ಲೋಕಸಭಾ ಚುನಾವಣೆ ಇನ್ನೇನು ಬಂದೇ ಬಿಟ್ಟಿತು ಎನ್ನುವಾಗಲೇ ಕೊಪ್ಪಳ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಫೈಟ್ ಜೋರಾಗಿ ನಡೆದಿದೆ.
ಸೋಮರಡ್ಡಿ ಅಳವಂಡಿ
ಕೊಪ್ಪಳ (ಜ.21): ಲೋಕಸಭಾ ಚುನಾವಣೆ ಇನ್ನೇನು ಬಂದೇ ಬಿಟ್ಟಿತು ಎನ್ನುವಾಗಲೇ ಕೊಪ್ಪಳ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಫೈಟ್ ಜೋರಾಗಿ ನಡೆದಿದೆ. ಚುನಾವಣೆಯಲ್ಲಿ ಗೆಲ್ಲುವುದಕ್ಕಿಂತ ಮುಂಚೆ ಟಿಕೆಟ್ ದಕ್ಕಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಈ ನಡುವೆ, ಜೆಡಿಎಸ್ ಪಕ್ಷವೂ ಕೊಪ್ಪಳ ಕ್ಷೇತ್ರವನ್ನು ಬಿಟ್ಟು ಕೊಡುವಂತೆ ಬಿಜೆಪಿಗೆ ಮನವಿ ಮಾಡಿಕೊಂಡಿರುವುದರಿಂದ ಸಹಜವಾಗಿಯೇ ಕುತೂಹಲ ಹೆಚ್ಚಿದೆ.
undefined
ಕೊಪ್ಪಳ ಲೋಕಸಭಾ ಕ್ಷೇತ್ರ ಒಂದು ಕಾಲಕ್ಕೆ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಆದರೆ, ಕಳೆದ ಮೂರು ಅವಧಿಯಲ್ಲಿಯೂ ಬಿಜೆಪಿ ಗೆಲ್ಲುವ ಮೂಲಕ ಹ್ಯಾಟ್ರಿಕ್‌ನೊಂದಿಗೆ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದೆ. ಹಾಲಿ ಸಂಸದ ಸಂಗಣ್ಣ ಕರಡಿ ಈಗಾಗಲೇ ಎರಡು ಬಾರಿ ಜಯ ಸಾಧಿಸಿರುವುದರಿಂದ ಮತ್ತೊಮ್ಮೆ ಗೆಲ್ಲುವ ಮೂಲಕ ಹ್ಯಾಟ್ರಿಕ್ ತವಕದಲ್ಲಿದ್ದಾರೆ. ಆದರೆ, ಅದಕ್ಕೂ ಮೊದಲು ಟಿಕೆಟ್ ಪಡೆಯುವುದೇ ಅವರಿಗೆ ದೊಡ್ಡ ಸವಾಲಾಗಿದೆ.
ಒಂದು ವರ್ಗದ ಓಲೈಕೆಗೆ ಕಾಂಗ್ರೆಸ್ ರಾಮಮಂದಿರಕ್ಕೆ ವಿರೋಧ: ಶೋಭಾ ಕರಂದ್ಲಾಜೆ
ವಯೋಮಾನದ ಆಧಾರ ಸೇರಿದಂತೆ ನಾನಾ ಕಾರಣಗಳಿಗಾಗಿ ಹೈಕಮಾಂಡ್ ಟಿಕೆಟ್ ಬದಲಾಯಿಸುತ್ತದೆ ಎನ್ನುವ ಆಧಾರದಲ್ಲಿ ಅನೇಕರು ಪೈಪೋಟಿ ನಡೆಸಿದ್ದಾರೆ. ಆದರೆ, ಹಾಲಿ ಸಂಸದರು ಮಾತ್ರ, ಮತ್ತೆ ಸ್ಪರ್ಧೆ ಮಾಡಬೇಕು ಎನ್ನುವ ದಿಸೆಯಲ್ಲಿ ಈಗಾಗಲೇ ಭರ್ಜರಿ ತಯಾರಿ ನಡೆಸಿ, ಟಿಕೆಟ್ ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಇನ್ನು, ಕೆ.ಎಸ್.ಆಸ್ಪತ್ರೆಯ ಮಾಲಿಕ ಡಾ.ಕೆ.ಬಸವರಾಜ ಅವರು ಈಗಾಗಲೇ ಕ್ಷೇತ್ರದಲ್ಲಿ ಸುತ್ತಾಡಿ, ಶುಭ ಕೋರುವ ಫ್ಲೆಕ್ಸ್‌ನೊಂದಿಗೆ ತಾವೂ ಕೂಡ ಬಲವಾದ ಆಕಾಂಕ್ಷಿ ಎನ್ನುವುದನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಹಾಲಪ್ಪ ಆಚಾರ್ ಅವರಿಗೆ ಪಕ್ಷ, ಸ್ಪರ್ಧಿಸುವ ಕುರಿತು ಕೇಳಿದಾಗ ನಯವಾಗಿಯೇ ಅವರು ತಿರಸ್ಕಾರ ಮಾಡಿದ್ದಾರೆ.
ಕಾಂಗ್ರೆಸ್ನಲ್ಲೂ ಟಿಕೆಟ್ ಫೈಟ್ ಜೋರಾಗಿದೆ. ಕಳೆದ ಬಾರಿ ಪರಾಭವಗೊಂಡ ರಾಜಶೇಖರ ಹಿಟ್ನಾಳ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಸಹೋದರಗೆ ಟಿಕೆಟ್ ಕೊಡಿಸಲು ಶಾಸಕ ರಾಘವೇಂದ್ರ ಹಿಟ್ನಾಳ ಪ್ರಯತ್ನ ನಡೆಸಿದ್ದಾರೆ. ಕಳೆದ ಬಾರಿ ಕೆಲವೇ ಮತಗಳ ಅಂತರದಲ್ಲಿ ಸೋತಿರುವುದರಿಂದ ಈ ಬಾರಿ ಟಿಕೆಟ್ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಕುಷ್ಟಗಿಯ ಮಾಜಿ ಶಾಸಕ ಅಮರೇಗೌಡ ಭಯ್ಯಾಪುರ ಸಹ ಟಿಕೆಟ್ ಆಕಾಂಕ್ಷಿಯಾಗಿದ್ದು, ಟಿಕೆಟ್‌ಗಾಗಿ ತಮ್ಮ ಪ್ರಯತ್ನ ಆರಂಭಿಸಿದ್ದಾರೆ. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತರಿಗೆ ಹೆಚ್ಚು ಅವಕಾಶ ಇರುವುದರಿಂದ ತಮಗೆ ಟಿಕೆಟ್ ನೀಡುವಂತೆ ಕೋರಿದ್ದಾರೆ.
ಹಾಗೆಯೇ, ಯುವ ಕಾಂಗ್ರೆಸ್ ನ ಮಾಜಿ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ ಬಲವಾಗಿ ಪ್ರಯತ್ನ ನಡೆಸಿದ್ದಾರೆ. ಬಸವರಾಜ ಮಳಿಮಠ ನನಗೂ ಟಿಕೆಟ್ ಬೇಕು ಎಂದು ಮನವಿ ಮಾಡಿದ್ದಾರೆ. ಆದರೆ, ಲಿಂಗಾಯತರಿಗೆ ಮಣೆ ಹಾಕಬೇಕೋ ಅಥವಾ ಹಿಂದುಳಿದ ವರ್ಗದವರಿಗೆ ಟಿಕೆಟ್ ನೀಡಬೇಕೋ ಎನ್ನುವ ಆಧಾರದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ನಿರ್ಧಾರವಾಗುತ್ತದೆ. ಈ ಬಾರಿ ಲೋಕಸಭಾ ಚುನಾವಣೆಗೆ ಬಿಜೆಪಿ- ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರಿಂದ ಕುತೂಹಲ ಮೂಡಿದೆ. ಈಗ ಜೆಡಿಎಸ್ ರಾಜ್ಯಾದ್ಯಂತ ಐದು ಕ್ಷೇತ್ರಗಳಿಗೆ ಟಿಕೆಟ್ ಬೇಡಿಕೆ ಇಟ್ಟಿದೆ ಎನ್ನಲಾಗಿದ್ದು, ಮೈಸೂರು–ಬೆಂಗಳೂರು ಭಾಗದಲ್ಲಿ ನಾಲ್ಕು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಒಂದಾದರೂ ಟಿಕೆಟ್ ನೀಡುವಂತೆ ಕೋರಿಕೊಂಡಿದೆ ಎನ್ನಲಾಗಿದೆ.
ಹಿಂದೂಗಳ ಭಾವನೆಗೆ ಅಪಮಾನ ಮಾಡುವುದೇ ಕಾಂಗ್ರೆಸ್ ಸರ್ಕಾರದ ಸಂಸ್ಕೃತಿ: ಶಾಸಕ ಯತ್ನಾಳ್
ಅದರಲ್ಲಿ ಉತ್ತರ ಕರ್ನಾಟಕದಲ್ಲಿ ಕೊಪ್ಪಳ ಮತ್ತು ವಿಜಯಪುರ ಲೋಕಸಭಾ ಕ್ಷೇತ್ರಗಳ ಪೈಕಿ ಒಂದರಲ್ಲಿ ಟಿಕೆಟ್ ಕೋರಿದೆ. ಹೀಗಾಗಿ, ಕೊಪ್ಪಳ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಪಡೆಯಲು ಆಕಾಂಕ್ಷಿ ಸಿ.ವಿ. ಚಂದ್ರಶೇಖರ ಶತಾಯ-ಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಇದು ಬಿಜೆಪಿಯ ಬಲಿಷ್ಠ ಕ್ಷೇತ್ರವಾಗಿರುವುದರಿಂದ ಬಿಜೆಪಿ ಹೈಕಮಾಂಡ್ ಏನು ಮಾಡುತ್ತದೆ ಎನ್ನುವುದರ ಆಧಾರದ ಮೇಲೆ ಎಲ್ಲವೂ ನಿಂತಿದೆ. ಇದಲ್ಲದೆ, ಸಿ.ವಿ. ಚಂದ್ರಶೇಖರ ಮತ್ತೆ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.