* ಸಿದ್ದರಾಮಯ್ಯನವರ ಹ್ಯೂಬ್ಲೆಟ್ ವಾಚ್ ಕೇಸ್
* ಹಳೆ ಪ್ರಕರಣಕ್ಕೆ ಮತ್ತೆ ಮರು ಜೀವ ತುಂಬಿದ ಮಾಜಿ ಸಿಎಂ
: * ಸಿದ್ದರಾಮಯ್ಯ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಹ್ಯೂಬ್ಲೆಟ್ ವಾಚ್
ಬೆಂಗಳೂರು, (ಏ.18): ಸಿದ್ದರಾಮಯ್ಯ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಹ್ಯೂಬ್ಲೆಟ್ ವಾಚ್ ಪ್ರಕರಣವನ್ನು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಮತ್ತೆ ಎತ್ತಿದ್ದಾರೆ. ಮುಖ್ಯಮಂತ್ರಿ ಆಗಿದ್ದಾಗ ಕೈಗೆ ಕಟ್ಟಿಕೊಂಡು ಮೆರೆದ ಹ್ಯೂಬ್ಲೆಟ್ ವಾಚ್ ಅನ್ನು ತಂದು ಕೊಟ್ಟವರು ಯಾರು? ಅದು ನಿಮ್ಮ ಕೈ ಸೇರಿದ್ದು ಹೇಗೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನೆ ಮಾಡುವ ಮೂಲಕ ಹಳೆ ಪ್ರಕರಣಕ್ಕೆ ಮತ್ತೆ ಜೀವ ನೀಡಿದ್ದಾರೆ.
ಹಾಸನದಲ್ಲಿ ಸೋಮವಾರ ಮಾಜಿ ಪ್ರಧಾನಿ ದೇವೇಗೌಡರು, ಜೆಡಿಎಸ್ ಪಕ್ಷ ಹಾಗೂ ತಮ್ಮ ಬಗ್ಗೆ ಟೀಕೆ ಮಾಡಿರುವ ಸಿದ್ಧರಾಮಯ್ಯ ಅವರಿಗೆ ಸರಣಿ ಟ್ವೀಟ್ ಮೂಲಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಅಲ್ಲದೆ 2088-0 9ರಲ್ಲಿ ನಡೆದ ಆಪರೇಷನ್ ಕಮಲ ಡೀಲ್ ನಲ್ಲಿ ಪಡೆದುಕೊಂಡ ಹಣ ಎಷ್ಟು ಎಂಬುದಾಗಿಯೂ ಕುಮಾರಸ್ವಾಮಿ ಅವರು ಕೇಳಿದ್ದಾರೆ.
ಈಶ್ವರಪ್ಪ ಬಂಧನ ಯಾಕೆ ಎಂದ ಎಚ್‌ಡಿಕೆ ವಿರುದ್ಧ ಸಿದ್ದರಾಮಯ್ಯ ಕೆಂಡಾಮಂಡಲ
ಸುಳ್ಳುಶೂರ, ಸಿದ್ದಸೂತ್ರದಾರ, ಸಿದ್ದಕಲಾ ನಿಪುಣ, ರಾಜಕೀಯ ಊಸರವಳ್ಳಿಗೆ ಚುನಾವಣೆಗೆ ಮುನ್ನವೇ ʼಜೆಡಿಎಸ್ ಜ್ವರʼ ಬಂದುಬಿಟ್ಟಿದೆ. ಹಾಸನದಲ್ಲಿ ವೃಥಾ ಹರಿಬಿಟ್ಟ ʼಸತ್ಯಭಕ್ಷʼ ನಾಯಕನ ಆಚಾರಹೀನ ಅರಿವುಗೆಟ್ಟ ನಾಲಗೆ ಮತ್ತೆ ಹುಚ್ಚುಕುಣಿತ ಮಾಡುತ್ತಿದೆ. ನಾನು ಕೇಳಿದ ಪ್ರಶ್ನೆಗಳಿಗೆ ಉತ್ತರವೇ ಇಲ್ಲ, ಮತ್ತೆಮತ್ತೆ ಕೆಣಕುವ ದುಸ್ಸಾಹಸ ಬೇರೆ.
ಆಪರೇಷನ್ ಕಮಲ ಬಿಜೆಪಿ ಪಾಪದ ಕೂಸು. ಆ ಕೂಸಿಗೆ ಹಾಲೆರೆದವರು ಯಾರಯ್ಯ ಸುಳ್ಳುರಾಮಯ್ಯ? ಇಂಥ ಅನೈತಿಕ ಕೂಸಿಗೆ ಹಾಲೆರೆದು ಬೆಳೆಸಿ, ದೊಡ್ಡದು ಮಾಡಿದ ನೀವು, ಜೆಡಿಎಸ್ ಪಕ್ಷ ಬಿಜೆಪಿ ಬೀ ಟಿಂ ಎಂದು ಹಾದಿಬೀದಿಯಲ್ಲಿ ಜಾಗಟೆ ಹೊಡೆಯುತ್ತಿದ್ದೀರಲ್ಲ? ಇದ್ಯಾವ ಸೀಮೆ ರಾಜಕೀಯ? ಬಹಿರಂಗದಲ್ಲಿ ಮಾತ್ರ ಬಿಜೆಪಿ ಕೋಮುವಾದಿ! ಅಂತರಂಗದಲ್ಲಿ ಅದಕ್ಕೆ ನೀವು ಅಡ್ಜಸ್ಟ್ʼಮೆಂಟ್ʼವಾದಿ!! ರಾಜಕೀಯ ಊಸರವಳ್ಳಿ, ಸಿದ್ದಕಲಾ ನಿಪುಣನೇ.. ನಿಮ್ಮ ರಾಜಕೀಯ ಲೀಲೆಗಳು ಒಂದಾ ಎರಡಾ? ಎಂದು ಪ್ರಶ್ನಿಸಿದ್ದಾರೆ.
2008-2009; ಶಾಸಕರ ಖರೀದಿ ಚಾಪ್ಟರ್ 1. ಆಗ 8 ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ. ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರತಿಪಕ್ಷ ನಾಯಕ ಸ್ಥಾನದಿಂದ ಕಿತ್ತೆಸೆಯಲು ಬಿಜೆಪಿ ಜತೆ ಡೀಲ್ ಕುದುರಿಸಿಕೊಂಡು ಡಿಂಗ್ ಡಾಂಗ್ ಹಾಡಿದ್ದು ಯಾರಯ್ಯ? ಹೆಸರಿನಲ್ಲಿ ʼರಾಮʼ! ಉಂಡ ಮನೆಗೆ ಪಂಗನಾಮ!! ಸ್ವಯಂ ಘೋಷಿತ ಸತ್ಯಹರಿಶ್ಚಂದ್ರ..
ಆಪರೇಷನ್ ಕಮಲಕ್ಕೆ ಕೈ ಜೋಡಿಸಿದ್ದಕ್ಕೆ ದಕ್ಷಿಣೆಯಾಗಿ ಮುಟ್ಟಿದ ಹಣವೆಷ್ಟು? ಕೋಟಿಗಳ ಗಂಟು ತರಲು ಯಾರನ್ನು ಕಳಿಸಿದ್ದಿರಿ? ಆ ಹಣ ಏನಾಯಿತು? ಎಲ್ಲಿಗೆ ಹೋಯಿತು? ಚುನಾವಣೆಗೆ ಖರ್ಚು ಮಾಡಿದಿರಾ, ಇಲ್ಲಾ.. ಜೇಬಿಗಿಳಿಸಿ ಜಲ್ಸಾ ಮಾಡಿದಿರಾ? ಅದು ರಾಮನ ಲೆಕ್ಕದಲ್ಲಿದಿಯಾ? ಅಥವಾ..ಕೃಷ್ಣನ ಲೆಕ್ಕದಲ್ಲಿಯಾ?
ʼಆಪರೇಷನ್ ಕಮಲ ಹಣದ ಕಥಾಪ್ರಸಂಗʼ ರೋಚಕ ʼಸಿದ್ದಸಿನಿಮಾʼ ಎಂಬ ಬಗ್ಗೆ ಅನುಮಾನ ಇಲ್ಲ. ಅದಕ್ಕೆ ಕಥೆ, ಚಿತ್ರಕಥೆ, ನಿರ್ದೇಶನ, ಹಿಮ್ಮೇಳ-ಮುಮ್ಮೇಳ ಎಲ್ಲವೂ ನಿಮ್ಮದೆ? ಧೈರ್ಯವಿ ದ್ದರೆ ಅದರ ಬಗ್ಗೆ ಮಾತನಾಡಿ. ಕನ್ನಡಿಗರೆಲ್ಲರಿಗೂ ನಿಮ್ಮ ಕಪಟತನದ ಪರಿಚಯವಾಗಲಿ.
ಆಪರೇಷನ್ ಕಮಲದ ಬಾಬ್ತಿನ ಹಣ ಸ್ವೀಕರಿಸಿ ನಿಮಗೆ ತಂದುಕೊಟ್ಟ ನಿಮ್ಮ ಆ ಹಳೆಯ ಸ್ನೇಹಿತರೇ ಸ್ವತಃ ನನ್ನ ಬಳಿ ಬಿಚ್ಚಟ್ಟ ಕಟುಸತ್ಯವಿದು! ಎಷ್ಟೇ ಆದರೂ, ಸತ್ಯ ನಿಮಗೆ ಅಪಥ್ಯ ಅಲ್ಲವೇ? ಕಳ್ಳಬೆಕ್ಕು ಕದ್ದು ಹಾಲು ಕುಡಿದರೆ ಗೊತ್ತಾಗುವುದಿಲ್ಲ ಎಂಬ ಹುಂಬುತನವೇ? ಅಬ್ಬಬ್ಬಾ.. ನಿಮಗೆ ನೀವೇ ಸಾಟಿ!!
ಪಾಪ.. ಕಾಂಗ್ರೆಸ್!! ಸುಳ್ಳುರಾಮಯ್ಯನ ಸುಳ್ಳುಗಳ ಸುಪ್ಪತ್ತಿಗೆಯ ಮೇಲೆ ಮೈಮರೆತು ತೇಲುತ್ತಿದೆ. ಮುಳುಗುವೆ ಎನ್ನುವ ಅರಿವೂ ಆ ಪಕ್ಷಕ್ಕಿಲ್ಲ. ಮುಳುಗುವ ಹಡಗಿನ ಕ್ಯಾಪ್ಟನ್ʼಗೆ ಬಿಜೆಪಿ ಬಾಲಂಗೋಚಿ ʼಸಿದ್ದಹಸ್ತನʼ ಅಡ್ಜೆಸ್ಟ್ʼಮೆಂಟ್ ರಾಜಕಾರಣ & ಹಣಕ್ಕೆ ಮಾರಿಕೊಂಡ ಆ ಸುಪಾರಿ ಆಟಗಾರ ತನ್ನ ಕೈಕಚ್ಚುತ್ತಿದ್ದಾನೆ ಎಂಬ ಅರಿವೇ ಇಲ್ಲ.
"ಈ ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನ ಉಳಿಯಬೇಕಾದರೆ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯಬೇಕು" ಎಂದಿದ್ದು ಯಾರಪ್ಪಾ? ಇದು ಮಾತೃಪಕ್ಷದ ಟರ್ಮಿನೇಟರಯ್ಯನ ʼಮನ್ ಕೀ ಬಾತ್ʼ!! ಹೃದಯದಲ್ಲೇ ಹೆಪ್ಪುಗಟ್ಟಿದ್ದ ಕಾರ್ಕೋಟಕ ವಿಷವನ್ನೇ ಸ್ವಪಕ್ಷದ ಮೇಲೆ ಕಾರಿಕೊಂಡ ನೀವು ಈಗ ಯಾವ ಟೀಮು? ಬಿಜೆಪಿ ಬೀ ಟೀಮು ತಾನೇ?
ದೇವೇಗೌಡರ ನೈತಿಕತೆ ಬಗ್ಗೆ ಪ್ರಶ್ನಿಸುವ ಸಿದ್ದಹಸ್ತನೇ, ನೀವೇ ʼಪರ್ಸಂಟೇಜ್ ವ್ಯವಹಾರದ ಪಿತಾಮಹʼ. ಆಪ್ತಶಾಸಕರಿಗೆ ಮೀಟಿಂಗ್ʼಗೆ ಇಂತಿಷ್ಟು ಎಂದು ಕೊಟ್ಟು ಕಮೀಷನ್ ಹೊಡೆದ ಕಥೆ, ಕಾದಂಬರಿ ಬರೆಯುವಷ್ಟಿದೆ. ಅರ್ಕಾವತಿ ರೀಡೂ ರಿಂಗ್ʼಮಾಸ್ಟರ್ ಆಗಿ ಅಡ್ಡಡ್ಡ ನುಂಗಿ ಕೆಂಪಣ್ಣ ಆಯೋಗದ ಕೃಪೆಯಿಂದ ಪಾರಾದ ನಿಮ್ಮ ಯೋಗ್ಯತೆ ನನಗೆ ಗೊತ್ತಿಲ್ಲವೇ?
2018ರಲ್ಲಿ ಒಳ್ಳೇ ಆಡಳಿತ ನಡೆಸಲೆಂದು ಕುಮಾರಸ್ವಾಮಿಗೆ ಅಧಿಕಾರ ಕೊಟ್ಟೆವು ಎಂದಿದ್ದೀರಿ. ಆ ಮುನ್ನ 5 ವರ್ಷ ಕೆಟ್ಟ ಆಡಳಿತ ಕೊಟ್ಟೆ ಎಂದು ನೀವೇ ಒಪ್ಪಿಕೊಂಡ ಹಾಗಾಯಿತಲ್ಲ. ಜೆಡಿಎಸ್ 30 ಸೀಟಿನ ಪಕ್ಷವಲ್ಲ,123 ಕ್ಷೇತ್ರಗಳ ಸವಾಲು ಸ್ವೀಕರಿಸಿ ಹೊರಟ ಪಕ್ಷ. ಇದು ಗೊತ್ತಾಗಿಯೇ ಪಕ್ಷವಾತ ಬಂದ ಹಾಗೆ ನೀವು ಚಡಪಡಿಸುತ್ತಿದ್ದೀರಿ!!
ಕದ್ದಮಾಲು ಕೈಗೆ ಕಟ್ಟಿ ಸಿಎಂ ಕುರ್ಚಿಯಲ್ಲಿ ನಿರ್ಲಜ್ಜವಾಗಿ ಮೆರೆದ ನಿಮ್ಮ ಕತ್ತಲೆ ಚಾರಿತ್ರ್ಯ ಕೊಳೆತು ನಾರುತ್ತಿದೆ. ನಿಮ್ಮ ಕೈಲಿ ಮಿರಮಿರ ಮಿಂಚಿದ ಹ್ಯೂಬ್ಲೆಟ್ ವಾಚ್ ಎಲ್ಲಿಂದಾ ಬಂತು? ಕಳ್ಳಮಾಲು ಮಾಲೀಕನಿಗೆ ಸೇರದೆ ನಿಮ್ಮ ಅಮೃತಹಸ್ತ ಅಲಂಕರಿʼಸಿದ್ದುʼ ಹೇಗೆ? ಆ ವಾಚ್ ತಂದ್ಕೊಟ್ಟ ಪೊಲೀಸಯ್ಯನಿಗೆ ವರ್ಗಾವಣೆ ಕೃಪೆ ಕರುಣಿಸಿದಿರಾ?
ಈಶ್ವರಪ್ಪ ವಿಷಯದಲ್ಲಿ ಡಿವೈಎಸ್ಪಿ ಗಣಪತಿ ಅವರ ಹೆಸರು ಎಳೆದು ತಂದಿದ್ದೀರಿ. ನಾನು ಹೇಳಿದ್ದು ಕಲ್ಲಪ್ಪಹಂಡೀಭಾಗ್ ಬಗ್ಗೆ. ಹಿಂದುಳಿದ ಸಮುದಾಯಕ್ಕೆ ಸೇರಿದ್ದ ಆ ಪ್ರಾಮಾಣಿಕ ಅಧಿಕಾರಿಗೆ ಇನ್ನಿಲ್ಲದ ಕಿರುಕುಳ ಕೊಟ್ಟು ಮುಗಿಸಿದಿರಿ. ಇಲಾಖೆಯಲ್ಲಿ ಒಳ್ಳೇ ಭವಿಷ್ಯವಿದ್ದ ಅವರ ಜೀವಕ್ಕೆ ಎರವಾದಿರಿ. ಅವರ ಸಾವಿಗೆ ನಿಮ್ಮ ಸರಕಾರ ಕಾರಣ.ಅಲ್ಲವೇ?
ನಿಮ್ಮ ಕತ್ತಲೆ ಮುಖವಾಡ & ʼಪರ್ಸಂಟೇಜ್ ಪಲ್ಲಕ್ಕಿʼಯಲ್ಲಿ ಪವಡಿಸಿದ ನಿಮ್ಮ ನಿಜಬಣ್ಣ ಇನ್ನೇನು ಕಳಚಿಬೀಳಲಿದೆ. ನಿಮ್ಮ ಸುಳ್ಳು ನಿಮ್ಮನ್ನೇ ಸುಡುವ ಕಾಲ ಸನಿಹದಲ್ಲಿದೆ. ವಿನಾಶಕಾಲೇ ವಿಪರೀತ ಸುಳ್ಳು.ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರಿಗೆ ಚಾಟಿ ಬೀಸಿದ್ದಾರೆ.