ಕುಮಾರಸ್ವಾಮಿ ಸಹಕಾರ ಕೇಳಿದ್ದಾರೆಯೇ ವಿನಾ ಪ್ರಚಾರಕ್ಕೆ ಬನ್ನಿ ಎಂದಿಲ್ಲ: ಸುಮಲತಾ ಅಂಬರೀಶ್‌

By Kannadaprabha NewsFirst Published Apr 6, 2024, 5:49 AM IST
Highlights

ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್‌-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ ಅವರು ನನಗೆ ಸಹಕಾರ ಕೊಡಿ ಎಂದು ಕೇಳಿದ್ದಾರೆ. ತಮ್ಮ ಪರ ಪ್ರಚಾರಕ್ಕೆ ಬನ್ನಿ ಎಂದು ಕರೆದಿಲ್ಲ ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಹೇಳಿದ್ದಾರೆ. 

ಬೆಂಗಳೂರು (ಏ.06): ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್‌-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ ಅವರು ನನಗೆ ಸಹಕಾರ ಕೊಡಿ ಎಂದು ಕೇಳಿದ್ದಾರೆ. ತಮ್ಮ ಪರ ಪ್ರಚಾರಕ್ಕೆ ಬನ್ನಿ ಎಂದು ಕರೆದಿಲ್ಲ ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಹೇಳಿದ್ದಾರೆ. ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಮಂಡ್ಯದಲ್ಲಿ ಮಾತ್ರ ನಡೆಯುತ್ತಿರುವ ಚುನಾವಣೆ ಅಲ್ಲ. ಮೋದಿ ಅವರು 400ಕ್ಕೂ ಅಧಿಕ ಸ್ಥಾನ ಗೆಲ್ಲುವ ಗುರಿ ಇದೆ. ಕುಮಾರಸ್ವಾಮಿ ಅವರು ಪ್ರಚಾರಕ್ಕೆ ಯಾವುದೇ ಆಹ್ವಾನ ನೀಡಿಲ್ಲ. ಈ ವಿಷಯದಲ್ಲಿ ಪಕ್ಷ ಸೂಚಿಸಿದಂತೆ ನಡೆಯುತ್ತೇನೆ. ಮಂಡ್ಯ ಇನ್ನು ನನ್ನನ್ನು ಮಾಜಿ ಸಂಸದೆ ಎಂದು ನೋಡಲಿದೆ. 

ಖಂಡಿತ ಮಂಡ್ಯದಲ್ಲಿ ಬಿಜೆಪಿಗೆ ಮತ್ತಷ್ಟು ಶಕ್ತಿ ತುಂಬುವ ಅವಶ್ಯಕತೆ ಇದೆ. ಮುಂದೆ ಮಂಡ್ಯ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಗುರಿ ಇದೆ ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಬಿಜೆಪಿಯಿಂದ ಮೋಸ ಹೋಗಿದ್ದೀನಿ ಎಂದು ನನಗೆ ಅನಿಸುತ್ತಿಲ್ಲ. ಮೋಸ ಆಗಿದ್ದರೆ ಅದೇ ಪಕ್ಷಕ್ಕೆ ಏಕೆ ಸೇರುತ್ತಿದ್ದೆ? ಬಿಜೆಪಿಗೆ ಪೂರ್ಣ ಮನಸ್ಸಿನಿಂದ, ಸಂತೋಷದಿಂದ ಸೇರಿದ್ದೇನೆ. ಮೋದಿ ಅವರ ಜತೆ ಕೈ ಜೋಡಿಸಬೇಕು ಎಂಬ ಕಾರಣಕ್ಕಾಗಿ ಬಿಜೆಪಿಗೆ ಸೇರಿದ್ದೇನೆ ಎಂದು ತಿಳಿಸಿದರು. ಇದಕ್ಕೂ ಮುನ್ನ ಪಕ್ಷ ಸೇರ್ಪಡೆ ವೇಳೆ ಮಾತನಾಡಿದ ಸುಮಲತಾ ಅಂಬರೀಶ್‌, ಈ ದಿನ ನನ್ನ ರಾಜಕೀಯ ಜೀವನದಲ್ಲಿ ಮಹತ್ವದ ಸುದಿನ. 

Latest Videos

ಅಣ್ಣ-ತಮ್ಮಂದಿರಿಗೆ ಲೂಟಿ ಹೊಡೆಯುವುದೇ ಕೆಲಸ: ಸಿ.ಪಿ.ಯೋಗೇಶ್ವರ್

ಐದು ವರ್ಷಗಳ ಹಿಂದೆ ಮಂಡ್ಯದಲ್ಲಿ ನನಗೆ ಐತಿಹಾಸಿಕ ಗೆಲುವು ಸಿಕ್ಕಿತ್ತು. ಆ ಚುನಾವಣೆಯನ್ನು ನಾನು ಎಂದಿಗೂ ಮರೆಯುವುದಿಲ್ಲ. ಬೆಂಬಲಿಗರು, ಮಂಡ್ಯದ ಅಂಬರೀಶ್‌ ಅಭಿಮಾನಿಗಳ ಬಳಗ ನನ್ನ ಬೆನ್ನಿಗೆ ನಿಂತು ಸಹಕಾರ ನೀಡಿದರು. ಬಿಜೆಪಿ ಬಾಹ್ಯ ಬೆಂಬಲ ನೀಡಿ ಸಾಕಷ್ಟು ಶಕ್ತಿ ತುಂಬಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಐದು ವರ್ಷದ ಹಿಂದೆ ಮೈಸೂರಿಗೆ ಬಂದಿದ್ದಾಗ ಪಕ್ಷೇತರ ಅಭ್ಯರ್ಥಿಯಾಗಿದ್ದ ನನ್ನ ಪರವಾಗಿ ಮತ ಕೇಳಿ ಪ್ರಚಾರ ಮಾಡಿದ್ದರು. ಇದನ್ನು ಎಂದಿಗೂ ಮರೆಯುವುದಿಲ್ಲ ಎಂದರು.

ನನಗೆ ನರೇಂದ್ರ ಮೋದಿಯೇ ಸ್ಫೂರ್ತಿ: ಕಳೆದ ಐದು ವರ್ಷಗಳ ಲೋಕಸಭಾ ಪ್ರಯಾಣದಲ್ಲಿ ಸಾಕಷ್ಟು ಕಲಿತಿದ್ದೇನೆ. ಸಾಕಷ್ಟು ಅನುಭವವಾಗಿದೆ. ಅಂಬರೀಶ್‌ ಅವರು 25 ವರ್ಷ ಕಾಂಗ್ರೆಸ್‌ನಲ್ಲಿದ್ದರು. ಆ ದೃಷ್ಟಿಕೋನದಲ್ಲಿ ರಾಜಕೀಯವನ್ನು ನಾನು ದೂರದಿಂದ ನೋಡಿಕೊಂಡು ಬಂದಿದ್ದೆ. ನಾನು ಸಂಸತ್‌ ಪ್ರವೇಶಿಸಿದ ಬಳಿಕ ಸಾಕಷ್ಟು ಬಿಜೆಪಿಯ ಹಿರಿಯ ನಾಯಕರ ಮಾರ್ಗದರ್ಶನ ಸಿಕ್ಕಿದೆ. ಮುಖ್ಯವಾಗಿ ನನಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಸ್ಫೂರ್ತಿ. ಮೋದಿ ಅವರ ನಾಯಕತ್ವ, ಪರಿಕಲ್ಪನೆ, ಕನಸುಗಳು ಒಂದೊಂದು ನಿಜಕ್ಕೂ ಸ್ಫೂರ್ತಿ ನೀಡಿವೆ. ಸಂಸತ್ತಿನಲ್ಲಿ ಅವರ ಭಾಷಣಗಳಿಂದ ಹೊಸ ತಿಳಿವಳಿಕೆ ಸಿಕ್ಕಿತು. ಐದು ವರ್ಷಗಳಲ್ಲಿ ಇವೆಲ್ಲವನ್ನೂ ನೋಡಿ ಗಮನಿಸಿ ಬಿಜೆಪಿ ಸೇರುವುದೇ ಉತ್ತಮ ಆಯ್ಕೆ ಅನಿಸಿತು. ಹೀಗಾಗಿ ನಾನು ಬಿಜೆಪಿ ಸೇರ್ಪಡೆಯಾಗಿದ್ದೇನೆ ಎಂದರು.

ಬೇರೆಯವರು ಕ್ರೆಡಿಟ್‌ ಪಡೆಯಲು ಯತ್ನ: ಇನ್ನು ರಾಜ್ಯದಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಮಂಡ್ಯ ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಸಾಕಷ್ಟು ಸಹಕಾರ ನೀಡಿದ್ದಾರೆ. ಮಂಡ್ಯದ ಮೈ ಶುಗರ್‌ ಸಕ್ಕರೆ ಕಾರ್ಖಾನೆ ಪುನರ್‌ ಆರಂಭಕ್ಕೆ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಕೊಡುಗೆ ಅಪಾರವಿದೆ. ಬಿಜೆಪಿ ಸರ್ಕಾರ ಮಂಡ್ಯ ಜಿಲ್ಲೆಗೆ ನೀಡಿದ ಕೊಡುಗೆಯ ಶ್ರೇಯಸ್ಸು ಬಿಜೆಪಿಗೆ ಸೇರಬೇಕು. ಆದರೆ, ಬೇರೆಯವರು ಆ ಕೊಡುಗೆಯನ್ನು ತಮ್ಮದು ಎಂದು ಹೇಳಿಕೊಂಡು ಪ್ರಚಾರ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಜನರೇ ಉತ್ತರ ಕೊಡಬೇಕು ಎಂದರು.

ಬಿಜೆಪಿ - ಜೆಡಿಎಸ್ ಮೈತ್ರಿಯಿಂದ ರಾಜ್ಯದ ಅಭಿವೃದ್ಧಿ: ಎಚ್.ಡಿ.ಕುಮಾರಸ್ವಾಮಿ

ನುಡಿದಂತೆ ನಡೆಯುವ ನಾಯಕತ್ವವನ್ನು ನರೇಂದ್ರ ಮೋದಿ ಅವರಲ್ಲಿ ಕಂಡೆ. ಅವರ 2047ರ ಕನಸು ನನಸಾಗಲು ನಾವೆಲ್ಲಾ ಕೈ ಜೋಡಿಸಬೇಕು. ನನಗೆ ನನ್ನ ಭವಿಷ್ಯದ ಬಗ್ಗೆ ಚಿಂತೆ ಇಲ್ಲ. ನನಗೆ ಮಂಡ್ಯ ಜಿಲ್ಲೆ, ರಾಜ್ಯ ಮತ್ತು ದೇಶ ಮುಖ್ಯ. ಇವತ್ತು ಅಧಿಕೃತವಾಗಿ ಬಿಜೆಪಿ ಸೇರಿದ್ದೇನೆ. ಇದರಿಂದ ಹೆಮ್ಮೆ ಮತ್ತು ಸಂತೋಷವಾಗುತ್ತಿದೆ ಎಂದು ಸುಮಲತಾ ಹೇಳಿದರು.

click me!