ಸಿಎಂ ಆಗಿದ್ದಾಗ ಬಹಿರಂಗವಾಗಿ ಅತ್ತಿದ್ಯಾಕೆ? ಅಂದಿನ ಕಣ್ಣೀರಿನ ಕಥೆ ಹೇಳಿದ ಎಚ್‌ಡಿಕೆ

By Suvarna NewsFirst Published Oct 29, 2020, 3:23 PM IST
Highlights

ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದ ಎಚ್‌.ಡಿ.ಕುಮಾರಸ್ವಾಮಿ ಅವರು ಬಹಿರಂಗವಾಗಿಯೇ ಕಣ್ಣೀರು ಹಾಕಿದ್ದರು. ಅಂದಿನ ಕಣ್ಣೀರಿನ ಕಥೆಯನ್ನು ಇದೀಗ ಜನರ ಮುಂದೆ ಬಿಚ್ಚಿಟ್ಟಿದ್ದಾರೆ.

ಬೆಂಗಳೂರು, (ಅ.29): ಕಾಂಗ್ರೆಸ್ ಶಾಸಕರಿಗೆ ಬೇಕಾಗಿದ್ದು ತಮ್ಮ ಸ್ವಂತ ಲಾಭವೇ ಹೊರತು ಜನರ ಕಲ್ಯಾಣವಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗುಡುಗಿದ್ದಾರೆ.

ರಾಜರಾಜೇಶ್ವರಿ ನಗರ ವ್ಯಾಪ್ತಿಯ ಲಕ್ಷ್ಮೀದೇವಿ ವಾರ್ಡ್‌ನಲ್ಲಿ ಜೆಡಿಎಸ್‌ ಅಭ್ಯರ್ಥಿ ವಿ. ಕೃಷ್ಣಮೂರ್ತಿ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಇದ್ದಷ್ಟು ದಿನ ಕಷ್ಟಪಟ್ಟು ಕೆಲಸ ಮಾಡಿದ್ದೇನೆ. ಕಚೇರಿಗೆ ತಡವಾಗಿ ಹೋಗಿದ್ದಕ್ಕೆ ಕಾಂಗ್ರೆಸ್‌ ಶಾಸಕರೊಬ್ಬರು ಮುನಿಸಿ ಕೊಂಡಿದ್ದರು. ಕೃಷ್ಣಾದಲ್ಲಿ ಜನರ ಸಮಸ್ಯೆ ಆಲಿಸಿ, ನನ್ನ ಕಚೇರಿಗೆ ಹೋಗಿದ್ದೆ. ಆಗ ನನ್ನ ಕಚೇರಿಗೆ ಬಂದ ಕಾಂಗ್ರೆಸ್‌ ಶಾಸಕರೊಬ್ಬರು ನಿಮಗೆ ಎಷ್ಟು ಹೊತ್ತು ಕಾಯೋದು ಎಂದು ಅವರು ತಂದಿದ್ದ 10-12 ಪತ್ರಗಳನ್ನು ಇಸ್ಪೀಟ್ ಎಲೆಯಂತೆ ಬಿಸಾಡಿದ್ದರು ಎಂದು ಅಂದಿನ ಕಹಿ ಘಟನೆಯನ್ನು ಬಿಚ್ಚಿಟ್ಟರು.

ನಾನು ವೋಟ್‌ಗಾಗಿ ಕಣ್ಣೀರು ಹಾಕಿಲ್ಲ, ತಾಯಿಗಾಗಿ ಕಣ್ಣೀರು ಹಾಕಿದೆ: ಮುನಿರತ್ನ

 ಇಂತಹ ಹಲವಾರು ಕಿರುಕುಳ ಅವಮಾನ ಅಪಮಾನಗಳನ್ನೆಲ್ಲ ಸಹಿಸಿ ಕೆಲಸ ಮಾಡಿದ್ದೇನೆ. ಕಾಂಗ್ರೆಸ್ಸಿಗರು ನೀಡಿದ ಕಿರುಕುಳದ ನಡುವೆಯೂ ರೈತರ ಹಿತ ಕಾಯಲು 25 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದೆ. ಒಬ್ಬ ಮುಖ್ಯಮಂತ್ರಿ ಸಾರ್ವಜನಿಕವಾಗಿ ಕಣ್ಣೀರು ಹಾಕಿದ್ದರೆ ಅದು ನಾನು ಮಾತ್ರ. ಅಂತಹ ಸ್ಥಿತಿಯಲ್ಲಿ ಕಾಂಗ್ರೆಸ್‌ನವರು ನನ್ನನ್ನು ಇಟ್ಟಿದ್ದರು ಎಂದು ಕುಮಾರಸ್ವಾಮಿ ಹೇಳಿದರು.

ಬೆಂಗಳೂರು ನಗರದ ಅಭಿವೃದ್ಧಿಗೆ ದುಡ್ಡು ತಂದವರು ಯಾರೋ, ಹೆಸರು ಮಾಡಿ ಲಾಭ ಪಡೆದಿದ್ದು ಇನ್ಯಾರೋ? ತಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಐಟಿ ವಲಯಕ್ಕೆ ಹೊಸ ಆಯಾಮ ನೀಡಿದ್ದರು. ಇದರಿಂದ ಪ್ರೇರಿತಗೊಂಡ ದಕ್ಷಿಣ ಆಫ್ರಿಕಾದಲ್ಲಿ ದೇವೇಗೌಡರು ಜಾರಿಗೊಳಿಸಿದ್ದ ತ್ವರಿತ ನೀರಾವರಿ ಯೋಜನೆಯನ್ನು ಅಳವಡಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಮೆಟ್ರೋ ಪ್ರಾರಂಭಕ್ಕೆ ನಾನು ಕಾರಣ ಎಂದರು.

click me!