
ಬೆಂಗಳೂರು (ಏ.23): ಕೆ.ಜಿ.ಹಳ್ಳಿ-ಡಿ.ಜೆ.ಹಳ್ಳಿ ಗಲಭೆ ಹಾಗೂ ಹುಬ್ಬಳ್ಳಿ ಗಲಭೆಗೆ ಸಾಮ್ಯತೆ ಇದೆ. ಎರಡೂ ಪ್ರಕರಣದಲ್ಲಿ ಸಾಕಷ್ಟು ಮಂದಿಯನ್ನು ಬಂಧಿಸಿದ್ದೇವೆ. ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದರು. ಅಲ್ಲದೆ, ಹಿಂದೆ ಸಿದ್ದರಾಮಯ್ಯ (Siddaramaiah) ನೇತೃತ್ವದ ಸರ್ಕಾರದಲ್ಲಿ ಸಾಕಷ್ಟು ಜನರ ಮೇಲಿನ ಪ್ರಕರಣಗಳನ್ನು ಹಿಂಪಡೆದಿದ್ದರು. ಅದರ ಫಲವನ್ನು ನಾವು ಅನುಭವಿಸುತ್ತಿದ್ದೇವೆ ಎಂದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಹಾಗೂ ಹುಬ್ಬಳ್ಳಿ ಗಲಭೆಗೆ ಸಾಮ್ಯತೆ ಇದೆ. ಪೊಲೀಸರು ಸ್ವಲ್ಪ ಬಲಹೀನರಾಗಿದ್ದರೂ ಹುಬ್ಬಳ್ಳಿ ಹೊತ್ತಿ ಉರಿಯುತ್ತಿತ್ತು. ಈ ನಿಟ್ಟಿನಲ್ಲಿ ಪೊಲೀಸರು ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದು, ಅವರಿಗೆ ಅಭಿನಂದನೆ ಸಲ್ಲಿಸಬೇಕು. ಈ ಪ್ರಕರಣಗಳ ಹಿಂದಿನ ದೇಶದ್ರೋಹಿ ಸಂಘಟನೆಗಳು ಹೊರಬರಬೇಕು. ಅದಕ್ಕಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.
ರಾಜ್ಯ ಕಾಂಗ್ರೆಸ್ ರಣತಂತ್ರಕ್ಕೆ ಸುನಿಲ್: 2014ರಲ್ಲಿ ಮೋದಿ ಪರ ಕೆಲಸ ಮಾಡಿದ್ದ ತಂತ್ರಗಾರ!
ದಿವ್ಯಾ ಹಾಗರಗಿ ಬಂಧನ ಖಚಿತ: ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಅಕ್ರಮ ವಿಚಾರವಾಗಿ ಪ್ರತಿಕ್ರಿಯಿಸಿ, ಸಣ್ಣ ಮಾಹಿತಿ ದೊರೆತ ತಕ್ಷಣ ಮುಖ್ಯಮಂತ್ರಿಗಳ ಅನುಮತಿ ಪಡೆದು ಪ್ರಕರಣವನ್ನು ಸಿಐಡಿಗೆ ವಹಿಸಿದ್ದೇವೆ. ಪ್ರಕರಣದಲ್ಲಿ ಎಲ್ಲವನ್ನೂ ಬಗೆದು ಬೇರು ಸಹಿತ ಹೊರ ತೆಗೆಯುತ್ತೇವೆ. ಹೀಗಾಗಿ ದಿವ್ಯಾ ಹಾಗರಗಿ ಅವರನ್ನೂ ಬಿಡುವ ಪ್ರಶ್ನೆಯೇ ಇಲ್ಲ. ಅವರನ್ನು ಬಂಧಿಸದೆ ಬಿಟ್ಟರೆ ಅದು ವೈಫಲ್ಯವಾಗುತ್ತದೆ ಎಂದು ಹೇಳಿದರು. ಅವರು ಎಲ್ಲೇ ಇದ್ದರೂ ಬಂಧನ ಮಾಡುತ್ತೇವೆ. ಅವರು ನಿನ್ನೆ ನ್ಯಾಯಾಲಯಕ್ಕೆ ಹೋಗಿ ನಿರೀಕ್ಷಣಾ ಜಾಮೀನಿಗೆ ಮನವಿ ಮಾಡಿದ್ದರೂ ಜಾಮೀನು ದೊರೆತಿಲ್ಲ ಎನ್ನುವ ಮಾಹಿತಿ ಇದೆ. ಅವರಿಗೊಂದು ಇವರಿಗೊಂದು ಮಾಡುವುದಿಲ್ಲ. ನಮ್ಮ ಆಡಳಿತದಲ್ಲಿ ಎಲ್ಲರಿಗೂ ಒಂದೇ ಕಾನೂನು ಎಂದು ಹೇಳಿದರು.
ಸುಪ್ರೀಂ ಆದೇಶ ಪಾಲಿಸಬೇಕು: ರಂಜಾನ್ ವೇಳೆ ಭಜನೆ ಮಾಡುತ್ತೇವೆಂಬ ಕೆಲ ಹಿಂದೂಪರ ಸಂಘಟನೆಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸುಪ್ರೀಂಕೋರ್ಚ್ ಆದೇಶವನ್ನು ಎಲ್ಲರೂ ಪಾಲಿಸಬೇಕು. ಪೊಲೀಸರು ಸುಪ್ರೀಂಕೋರ್ಚ್ ಆದೇಶವನ್ನು ಪಾಲಿಸಿ ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದರು. ಧ್ವನಿವರ್ಧಕ ಬಳಕೆ ಕುರಿತು ವೇಣುಗೋಪಾಲಸ್ವಾಮಿ ದೇವಸ್ಥಾನಕ್ಕೆ ನೋಟಿಸ್ ನೀಡಿರುವ ಕುರಿತು ಮಾಹಿತಿ ಇಲ್ಲ. ಮಾಹಿತಿ ತರಿಸಿಕೊಂಡು ಉತ್ತರಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಗೃಹ ಸಚಿವರ ಕಾರ್ಯವೈಖರಿ ಬಗ್ಗೆ ಅಸಮಾಧಾನ, ಅರಗ ಖಾತೆ ಬದಲು: ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಕಾರ್ಯನಿರ್ವಹಣೆ ಬಗ್ಗೆ ಸ್ವಪಕ್ಷೀಯರಿಂದ ಬಹಿರಂಗವಾಗಿ ಅಸಮಾಧಾನ ವ್ಯಕ್ತವಾಗುತ್ತಿರುವ ಮಧ್ಯೆಯೇ ಶೀಘ್ರದಲ್ಲಿಯೇ ನಡೆಯಲಿದೆ ಎನ್ನಲಾದ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವೇಳೆ ಅವರ ಖಾತೆ ಬದಲಾವಣೆ ಮಾಡುವ ಬಗ್ಗೆ ಬಿಜೆಪಿ ಪಾಳೆಯದಲ್ಲಿ ಗುಸುಗುಸು ಕೇಳಿಬರುತ್ತಿದೆ. ಪಕ್ಷದಲ್ಲಿ ಹಿರಿಯರಾಗಿದ್ದರೂ ಮೊದಲ ಬಾರಿಗೆ ಸಚಿವ ಸ್ಥಾನದ ಜವಾಬ್ದಾರಿ ಹೊತ್ತುಕೊಂಡಿದ್ದರಿಂದಲೋ ಏನೋ ಎಂಬಂತೆ ಆರಗ ಜ್ಞಾನೇಂದ್ರ ಅವರು ತಮಗೆ ನೀಡಿದ ಗೃಹ ಖಾತೆ ನಿಭಾಯಿಸಲು ಪ್ರಯತ್ನ ಮಾಡುತ್ತಿದ್ದರೂ ಪಕ್ಷದ ವರಿಷ್ಠರಿಗೆ ಸಮಾಧಾನ ಇದ್ದಂತಿಲ್ಲ.
ಇದಕ್ಕೆ ಪೂರಕ ಎಂಬಂತೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಕೇಂದ್ರದ ಗೃಹ ಸಚಿವ ಅಮಿತ್ ಶಾ ರೀತಿ ಕಾರ್ಯನಿರ್ವಹಿಸಬೇಕು ಎಂಬುದನ್ನು ಹೋಲಿಕೆಯೊಂದಿಗೆ ಸೂಚ್ಯವಾಗಿ ಹೇಳಿದ್ದರು. ಅದರ ಬೆನ್ನಲ್ಲೇ ಪಕ್ಷದ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ರಾಜೂಗೌಡ ಅವರು ಬಹಿರಂಗವಾಗಿಯೇ ಆರಗ ಜ್ಞಾನೆಂದ್ರ ಅವರ ಬಗ್ಗೆ ಆಕ್ಷೇಪ ಎತ್ತಿದ್ದಾರೆ. ಯತ್ನಾಳ ಅವರಂತೂ ರಾಜ್ಯಕ್ಕೆ ಒಬ್ಬ ಸಮರ್ಥ ಗೃಹ ಸಚಿವರು ಬೇಕಾಗಿದ್ದಾರೆ ಎಂಬುದಾಗಿ ಜಾಹೀರಾತು ನೀಡಬೇಕಿದೆ ಎಂದು ತೀಕ್ಷ್ಣವಾಗಿಯೇ ಹೇಳಿದ್ದಾರೆ.
Karnataka Politics: ದಲಿತರ ಕಲ್ಯಾಣದ 7885 ಕೋಟಿ ಅಕ್ರಮ ಬಳಕೆ: ಸಿದ್ದರಾಮಯ್ಯ
ಇದೇ ವೇಳೆ ಅನೇಕ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಗೃಹಸಚಿವರ ಕಾರ್ಯವೈಖರಿ ವಿರುದ್ಧ ಹರಿಹಾಯುತ್ತಿದ್ದಾರೆ. ಇತ್ತೀಚಿನ ಹಲವು ಬೆಳವಣಿಗೆಗಳಲ್ಲಿ ಗೃಹ ಸಚಿವರು ತಮ್ಮ ಪಾತ್ರ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಕಟುವಾಗಿ ಟೀಕೆ ಮಾಡುತ್ತಿರುವುದನ್ನು ಸಂಘ ಪರಿವಾರದ ಮುಖಂಡರು ಹಾಗೂ ಬಿಜೆಪಿ ನಾಯಕರು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಮೇಲಾಗಿ ಇದು ಚುನಾವಣಾ ವರ್ಷವಾದ್ದರಿಂದ ಸಮರ್ಥವಾದ ಗೃಹ ಸಚಿವರು ಇಲ್ಲದಿದ್ದರೆ ಅನಗತ್ಯ ತೊಂದರೆ ಎದುರಾಗಬಹುದು. ಈಗಲೇ ಸರಿಪಡಿಸಿಕೊಳ್ಳುವುದು ಸೂಕ್ತ ಎಂಬ ಭಾವನೆಯನ್ನೂ ಹಲವು ಬಿಜೆಪಿ ಮುಖಂಡರು ಹಿರಿಯ ನಾಯಕರಲ್ಲಿ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.