
ಹಾಸನ (ಸೆ.15):ನಮ್ಮ ತಾಯಿಯ ಎರಡನೇ ತಿಂಗಳ ಆರಾಧನೆ ಇದೆ. ಹೀಗಾಗಿ ರೇವಣ್ಣನವರ ಮನೆಯಲ್ಲಿ ಪೂಜೆ ಇರುವುದರಿಂದ ಭಾಗಿಯಾಗಿದ್ದೇನೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ತಿಳಿಸಿದರು.
ಇಂದು ಮಾವಿನಕೆರೆ ಬೆಟ್ಟದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಕುಮಾರಸ್ವಾಮಿಯವರು, ಕಳೆದ ಹದಿನೈದು ದಿನಗಳಿಂದ ಅಮೆರಿಕ ಪ್ರವಾಸದಲ್ಲಿದ್ದೆ. ಮೊನ್ನೆಯಷ್ಟೇ ಬಂದಿದ್ದೇನೆ. ಅದಕ್ಕೂ ಮುನ್ನ ಸಾಕಷ್ಟು ವಿಚಾರಗಳನ್ನ ಚರ್ಚೆ ಮಾಡಿದ್ದೆ. ಕೆಲವು ವಿಷಯಗಳನ್ನ ದಾಖಲೆ ಸಮೇತ ಸಾರ್ವಜನಿಕರ ಮುಂದೆ ಇಡುತ್ತೇನೆ ಎಂದು ಹೇಳಿದ್ದೆ. ನಾನು ಅಮೆರಿಕಕ್ಕೆ ಹೋದಮೇಲೆ ಯಾರಾರು ನಿದ್ದೆಗೆಟ್ಟಿದ್ದಾರೋ ಅದು ಅವರವರಿಗೆ ಗೊತ್ತಿರುತ್ತೆ. ನಾನು ಅನ್ಯಾಯದ ವಿರುದ್ಧ ಹೋರಾಟ ಮಾಡ್ತೇನೆ, ದಾಖಲೆ ಸಮೇತವಾಗಿ ಬಿಚ್ಚಿಡುತ್ತೇನೆ ಎಂದು ಗುಡುಗಿದರು.
ನಮ್ಮ ವಿರೋಧಿಗಳು ಎಷ್ಟೇ ಲಘುವಾಗಿ ಮಾತನಾಡಿದ್ರೂ ನಾನು ಉದ್ರೇಕಕ್ಕೆ ಒಳಗಾಗೋದಿಲ್ಲ. ಒಂದು ಚಾನಲ್‌ನಲ್ಲಿ ಕೂತು ಹತ್ತೊಂಬತ್ತು ಗಂಟೆ ಸುದ್ದಿ ಮಾಡಿದ್ದಾರೆ. ನಮ್ಮ ಕುಟುಂಬದ ವಿರುದ್ಧ ಮಾತನಾಡಲೆಂದೇ ಚಾನೆಲ್ ಮಾಡಿಕೊಂಡಿದ್ದಾರೆ. ಎಷ್ಟಾದರೂ ಮಾತನಾಡಿಕೊಳ್ಳಲಿ. ನಾನು ಆ ಚಾನೆಲ್ ಬಗ್ಗೆ ಮಾತನಾಡೋಲ್ಲ. ಉದ್ರೇಕಕ್ಕೆ ಒಳಗಾಗೊಲ್ಲ. ಇದನ್ನ ನಮ್ಮ ತಂದೆಯಿಂದ ನೋಡಿ ಕಲಿತಿದ್ದೇನೆ.ಎಲ್ಲವನ್ನೂ ದಾಖಲೆ ಸಮೇತ ಜನರ ಮುಂದೆ ಇಡುತ್ತೇನೆ. ನೈಸ್ ಗುತ್ತಿಗೆದಾರ ಮತ್ತು ಮುಖ್ಯಮಂತ್ರಿ ಭೇಟಿ ಮಾಡಿರೋದನ್ನ ನೋಡಿದ್ದೇನೆ. ಬೇರೆಯವರ ರೀತಿ ಜನ ಬಿಟ್ಟು ಹೊಡೆಸೋ ಕೆಲಸ ಮಾಡೋಲ್ಲ. ಇದಕ್ಕೆಲ್ಲಾ ಕಾಲವೇ ಉತ್ತರ ಕೊಡುತ್ತೆ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ಗೆ ತಿರುಗೇಟು ನೀಡಿದರು.
ರಾಜ್ಯದಲ್ಲಿ ನಾಲ್ಕು ಅಂಗಗಳು ಕೆಲಸ ಮಾಡುತ್ತಿವೆ. ನಾಲ್ಕನೇ ಅಂಗ ಮಾಧ್ಯಮ. ಇವುಗಳಲ್ಲಿ ಯಾವುದೇ ಒಂದು ಅಂಗ ಅಲುಗಾಡಿದ್ರೂ ಸಂವಿಧಾನಕ್ಕೆ ಮೋಸ ಮಾಡಿದ ಹಾಗೆಯೇ ಲೆಕ್ಕ. ಅಂಬೇಡ್ಕರ್ ಕೊಟ್ಟಿರೋ ಸಂವಿಧಾನಕ್ಕೆ ತಲೆಬಾಗಿ ಕೆಲಸ ಮಾಡಬೇಕಿದೆ. ಎಲ್ಲಾ ಸಿದ್ಧತೆಗಳನ್ನ ಮಾಡಿಕೊಂಡು ಜನರ ಮುಂದಿಡಲಿದ್ದೇನೆ. ನಾಡಿನ ಜನತೆಯೇ ಇದಕ್ಕೆಲ್ಲ ಒಂದು ಕ್ರಮ ಕೈಗೊಳ್ಳಬೇಕಿದೆ ಎಂದರು.
ಅಂದಹಾಗೆ ನನಗೆ ಯಾರ ಮೇಲೂ ಅಸೂಯೆ ಆಗಲಿ, ಈರ್ಶೆ ಆಗಲಿ ಇಲ್ಲ. ನಮ್ಮ ಜಾತಿಯವನೊಬ್ಬ ಮುಖ್ಯಮಂತ್ರಿ ಇದ್ದಾನೆ ಅವನಿಗೆ ಯಾಕೆ ತೊಂದರೆ ಕೊಡಬೇಕು ಅನ್ನುತ್ತಾರೆ. ನಾನು ಅವರಿಗೆ ತೊಂದರೆ ಕೊಡಬೇಕು ಎಂದು ಬಯಸಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ರೆ ನಾನು ಬೆಂಬಲ ಕೊಡುತ್ತೇನೆ. ಆದರೆ ಸಿಕ್ಕಿರೋ ಅಧಿಕಾರ ದುರುಪಯೋಗ ಮಾಡಿಕೊಂಡು ಹೋಗ್ತಿನಿ ಅಂದ್ರೆ ನಾನು ಸಹಿಸೋದಿಲ್ಲ. ರಾಜಕೀಯ ಜೀವನದಲ್ಲಿ ಪರ-ವಿರೋಧ ಎರಡೂ ಇರುತ್ತವೆ. ಸತ್ಯ ಏನೆಂಬುದು ಜನರು ತೀರ್ಮಾನ ಮಾಡ್ತಾರೆ ಎಂದರು.
ಇನ್ನು ಕೆಪಿಎಸ್‌ಸಿ ಹಗರಣ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ ಅವರು, ಕೆಪಿಎಸ್ಸಿಯಲ್ಲಿ ಆದ ಹಗರಣದ ಹಣವನ್ನು ಸೀಜ್ ಮಾಡಿದ್ದೇವೆ ಎನ್ನುತ್ತಾರೆ. ಅದು ಯಾರ ಹಣ ಅಂತಾ ಉತ್ತರ ಕೊಡಬೇಕಲ್ವಾ? ನಾನು ಮಾತನಾಡೋದಲ್ಲ ಅದನ್ನ ಸಾಕ್ಷಿಗಳು ಹೇಳಬೇಕಿದೆ. ನಾನು ಸಾಕ್ಷಿ ಸಮೇತ ಜನರ ಮುಂದೆ ಇಡೋದು ನನ್ನ ಜವಾಬ್ದಾರಿ. ಅದನ್ನ ತೀರ್ಮಾನ ಮಾಡೋದು ಜನರಿಗೆ ಬಿಡುತ್ತೇನೆ. ಇವರು(ಕಾಂಗ್ರೆಸ್ ಸರ್ಕಾರ) ರಾಜ್ಯದ ವ್ಯವಸ್ಥೆಗೆ ಕಪ್ಪು ಮಸಿ ಬಳಿಯುವಂತೆ ಅಧಿಕಾರ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.
ಇನ್ನು ಕೆಪಿಎಸ್‌ಸಿ, ಬಿಡದಿ ಹೋರಾಟದ ನಡುವೆಯೂ ಪ್ರಜ್ವಲ್ ರೇವಣ್ಣ ವಿಚಾರ ಮತ್ತೆ ಮುನ್ನಲೆಗೆ ತಂದ ಕುಮಾರಸ್ವಾಮಿಯವರು,'ಆ ಹುಡುಗ ಜೈಲಿಗೆ ಹೋಗಿ ಎರಡು ವರ್ಷಾಯ್ತು. ನ್ಯಾಯಾಂಗ ತೀರ್ಮಾನಕ್ಕೆ ತಲೆಬಾಗುತ್ತೇವೆ. ನಮ್ಮ ಕುಟುಂಬ ಮುಗಿಸಲು ಏನೆಲ್ಲ ಪ್ಲಾನ್ ಮಾಡಿದ್ರಿ? ನಿಮ್ಮಿಂದ ಅದು ಸಾಧ್ಯವಾ?ಜೈಲಿನಲ್ಲಿ ಪ್ರಜ್ವಲ್‌ಗೆ ಮೊಬೈಲ್ ಎಲ್ಲಿ ಸಿಕ್ತು? ತಲುಪಿಸಿದ್ದು ಯಾರು? ಅವನಿಗೆ ಮೊಬೈಲ್ ಕೊಟ್ಟಿದ್ದು ನಾವಾ? ಜೈಲಿನೊಳಗೆ ಅಶ್ಲೀಲ ಚಿತ್ರಗಳ ಪೆನ್‌ಡ್ರೈವ್ ಅವನಿಗೆ ಸಿಕ್ಕಿದ್ದಾದರೂ ಹೇಗೆ? ಇಲ್ಲಿ ಈ ಸರ್ಕಾರದ್ದೇ ಕುತಂತ್ರ ಇರಬಹುದಾ? ಹೆಚ್‌ಡಿಕೆ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಮಹಿಳೆಯರ ಮಾನ ಹರಾಜಾಯ್ತು ಅಂತೀರಲ್ಲ. ಆ ಸಂತ್ರಸ್ತ ಮಹಿಳೆಯರಿಗೆ ನಿಜವಾಗಿಯೂ ಸರ್ಕಾರ ನ್ಯಾಯ ಕೊಡಿಸ್ತಾ? ಕೊಡಿಸುತ್ತಾ? ಎಂದು ರಾಜ್ಯ ಸರ್ಕಾರಕ್ಕೆ ಕುಮಾರಸ್ವಾಮಿ ನೇರವಾಗಿ ಪ್ರಶ್ನಿಸದ್ದಾರೆ. ಹೆಚ್‌ಡಿಕೆ ಅವರ ಹೇಳಿಕೆಗೆ ಸರ್ಕಾರ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದು ಕಾದು ನೋಡಬೇಕು. ಸದ್ಯ ರಾಜ್ಯ ರಾಜಕೀಯದಲ್ಲಿ ಮತ್ತೆ ಪೆನ್‌ಡ್ರೈವ್ ಪ್ರಕರಣ ಕಾವೇರಿದೆ. ಸಿಎಂ ವಿರುದ್ಧ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.