ಮಂಡ್ಯ ಲೋಕಸಭಾ ಕ್ಷೇತ್ರದಿಂದ ದೇವೇಗೌಡರ ಕುಟುಂಬದವರೇ ಮತ್ತೆ ಸ್ಪರ್ಧಿಸ್ತಾರಾ? ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡ್ಯದಲ್ಲಿ ಈ ಬಾರಿ ಅಖಾಡಕ್ಕಿಳಿಯುತ್ತಾರಾ ಎಂಬ ಚರ್ಚೆ ಇದೀಗ ಮತ್ತೆ ಶುರುವಾಗಿದೆ.
ಮಂಡ್ಯ (ಮಾ.16): ಮಂಡ್ಯ ಲೋಕಸಭಾ ಕ್ಷೇತ್ರದಿಂದ ದೇವೇಗೌಡರ ಕುಟುಂಬದವರೇ ಮತ್ತೆ ಸ್ಪರ್ಧಿಸ್ತಾರಾ? ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡ್ಯದಲ್ಲಿ ಈ ಬಾರಿ ಅಖಾಡಕ್ಕಿಳಿಯುತ್ತಾರಾ ಎಂಬ ಚರ್ಚೆ ಇದೀಗ ಮತ್ತೆ ಶುರುವಾಗಿದೆ. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯೊಳಗೆ ಜೆಡಿಎಸ್ ಅಸ್ತಿತ್ವ ಕಳೆದುಕೊಂಡಿರುವುದರಿಂದ ದೇವೇಗೌಡರ ಕುಟುಂಬದವರೊಬ್ಬರು ಮಂಡ್ಯದಿಂದ ಕಣಕ್ಕಿಳಿಯುವಂತೆ ಜಿಲ್ಲಾ ನಾಯಕರು ಒಂದು ಸಾಲಿನ ನಿರ್ಣಯ ಕೈಗೊಂಡಿದ್ದರು.
ಈ ಪೈಕಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ಧೆಗೆ ಆಸಕ್ತಿ ತೋರಿರಲಿಲ್ಲ. ಆದರೆ, ಎಚ್.ಡಿ.ಕುಮಾರಸ್ವಾಮಿ ತಮ್ಮ ನಿಲುವು ಸ್ಪಷ್ಟಪಡಿಸಿರಲಿಲ್ಲ. ಶುಕ್ರವಾರ ಮಂಡ್ಯದಲ್ಲಿ ಲೋಕಸಭಾ ಚುನಾವಣೆ ಸಂಬಂಧ ಆಯೋಜಿಸಿದ್ದ ಜೆಡಿಎಸ್ ಸಭೆಯಲ್ಲಿ ಅಭ್ಯರ್ಥಿ ಹೆಸರು ಘೋಷಣೆಯಾಗಬಹುದೆಂಬ ನಿರೀಕ್ಷೆ ಇತ್ತಾದರೂ ಅಲ್ಲೂ ಗುಟ್ಟು ಬಿಟ್ಟುಕೊಡದೆ ಕುತೂಹಲ ಕಾಯ್ದುಕೊಂಡಿದ್ದಾರೆ.
ಇನ್ನೂ ಎರಡು ಲೋಕಸಭಾ ಕ್ಷೇತ್ರ ಸಿಗುತ್ತಿತ್ತು, ಬೇಡ ಎಂದೆವು: ಎಚ್‌ಡಿಕೆ
ಜಾಣ ನಡೆ: ಕಳೆದ ಲೋಕಸಭಾ ಚುನಾವಣೆ ವೇಳೆ ಮಾಡಿದ ರಾಜಕೀಯ ತಪ್ಪು ನಿರ್ಧಾರಗಳಿಂದ ಎಚ್ಚೆತ್ತುಕೊಂಡಿರುವ ಜೆಡಿಎಸ್ ವರಿಷ್ಠರು ಇದೀಗ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದಾರೆ. ಜಿಲ್ಲೆಯ ಜನ ಕುಟುಂಬ ರಾಜಕಾರಣದ ಬಗ್ಗೆ ಮತ್ತೊಮ್ಮೆ ತಿರುಗಿಬೀಳುವ ವಾತಾವರಣ ಸೃಷ್ಟಿಯಾಗಲು ಅವಕಾಶ ನೀಡದೆ ತಾಳ್ಮೆಯಿಂದಲೇ ಮುನ್ನಡೆಯುತ್ತಿದ್ದಾರೆ.
ಸುಮಲತಾ ನಿಲುವು ಕಡೆ ಗಮನ: ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ ತಮಗೇ ಸಿಗುವ ವಿಶ್ವಾಸದಲ್ಲಿದ್ದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರಿನ್ನೂ ತಮ್ಮ ಮುಂದಿನ ನಡೆ ನಿರ್ಧರಿಸಿಲ್ಲ. ಮಾ.೧೫ರ ಬಳಿಕ ಬಿಜೆಪಿ ಸೇರುವುದಾಗಿ ಹೇಳುತ್ತಿದ್ದಾರೆ. ಹೀಗಾಗಿ ಆ ನಂತರವೇ ಜೆಡಿಎಸ್ ನಿರ್ಧಾರ ಪ್ರಕಟಿಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಪಕ್ಷದ ನಾಯಕರಿದ್ದಾರೆ.
ಕೇಂದ್ರ ಸಚಿವ ಸ್ಥಾನದ ಬೇಡಿಕೆ?: ಒಂದು ವೇಳೆ ಕೇಂದ್ರದಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬಂದರೆ ಕೇಂದ್ರ ಮಂತ್ರಿಮಂಡಲದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೃಷಿ ಖಾತೆ ನೀಡಬೇಕೆಂಬ ಬೇಡಿಕೆ ಮುಂದಿಡಲಾಗಿದೆ. ಆ ಸಂಬಂಧ ಮಾತುಕತೆಗೆ ಬಿಜೆಪಿ ವರಿಷ್ಠರು ದೆಹಲಿಗೆ ಆಹ್ವಾನಿಸಿದ್ದಾರೆ. ಅವರೂ ಮಂಡ್ಯ ಕ್ಷೇತ್ರದಿಂದ ಕುಮಾರಸ್ವಾಮಿ ಕಣಕ್ಕಿಳಿಯುವಂತೆ ಒತ್ತಾಯಿಸುತ್ತಿದ್ದಾರೆ. ಈ ಮಾತುಕತೆ ಫಲಪ್ರದವಾದಲ್ಲಿ ಕುಮಾರಸ್ವಾಮಿ ಮಂಡ್ಯದಿಂದ ಕಣಕ್ಕಿಳಿಯುವುದು ಖಚಿತ ಎಂದು ಹೇಳಲಾಗುತ್ತಿದೆ. ಇದು ಸಾಧ್ಯವಾಗದಿದ್ದರೆ ನಿಖಿಲ್ ಅಥವಾ ಮಾಜಿ ಸಂಸದ ಸಿ.ಎಸ್.ಪುಟ್ಟರಾಜು ಅಖಾಡ ಪ್ರವೇಶಿಸಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ನಿರಾಸೆ ಮಾಡಲ್ಲ: ಮಂಡ್ಯ ಲೋಕಸಭಾ ಚುನಾವಣೆ ಕುರಿತು ಚರ್ಚಿಸಲು ಮಂಡ್ಯ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯ ಆರಂಭದಲ್ಲೇ ಕುಮಾರಸ್ವಾಮಿ ಅಥವಾ ನಿಖಿಲ್ ಇಬ್ಬರಲ್ಲಿ ಒಬ್ಬರು ಅಭ್ಯರ್ಥಿಯಾಗಬೇಕು. ನೀವು ಕೇವಲ ಅರ್ಜಿ ಹಾಕಿ ಹೋಗಿ, ನಾವು ನಿಮ್ಮನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಅಭಿಮಾನಿಗಳು ಕೂಗಿ ಹೇಳಿದರು.
ಸ್ವಾಗತ ಭಾಷಣಕ್ಕೂ ಅವಕಾಶ ನೀಡದೆ ಈ ಸಂಬಂಧ ತಕ್ಷಣ ನಿರ್ಧಾರ ಪ್ರಕಟಿಸುವಂತೆ ಒತ್ತಾಯಿಸಿದರು. ಕಾರ್ಯಕರ್ತರನ್ನು ಸಮಾಧಾನ ಮಾಡಿದ ಕುಮಾರಸ್ವಾಮಿ, ನಿಮಗೆ ನಾನು ನಿರಾಸೆ ಮಾಡಲ್ಲ. ಸಭೆಗೆ ಬಂದಾಗ ನಿಮ್ಮ ಕೂಗು ಕೇಳಿದ್ದೇವೆ. ನಾನು ಅಥವಾ ನಿಖಿಲ್ ಸ್ಪರ್ಧಿಸುವ ನಿಮ್ಮ ಮಾತಿಗೆ ಶಿರಭಾಗಿ ನಮಸ್ಕರಿಸುತ್ತೇನೆ. ನಿಮ್ಮ ಮಾತಿಗೆ ಅಪಚಾರ ಮಾಡಲು ಹೋಗುವುದಿಲ್ಲ. ನಿಮ್ಮ ಆಸೆಗೆ ಭಂಗವೂ ತರಲ್ಲ. ನಿಖಿಲ್ ಅವರಿಗೂ ಒಂದು ಮಾತು ಹೇಳುತ್ತೇನೆ. ನಿಮ್ಮ ಭಾವನೆಗಳಿಗೆ ಯಾವುದೇ ಕಾರಣಕ್ಕೂ ನಿರಾಸೆಯಾಗುವುದಿಲ್ಲ. ನಿಮ್ಮ ಆಸೆ ಏನಿದೆಯೋ ಅದನ್ನು ನೇರವೇರಿಸುತ್ತೇನೆ ಎಂದು ಭರವಸೆ ನೀಡಿದರು.
Loksabha Elections 2024: ಹಾಸನ, ಕೋಲಾರ, ಮಂಡ್ಯದಿಂದ ಜೆಡಿಎಸ್ ಸ್ಪರ್ಧೆ: ಎಚ್‌ಡಿಕೆ ಹೇಳಿದ್ದೇನು?
25ರ ನಂತರ ನಿರ್ಧಾರ ಪ್ರಕಟ: ಕಾರ್ಯಕರ್ತರ ಒತ್ತಡದ ಹೊರತಾಗಿಯೂ ಮಂಡ್ಯ ಅಭ್ಯರ್ಥಿ ಘೋಷಣೆ ಮಾಡದ ಅವರು, ಮಾ.೨೫ರ ನಂತರ ಈ ಕುರಿತು ತೀರ್ಮಾನಿಸುವುದಾಗಿ ತಿಳಿಸಿದರು. ಜತೆಗೆ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಸೋಲನುಭವಿಸಿದರೆ ನಾವು ಬದುಕಿದ್ದೂ ಸತ್ತಂತೆ ಎಂದು ಭಾವನಾತ್ಮಕವಾಗಿ ಮಾತನಾಡಿದರು.