ಶಿಕ್ಷಕರ ಸಂಬಳಕ್ಕೆ ನನ್ನ ವೇತನ ಮೀಸಲು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭರವಸೆ

Published : Nov 07, 2025, 09:50 PM IST
HD Kumaraswamy

ಸಾರಾಂಶ

ಸಿಎಸ್‌ಆರ್ ಅನುದಾನದಿಂದ ಶಿಕ್ಷಕರ ವೇತನ ನೀಡುವುದಕ್ಕೆ ಅವಕಾಶವಿಲ್ಲದಿರುವುದರಿಂದ ಲೋಕಸಭೆ ಸದಸ್ಯನಾಗಿ ತಮ್ಮ ಈವರೆಗಿನ ವೇತನವನ್ನು ಶಿಕ್ಷಕರ ವೇತನ ಪಾವತಿಸಲು ಕೊಡುವುದಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ಮಂಡ್ಯ (ನ.07): ಸಿಎಸ್‌ಆರ್ ಅನುದಾನದಿಂದ ಶಿಕ್ಷಕರ ವೇತನ ನೀಡುವುದಕ್ಕೆ ಅವಕಾಶವಿಲ್ಲದಿರುವುದರಿಂದ ಲೋಕಸಭೆ ಸದಸ್ಯನಾಗಿ ತಮ್ಮ ಈವರೆಗಿನ ವೇತನವನ್ನು ಶಿಕ್ಷಕರ ವೇತನ ಪಾವತಿಸಲು ಕೊಡುವುದಾಗಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು. ಮೈಷುಗರ್ ಶಾಲೆಯ ಆವರಣದಲ್ಲಿ ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಸಿಎಸ್‌ಆರ್ ನಿಧಿಯಿಂದ ಅತ್ಯಾಧುನಿಕ ಶಾಲಾ ವಾಹನವನ್ನು ಮೈಷುಗರ್ ಶಾಲೆಯ ಆಡಳಿತ ಮಂಡಳಿಗೆ ಹಸ್ತಾಂತರ ಮಾಡಿದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿಕ್ಷಕರು ವೇತನವಿಲ್ಲದೆ ಕೆಲಸ ಮಾಡುತ್ತಿರುವುದು ಬಹಳ ನೋವಿನ ವಿಚಾರ. ಈವರೆಗೂ ಸುಮಾರು 20 ರು.ಲಕ್ಷ ಬಾಕಿ ವೇತನವಿದೆ. ಹೀಗಾಗಿ ನನ್ನ ವೇತನದ ಮೊತ್ತವನ್ನೇ ದೇಣಿಗೆಯಾಗಿ ನೀಡುತ್ತಿದ್ದೇನೆ. ಅನೇಕ ತಿಂಗಳಿಂದ ಶಿಕ್ಷಕರಿಗೆ ವೇತನ ನೀಡದಿರುವ ವ್ಯಕ್ತಿಗಳು ನನ್ನ ಬಗ್ಗೆ ಲಘುವಾಗಿ ಮಾತನಾಡುವುದು ಬೇಡ. ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು. ನನ್ನ ಆರೋಗ್ಯದ ಕಾರಣದಿಂದ ಜಿಲ್ಲೆಗೆ ಭೇಟಿ ನೀಡುವುದು ಕೊಂಚ ತಡವಾಯಿತು. ಆದರೂ ನನ್ನ ಕಚೇರಿಯ ತಂಡವನ್ನು ಕಳಿಸಿ ಶಾಲೆಯಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಹಾಗೂ ಶಿಕ್ಷಕರ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಳ್ಳುವಂತೆ ಸೂಚನೆ ನೀಡಿದೆ.

ಅದರಂತೆ ನನ್ನ ಕಚೇರಿ ಸಿಬ್ಬಂದಿ ಶಾಲೆಯ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡಿದ್ದಾರೆ. ಅದರ ಅನ್ವಯ 10 ಕೋಟಿ ರು. ಅಂದಾಜು ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ತೀರ್ಮಾನ ಮಾಡಲಾಗಿದೆ ಎಂದರು. ಯಾವ ಯಾವ ಕಾಮಗಾರಿಗೆ ಎಷ್ಟು ಮೊತ್ತ ವೆಚ್ಚ ಮಾಡಲಾಗುವುದು ಎಂಬ ಬಗ್ಗೆ ನಿರ್ಧಾರ ಮಾಡಲಾಗುವುದು. ಈ ಬಗ್ಗೆ ಜಿಲ್ಲಾಡಳಿತ ಮತ್ತು ಶಾಲೆಯ ಟ್ರಸ್ಟ್ ಸದಸ್ಯರ ಜತೆ ಚರ್ಚೆ ನಡೆಸಲಾಗಿದೆ. ಈ 10 ಕೋಟಿ ರು. ಹಣವನ್ನು ಅದಷ್ಟು ಬೇಗ ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಿದರು. ಮೈಷುಗರ್ ಶಾಲೆ ಅಭಿವೃದ್ಧಿ ಬಗ್ಗೆ ಟ್ರಸ್ಟ್‌ನವರು ಈವರೆಗೂ ನನ್ನೊಂದಿಗೆ ಕೊನೇಪಕ್ಷ ಒಂದು ಸಭೆಯನ್ನೂ ನಡೆಸಿಲ್ಲ.

ಆ ಟ್ರಸ್ಟ್‌ನಲ್ಲಿ ಯಾರು ಯಾರಿದ್ದಾರೆ ಅನ್ನುವ ಮಾಹಿತಿ ಕೂಡ ನನಗಿಲ್ಲ. ಸಂಸದನಾಗಿ ನಾನು ಕೂಡ ಒಬ್ಬ ಟ್ರಸ್ಟಿ ಇದ್ದೇನೆ. ಆದರೂ ಸಭೆ ಕರೆದಿಲ್ಲ ಯಾಕೆ?, ಶಿಕ್ಷಕರಿಗೆ ಇಷ್ಟು ದೊಡ್ಡ ಮೊತ್ತದ ವೇತನ ಬಾಕಿ ಇಟ್ಟುಕೊಂಡು ಕೆಲವರು ನನ್ನ ಬಗ್ಗೆ ಕೆಟ್ಟದ್ದಾಗಿ ಮಾತನಾಡುತ್ತಿದ್ದಾರೆ. ಅವರಿಗೆ ಯಾವ ನೈತಿಕತೆ ಇದೆ ಎಂದು ಸಚಿವರು ಕಿಡಿಕಾರಿದರು. ನನ್ನ ವೇತನದ ಹಣವನ್ನು ಶಿಕ್ಷಕರಿಗೆ ಕೊಡುತ್ತಿದ್ದೇನೆ. ಇದು ಪಾಪದ ಹಣವಲ್ಲ. ನಾನೇನು ಕಮಿಷನ್ ತೆಗೆದುಕೊಂಡಿಲ್ಲ. ವರ್ಗಾವಣೆಯಿಂದ ಹೊಡೆದುಕೊಂಡ ಹಣವಲ್ಲ. ನನ್ನ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ನನ್ನ ಬಗ್ಗೆ ಯಾರೇ ಏನೇ ಹೇಳಿಕೆ ಕೊಟ್ಟರು ಕೂಡ ನಾನು ಗಂಭೀರವಾಗಿ ಪರಿಗಣಿಸುತ್ತೇನೆ ಎಂಬುದು ಗೊತ್ತಿಲ್ಲವೇ?, ನನ್ನ ಕೈಯಲ್ಲಿ ಆಗುವಷ್ಟು ಅಭಿವೃದ್ಧಿಪರ ಕೆಲಸಗಳನ್ನು ಮಾಡುತ್ತಿದ್ದೇನೆ ಎಂದು ಖಾರವಾಗಿ ನುಡಿದರು.

ಶಾಲೆ ಅಭಿವೃದ್ಧಿ ಬಗ್ಗೆ ನನಗೂ ಕಾಳಜಿ ಇದೆ. ಟ್ರಸ್ಟ್‌ನವರು ಜವಾಬ್ದಾರಿ ತೆಗೆದುಕೊಂಡರೆ ಹಂತ ಹಂತವಾಗಿ ಸರ್ವ ರೀತಿಯಲ್ಲಿಯೂ ಶಾಲೆಯ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ. ಶಾಲೆಯ ಬಗ್ಗೆ ನಾನು ಟ್ರಸ್ಟ್ ಸದಸ್ಯರನ್ನು ಬಿಟ್ಟು ಬೇರೆಯವರ ಜೊತೆಗೆ ಚರ್ಚಿಸಲು ತಯಾರಿಲ್ಲ. ಏಕೆಂದರೆ, ಇಂತಹ ಉತ್ತಮ ಶಾಲೆಯ ವಿಷಯದಲ್ಲಿ ರಾಜಕೀಯ ತರೋದು ಅನಗತ್ಯ ಎಂದು ನೇರವಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳ ಜೊತೆಗೆ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು, ಮಾಜಿ ಶಾಸಕರಾದ ಕೆ.ಟಿ. ಶ್ರೀಕಂಠೇಗೌಡ, ಶಿವಕುಮಾರ್‌ ಹಾಗೂ ಶಾಲಾ ಸಿಬ್ಬಂದಿ, ಟ್ರಸ್ಟ್ ಸದಸ್ಯರು ಹಾಗೂ ಜೆಡಿಎಸ್ ನಾಯಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಶಂಕರಪುರ ಸರ್ಕಾರಿ ಶಾಲೆ ಅಭಿವೃದ್ಧಿಗೆ 1.4 ಕೋಟಿ ರು.

ನಗರದ ಶಂಕರಪುರ ಸರ್ಕಾರಿ ಶಾಲೆ ಅಭಿವೃದ್ಧಿಗೆ 1.4 ಕೋಟಿ ರು. ನೀಡಲಾಗುವುದು ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು. ಶಾಲೆಯಲ್ಲಿ ಆರು ಹೊಸ ಕೊಠಡಿ ಹಾಗೂ ಎಂಟು ಶೌಚಾಲಯಗಳನ್ನು ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅದಷ್ಟು ಶೀಘ್ರವೇ ಹಣವನ್ನು ಬಿಡುಗಡೆ ಮಾಡಲಾಗುವುದು. ಹಾಗೆಯೇ ಹಳೆಯ ಕಟ್ಟಡವನ್ನು ನವೀಕರಣ ಮಾಡಲಾಗುವುದು ಎಂದರು. ಅಲ್ಲದೇ, ತುರ್ತು ದುರಸ್ತಿ ಕಾರ್ಯ ಕೈಗೊಳ್ಳಲು ಈಗಾಗಲೇ ಐದು ಕೋಟಿ ರು. ಹಣ ಶಾಲೆಗೆ ಬಿಡುಗಡೆ ಮಾಡಲಾಗಿದೆ. ನಗರದ ಪ್ರಮುಖ ಶಾಲೆಗಳಲ್ಲಿ ಒಂದಾಗಿರುವ ಈ ಶಾಲೆ ನವೀಕರಣವನ್ನು ಸಾಮಗ್ರವಾಗಿ ಕೈಗೊಳ್ಳಲಾಗುವುದು ಎಂದರು. ಶಾಲಾ ಸಿಬ್ಬಂದಿ ಹಾಗೂ ಜಿಡಳಿತದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!
ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ