ಹೈಕೋರ್ಟ್ ನಿಂದ ಎಂಎಲ್ಸಿ ಮುನಿರಾಜುಗೌಡ ವಿರುದ್ಧದ ಕೇಸ್‌ ರದ್ದು

By Suvarna News  |  First Published Aug 18, 2022, 6:06 AM IST

ಕಳೆದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ವೇಳೆ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಎಲ್ಸಿ ಮುನಿರಾಜುಗೌಡ ವಿರುದ್ಧದ ಕೇಸ್‌  ಅನ್ನು ಹೈಕೋರ್ಟ್ ರದ್ದುಗೊಳಿಸಿದೆ. 


ಬೆಂಗಳೂರು (ಆ.17) ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವೇಳೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ವಿಧಾನ ಪರಿಷತ್‌ ಹಾಲಿ ಸದಸ್ಯ ಪಿ.ಎಂ. ಮುನಿರಾಜುಗೌಡ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಈ ಸಂಬಂಧ ಹಾರೋಹಳ್ಳಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸುವಂತೆ ಕೋರಿ ಮುನಿರಾಜುಗೌಡ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌. ಸುನಿಲ್‌ದತ್ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ರದ್ದುಗೊಳಿಸಿ ಆದೇಶಿಸಿದೆ.  2014ರ ಲೋಕಸಭಾ ಚುನಾವಣೆ ವೇಳೆ ಮುನಿರಾಜುಗೌಡ ಅವರು ಕನಕಪುರ ತಾಲೂಕು ಮರಳವಾಡಿ ಹೋಬಳಿಯ ಗ್ರಾಮದಲ್ಲಿ 2014ರ ಏಪ್ರಿಲ್‌ 4ರಂದು ನಿಯಮ ಬಾಹಿರವಾಗಿ ಸಾರ್ವಜನಿಕರಿಗೆ ಕರಪತ್ರ ವಿತರಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಚುನಾವಣಾಧಿಕಾರಿ ಜನತಾ ಪ್ರಾತಿನಿಧ್ಯ ಕಾಯ್ದೆ-1951ರ ಕಲಂ 127 ಎ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ದೂರು ದಾಖಲಿಸಲು ಪೊಲೀಸರಿಗೆ ಅನುಮತಿ ನೀಡುವ ಸಂದರ್ಭದಲ್ಲಿ ಮ್ಯಾಜಿಸ್ಪ್ರೇಟ್‌ ನ್ಯಾಯಿಕ ವಿವೇಚನೆ ಬಳಸಿಲ್ಲ. ಕರಪತ್ರವನ್ನು ಯಾರು, ಯಾರಿಗೆ ಹಂಚುತ್ತಿದ್ದರು ಎಂಬುದಕ್ಕೆ ಸ್ಪಷ್ಟತೆ ಇರಲಿಲ್ಲ. ಹಾಗೆಯೇ ಇದೊಂದು ಗಂಭೀರ ಸ್ವರೂಪದ ಪ್ರಕರಣವಲ್ಲ ಎಂಬ ಮುನಿರಾಜುಗೌಡ ಪರ ವಕೀಲರ ವಾದವನ್ನು ಹೈಕೋರ್ಟ್ ಮಾನ್ಯ ಮಾಡಿ, ಪ್ರಕರಣ ರದ್ದುಗೊಳಿಸಿ ಆದೇಶಿಸಿತು.

ಇನ್ನೊಂದು ಪ್ರಕರಣವೂ ರದ್ದು: 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪಿ.ಎಂ. ಮುನಿರಾಜುಗೌಡ ಪರ ಕೆಲ ಯುವಕರು ನೀತಿ ಸಂಹಿತೆ ಉಲ್ಲಂಘಿಸಿ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಪ್ರಕರಣವನ್ನೂ ಇದೇ ನ್ಯಾಯಪೀಠ ರದ್ದುಗೊಳಿಸಿದೆ.

Latest Videos

undefined

ಜೆ.ಪಿ.ಪಾರ್ಕ್ ವಾರ್ಡ್‌ ವ್ಯಾಪ್ತಿಯ ಎಚ್‌ಎಂಟಿ ಲೇಔಟ್‌ನ ಚೌಡೇಶ್ವರಿ ದೇವಾಲಯದ ಬಳಿ ಮುನಿರಾಜುಗೌಡ ಪರ ಸಂತೋಷ್‌, ಮಾರುತಿ, ಚೇತನ್‌ ಕುಮಾರ್‌, ಮಂಜುನಾಥ್‌ ಮನೆಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಅಭ್ಯರ್ಥಿ ಪರ ಪ್ರಚಾರ ನಡೆಸುವವರು 2018ರ ಮೇ 26ರಂದೇ ಮತಕ್ಷೇತ್ರ ಬಿಟ್ಟು ತೆರಳುವಂತೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಈ ನಾಲ್ವರು ನೀತಿ ಸಂಹಿತೆ ಉಲ್ಲಂಘನೆ ಮಾಡಿ ಪ್ರಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು.

ಧರಣಿ ಪದಕ್ಕೆ ಕಾಂಗ್ರೆಸ್‌ ನಾಯಕರಿಂದ ಹೊಸ ವ್ಯಾಖ್ಯಾನ: ಮುನಿರಾಜುಗೌಡ

ಈ ಯುವಕರಿಗೂ ಮುನಿರಾಜುಗೌಡರಿಗೂ ಏನು ಸಂಬಂಧ ಎಂಬುದರ ಸ್ಪಷ್ಟತೆ ಆರೋಪ ಪಟ್ಟಿಯಲ್ಲಿಲ್ಲ ಎಂದು ಮುನಿರಾಜುಗೌಡರ ಪರ ವಕೀಲ ಧರಣೇಶ್‌ ವಾದಿಸಿದ್ದರು. ಈ ವಾದವನ್ನು ಹೈಕೋರ್ಟ್ ಮಾನ್ಯ ಮಾಡಿ ಪ್ರಕರಣ ರದ್ದುಪಡಿಸಿತು.

click me!