ಉತ್ತರ ಕನ್ನಡ: ಜೆಡಿಎಸ್ ಅಭ್ಯರ್ಥಿ ಎಸ್‌ಎಲ್ ಘೋಟ್ನೇಕರ್ ಪರ ಎಚ್‌ಡಿಕೆ ಭರ್ಜರಿ ಮತ ಪ್ರಚಾರ

By Ravi JanekalFirst Published Apr 11, 2023, 11:41 PM IST
Highlights

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ಉತ್ತರಕನ್ನಡ ಜಿಲ್ಲೆಯ ಜೊಯಿಡಾ ಹಾಗೂ ದಾಂಡೇಲಿಗೆ ಭೇಟಿ ನೀಡಿ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಘೋಟ್ನೇಕರ್ ಪರವಾಗಿ ಮತಪ್ರಚಾರ ನಡೆಸಿದರು. ಇದೇ ವೇಳೆ ಆರ್‌ ವಿ ದೇಶಪಾಂಡೆ ವಿರುದ್ಧ ಘೋಟ್ನೇಕರ್ ವಾಗ್ದಾಳಿ ನಡೆಸಿದರು.

ಉತ್ತರ ಕನ್ನಡ (ಏ.11) : ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ಉತ್ತರಕನ್ನಡ ಜಿಲ್ಲೆಯ ಜೊಯಿಡಾ ಹಾಗೂ ದಾಂಡೇಲಿಗೆ ಭೇಟಿ ನೀಡಿ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಘೋಟ್ನೇಕರ್ ಪರವಾಗಿ ಮತಪ್ರಚಾರ ನಡೆಸಿದರು.

ಜನರ ಪರವಾಗಿ ತನ್ನ ಪಂಚರತ್ನ ಯೋಜನೆ(Pancharatna rathayatre)ಗಳನ್ನು ತಿಳಿಸಿದ ಮಾಜಿ ಸಿಎಂ, ರಾಜ್ಯದಲ್ಲಿ ಮತ್ತೆ ಜೆಡಿಎಸ್(JDS) ಅಧಿಕಾರಕ್ಕೆ ತರಲು ಘೋಟ್ನೇಕರ್ ಅವರನ್ನು ಗೆಲ್ಲಿಸುವ ಮೂಲಕ ರಾಜ್ಯದ ಚುಕ್ಕಾಣಿ ತನ್ನ ಕೈಗೆ ನೀಡಲು ಕೋರಿಕೊಂಡಿದ್ದಾರೆ. 

Uttara Kannada: ಸಾವಿರಾರು ಬೆಂಬಲಿಗರೊಂದಿಗೆ ಸಾಮೂಹಿಕ ರಾಜೀನಾಮೆ ನೀಡಿದ ಘೋಟ್ನೇಕರ್: ಕಾಂಗ್ರೆಸ್ ಪಾಳಯದಲ್ಲಿ ನಡುಕ

ಹೌದು, ರಾಜ್ಯದಲ್ಲಿ ಮತ್ತೆ ಕಿಂಗ್ ಮೇಕರ್ ಆಗಬೇಕೆಂಬ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.‌ಕುಮಾರಸ್ವಾಮಿ(HD Kumaraswamy) ಕಾಲಿಗೆ ಚಕ್ರ ಕಟ್ಟಿಕೊಂಡು ಉತ್ತರಕನ್ನ‌ಡ(Uttara kannada) ಜಿಲ್ಲೆಯಲ್ಲಿ ಎರಡನೇ ಬಾರಿಗೆ ಮತಪ್ರಚಾರ ನಡೆಸಿದ್ದಾರೆ.‌ ಜೊಯಿಡಾ ಹಾಗೂ ದಾಂಡೇಲಿ(Joida and dandeli)ಯಲ್ಲಿ ಇಂದು ಹಳಿಯಾಳ ಕ್ಷೇತ್ರ(Haliyal assembly constituency)ದ ಜೆಡಿಎಸ್ ಅಭ್ಯರ್ಥಿ ಎಸ್‌.ಎಲ್.ಘೋಟ್ನೇಕರ್(SL Ghotnekar) ಪರವಾಗಿ ಮತಪ್ರಚಾರ ನಡೆಸಿ ಈ ಬಾರಿ ರಾಜ್ಯದ ಚುಕ್ಕಾಣಿ ತನ್ನ ಕೈಗೆ ನೀಡಬೇಕೆಂದು ಜನರಲ್ಲಿ ಕೋರಿಕೊಂಡಿದ್ದಾರೆ. 

ಪ್ರಾರಂಭದಲ್ಲಿ ಎಚ್.ಡಿ. ಕುಮಾರಸ್ವಾಮಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ನಿಗದಿ ಸ್ಥಳದಲ್ಲಿ ಲ್ಯಾಂಡಿಂಗ್ ಆಗದೇ ಅರ್ಧ ಗಂಟೆಗೂ ಹೆಚ್ಚು ಕಾಲ ಆಕಾಶದಲ್ಲಿ ಹಾರಾಡಿ ರಾಮನಗರ(Ramanagara)ದತ್ತ ತೆರಳಿ ಗೊಂದಲ ಉಂಟಾದ ಘಟನೆ ನಡೆದಿತ್ತು.‌ ಬಳಿಕ ಪೊಲೀಸರು ವಯರ್‌ಲೆಸ್ ಸಿಗ್ನಲ್ ನೀಡಿ ಹಾಗೂ ಗಂಧಕದ ಹೊಗೆ ಹಾಕಿದ್ದರಿಂದ ಹೆಲಿಕಾಪ್ಟರ್ ಕೊನೆಗೂ ಜೊಯಿಡಾದ ದುರ್ಗಾದೇವಿ ಮೈದಾನದಲ್ಲಿ ಲ್ಯಾಂಡಿಂಗ್ ನಡೆಸಿತು. 

ಕುಮಾರಸ್ವಾಮಿ ಹೆಲಿಕಾಪ್ಟರ್‌ನಲ್ಲಿ‌ ಇಳಿಯುವುದು ನೋಡಲೆಂದೇ ನೂರಾರು ಜನರು ಮೈದಾನದ ಸುತ್ತಮುತ್ತ ಕಾದು ಕುಳಿತಿದ್ದರು. ಬಳಿಕ ನೇರವಾಗಿ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಘೋಟ್ನೇಕರ್ ಜತೆ ಬಿಜಿವಿಎಸ್ ಕಾಲೇಜು(BGVS Collage ground) ಮೈದಾನದಲ್ಲಿ ಆಯೋಜಿಸಲಾಗಿದ್ದ ಸಮಾವೇಶಕ್ಕೆ ತೆರಳಿದ ಅವರು, ಪಕ್ಷದ ಮುಖಂಡರ ಜತೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ‌ ನೀಡಿದರು. 

ಬಳಿಕ ಮಾತನಾಡಿದ ಮಾಜಿ ಸಿಎಂ ಎಚ್‌ಡಿಕೆ, ನನ್ನ ಸಮಯದಲ್ಲಿ 2.35 ಲಕ್ಷ ಕುಟುಂಬಕ್ಕೆ ಮಾಡಿದ್ದ ಸಾಲಮನ್ನಾವನ್ನು ಬಿಜೆಪಿ ಸರಕಾರ(BJP Government) ಇಲ್ಲಿಯವರೆಗೆ ಮಾಡಿಲ್ಲ. ನಾನು ಅಧಿಕಾರಕ್ಕೆ ಬಂದಲ್ಲಿ ಪ್ರತೀ ಹಳ್ಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಡಾಂಬರೀಕರಣದ ರಸ್ತೆ, ಅತಿಕ್ರಮಣದಾರರ ಸಮಸ್ಯೆ ಪರಿಹಾರ, ಕುಣಬಿ ಜನಾಂಗ(Kunabi community)ವನ್ನು ಎಸ್ಟಿಗೆ ಸೇರಿಸುವ ಕಾರ್ಯವನ್ನು ನಡೆಸುತ್ತೇನೆ. ಉತ್ತರಕನ್ನಡ ಜಿಲ್ಲೆಯಲ್ಲಿ ಸೇತುವೆ ನಿರ್ಮಾಣ, ಯುವಕರಿಗೆ ಉದ್ಯೋಗ ಒದಗಿಸಲಾಗುವುದು. ಮುಂದಿನ 5 ವರ್ಷಗಳಲ್ಲಿ ಪಂಚರತ್ನ ಯೋಜನೆ ಜಾರಿಗೆ ತರಲು ಯೋಜನೆ ರೂಪಿಸಿದ್ದೇನೆ. ಉತ್ತಮ ಶಿಕ್ಷಕರನ್ನು ನೇಮಿಸಿ ಗ್ರಾಮೀಣ ಭಾಗಗಳಲ್ಲಿ ಶಿಕ್ಷಣ ಒದಗಿಸುವ ಕೆಲಸ ಮಾಡುವುದರ ಜತೆಗೆ ರಾಜ್ಯದಲ್ಲಿ 6000ಕ್ಕೂ ಮಿಕ್ಕಿ ಗ್ರಾ.ಪಂ.ಗಳಲ್ಲಿ 30 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. ಗಂಭೀರ ರೋಗಗಳಿಗೂ ಉಚಿತ ಚಿಕಿತ್ಸೆ, ರೈತರಿಗೆ 10,000ರೂ. ವೆಚ್ಚದಲ್ಲಿ ಬಿತ್ತನೆ ಬೀಜ, ಗೊಬ್ಬರ ಖರೀದಿ ವ್ಯವಸ್ಥೆ ಮಾಡಲಾಗುವುದಲ್ಲದೇ,  ರಾಜ್ಯದ 53 ನದಿಗಳ ನೀರು ಸಂಪೂರ್ಣ ಬಳಕೆ ಮಾಡುವ ಯೋಜನೆಯಿದೆ.‌ ಇಲ್ಲಿಯ ಜನರ ಅರಣ್ಯ ಸಮಸ್ಯೆ ಹಾಗೂ ಭಾಗದ ಜನರ ವಿವಿಧ ಸಮಸ್ಯೆಗಳನ್ನು ನಮ್ಮ ಸರ್ಕಾರ ಬಂದ ತಕ್ಷಣ ಸಮಸ್ಯೆಗೆ ಪರಿಹಾರ ನೀಡುತ್ತೇನೆ. ಈ ಭಾಗದಲ್ಲಿ ಘೋಟ್ನೇಕರ್ ಅವರನ್ನು ಗೆಲ್ಲಿಸಿ ನಮ್ಮ ಪಕ್ಷ ಆಡಳಿತಕ್ಕೆ ಬರುವ ಹಾಗೆ ಮತದಾರ ಬಾಂಧವರು ಮಾಡಬೇಕು. ಈ ಬಾರಿ 40 ಸೀಟುಗಳಲ್ಲ, 125 ಸೀಟು ಗೆಲ್ಲುವ ಭರವಸೆ ಇದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ನನ್ನ ಮೊದಲ ಭೇಟಿ ಉತ್ತರಕನ್ನಡದಲ್ಲಿ ಜೋಯಿಡಾಕ್ಕೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಜೆ‌ಡಿಎಸ್ ಅಭ್ಯರ್ಥಿ ಎಸ್ ಎಲ್.ಘೋಟ್ನೇಕರ್ ಅವರು, ಇಷ್ಟು ವರ್ಷ ಕ್ಷೇತ್ರದಲ್ಲೊ ಆಡಳಿತ ನಡೆಸಿದ ಆರ್.ವಿ. ದೇಶಪಾಂಡೆ(RV Deshpande) ಈ ಕ್ಷೇತ್ರವನ್ನು ಸಿಂಗಾಪುರ್ ಮಾಡುತ್ತೇನೆ ಎಂದರು. ಈವರೆಗೆ ಯಾವುದೇ ಅಭಿವೃದ್ಧಿ ಮಾಡಲಿಲ್ಲ. ಸುಳ್ಳು ರಾಜಕಾರಣ ಮಾಡುತ್ತಾ ಬಂದಿದ್ದಾರೆ. ನಾನು ಸ್ಪರ್ಧಿಸಬಾರದು ಎಂದು ನನ್ನ ಮೇಲೆ ಹಾಗೂ ನನ್ನ ಕುಟುಂಬದ ಮೇಲೆ ವಿವಿಧ ಕೇಸ್‌ಗಳನ್ನು ಹಾಕಿಸಿದ್ದಾರೆ. ಏನೇ ಆಗಲಿ ಈ ಬಾರಿ ನನ್ನ ಮೇಲೆ ಭರವಸೆ ಇಟ್ಟು ನನ್ನನ್ನು ಗೆಲ್ಲಿಸಿ, ನಾನು ನಿಮ್ಮ ಸಮಸ್ಯೆಗೆ ಎಂದಿಗೂ ಸ್ಪಂದಿಸಿದ್ದೇನೆ. ನನ್ನ ಮೇಲೆ ವಿಶ್ವಾಸವಿಟ್ಟು ನನಗೆ ಆಶೀರ್ವಾದ ನೀಡಿ ಎಂದರು.

Karnataka assembly election: ಹಳಿಯಾಳದಲ್ಲಿ ಘೋಟ್ನೇಕರ್‌ ನಡೆ ಕುತೂಹಲಕರ

ಜೆಡಿಎಸ್‌ನಿಂದ ಆಯೋಜಿಸಲಾದ ಸಮಾವೇಶದಲ್ಲಿ 2 ಸಾವಿರಕ್ಕೂ ಹೆಚ್ಚಿನ ಜನರು ಭಾಗವಹಿಸಿದ್ದು, ಕಾರ್ಯಕ್ರಮದಲ್ಲಿ ನೂರಾರು ಜನರನ್ನು ಜೆ.ಡಿ.ಎಸ್ ಪಕ್ಷಕ್ಕೆ ಎಚ್.ಡಿ. ಕುಮಾರಸ್ವಾಮಿ ಶಾಲು ಹಾಕಿ ಬರಮಾಡಿಕೊಂಡರು. ಒಟ್ಟಿನಲ್ಲಿ ಜೊಯಿಡಾದಲ್ಲಿ ಆಯೋಜಿಸಲಾದ ಜೆಡಿಎಸ್ ಸಮಾವೇಶ ಯಶಸ್ವಿಯಾಗಿದ್ದು, ಕುಮಾರಸ್ವಾಮಿ‌ ಸಾರಥ್ಯದಲ್ಲಿ ಎಸ್.ಎಲ್.‌ಘೋಟ್ನೇಕರ್ ಕೊಂಚ ಕೊಂಚವೇ ಬಲಗೊಳ್ಳುತ್ತಿರುವುದು ಬಿಜೆಪಿ ಹಾಗೂ ಕಾಂಗ್ರೆಸ್ ಪಾಳಯದಲ್ಲಿ ಕೊಂಚ ನಡುಕ ಹುಟ್ಟಿಸಿರುವುದಂತೂ ಸತ್ಯ.

ಭರತ್‌ರಾಜ್‌ ಕಲ್ಲಡ್ಕ‌ ಜತೆ ಕ್ಯಾಮೆರಾಮ್ಯಾನ್ ಗಿರೀಶ್ ನಾಯ್ಕ್, ಏಷಿಯಾನೆಟ್ ಸುವರ್ಣ ನ್ಯೂಸ್ ಕಾರವಾರ

click me!