ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದು, ಸಿದ್ದರಾಮಯ್ಯ ಅವರಿಗೆ ಎಚ್‌ಡಿಕೆ ವಾರ್ನಿಂಗ್ ಕೊಟ್ಟಿದ್ದಾರೆ.
ಬೆಂಗಳೂರು, (ಅ.19): ಪದೇ ಪದೇ ನನ್ನನ್ನ ಕೆಣಕಬೇಡಿ ಎಚ್ಚರಿಕೆ ಕೊಡ್ತಿದ್ದೇನೆ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ದ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿಯವರು ಟಾಂಗ್ ಕೊಟ್ಟಿದ್ದಾರೆ.
ಜಾತಿ ಸಮೀಕ್ಷೆ ಬಿಡುಗಡೆಗೆ ಕುಮಾರಸ್ವಾಮಿ ಅಡ್ಡಗಾಲು ಹಾಕಿದ್ರು ಅನ್ನೋ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಅವರು ಇಂದು (ಸೋಮವಾರ) ಸುದ್ದಿಗಾರರೊಂದಿಗೆ ಮಾತನಾಡಿ, ನಿಮ್ಮ ತೆವಲಿಗೆ ಸಮಾಜಗಳನ್ನ ನನ್ನ ವಿರುದ್ದ ಎತ್ತಿಕಟ್ಟಿದ್ದೀರಾ ಎನ್ನುವುದು ಗೊತ್ತಿದೆ. ರಾಜಕೀಯದ ತೆವಲು ತೀರಿಸಿಕೊಳ್ಳಲು ಹೊರಟಿದ್ದೀರೀ. ಯಾಕೆ ನನ್ನನ್ನ ಕೆಣಕುತ್ತೀರಾ. ಇದು ಬಹಳ ದಿನ ನಡೆಯೊಲ್ಲ. ಯಾಕೆ ನನ್ನನ್ನ ಕೆಣಕುತ್ತೀರಾ. ಅವತ್ತು ನಿಮಗೆ ಜವಾಬ್ದಾರಿ ಇರಲಿಲ್ಲವಾ? ಅವತ್ತು ನಾನು ವಿರೋಧ ಮಾಡಿದ್ರೆ ಅವತ್ತೆ ಬೆಂಬಲ ವಾಪಸ್ ಪಡೆಯಬೇಕಿತ್ತು ಎಂದು ಕಿಡಿಕಾರಿದರು.
ರಾಜಕೀಯ ತೆವಲಿಗೆ ಏನೋನೊ ಮಾತಾಡೋದು ಬೇಡಾ? ಸಿದ್ದರಾಮಯ್ಯಗೆ ನಿನ್ನೆ ರಾತ್ರಿ ಕನಸ್ಸು ಬಿತ್ತಂತಾ? ನನ್ನ ವಿರುದ್ದ ಟೀಕೆ ಮಾಡೋಕೆ ಬೇರೆ ವಿಚಾರಗಳು ಇಲ್ಲ. ಜನರನ್ನ ಮರಳು ಮಾಡೋಕೆ ಬತ್ತಳಿಕೆಯಲ್ಲಿ ಯಾವುದೇ ಅಸ್ತ್ರಗಳು ಇಲ್ಲ. ಹಳೆಯದನ್ನ ಮತ್ತೆ ಕೆದಕಿಕೊಂಡು ಹೊರಟಿದ್ದಾರೆ ಎಂದು ತಿರುಗೇಟು ನೀಡಿದರು.
50-60 ಸಾವಿರ ಮತಗಳಿವೆ: ಡಿಕೆ ಶಿವಕುಮಾರ್ ವಿರುದ್ಧ ತೊಡೆತಟ್ಟಿದ ಕುಮಾರಸ್ವಾಮಿ...
ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯ ಸಮತಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ಇದ್ದರು. ಒಂದೂ ದಿನವೂ ಸಮೀಕ್ಷೆ ವಿಚಾರ ಚರ್ಚೆಯೇ ಮಾಡಿಲ್ಲ.ಕಾಂಗ್ರೆಸ್‌ನ ಮಂತ್ರಿಗಳು ಈ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಯಾಕೆ ಸುಳ್ಳು ಹೇಳ್ತಾರೆ. ಬೇರೆ ವಿಷಯ ಅವರ ಬಳಿ ಇಲ್ಲ. ಹೀಗಾಗಿ ನನ್ನ ಮೇಲೆ ಅಪಾದನೆ ಮಾಡ್ತಿದ್ದಾರೆ. ಈಗ ಹಿಂದುಳಿದವರ ಬಗ್ಗೆ ಇವರಿಗೆ ಪ್ರೀತಿ ಬಂದಿದೆ ಎಂದು ಗುಡುಗಿದರು.
ಜನರಿಂದ ಮತ್ತೆ ಮೇಲೆ ಬರ್ತೀನಿ ಅನ್ನೊ ಸೂಚನೆ ಅವ್ರಿಗೆ ಇದೆ. ಈಗ ನನಗೆ ಹಿನ್ನಡೆ ಆಗಿರಬಹುದು. ಆದರೆ ಈ ರಾಜ್ಯದ ಜನ ಜಾತಿ-ಭೇದ ಮರೆತು ಮತ್ತೆ ಕುಮಾರಸ್ವಾಮಿ ಬೇಕು ಅನ್ನೊ ದಿನಗಳು ಬರುತ್ತವೆ ಎಂದು ಪರೋಕ್ಷವಾಗಿ ಮತ್ತೆ ಸಿಎಂ ಆಗ್ತೀನಿ ಎನ್ನುವ ಅರ್ಥದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯಗೆ ಬಿಜೆಪಿ ಕಣ್ಣಿಗೆ ಕಾಣ್ತಿಲ್ಲ. ಜೆಡಿಎಸ್ ಮಾತ್ರ ಕಾಣ್ತಿದೆ. ಅವರಿಗೆ ಜೆಡಿಎಸ್ ಮುಗಿಸಬೇಕು. ಯಾಕಂದ್ರೆ ಅವರನ್ನ ಬೆಳೆಸಿದ್ವಿ ಅಲ್ಲವಾ ಅ ತಪ್ಪಿಗೆ. ಹೀಗಾಗಿ ನನ್ನ ಬಗ್ಗೆ ಸಿದ್ದರಾಮಯ್ಯ ಪದೇ ಪದೇ ಮಾತಾಡೋದು ಬೇಡ ಎಂದು ಸಿದ್ದರಾಮಯ್ಯಗೆ ಹೇಳಿದರು.