ಮುಖಂಡರೊಂದಿಗೆ ಎಚ್‌ಡಿಕೆ ಚರ್ಚೆ: ಮಹತ್ವ ಕಾರ್ಯಕ್ಕೆ ಮುಂದಾದ ಜೆಡಿಎಸ್

By Suvarna NewsFirst Published May 17, 2021, 3:41 PM IST
Highlights

* ರಾಜ್ಯದ ಕೋವಿಡ್‌ ಸ್ಥಿತಿಗತಿ ಬಗ್ಗೆ ಶಾಸಕರು, ಮುಖಂಡರೊಂದಿಗೆ ಎಚ್‌ಡಿಕೆ ಆನ್‌ಲೈನ್‌ ಸಮಾಲೋಚನೆ
* ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು ಜಿಲ್ಲೆಯ ಶಾಸಕರು, ಮುಖಂಡರೊಂದಿಗೆ ಚರ್ಚೆ
* 2ಡಿಜಿ ಔ‍ಷಧ ಖರೀದಿಸಿ ಜೆಡಿಎಸ್‌ನಿಂದ ಉಚಿತವಾಗಿ ಹಂಚಲು ಚಿಂತನೆ
* ಸೋಂಕು ಪತ್ತೆ ಪರೀಕ್ಷೆ ಸಮಸ್ಯೆ, ಪಡಿತರ ವಿತರಣೆಯಲ್ಲಿನ ತೊಡಕಿನ ಬಗ್ಗೆ ಸರ್ಕಾರದ ಗಮನ ಸೆಳೆಯುವ ಭರವಸೆ

ಬೆಂಗಳೂರು, (ಮೇ.17): ರಾಜ್ಯದ ಕೋವಿಡ್‌ ಸ್ಥಿತಿಗತಿ ಮತ್ತು ಜೆಡಿಎಸ್‌ ವತಿಯಿಂದ ಜನರಿಗೆ ನೀಡಲಾಗುತ್ತಿರುವ ಪರಿಹಾರ ಕಾರ್ಯಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ಪಕ್ಷದ ಶಾಸಕರು, ಮುಖಂಡರೊಂದಿಗೆ ಸೋಮವಾರ ಆನ್‌ಲೈನ್‌ ಸಮಾಲೋಚನೆ ನಡೆಸಿದರು.

ಕೊರೋನಾ ವೈರಸ್‌ ಸೋಂಕು ಪತ್ತೆ ಪರೀಕ್ಷೆ ಕಡಿಮೆ ಪ್ರಮಾಣದಲ್ಲಿ ನಡೆಯುತ್ತಿರುವುದು, ಪರೀಕ್ಷಾ ವರದಿಗಳು ವಿಳಂಬವಾಗಿ ಬರುತ್ತಿರುವುದು ಮತ್ತು ವರದಿ ವಿಳಂಬವಾಗುತ್ತಿರುವುದರಿಂದ ಆಗುತ್ತಿರುವ ಅನಾಹುತಗಳು, ಲಸಿಕೆ ಅಭಿಯಾನ ಅವ್ಯವಸ್ಥೆ, ಆಕ್ಸಿಜನ್‌ ಪೂರೈಕೆಯಲ್ಲಿ ಅಗುತ್ತಿರುವ ಸಮಸ್ಯೆ, ತಾರತಮ್ಯ, ಆಸ್ಪತ್ರೆಗಳು ರೋಗಿಗಳಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡುತ್ತಿರುವುದನ್ನು ಶಾಸಕರು ಕುಮಾರಸ್ವಾಮಿ ಅವರ ಗಮನಕ್ಕೆ ತಂದರು. ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದರು.  

ಲಾಕ್‌ಡೌನ್‌ ವಿಸ್ತರಣೆ ಬಗ್ಗೆ ಸರ್ಕಾರಕ್ಕೆ ಮಹತ್ವದ ಸಲಹೆ ಕೊಟ್ಟ ಕುಮಾರಸ್ವಾಮಿ

ಹಳ್ಳಿಗಳಲ್ಲಿ ಸೋಂಕಿಗೆ ಒಳಗಾಗಿರುವವರಿಗೆ ಮಾಹಿತಿ, ಜಾಗೃತಿ ನೀಡಲು ಆಶಾ ಕಾರ್ಯಕರ್ತೆಯರು ಶ್ರಮ ವಹಿಸುತ್ತಿರುವುದಾಗಿ ಶಾಸಕರು ಮಾಹಿತಿ ನೀಡಿದರು. ಆಶಾ ಕಾರ್ಯಕರ್ತರ ಕಾರ್ಯಕ್ಕೆ ಎಚ್‌ಡಿಕೆ ಹರ್ಷ ವ್ಯಕ್ತಪಡಿಸಿದರು. ಕಾರ್ಯಕರ್ತೆಯರು ಸೋಂಕಿತರಿಗೆ ಔಷಧ ತಲುಪಿಸಲು ಉತ್ಸಕರಾಗಿದ್ದರೂ, ಸರ್ಕಾರ ಔಷಧ ಪೂರೈಸದೇ ಇರುವುದನ್ನು ಶಾಸಕ ಆಶ್ವಿನ್‌ ಅವರು ಸಭೆಯಲ್ಲಿ ಎಚ್‌ಡಿಕೆ ಗಮನಕ್ಕೆ ತಂದರು. ಕೋವಿಡ್‌ ಚಿಕಿತ್ಸೆಗೆ ನೆರವಾಗುತ್ತಿರುವ, ವೈಯಕ್ತಿಕ ಸಹಾಯ ನೀಡುತ್ತಿರುವ ಪಕ್ಷದ ಶಾಸಕರ ನಡೆಗೆ ಕುಮಾರಸ್ವಾಮಿ ಅವರು ಪ್ರಶಂಸೆ ವ್ಯಕ್ತಪಡಿಸಿದರು. 

2ಡಿಜಿ ಔ‍ಷಧ ಖರೀದಿಸಿ ಹಂಚಲು ಚಿಂತನೆ 
ಡಿಆರ್‌ಡಿಒ ಅಭಿವೃದ್ಧಪಡಿಸಿರುವ 2ಡಿಜಿ ಔ‍ಷಧದ ಪೊಟ್ಟಣಗಳನ್ನು ಖರೀದಿ ಮಾಡಿ ರಾಜ್ಯದಾದ್ಯಂತ ಜೆಡಿಎಸ್‌ ವತಿಯಿಂದ ಉಚಿತವಾಗಿ ವಿತರಿಸುವ ಬಗ್ಗೆ ಆನ್‌ಲೈನ್‌ ಸಭೆಯಲ್ಲಿ ಸಮಾಲೋಚನೆ ನಡೆಯಿತು. ಔ‍ಷಧ ಪರಿಣಾಮಕಾರಿ ಎಂದು ಕಂಡು ಬಂದರೆ ಅದನ್ನು ಖರೀದಿಸಿ ಹಂಚಲು ನಿರ್ಧರಿಸಲಾಯಿತು. ಎಚ್‌.ಡಿ ಕುಮಾರಸ್ವಾಮಿ ಅವರ ಈ ನಿರ್ಧಾರಕ್ಕೆ ಶಾಸಕರು, ಮುಖಂಡರು ಹರ್ಷ ವ್ಯಕ್ತಪಡಿಸಿದರು, ಪ್ರಶಂಸಿದರು. 

ಪಡಿತರ ಸಮಸ್ಯೆಗೆ ಶಾಸಕರ ಆಕ್ರೋಶ
ಪಡಿತರ ತೆಗೆದುಕೊಳ್ಳಲು ಥಂಬ್‌ ಇಂಪ್ರೆಶನ್‌ ರದ್ದು ಮಾಡಿ, ಆಧಾರ್‌ ಕಡ್ಡಾಯಗೊಳಿಸಿರುವುದನ್ನು ಬಹುತೇಕ ಶಾಸಕರು ವಿರೋಧಿಸಿದರು. ಆಧಾರ್‌ ಲಿಂಕ್‌ ಆಗದೇ, ಪಡಿತರ ಸಿಗದೇ ಜನ ಪರದಾಡುತ್ತಿದ್ದಾರೆ ಎಂದು ಶಾಸಕರು, ಮುಖಂಡರು ದೂರಿದರು. ಚೆಕ್‌ ಲೀಸ್ಟ್‌ ಮೂಲಕ ಪಡಿತರ ವಿತರಿಸಬೇಕು. ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಾರಬೇಕಾಗಿ ಬಹುತೇಕ ಶಾಸಕರು ಎಚ್‌ಡಿಕೆ ಅವರಿಗೆ ಮನವಿ ಮಾಡಿದರು. ಸರ್ಕಾರಕ್ಕೆ ಈ ವಿಷಯ ತಲುಪಿಸಿ ಸಮಸ್ಯೆ ಪರಿಹರಿಸುವದಾಗಿ ಎಚ್‌ಡಿಕೆ ಹೇಳಿದರು 

ದಂಪತಿ ಸಾವಿಗೆ ಎಚ್‌ಡಿಕೆ ತೀವ್ರ ಬೇಸರ 
ನಾಗಮಂಗಲದಲ್ಲಿ ದಂಪತಿ ಕೋವಿಡ್‌ನಿಂದ ಸಾವಿಗೀಡಾಗಿದ್ದು,  ಮಗು ಅನಾಥವಾದ ಬಗ್ಗೆ ಶಾಸಕ ಸುರೇಶ್‌ಗೌಡ  ಅವರಿಂದ ಎಚ್‌ಡಿಕೆ ಮಾಹಿತಿ ಪಡೆದರು. ಸಾವಿಗೆ ತೀವ್ರ ಬೇಸರ ವ್ಯಕ್ತಪಡಿಸಿದರು. ದಂಪತಿಗೆ ಆಸ್ಪತ್ರೆ ವ್ಯವಸ್ಥೆ ಮಾಡಿದ್ದು, ಚಿಕಿತ್ಸೆ ಕಲ್ಪಿಸಿದ ಪ್ರಯತ್ನಗಳ ಬಗ್ಗೆ ಶಾಸಕ ಸುರೇಶ್‌ಗೌಡ ವಿವರಿಸಿದರು. ಅವರ ಪ್ರಾಣ ಉಳಿಸಲು ಸಾಧ್ಯವಾಗದ್ದಕ್ಕೆ ಶಾಸಕ ಸುರೇಶ್‌ಗೌಡ ಮರುಗಿದರು. 

ಕೋವಿಡ್‌ಗೆ ಯುವಕರೇ ಸಾವು: ಸಭೆಯಲ್ಲಿ ತೀವ್ರ ಆತಂಕ 
ರಾಜ್ಯದಾದ್ಯಂತ ಯುವಕರೇ ಹೆಚ್ಚಾಗಿ ಕೋವಿಡ್‌ಗೆ ಬಲಿಯಾಗುತ್ತಿರುವ ಗಂಭೀರ ವಿಚಾರವನ್ನು ಶಾಸಕರು ಕುಮಾರಸ್ವಾಮಿ ಅವರ ಗಮನಕ್ಕೆ ತಂದರು. ಯುವಕರೇ ಸಾವಿಗೀಡಾಗುತ್ತಿರುವುದು ಏಕೆ ಎಂಬುದರ ಕುರಿತು ಸರ್ಕಾರ ಅಧ್ಯಯನ ನಡೆಸುವ ಅಗತ್ಯವಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾದವು. ಅಲ್ಲದೆ, ಈ ಬಗ್ಗೆ ಯುವ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿರುವುದಾಗಿ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

click me!