ಈಗಷ್ಟೇ ಸಂಸದೆಯಾಗಿ ಆಯ್ಕೆಯಾಗಿ ಹೆಮ್ಮೆಯಿಂದ ಬೀಗುತ್ತಿರುವ ನಟಿ ಕಂಗನಾ ರಣಾವತ್ ವಿರುದ್ಧ ಹೈಕೋರ್ಟ್ನಲ್ಲಿ ಅರ್ಜಿ ದಾಖಲಾಗಿದೆ. ಏನಿದು ವಿವಾದ?
ನೂತನ ಸಂಸದೆ, ಬಾಲಿವುಡ್ ತಾರೆ ಕಂಗನಾ ರಣಾವತ್ ಎಂದರೇನೇ ಕಾಂಟ್ರವರ್ಸಿ ಎನ್ನುವ ಹೆಸರು ಮುಂಚಿನಿಂದಲೂ ಇದೆ. ಮನಸ್ಸಿಗೆ ಅನ್ನಿಸಿದ್ದನ್ನು ನೇರಾನೇರ ಹೇಳುವ ನಟಿಯಾಗಿದ್ದ ಕಂಗನಾ, ಈಗಲೂ ಸಂಸದೆಯಾದ ಮೇಲೂ ಮನಸ್ಸಿನ ಮಾತುಗಳನ್ನು ಯಾರ ಮುಜುಗರಕ್ಕೂ ಒಳಗಾಗದೇ ಹೇಳಿ ಕೆಲವೊಮ್ಮೆ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ರಾಜಕೀಯ ಪ್ರವೇಶ ಮಾಡುತ್ತಿದ್ದಂತೆಯೇ ಪ್ರಥಮ ಹಂತದಲ್ಲಿಯೇ ಲೋಕಸಭೆಯನ್ನು ಪ್ರವೇಶಿಸಲಿರುವ ಅದರಲ್ಲಿಯೂ ಭರ್ಜರಿ ಗೆಲುವಿನೊಂದಿಗೆ ಸಂಸದೆಯಾಗಿರುವ ಕಂಗನಾ ಈಚೆಗೆ ಸಿಐಎಸ್ಎಫ್ ಮಹಿಳಾ ಸೆಕ್ಯುರಿಟಿ ಸಿಬ್ಬಂದಿಯೊಬ್ಬರಿಂದ ಹೊಡೆಸಿಕೊಂಡ ಸುದ್ದಿ ಭಾರಿ ಹಲ್ಚಲ್ ಸೃಷ್ಟಿಸಿತ್ತು. ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಕಂಗನಾ ಗೆಲುವು ಸಾಧಿಸುತ್ತಿದ್ದಂತೆಯೇ ಈ ಘಟನೆ ಅಭಿಮಾನಿಗಳನ್ನು ದಂಗು ಬಡಿಸಿತ್ತು. ಆದರೆ ಈಗ ಕಂಗನಾ ಬೆನ್ನಿಗೆ ಇನ್ನೊಂದು ವಿವಾದ ಅಂಟುಕೊಂಡಿದೆ. ಇದರಿಂದ ಹಿಮಾಚಲ ಪ್ರದೇಶ ಹೈಕೋರ್ಟ್ ಸಂಸದೆಗೆ ನೋಟಿಸ್ ಜಾರಿಗೆ ಆದೇಶಿಸಿದೆ.
ಕಂಗನಾ ರಣಾವತ್ ವಿರುದ್ಧ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿರುವವರು ಮಂಡಿ ಕ್ಷೇತ್ರದ ಲೋಕಸಭಾ ಚುನಾವಣಾ ಆಕಾಂಕ್ಷಿಯಾಗಿದ್ದ ಕಿನ್ನೌರ್ ನಿವಾಸಿ ಲಾಯಿಕ್ ರಾಮ್ ನೇಗಿ. ಕಂಗನಾ ಆಯ್ಕೆಯನ್ನೇ ಇವರು ಪ್ರಶ್ನೆ ಮಾಡಿದ್ದಾರೆ. ಕಂಗನಾ ಅವರನ್ನು ಸಂಸದ ಸ್ಥಾನದಿಂದ ವಜಾಗೊಳಿಸುವಂತೆ ಅವರು ಕೋರಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಂಗನಾ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ವಿರುದ್ಧ 74,755 ಮತಗಳ ಅಂತರದಿಂದ ಗೆದ್ದಿದ್ದಾರೆ. ಲಾಯಿಕ್ ಅವರ ಪ್ರಕಾರ, ಕಂಗನಾ ಗೆಲ್ಲದಿದ್ದರೆ ತಾವು ಗೆಲುವು ಸಾಧಿಸುತ್ತಿದ್ದೆವು ಎನ್ನುವುದು.
ಕಂಗನಾ ಸ್ನೇಹ ವಿವರಿಸುತ್ತಲೇ ಮದುವೆ ವಿಷಯ ತಿಳಿಸಿದ ತರುಣಿಯರ ಕ್ರಷ್ ಸಂಸದ ಚಿರಾಗ್ ಪಾಸ್ವಾನ್!
ಅಷ್ಟಕ್ಕೂ ಅರ್ಜಿದಾರರ ಆರೋಪ ಏನೆಂದರೆ, ಚುನಾವಣೆ ವೇಳೆ ತಮ್ಮ ನಾಮಪತ್ರವನ್ನು ಚುನಾವಣಾ ಅಧಿಕಾರಿ (ಮಂಡಿಯ ಜಿಲ್ಲಾಧಿಕಾರಿ) ಅನ್ಯಾಯವಾಗಿ ತಿರಸ್ಕರಿಸಿದ್ದರು ಎನ್ನುವುದು. ಮಂಡಿ ಕ್ಷೇತ್ರದಿಂದ ನಾನು ಕೂಡ ಸ್ಪರ್ಧಿಸಲು ಬಯಸಿದ್ದೆ. ಆದರೆ ನನ್ನ ನಾಮಪತ್ರವನ್ನು ಚುನಾವಣಾಧಿಕಾರಿಗಳು ತಪ್ಪಾಗಿ ತಿರಸ್ಕರಿಸಿದ್ದಾರೆ. ನನ್ನ ನಾಮಪತ್ರವನ್ನು ಸರಿಯಾಗಿ ಪರಿಶೀಲಿಸಿ ಅಂಗೀಕರಿಸಿದ್ದರೆ ಚುನಾವಣೆಯಲ್ಲಿ ಗೆಲ್ಲುತ್ತಿದ್ದೆ ಎಂದು ಅರ್ಜಿಯಲ್ಲಿ ಅವರು ನಮೂದು ಮಾಡಿದ್ದಾರೆ. ಅಂದಹಾಗೆ ಲಾಯಿಕ್ ರಾಮ್ ನೇಗಿ ಅವರು ಅರಣ್ಯ ಇಲಾಖೆಯ ಮಾಜಿ ಅಧಿಕಾರಿ, ಇವರು ಮಂಡಿ ಕ್ಷೇತ್ರದಿಂದ ಸ್ಪರ್ಧೆ ಬಯಸಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಲು ಬಯಸಿದ್ದರು. ಆದರೆ ಅವರ ನಾಮಪತ್ರ ತಿರಸ್ಕೃತಗೊಂಡಿದ್ದರು. ಇದು ಸರಿಯಲ್ಲ ಎನ್ನುವುದು ಅವರ ಆರೋಪ.
ಮೇ 14ರಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಮೇ 15ರಂದು ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರು. ಆದರೆ ಚುನಾವಣಾ ಅಧಿಕಾರಿ ಅದನ್ನು ಸ್ವೀಕರಿಸಿರಲಿಲ್ಲ. ಇದಕ್ಕೆ ಕಾರಣ ನೇಗಿ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ, ವಿದ್ಯುತ್, ದೂರವಾಣಿ ಹಾಗೂ ನೀರಾವರಿ ಇಲಾಖೆಯಿಂದ ನಿರಪೇಕ್ಷಣಾ ಪತ್ರ ಸಲ್ಲಿಸಿರಲಿಲ್ಲ. ಅದಕ್ಕೆ ಒಂದು ದಿನದ ಅವಕಾಶ ನೀಡಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ತಮಗೆ ಈ ಸೂಚನೆ ನೀಡಲಾಗಿದ್ದ ಕಾರಣ, ದಾಖಲೆಗಳನ್ನು ಸಲ್ಲಿಸಲು ಸಾಧ್ಯವಾಗಲಿಲ್ಲ. ಇಲ್ಲದಿದ್ದರೆ ಕಂಗನಾ ಬದಲು ನಾನೇ ಚುನಾವಣೆ ಗೆಲ್ಲುತ್ತಿದ್ದೆ ಎಂದು ನೇಗಿ ಹೇಳಿದ್ದಾರೆ. ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಜ್ಯೋತ್ಸ್ನಾ ರೇವಾಲ್ ಅವರು ಆಗಸ್ಟ್ 21 ರೊಳಗೆ ಉತ್ತರ ನೀಡುವಂತೆ ಪ್ರತಿವಾದಿಯಾಗಿರುವ ಸಂಸದೆ ಕಂಗನಾ ರಣಾವತ್ ಅವರಿಗೆ ಸೂಚಿಸಿದ್ದಾರೆ.
'ವೀಕೆಂಡ್' ವಿರುದ್ಧ ಅಸಮಾಧಾನ ಹೊರಹಾಕಿದ ಸಂಸದೆ ಕಂಗನಾ ಖಡಕ್ ಮಾತೀಗ ವೈರಲ್