
ಹಾಸನ (ಜೂ.23): ಪ್ರಧಾನಿ ಮೋದಿ ರಾಜ್ಯಕ್ಕೆ ಬಂದು ಹೋಗಲು 32 ಕೋಟಿ ರು. ಖರ್ಚು ಮಾಡ್ತಾರೆ. ಅದೇ ಹಣದಲ್ಲಿ ಒಂದು ಗ್ರಾಮ ಉದ್ಧಾರ ಮಾಡಲು ಆಗುತ್ತಿರಲಿಲ್ವಾ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಕೊಮ್ಮಘಟ್ಟಸಭೆಯಲ್ಲಿ ಮಾತನಾಡುತ್ತಾ ಹಿಂದಿನ ಯಾವ ಸರ್ಕಾರವೂ ಏನು ಮಾಡಿಲ್ಲ ಎಂದಿದ್ದಾರೆ.
ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ನಾಡಿಗೆ ಕೊಡುಗೆ ಕೊಟ್ಟಿದ್ದನ್ನು ಸ್ಮರಿಸುವ ಬದಲು ಎಲ್ಲವನ್ನೂ ತಾವೇ ಮಾಡಿದ್ದು ಎನ್ನುವ ರೀತಿ ಮಾತನಾಡಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಮೊನ್ನೆ ಬೆಂಗಳೂರಿನಲ್ಲಿ 33 ಸಾವಿರ ಕೋಟಿ ಅನುದಾನದ ಕರ್ಯಕ್ರಮಕ್ಕೆ ಶಂಕುಸ್ಥಾಪನೆ ಮಾಡಿದ್ದೇವೆ ಎಂದು ಭಾಷಣ ಮಾಡಿದ್ದಾರೆ. ಇದರಲ್ಲಿ ಕೇವಲ ಮೋದಿಯವರ ಕೊಡುಗೆ ಮಾತ್ರ ಇದೆಯಾ? ಹಿಂದೆ ಇದ್ದ ಸರ್ಕಾರಗಳು ಹಾಕಿದ್ದ ಅಡಿಪಾಯಕ್ಕೆ ಮೋದಿ ಇಂದು ಶಂಕುಸ್ಥಾಪನೆ ಮಾಡಿದ್ದಾರೆ. ಇದರ ನಿಜವಾದ ಚಿಂತಕರು ದೇವೇಗೌಡರು ಎಂದರು.
ಪ್ರಧಾನಿಗೆ ಚುನಾವಣೆ ಹತ್ತಿರವಾದಂತೆ ಕರ್ನಾಟಕ ನೆನಪಾಗಿದೆ: ಕುಮಾರಸ್ವಾಮಿ
ಅವರು ಪ್ರಧಾನಿ ಆಗಿದ್ದಾಗಲೆ ಈ ಯೋಜನೆ ಬಗ್ಗೆ ಕನಸು ಕಂಡಿದ್ದರು ಎಂದು ತಿಳಿಸಿದರು. ನನ್ನ ಸರ್ಕಾರದ ಅವಧಿಯಲ್ಲಿ ಇದಕ್ಕೆ ಮರು ಚಾಲನೆ ನೀಡಲಾಗಿತ್ತು. ನಾನು ಮುಖ್ಯಮಂತ್ರಿ ಆದಾಗ ಪಿಯೂಷ್ ಗೋಯಲ್ ಕೃಷ್ಣಾದಲ್ಲಿ ಈ ಬಗ್ಗೆ ನನ್ನ ಜೊತೆ ಸಭೆ ಕೂಡ ಮಾಡಿದ್ದರು. ಅಂದು ಅವರು ನನಗೆ ಮುಂದಿನ ಬಜೆಟ್‌ನಲ್ಲಿ ಹಣ ಇಟ್ಟು ಮೋದಿ ಕರೆಸಿ ಉದ್ಘಾಟನೆ ಮಾಡುವ ಭರವಸೆ ನೀಡಿದ್ದರು. ಆದರೂ ಮೂರು ವರ್ಷ ನೆನೆಗುದಿಗೆ ಬಿದ್ದಿತ್ತು. ಇಂದು ಚಾಲನೆ ನೀಡಿದ್ದಾರೆ ಅಷ್ಟೆ ಎಂದು ವ್ಯಂಗ್ಯವಾಡಿದರು.
ರಿಮೋಟ್ ಕಂಟ್ರೋಲ್ ಸಿಎಂ: ಇದೇ ವೇಳೆ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ರಿಮೋಟ್ ಕಂಟ್ರೋಲ್ ಸಿಎಂ ಆಗಿದ್ದು ಎಲ್ಲವೂ ಕೇಶವಕೃಪದಲ್ಲೇ ತೀರ್ಮಾನವಾಗುತ್ತದೆ. ಬೊಮ್ಮಾಯಿ ಬಗ್ಗೆ ನನಗೆ ಕನಿಕರವಿದೆ ಮೂದಲಿಸಿದರು.
ಸೇನೆಯಲ್ಲೂ ಆರೆಸ್ಸೆಸ್ ವಿಸ್ತರಣೆಗೆ ಹುನ್ನಾರ: ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಬಳಿಕ ಇದೀಗ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಹ ಅಗ್ನಿಪಥ್ ಯೋಜನೆ ಮೂಲಕ ಸಂಘ ಪರಿವಾರದವರನ್ನು ಸೇನೆಯೊಳಕ್ಕೆ ಕಳುಹಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಯೋಜನೆ ಮೂಲಕ ಸೇನೆಯಲ್ಲೂ ಆರ್‌ಎಸ್‌ಎಸ್ ವಿಸ್ತರಣೆ ಮಾಡುವ ಹುನ್ನಾರ ನಡೆದಿದೆ. ಹಿಟ್ಲರ್ ಕಾಲದಲ್ಲಿದ್ದ ನಾಝಿ ಪಡೆಯನ್ನು ತರುವ ಪ್ರಾಯೋಗಿಕ ಕಾರ್ಯಕ್ರಮ ಇದು ಎಂದು ದೂರಿದರು.
ಮುಂಬರುವ ಎಲೆಕ್ಷನ್‌ನಲ್ಲಿ ಕುಮಾರಸ್ವಾಮಿ ಯಾವ ಕ್ಷೇತ್ರದಿಂದ ಸ್ಪರ್ಧೆ?: ಎಚ್‌ಡಿಕೆ ಹೇಳಿದ್ದಿಷ್ಟು
‘ಅಗ್ನಿಪಥ್‘ ಯೋಜನೆ ತರುವ ಬಗ್ಗೆ ಎಲ್ಲಿ ಚರ್ಚೆ ಮಾಡಿದ್ದಾರೆ? ಸಂಸತ್ತಿನಲ್ಲಾಗಲಿ, ಸೇನೆಗೆ ಸಂಬಂಧಪಟ್ಟಸಮಿತಿಗಳ ಬಳಿಯಾಗಲಿ, ಜನಪ್ರತಿನಿಧಿಗಳ ಜತೆಯಾಗಲಿ ಚರ್ಚೆ ಮಾಡಿದ್ದಾರೆಯೇ? ತಮಗೆ ಇಷ್ಟಬಂದಂತೆ ತಮ್ಮ ಅಜೆಂಡಾಗಳನ್ನು ಈಡೇರಿಸಿಕೊಳ್ಳಲಿಕ್ಕಾಗಿ ಸೇನೆಯನ್ನು ಈ ರೀತಿ ಬಳಸಿಕೊಳ್ಳುತ್ತಿರುವುದು ಸರಿಯಲ್ಲ. ಇದರಿಂದ ದೇಶದ ಆಂತರಿಕ ಭದ್ರತೆಗೆ ಧಕ್ಕೆಯಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.