಸಭೆಗೆ ತೆಗೆದುಕೊಂಡು ಹೋಗುತ್ತೇವೆ. ಅದೇ ರೀತಿ ಅವರು ಉಪಮುಖ್ಯಮಂತ್ರಿಗಳಿಗೆ ಮನವಿ ಪತ್ರ ಕೊಟ್ಟಿದ್ದಾರೆ. ಹೀಗಾಗಿ ಅವರು ಪತ್ರ ಬರೆದಿರಬಹುದು. ಆದರೆ ಪತ್ರವನ್ನು ನಾನು ಇನ್ನೂ ನೋಡಿಲ್ಲ. ಪತ್ರ ಬರೆದಿದ್ದರೂ ತಪ್ಪೇನೂ ಇಲ್ಲ ಎಂದು ಸಮರ್ಥಿಸಿಕೊಂಡರು.