ಬಿಜೆಪಿ ಮೂಲಭೂತವಾಗಿ ಕನ್ನಡ ವಿರೋಧಿ, ತಾಕತ್ತಿದ್ರೆ ಸರಿಪಡಿಸಲಿ: ಎಚ್‌ಡಿಕೆ ಸವಾಲು

Published : Jun 20, 2021, 03:40 PM IST
ಬಿಜೆಪಿ ಮೂಲಭೂತವಾಗಿ ಕನ್ನಡ ವಿರೋಧಿ, ತಾಕತ್ತಿದ್ರೆ ಸರಿಪಡಿಸಲಿ: ಎಚ್‌ಡಿಕೆ ಸವಾಲು

ಸಾರಾಂಶ

* ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಹರಿಹಾಯ್ದ ಕುಮಾರಸ್ವಾಮಿ * ಕನ್ನಡದ ಅವಗಣನೆಗೆ ಮಾಜಿ ಸಿಎಂ ಕುಮಾರಸ್ವಾಮಿ ಕೆಂಡಾಮಂಡಲ * ಬಿಜೆಪಿ ಸಂಸದರಿಗೆ ಸವಾಲು ಹಾಕಿದ ಎಚ್‌ಡಿಕೆ

ಬೆಂಗಳೂರು, (ಜೂನ್.20): ಲೋಕಸಭಾ ಸಚಿವಾಲಯದ ಅಧೀನದಲ್ಲಿ ಬರುವ 'ಪಾರ್ಲಿಮೆಂಟರಿ ರಿಸರ್ಚ್‌ ಆಯಂಡ್‌ ಟ್ರೈನಿಂಗ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಡೆಮಾಕ್ರಸಿ' ಸಂಸ್ಥೆಯಿಂದ ಆಗಿರುವ ಕನ್ನಡದ ಅವಗಣನೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಈ ಬಗ್ಗೆ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ  ಪ್ರತಿಕ್ರಿಯಿಸಿದ್ದು, ಬಿಜೆಪಿ ಮೂಲಭೂತವಾಗಿ ಕನ್ನಡ ವಿರೋಧಿ ಎಂದು ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಕಿಡಿಕಾರಿದ್ದಾರೆ.

ಮೇಕೆದಾಟು ಡ್ಯಾಮ್‌ಗೆ ಶೀಘ್ರ ಅನುಮತಿ ಪಡೆಯಿರಿ: ಎಚ್‌ಡಿಕೆ .

ಈ ಸಂಬಂಧ ಸರಣಿ ಟ್ವೀಟ್‌ ಮಾಡಿರುವ ಅವರು, ಭಾಷೆಗಳ ಕಲಿಕಾ ತರಬೇತಿಯಲ್ಲಿ ಕನ್ನಡವನ್ನು ಕಡೆಗಣಿಸಿರುವ ಲೋಕಸಭಾ ಸಚಿವಾಲಯದ 'ಪಾರ್ಲಿಮೆಂಟರಿ ರಿಸರ್ಚ್ ಆಯಂಡ್ ಟ್ರೈನಿಂಗ್ ಇನ್ಸ್‌ಟಿಟ್ಯೂಟ್ ಫಾರ್ ಡೆಮಾಕ್ರಸಿ' (ಪ್ರೈಡ್) ಸಂಸ್ಥೆ ಗುಜರಾತಿ, ಬಂಗಾಳಿ, ಮರಾಠಿ, ಒಡಿಯಾ, ತಮಿಳು, ತೆಲುಗಿಗೆ ಆದ್ಯತೆ ನೀಡಿದೆ. ಕನ್ನಡಭಿಮಾನವಿಲ್ಲದ 25 ಮಂದಿಯನ್ನು ಲೋಕಸಭೆಗೆ ಆರಿಸಿ ಕಳಿಸಿದ್ದರ ಫಲವಿದು ಎಂದು ದೂರಿದ್ದಾರೆ.

ಇದೇ 22ರಿಂದ ಭಾಷೆಗಳ ಕಲಿಕಾ ತರಬೇತಿ ಆನ್‌ಲೈನಲ್ಲಿ ಆರಂಭವಾಗುತ್ತಿದೆ. ಇದರಲ್ಲಿ ವಿವಿಧ ರಾಜ್ಯಗಳ ಸಂಸದರು, ಶಾಸಕರು, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಫ್ರೆಂಚ್, ಜರ್ಮನ್, ಜಪಾನೀಸ್, ಪೊರ್ಚುಗೀಸ್, ರಷ್ಯನ್‌, ಸ್ಪ್ಯಾನಿಷ್ ಅನ್ನು ಕಲಿಸಲಾಗುತ್ತಿದೆ. ಇದರಲ್ಲಿ ಕನ್ನಡವನ್ನು ಸೇರಿಸಬೇಕು. ಇಲ್ಲವೇ ನಾವೆಲ್ಲರೂ ಇದನ್ನು ಧಿಕ್ಕರಿಸಬೇಕು ಎಂದಿದ್ದಾರೆ.

ಕೇಂದ್ರ ಪ್ರತಿ ಬಾರಿ ಕನ್ನಡ ನಿರ್ಲಕ್ಷಿಸುತ್ತಿದೆ. ಇದರ ವಿರುದ್ಧ ನಾವೇ ಕೆಲವರು ಮಾತನಾಡುವಂತಾಗಿದೆ. ಕನ್ನಡ ಭಾಷೆ ವಿಚಾರದಲ್ಲಿನ ಕೇಂದ್ರದ ಇಂಥ ನಡವಳಿಕೆಗಳ ವಿರುದ್ಧ ಎಲ್ಲರೂ ಹೋರಾಡಬೇಕು. ಅವರು ನಿರ್ಲಕ್ಷಿಸುವುದು ನಾವು ಎಚ್ಚರಿಸುವುದು, ಅತ್ತು ಕರೆದು ಔತಣ ಪಡೆಯುವುದು ನಿಲ್ಲಬೇಕು. 'ಕನ್ನಡ ಮರೆತರೆ ಕಷ್ಟ' ಎಂಬ ಸಂದೇಶ ರವಾನಿಸಬೇಕು ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಕನ್ನಡದ ವಿಚಾರದಲ್ಲಿ ನಿರ್ಲಕ್ಷ್ಯ ಭಾವ ತಳೆದಿದ್ದರೂ ಬಿಜೆಪಿಯ ಯಾವೊಬ್ಬ ಸಂಸದರೂ ಇದರ ಬಗ್ಗೆ ಮಾತನಾಡಿರುವುದನ್ನು ನಾನಂತೂ ನೋಡಿಲ್ಲ. ಇಷ್ಟರಲ್ಲೇ ಜನರಿಗೆ ಅರ್ಥವಾಗಬೇಕು ʻಬಿಜೆಪಿ ಮೂಲಭೂತವಾಗಿ ಕನ್ನಡ ವಿರೋಧಿʼ ಎಂದು. ತಾವು ಕನ್ನಡ ವಿರೋಧಿಗಳಲ್ಲ ಎಂದಾದರೆ ಈಗ ಆಗಿರುವ ಪ್ರಮಾದವನ್ನು ತಾಕತ್ತಿದ್ದರೆ ಬಿಜೆಪಿ ಸರಿಪಡಿಸಲಿ ಎಂದು ಸವಾಲು ಹಾಕಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿ.ಕೆ.ಶಿವಕುಮಾರ್ 30 ದಿನಗಳ ಮೌನ ತಪ್ಪಿಸ್ಸಿಗೆ ಒಲಿಯುತ್ತಾ ಪಟ್ಟಾಭಿಷೇಕ; ಜನವರಿ 9ಕ್ಕೆ ಮುಹೂರ್ತ!
ರಾಜ್ಯದಲ್ಲಿ 'ನಾಯಕತ್ವ ಬದಲಾವಣೆ ಇಲ್ಲ'- ಯತೀಂದ್ರ ಹೇಳಿಕೆಗೆ ಡಿ.ಕೆ. ಶಿವಕುಮಾರ್ ಅಸಮಾಧಾನ!