Karnataka Assembly Elections 2023: ಕಾಂಗ್ರೆಸ್‌-ಬಿಜೆಪಿಯಲ್ಲಿ ಟಿಕೆಟ್‌ಗೆ ಹೈವೋಲ್ಟೇಜ್‌ ಫೈಟ್‌..!

By Kannadaprabha News  |  First Published Apr 5, 2023, 9:59 PM IST

ಎಲ್ಲ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿವೆ. ಎಲ್ಲ ಪಕ್ಷಗಳಲ್ಲಿ ಟಿಕೆಟ್‌ ಯಾರಿಗೆ ದೊರೆಯುತ್ತದೆ ಎಂಬ ಕುತೂಹಲ ಮೂಡಿದೆ.


ರುದ್ರಪ್ಪ ಆಸಂಗಿ

ವಿಜಯಪುರ(ಏ.05): ರಾಜ್ಯ ವಿಧಾನಸಭೆಗೆ ಚುನಾವಣೆ ನಿಗದಿಪಡಿಸಿ ಚುನಾವಣೆ ಆಯೋಗ ವೇಳಾಪಟ್ಟಿ ಪ್ರಕಟಿಸುತ್ತಿದ್ದಂತೆ ಜಿಲ್ಲೆಯಲ್ಲೂ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ಎಲ್ಲ ರಾಷ್ಟ್ರೀಯ ಪಕ್ಷಗಳಲ್ಲಿ ಟಿಕೆಟ್‌ ಲಾಬಿ ತಾರಕಕ್ಕೇರಿದೆ. ಟಿಕೆಟ್‌ಗಾಗಿ ಬಿಜೆಪಿ, ಕಾಂಗ್ರೆಸ್‌ ಪಕ್ಷಗಳಲ್ಲಿ ಹೈವೋಲ್ಟೇಜ್‌ ಸಂಚಲನವಾಗುತ್ತಿದೆ.

Tap to resize

Latest Videos

ಏ.13ರಂದು ಜಿಲ್ಲಾ ಚುನಾವಣಾ ಅಧಿಕಾರಿಗಳು ಆಯಾ ಜಿಲ್ಲಾ ಕೇಂದ್ರಗಳಲ್ಲಿ ಅಧಿಕೃತವಾಗಿ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಅಷ್ಟರಲ್ಲಿಯೇ ವಿವಿಧ ರಾಜಕೀಯ ಪಕ್ಷಗಳು ಆಯಾ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಬೇಕಿದೆ. ಹೀಗಾಗಿ, ಟಿಕೆಟ್‌ ಆಕಾಂಕ್ಷಿಗಳು ಕೂಡ ತಮಗೇ ಟಿಕೆಟ್‌ ನೀಡಬೇಕು ಎಂದು ರಾಜಕೀಯ ಪಕ್ಷಗಳ ಮೇಲೆ ತೀವ್ರ ಒತ್ತಡ ಹೇರುತ್ತಿರುವುದು ಈಗ ಬಲು ಜೋರಾಗಿದೆ. ಟಿಕೆಟ್‌ ಘೋಷಣೆ ನಂತರ ಭಿನ್ನಮತ ಸ್ಫೋಟಗೊಂಡು ದಿಕ್ಕು ತಪ್ಪಿಸುವ ವಾತಾವರಣ ನಿರ್ಮಾಣವಾಗದಂತೆ ಎಚ್ಚರಿಕೆ ಹೆಜ್ಜೆಗಳನ್ನು ಇಡಬೇಕಾದ ಅನಿವಾರ್ಯತೆ ಎಲ್ಲ ರಾಜಕೀಯ ಪಕ್ಷಗಳ ಮುಖಂಡರಿಗಿದೆ.

ವಿಜಯಪುರ ನಗರ ಬಿಜೆಪಿ ಟಿಕೆಟ್‌ಗಾಗಿ ಶುರುವಾಗಿದೆ ಜಟಾಪಟಿ..!

ಜಿಲ್ಲೆಯಲ್ಲಿ ಬಿಜೆಪಿ, ಕಾಂಗ್ರೆಸ್‌ ಪಕ್ಷಗಳಲ್ಲಿ ಟಿಕೆಟ್‌ ಫೈಟ್‌ ಜೋರಾಗಿದೆ. ಬಿಜೆಪಿ ಇದುವರೆಗೂ ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳಲ್ಲಿ ಒಂದೂ ಕ್ಷೇತ್ರದಲ್ಲಿ ಟಿಕೆಟ್‌ ಘೋಷಣೆ ಮಾಡಿಲ್ಲ. ಬಿಜೆಪಿಯಲ್ಲಿ ಟಿಕೆಟ್‌ಗಾಗಿ ತೆರೆಮರೆಯಲ್ಲಿ ಭಾರೀ ಕಸರತ್ತು ನಡೆದಿದೆ. ಬಿಜೆಪಿ ಕಾರ್ಯಕರ್ತರಿಂದ ಅಭ್ಯರ್ಥಿ ಆಯ್ಕೆ ಕುರಿತು ಅಭಿಪ್ರಾಯ ಸಂಗ್ರಹಿಸಲಾಗಿದೆ. ರಾಜ್ಯ ಸ್ಕ್ರೀನಿಂಗ್‌ ಕಮಿಟಿ ಸಭೆಯೂ ಜರುಗಿದೆ. ರಾಜ್ಯದಿಂದ ಒಂದು ಕ್ಷೇತ್ರಕ್ಕೆ 2-3 ಹೆಸರುಗಳನ್ನು ದೆಹಲಿ ವರಿಷ್ಠರಿಗೆ ಕಳುಹಿಸಲಾಗಿದೆ. ಏ.8ರ ಒಳಗಾಗಿ ಟಿಕೆಟ್‌ ಫೈನಲ್‌ ಮಾಡಲು ಬಿಜೆಪಿ ವರಿಷ್ಠರು ಶತಾಯಗತಾಯ ಶ್ರಮಿಸುತ್ತಿದ್ದಾರೆ. ಟಿಕೆಟ್‌ ಆಕಾಂಕ್ಷಿಗಳು ನಿಯೋಗ ತೆಗೆದುಕೊಂಡು ಬೆಂಗಳೂರು, ದೆಹಲಿಗೆ ತಿರುಗುತ್ತಿದ್ದಾರೆ. ಸಾಲದ್ದಕ್ಕೆ ಇಂಥವರಿಗೆ ಟಿಕೆಟ್‌ ನೀಡಬೇಕು ಎಂದು ಪತ್ರಿಕಾಗೋಷ್ಠಿಯನ್ನೂ ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ವಿಜಯಪುರ ನಗರ ಮತಕ್ಷೇತ್ರದ ಬಿಜೆಪಿ ಟಿಕೆಟ್‌ ಮೇಲೆ ಬಹಳಷ್ಟುಆಕಾಂಕ್ಷಿಗಳು ಕಣ್ಣಿಟ್ಟಿದ್ದಾರೆ. ಈ ನಿಟ್ಟಿನಲ್ಲಿ ಹಾಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿಹಾಗೂ ಸುರೇಶ ಬಿರಾದಾರ ಅವರ ಮೂರು ಹೆಸರುಗಳು ಪ್ರಬಲವಾಗಿ ಕೇಳಿ ಬರುತ್ತಿವೆ. ಈ ಮೂರು ಹೆಸರುಗÙನ್ನು ರಾಜ್ಯ ಸ್ಕ್ರೀನಿಂಗ್‌ ಕಮಿಟಿಯಲ್ಲಿ ಫೈನಲ್‌ ಮಾಡಿ ರಾಷ್ಟ್ರೀಯ ವರಿಷ್ಠರಿಗೆ ಕಳುಹಿಸಿದೆ. ಈ ಮೂವರಲ್ಲಿ ಯಾರಿಗೆ ಟಿಕೆಟ್‌ ಲಭಿಸುತ್ತದೆ ಎಂಬುದು ಕುತೂಹಲಕಾರಿಯಾಗಿದೆ.

ಈಗಾಗಲೇ ಕಾಂಗ್ರೆಸ್‌ ಪಕ್ಷವು ಬಬಲೇಶ್ವರ, ಇಂಡಿ, ಬಸವನಬಾಗೇವಾಡಿ, ಮುದ್ದೇಬಿಹಾಳ ಕ್ಷೇತ್ರಗಳಲ್ಲಿ ಈಗಾಗಲೇ ಟಿಕೆಟ್‌ ಫೈನಲ್‌ ಮಾಡಿದೆ. ಬಬಲೇಶ್ವರದಲ್ಲಿ ಮಾಜಿ ಸಚಿವ, ಹಾಲಿ ಶಾಸಕ ಎಂ.ಬಿ.ಪಾಟೀಲ, ಇಂಡಿ ಹಾಲಿ ಶಾಸಕ ಯಶವಂತರಾಯಗೌಡ ಪಾಟೀಲ, ಬಸವನ ಬಾಗೇವಾಡಿ ಕ್ಷೇತ್ರದಲ್ಲಿ ಹಾಲಿ ಶಾಸಕ ಶಿವಾನಂದ ಪಾಟೀಲ ಅವರಿಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ. ಇದಲ್ಲದೇ, ಮುದ್ದೇಬಿಹಾಳ ಕ್ಷೇತ್ರದಲ್ಲಿ ಮಾಜಿ ಸಚಿವ ಸಿ.ಎಸ್‌.ನಾಡಗೌಡ ಅಪ್ಪಾಜಿ ಅವರಿಗೆ ಟಿಕೆಟ್‌ ಫೈನಲ್‌ ಮಾಡಲಾಗಿದೆ. ಕಾಂಗ್ರೆಸ್‌ ಪಕ್ಷದಲ್ಲಿ ವಿಜಯಪುರ ನಗರ, ನಾಗಠಾಣ ಎಸ್‌ಸಿ ಮೀಸಲು, ದೇವರಹಿಪ್ಪರಗಿ, ಸಿಂದಗಿ ಕ್ಷೇತ್ರಗಳಲ್ಲಿ ಇನ್ನು ಕೇವಲ 4 ಸ್ಥಾನಗಳಲ್ಲಿ ಮಾತ್ರ ಟಿಕೆಟ್‌ ಫೈನಲ್‌ ಮಾಡಬೇಕಿದೆ. ತೀವ್ರ ಪೈಪೋಟಿ ಇರುವುದರಿಂದ ನಾಲ್ಕು ಸ್ಥಾನಗಳಲ್ಲಿ ಟಿಕೆಟ್‌ ಫೈನಲ್‌ ಮಾಡಲು ವರಿಷ್ಠರು ಪ್ರಯಾಸ ಪಡುವಂತಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿಬಿಡುಗಡೆಯಾWಲಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್‌ ಪಕ್ಷದ ವರಿಷ್ಠರು ಅಳೆದು, ತೂಗಿ ಅಭ್ಯರ್ಥಿಗಳ ಆಯ್ಕೆಗೆ ಮುಂದಾಗಿದ್ದಾರೆ. ಹೀಗಾಗಿ, ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳು ಉಳಿದ ನಾಲ್ಕು ಸ್ಥಾನಗಳಿಗಾಗಿ ವರಿಷ್ಠರ ದುಂಬಾಲು ಬಿದ್ದಿದ್ದಾರೆ. ಟಿಕೆಟ್‌ ಆಕಾಂಕ್ಷಿಗಳು ಬೆಂಗಳೂರು, ನವದೆಹಲಿ ಮುಂತಾದ ಕಡೆ ಅಲೆದಾಡಿ ಹೈಕಮಾಂಡ್‌ ಗಮನಸೆಳೆಯಲು ಯತ್ನಿಸುತ್ತಿದ್ದಾರೆ.

ಜೆಡಿಎಸ್‌ ಟಿಕೆಟ್‌ ಘೋಷಣೆ ಮಾಡುವಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದೆ. ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳ ಪೈಕಿ ಈಗಾಗಲೇ 7 ವಿಧಾನಸಭೆ ಕ್ಷೇತ್ರಗಳ ಟಿಕೆಟ್‌ ಫೈನಲ್‌ ಮಾಡಿದೆ. ವಿಜಯಪುರ ನಗರ ಮತ ಕ್ಷೇತ್ರವೊಂದೇ ಬಾಕಿ ಉಳಿದಿದೆ. ವಿಜಯಪುರ ನಗರ ವಿಧಾನಸಭೆ ಟಿಕೆಟ್‌ ಆಕಾಂಕ್ಷಿಗಳನ್ನು ಜಿಲ್ಲೆಯಲ್ಲಿ ಹುಡುಕದೇ, ಬೇರೆ ಸ್ಥಳದಿಂದ ಅಭ್ಯರ್ಥಿಯನ್ನು ತರುವ ನಿಟ್ಟಿನಲ್ಲಿ ಯತ್ನಿಸಲಾಗುತ್ತಿದೆ. ಆಮ್‌ ಆದ್ಮಿ ಪಕ್ಷ ಕೂಡ ವಿಜಯಪುರ ನಗರ, ಇಂಡಿ ಹಾಗೂ ನಾಗಠಾಣ ಮತಕ್ಷೇತ್ರದಲ್ಲಿ ಟಿಕೆಟ್‌ ಘೋಷಣೆ ಮಾಡಿದೆ.

'ಬಿಜೆಪಿಗೆ ಕಾಂಗ್ರೆಸ್‌ ಒಂದೇ ಪರ್ಯಾಯವಲ್ಲ'

ಎಲ್ಲ ರಾಜಕೀಯ ಪಕ್ಷಗಳ ಟಿಕೆಟ್‌ ಆಕಾಂಕ್ಷಿಗಳು ಟಿಕೆಟ್‌ ಗಿಟ್ಟಿಸಿಕೊಳ್ಳಲು ರಾತ್ರಿ, ಹಗಲು ಎನ್ನದೇ ವಿವಿಧ ಕಸರತ್ತು ನಡೆಸುತ್ತಿದ್ದಾರೆ. ಇನ್ನು ಕೆಲವರು ಶೇ 99ರಷ್ಟು ಟಿಕೆಟ್‌ ನನಗೇ ದೊರೆಯುತ್ತದೆ ಎಂದು ತಮ್ಮ ಬೆನ್ನು ತಾವೇ ಚಪ್ಪರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ, ಎಲ್ಲ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿವೆ. ಎಲ್ಲ ಪಕ್ಷಗಳಲ್ಲಿ ಟಿಕೆಟ್‌ ಯಾರಿಗೆ ದೊರೆಯುತ್ತದೆ ಎಂಬ ಕುತೂಹಲ ಮೂಡಿದೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!