ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಮುಂದಿನ ಚುನಾವಣೆಗೆ ಈಗಾಗಲೇ ಭರ್ಜರಿ ತಯಾರಿಗಳನ್ನ ನಡೆಸಿದ್ದು, ಪಂಚ ರತ್ನ ಕಾರ್ಯಕ್ರಮಗಳನ್ನು ಜನರ ಮುಂದಿಡುತ್ತಿದ್ದಾರೆ.
ಬೆಂಗಳೂರು, (ಜ.16): ಮುಂದಿನ ಚುನಾವಣೆಗೆ ಈಗಿನಿಂದಲೇ ಭರದ ಸಿದ್ದತೆ ಮಾಡಿಕೊಳ್ಳುತ್ತಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರಮುಖ 5 ಅಂಶಗಳನ್ನಿಟ್ಟುಕೊಂಡು ಜನರ ಬಳಿ ಮತ ಕೇಳುತ್ತೇನೆ ಎಂದು ಹೇಳಿದ್ದಾರೆ.
ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಎಚ್‌ಡಿಕೆ, ನಗರ ಪ್ರದೇಶದಿಂದ ನನ್ನ ಪಕ್ಷ ಉಳಿದಿಲ್ಲ. ಗ್ರಾಮೀಣ ಪ್ರದೇಶದ ರೈತರು, ಯುವಕರಿಂದ ಇಂದು ನಮ್ಮ ಪಕ್ಷ ಉಳಿದುಕೊಂಡಿದೆ. ಇದು ನನ್ನ ಕೊನೆಯ ಹೋರಾಟ. ಮುಂದಿನ ಭಾರಿ ನಮಗೆ ಅಧಿಕಾರ ನೀಡಲು ಜನರ ಮುಂದೆ ಮನವಿ ಮಾಡುತ್ತಿದ್ದೇನೆ. ಸರ್ಕಾರಿ ಶಾಲೆಯಲ್ಲಿ ಈಜುಕೊಳ, ಆಟದ ಮೈದಾನ, ಸುಸಜ್ಜಿತ ಕಟ್ಟಡಗಳ 5,700 ಶಾಲೆಗಳನ್ನ ಒಂದೇ ವರ್ಷದಲ್ಲಿ ನಿರ್ಮಾಣ ಮಾಡಿ ಖಾಸಗಿ ಶಿಕ್ಷಣಕ್ಕಿಂತ ಉತ್ತಮ ಶಿಕ್ಷಣ ಕೊಡುವಂತೆ ನಾನು ಮಾಡ್ತೀನಿ ಎಂದು ಭರವಸೆ ನೀಡಿದರು.
ಅಧಿಕಾರಕ್ಕೆ ಬಂದ ಮೊದಲ ವರ್ಷದಲ್ಲೇ ಭರಪೂರ ಕೊಡುಗೆ ಘೋಷಿಸಿದ ಕುಮಾರಸ್ವಾಮಿ
ನಾನು ಸಿಎಂ ಆಗಿದ್ದಾಗ ಇಂಗ್ಲೀಷ್ ಮತ್ತು ಕನ್ನಡ ಶಾಲೆಗಳಿಗಾಗಿ ಪಬ್ಲಿಕ್ ಶಾಲೆಗಳನ್ನ ಮಾಡಿದ್ದೆ. ಆದ್ರೆ ಇಂದು ಶಾಲೆ ಶುಲ್ಕ ಕಟ್ಟಿಲ್ಲ ಅಂತ ಪೋಷಕರು ಕಣ್ಣೀರು ಹಾಕಿದರೂ ಸರ್ಕಾರ ಅದಕ್ಕೆ ಗಮನ ಕೊಡ್ತಿಲ್ಲ. ಈಗಾಗಲೆ 2 ಬಾರಿ ಮುಖ್ಯಮಂತ್ರಿಯಾಗಿದ್ದೀನಿ ನಾನು. ವಿಧಾನ ಸೌಧದ ಸಚಿವ ಸಂಪುಟ ಸಭಾಂಗಣದಲ್ಲಿ ಈಗಾಗಲೆ ನನ್ನ ಪೋಟೋ ಹಾಕಿದ್ದಾರೆ. ನನಗೆ ಮತ್ತೆ ಅಧಿಕಾರ ಬೇಕಿಲ್ಲ. 5 ಕಾರ್ಯಕ್ರಮಗಳನ್ನಿಟ್ಟುಕೊಂಡು ನಾನು ರಾಜ್ಯದ ಜನರ ಮುಂದೆ ಹೊರಟಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಮನೆ, ಆರೋಗ್ಯ, ಶಿಕ್ಷಣ, ಬೆಳೆಗೆ ಬೆಂಬಲ ಬೆಲೆ, ಯುವಕರಿಗೆ ಉದ್ಯೋಗ.. ಈ ಐದು ಅಂಶಗಳನ್ನಿಟ್ಟುಕೊಂಡು ಮುಂದಿನ ಚುನಾವಣೆಯಲ್ಲಿ ಸಂಪೂರ್ಣ ಬೆಂಬಲ ಕೊಡುವಂತೆ ಜನರ ಮುಂದೆ ಹೋಗ್ತೀದ್ದಿನಿ ಎಂದು ಹೇಳಿದರು.
ಐದು ವರ್ಷದಲ್ಲಿ ಐದು ಪಂಚ ರತ್ನ ಕಾರ್ಯಕ್ರಮಗಳನ್ನ ಮಾಡಲು ನಾನು ತೀರ್ಮಾನಿಸಿದ್ದೇನೆ. ರಾಜ್ಯದ ಅಭಿವೃದ್ದಿಯಾಗಬೇಕಾದ್ರೆ ಒಂದೊಂದು ವರ್ಷಕ್ಕೆ ಒಂದೊಂದು ಕಾರ್ಯಕ್ರಮ ಅನುಷ್ಠಾನ ಮಾಡಿದ್ರೆ ಹಣ ಹೊಡೆಯುವುದಕ್ಕೂ ಬ್ರೇಕ್ ಬೀಳಲಿದೆ. ನಾನು ಹೇಳುತ್ತಿರುವುದನ್ನು ಯಾರೂ ಲಘುವಾಗಿ ತೆಗೆದುಕೊಳ್ಳಬೇಡಿ. 2.5 ಲಕ್ಷ ಕೋಟಿ ಬಜೆಟ್ ಮಂಡಿಸುವ ತಾಕತ್ತು ನೀವು ಕೊಟ್ಟಿದ್ದೀರಿ ಅಂದ್ರೆ ಸರಿಯಾಗಿ ಅದನ್ನ ಬಳಕೆ ಮಾಡ್ತಿಲ್ಲ ಎಂದರು.