
ರಾಮನಗರ (ಫೆ.21): ಸಹಕಾರ ಸಚಿವ ರಾಜಣ್ಣವರು ಹೈಕಮಾಂಡ್‌ಗಿಂತ ಒಂದು ಹೆಜ್ಜೆ ಮುಂದೆ ಹಾಗೂ ಎತ್ತರದಲ್ಲಿದ್ದಾರೆ. ಆದ್ದರಿಂದಲೇ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ನಮ್ಮ ಹೈಕಮಾಂಡ್ ಅವರಿಗೆ ಯಾವಾಗ ಇಂಜೆಕ್ಷನ್ ಕೊಡಬೇಕೊ ಆಗ ಕೊಡುತ್ತಾರೆ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಕಿಡಿಕಾರಿದರು. ಮಾಗಡಿ ಕ್ಷೇತ್ರ ವ್ಯಾಪ್ತಿಯ ಕೂಟಗಲ್ ಹೋಬಳಿಯ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ಮತ್ತು ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಮುಖ್ಯಮಂತ್ರಿಯನ್ನಾಗಿ ಮಾಡುವುದು, ಬಿಡುವುದು ವರಿಷ್ಠರಿಗೆ ಸೇರಿದ ವಿಚಾರ. ಇಂತವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಯಾರೂ ತೆವಲು ತೀರಿಸಿಕೊಳ್ಳುವ ಮಾತುಗಳನ್ನಾಡುವ ಅವಶ್ಯಕತೆ ಇಲ್ಲ. ಸಚಿವ ರಾಜಣ್ಣವರು ಏನೇ ಹೇಳಬೇಕಿದ್ದರು ವರಿಷ್ಠರೊಂದಿಗೆ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಹೇಳಲಿ. ಬೀದಿಯಲ್ಲಿ ಹೇಳಿಕೆ ನೀಡಿ ಅದನ್ನು ವೈಭವೀಕರಿಸುವ ಅವಶ್ಯಕತೆ ಇಲ್ಲ. ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವೂ ಇಲ್ಲ ಎಂದು ಟೀಕಿಸಿದರು.
ಮಾಗಡಿ ಆಸ್ಪತ್ರೆ ಉನ್ನತೀಕರಣಕ್ಕೆ 40 ಕೋಟಿ ಅನುದಾನ: ಸಚಿವ ದಿನೇಶ್ ಗುಂಡೂರಾವ್
ರಾಜಣ್ಣವರು ಹೇಳಿದಷ್ಟು ನಮ್ಮ ವರಿಷ್ಠರು ವೀಕ್ ಆಗಿಲ್ಲ. ಎಲ್ಲರು ಹೇಳಿದ್ದನ್ನು ಒಪ್ಪಿಕೊಳ್ಳಲು ವರಿಷ್ಠರು ಸಿದ್ಧರಿಲ್ಲ. ಯಾರ ಸಲಹೆ ಸೂಚನೆ ತೆಗೆದುಕೊಳ್ಳಬೇಕೊ ಅದನ್ನು ಪರಿಗಣಿಸುತ್ತಾರೆ. ಡಿ.ಕೆ.ಶಿವಕುಮಾರ್ ಎಐಸಿಸಿನೇ ನಿಯಂತ್ರಣ ಮಾಡುತ್ತಿದ್ದಾರೆಂದು ಹೇಳುವುದು ಸರಿಯಲ್ಲ. ಎಐಸಿಸಿ ಹೇಳಿದ ಮೇಲೂ ವಿತಂಡ ವಾದ ಮಾಡಿದರೆ ಅವರ ವಿರುದ್ಧ ಕ್ರಮ ವಹಿಸುತ್ತಾರೆ. ರಾಜಣ್ಣವರಿಗೆ ಕೆಲಸ ಕಡಿಮೆ ಆಗಿದೆ. ಅವರಿಗೆ ನಮ್ಮ ಸರ್ಕಾರ ಹೆಚ್ಚು ಕೆಲಸ ಕೊಡಬೇಕಿತ್ತು. ಕೆಲಸ ಇಲ್ಲದೇ ಅವಾಗವಾಗ ಈ ರೀತಿ ಮಾತನಾಡುತ್ತಾರೆ. ಅವರ ನಡವಳಿಕೆಯಿಂದ ಕಾರ್ಯಕರ್ತರು ಬೇಸರಗೊಂಡಿದ್ದಾರೆ. ರಾಜಣ್ಣವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ಅಂತಹವರಿಂದ ಪಕ್ಷ ಏನನ್ನು ನಿರೀಕ್ಷೆ ಮಾಡಬಹುದು ಎಂಬುದನ್ನು ಎಐಸಿಸಿ ತೀರ್ಮಾನ ಮಾಡಲಿದೆ ಎಂದರು.
ಮಾಗಡಿಗೆ ಹೇಮಾವತಿ ನೀರು ಕೊಡೊಲ್ಲ ಎಂಬ ಸಚಿವ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ರಾಜಣ್ಣ ಬಾಯಿ ಚಪಲಕ್ಕೆ, ತಮ್ಮ ತೆವಲು ತೀರಿಸಿಕೊಳ್ಳಲು ಇಂತಹ ಹೇಳಿಕೆ ಕೊಡಬಾರದು. ತುಮಕೂರಿನಲ್ಲಿ ಹೈನುಗಾರಿಕೆ ಮಾಡುವ ರೈತರು, ನಮ್ಮ ಕುದೂರಿನಲ್ಲಿ ಹಾಲು ಮಾರಾಟ ಮಾಡುತ್ತಿದ್ದಾರೆ. ಅಂದರೆ, ತುಮಕೂರು ಹಾಲು ಉತ್ಪನ್ನ ಬೆಂಗಳೂರಿನಲ್ಲಿ ಅರ್ಧ ಭಾಗ, ನಮ್ಮ ಕುದೂರಿನಲ್ಲಿ ಅರ್ಧ ಭಾಗ ಮಾರಾಟ ಆಗುತ್ತಿದೆ. ನಾವು ನಿಮ್ಮ ಹಾಲು ಬೇಡ, ನಿಮ್ಮ ನೀರು ಬೇಡ ಅಂತಾ ತಡೆದು ನಿಲ್ಲಿಸಿದರೆ ಅದರಿಂದ ತುಮಕೂರಿನ ರೈತರಿಗೆ ತೊಂದರೆ ಆಗುತ್ತದೆ. ಅದನ್ನು ನಾವು ಮಾಡಬೇಕಾ ಎಂದು ಪ್ರಶ್ನಿಸಿದರು.
ರಾಮನಗರದಲ್ಲಿ ಹೈಟೆಕ್ ಉರ್ದು ಶಾಲೆ ನಿರ್ಮಾಣ: ಶಾಸಕ ಇಕ್ಬಾಲ್ ಹುಸೇನ್
ರಾಜಣ್ಣವರು ವಿವೇಚನೆಯಿಂದ ಮಾತನಾಡಬೇಕು. ಅವರು ಹಿರಿಯ ಸಚಿವರು, ಈ ರೀತಿ ಬಾಲಿಷ ಹೇಳಿಕೆ ನೀಡಬಾರದು. ಏನೇ ಹೇಳುವುದಿದ್ದರು ಸರ್ಕಾರದ ಹಂತದಲ್ಲಿ ಹೇಳಬೇಕು. ನೀರು ಕೋಡೋದೆ ಇಲ್ಲ, ಬಿಡೋದೇ ಇಲ್ಲ ಅಂದರೆ ಹೇಗೆ? ಇದು ಒಕ್ಕೂಟದ ವ್ಯವಸ್ಥೆ, ಒಂದೇ ದೇಶ, ಒಂದೇ ರಾಜ್ಯದಲ್ಲಿ ಬದುಕುತ್ತಿದ್ದೇವೆ. ಒಬ್ಬ ಹಿರಿಯ ಸಚಿವರಾಗಿ ಈ ರೀತಿ ಚಿಲ್ಲರೆ ಹೇಳಿಕೆ ಕೊಡಬಾರದು ಎಂದು ಮನವಿ ಮಾಡುತ್ತೇನೆ ಎಂದು ಬಾಲಕೃಷ್ಣ ಹೇಳಿದರು. ಈ ವೇಳೆ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಜು ಯರೇಹಳ್ಳಿ, ದೊಡ್ಡಗಂಗವಾಡಿ ಸೊಸೈಟಿ ಅಧ್ಯಕ್ಷ ಡಿ.ಎಂ.ಮಹದೇವಯ್ಯ, ತಾಪಂ ಮಾಜಿ ಅಧ್ಯಕ್ಷ ಜಗದೀಶ್, ಮುಖಂಡರಾದ ಗೋಪಾಲ್ ಮತ್ತಿತರರು ಹಾಜರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.