
ಬೆಂಗಳೂರು (ಮೇ.30): ಒಟ್ಟು 43 ಕ್ರಿಮಿನಲ್ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವ ರಾಜ್ಯ ಸರ್ಕಾರದ ತೀರ್ಮಾನವನ್ನು ಹೈಕೋರ್ಟ್ ರದ್ದುಪಡಿಸಿ ತಕ್ಕ ಪಾಠ ಕಲಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯ್ದ ಹಾಗೆ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಸಮಾಜಘಾತಕ ಶಕ್ತಿಗಳು ಹಾಗೂ ರಾಷ್ಟ್ರ ವಿರೋಧಿ ಶಕ್ತಿಗಳನ್ನು ರಕ್ಷಿಸಲು ಮುಂದಾಗಿ ಅವರ ವಿರುದ್ಧ ಹೂಡಲಾಗಿದ್ದ ಮೊಕದ್ದಮೆಗಳನ್ನು ಹಿಂತೆಗೆದುಕೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಮಾಜ ವಿರೋಧಿ ನಡೆಗೆ ತಕ್ಕ ಪಾಠ ಕಲಿಸಲಾಗಿದೆ. ಹೈಕೋರ್ಟ್‌ನ ತೀರ್ಪನ್ನು ಬಿಜೆಪಿ ಸ್ವಾಗತಿಸುತ್ತದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಎಲ್ಲಾ ದುಷ್ಕೃತ್ಯಗಳಿಗೂ ರಕ್ಷಣೆ ಸಿಗುತ್ತದೆ ಎಂಬ ಮನಸ್ಥಿತಿಯ ದುಷ್ಟ ಶಕ್ತಿಗಳಿಗೂ ಹೈಕೋರ್ಟ್ ತೀರ್ಪು ಎಚ್ಚರಿಕೆಯ ಗಂಟೆ ಬಾರಿಸಿದೆ. ರಾಜಕಾರಣದಲ್ಲಿ ಚುನಾವಣೆಯ ಸಂದರ್ಭವನ್ನು ಹೊರತುಪಡಿಸಿ ಅಧಿಕಾರಕ್ಕೆ ಬಂದ ನಂತರ ಜನರ ರಕ್ಷಣೆಗಾಗಿ ಶಾಂತಿ ಸುವ್ಯವಸ್ಥೆ ಕಾಪಾಡುವುದು, ಸಮಾಜವನ್ನು ಸುಭದ್ರಪಡಿಸುವುದು, ಸಮಾಜಘಾತಕ ಶಕ್ತಿಗಳ ಹೆಡೆಮುರಿ ಕಟ್ಟುವುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕು, ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಎಲ್ಲೆ ಇರುವುದಿಲ್ಲ ಎಂದು ಅವರು ಪ್ರಕಟಣೆ ಮೂಲಕ ಕಿಡಿಕಾರಿದ್ದಾರೆ. ಹೈಕೋರ್ಟ್ ಈ ನಿಟ್ಟಿನಲ್ಲಿ ಆಡಳಿತಾರೂಢ ಕಾಂಗ್ರೆಸ್ಸಿನ ನಿರ್ಧಾರವನ್ನು ರದ್ದುಗೊಳಿಸಿ ಕಪಾಳ ಮೋಕ್ಷ ಮಾಡಿದೆ. ಇನ್ನು ಮುಂದಾದರೂ ಕಾಂಗ್ರೆಸ್ ಸರ್ಕಾರ ಕಾನೂನು ಸುವ್ಯವಸ್ಥೆ ಸುಭದ್ರಗೊಳಿಸುವ ಬದ್ಧತೆ ತೋರಬೇಕು.
ಸೈನಿಕರ ಗೌರವಿಸುವುದು ಎಲ್ಲರ ಕರ್ತವ್ಯ: ಪ್ರಧಾನಿ ನರೇಂದ್ರ ಮೋದಿಯವರು ತೆಗೆದುಕೊಂಡ ಆಪರೇಷನ್ ಸಿಂದೂರ ನಿರ್ಧಾರದಿಂದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಸೂಕ್ತ ಪ್ರತ್ಯುತ್ತರ ನೀಡಿದೆ. ಗಡಿಯಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ದೇಶ ಸೇವೆಗಾಗಿ ಜೀವ ಮುಡುಪಾಗಿಟ್ಟಿರುವ ಸೈನಿಕರನ್ನು ಗೌರವಿಸಿ ಹುರಿದುಂಬಿಸುವುದು ದೇಶಪ್ರೇಮಿಗಳ ಕರ್ತವ್ಯವಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು. ಪಕ್ಷದ ವರಿಷ್ಠರ ಸೂಚನೆ ಮೇರೆಗೆ ದೇಶಾದ್ಯಂತ ಮೇ 23ರ ವರೆಗೆ ತಿರಂಗ ಯಾತ್ರೆ ನಡೆಯುತ್ತಿದ್ದು ದೇಶಭಕ್ತರು, ದೇಶಪ್ರೇಮಿಗಳು ಯಾತ್ರೆಯಲ್ಲಿ ಪಾಲ್ಗೊಂಡು ಸೈನಿಕರಿಗೆ ಗೌರವ ಸಲ್ಲಿಸಬೇಕು.
ವಿನಾಕಾರಣ ಕಾಶ್ಮೀರದಲ್ಲಿ ಪ್ರವಾಸಿಗರ ಹತ್ಯೆಗೈದು ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿರುವ ಪಾಕಿಸ್ತಾನಕ್ಕೆ, ಪ್ರಧಾನಿ ಮೋದಿ ಅವರು ಸೈನಿಕರ ಮೂಲಕ ತಕ್ಕ ಉತ್ತರ ನೀಡಿದ್ದಾರೆ. ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಬಿಡುವುದಿಲ್ಲ ಎಂದು ಸಿಂಧೂ ನದಿಯ ನೀರನ್ನು ನಿಲ್ಲಿಸಿ ಸೂಕ್ತ ಪಾಠ ಕಲಿಸಿದ್ದಾರೆ ಎಂದರು. ಗಡಿ ಆಚೆಗಿನ ದಾಳಿಯನ್ನು ಯುದ್ಧ ಎಂದು ಪರಿಗಣಿಸಲು ಮೋದಿ ಅವರು ತೀರ್ಮಾನಿಸಿರುವುದು ಪಾಕಿಸ್ತಾನಕ್ಕೆ ನೀಡಿರುವ ಕಟ್ಟ ಕಡೆಯ ಎಚ್ಚರಿಕೆಯಾಗಿದೆ ಹಾಗೂ ಭಯೋತ್ಪಾದಕರನ್ನು ತಯಾರು ಮಾಡುವ, ಪಾಕಿಸ್ತಾನದಲ್ಲಿನ ಭಯೋತ್ಪಾದಕರನ್ನು ಬೇರು ಸಮೇತ ಮಟ್ಟ ಹಾಕಲು ಈ ನಿರ್ಧಾರ ಅವಶ್ಯಕವಾಗಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.