ನಾಗಮಂಗಲ ಚಾಲಕ ಆತ್ಮಹತ್ಯೆ ಯತ್ನ ಪ್ರಕರಣದ ಕುರಿತ ಚರ್ಚೆ ವೇಳೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಸಚಿವ ಚೆಲುವರಾಯಸ್ವಾಮಿ ನಡುವೆ ತೀವ್ರ ಮಾತಿನ ಚಕಮಕಿ ನಡೆದು, ಒಂದು ಹಂತದಲ್ಲಿ ಉಭಯ ನಾಯಕರು ಏಕವಚನದಲ್ಲಿಯೇ ಬೈದಾಡಿಕೊಂಡ ಪ್ರಹಸನ ನಡೆಯಿತು.
ವಿಧಾನಸಭೆ (ಜು.07): ನಾಗಮಂಗಲ ಚಾಲಕ ಆತ್ಮಹತ್ಯೆ ಯತ್ನ ಪ್ರಕರಣದ ಕುರಿತ ಚರ್ಚೆ ವೇಳೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಸಚಿವ ಚೆಲುವರಾಯಸ್ವಾಮಿ ನಡುವೆ ತೀವ್ರ ಮಾತಿನ ಚಕಮಕಿ ನಡೆದು, ಒಂದು ಹಂತದಲ್ಲಿ ಉಭಯ ನಾಯಕರು ಏಕವಚನದಲ್ಲಿಯೇ ಬೈದಾಡಿಕೊಂಡ ಪ್ರಹಸನ ನಡೆಯಿತು. ಭೋಜನ ವಿರಾಮದ ನಂತರ ಕಲಾಪ ಆರಂಭವಾಗುತ್ತಿದ್ದಂತೆ ಚಾಲಕ ಜಗದೀಶ್ ಆತ್ಮಹತ್ಯೆ ಯತ್ನ ಪ್ರಕರಣದಲ್ಲಿ ಚೆಲುವರಾಯ ಸ್ವಾಮಿ ನೇರ ಕಾರಣ ಎಂದು ಆರೋಪಿಸಿದರು. ಅದರಿಂದ ಸಿಟ್ಟಾದ ಚೆಲುವರಾಯಸ್ವಾಮಿ, ಕುಮಾರಸ್ವಾಮಿ ಅವರು ಅನವಶ್ಯಕವಾಗಿ ತೇಜೋವಧೆ ಮಾಡುವುದನ್ನು ಬಿಡಬೇಕು.
2018ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಸೇರ್ಪಡೆಯಾದವರಲ್ಲಿ ಬಹುತೇಕರು ಸೋತಿದ್ದೆವು. ಆಗ ನಮ್ಮನ್ನೆಲ್ಲ ಸತ್ತ ಕುದುರೆಗಳು ಎಂದಿದ್ದರು. ಅವರನ್ನು ಮುಖ್ಯಮಂತ್ರಿ ಮಾಡೋವಾಗ ನಾವೆಲ್ಲ ಎಷ್ಟುಕಷ್ಟಪಟ್ಟೆವು ಎಂಬುದನ್ನು ಅವರು ನೆನೆಯಬೇಕು ಎಂದರು. ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಅದರಿಂದ ಹತಾಶರಾಗಿ ಇನ್ನೊಬ್ಬರ ಬಗ್ಗೆ ಲಘುವಾಗಿ ಮಾತನಾಡುವುದು, ತೇಜೋವಧೆ ಮಾಡುವುದನ್ನು ಕುಮಾರಸ್ವಾಮಿ ಬಿಡಬೇಕು. ಪೆನ್‌ಡ್ರೈವ್ ಇದೆ, ಸಿ.ಡಿ. ಇದೆ ಎಂದೆಲ್ಲ ಹೇಳುವುದನ್ನು ಬಿಟ್ಟು ಒಳ್ಳೆಯ ಕೆಲಸ ಮಾಡುವ ಕಡೆ ಗಮನ ಕೊಡಬೇಕು ಎಂದು ಹೇಳಿದರು.
ನನ್ನ ಪುತ್ರನ ಭ್ರಷ್ಟಾಚಾರ ಎಚ್‌ಡಿಕೆ ಕಲ್ಪನಾ ವಿಲಾಸ: ಸಿಎಂ ಸಿದ್ದರಾಮಯ್ಯ
ಇದಕ್ಕೆ ಸಿಟ್ಟಿಗೆದ್ದು ಚೆಲುವರಾಯಸ್ವಾಮಿ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ ಎಚ್.ಡಿ.ಕುಮಾರಸ್ವಾಮಿ, ನಾನು ಹತಾಶೆಗೊಳಗಾಗಿಲ್ಲ. ನಮ್ಮ ಕುಟುಂಬ ಸಾಕಷ್ಟುಸೋಲುಗಳನ್ನು ನೋಡಿದೆ. ಸೋಲು ನಮಗೆ ಹೊಸತಲ್ಲ. ನಿನ್ನ ಹಾಗೆ ನಾಚಿಕೆ ಪಡುವ ಕೆಲಸ ಮಾಡಿಲ್ಲ ಎಂದು ತಿರುಗೇಟು ನೀಡಿದರು. ಆಗ ಚೆಲುವರಾಯಸ್ವಾಮಿ, ಸದನ ನಿಮ್ಮ ಆಸ್ತಿಯಲ್ಲ. ನಮ್ಮ ಹಂಗಿನಲ್ಲಿ ನೀವು ಮುಖ್ಯಮಂತ್ರಿ ಆದೋರು ಎಂದು ಕಿಚಾಯಿಸಿದರು. ಅದಕ್ಕೆ ಎಚ್.ಡಿ.ಕುಮಾರಸ್ವಾಮಿ, ಸದನ ನಿಮ್ಮಪ್ಪನ ಆಸ್ತಿಯೂ ಅಲ್ಲ, ನಮ್ಮಪ್ಪನ ಆಸ್ತಿಯೂ ಅಲ್ಲ ಎಂದರು.
ಸದನದೊಳಗೂ ಎಚ್‌ಡಿಕೆ ಪೆನ್‌ಡ್ರೈವ್ ಗದ್ದಲ: ಸದನದ ಹೊರಗೆ ಚರ್ಚೆಯಾಗುತ್ತಿದ್ದ ಎಚ್.ಡಿ.ಕುಮಾರಸ್ವಾಮಿ ಅವರ ಪೆನ್‌ಡ್ರೈವ್ ವಿಚಾರ, ಗುರುವಾರ ಸದನದಲ್ಲೂ ಚರ್ಚೆಗೆ ಬಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಚಿವರಾದ ಕೆ.ಜೆ.ಜಾರ್ಜ್, ಚೆಲುವರಾಯಸ್ವಾಮಿ ನಡುವೆ ವಾಗ್ವಾದ ನಡೆಯಿತು. ಕೆಎಸ್ಸಾರ್ಟಿಸಿ ಚಾಲಕ ಜಗದೀಶ್ ಆತ್ಮಹತ್ಯೆ ಪ್ರಕರಣದ ಚರ್ಚೆ ವೇಳೆ ಸಚಿವ ಕೆ.ಜೆ. ಜಾರ್ಜ್, ವರ್ಗಾವಣೆ ವಿಚಾರದಲ್ಲಿ ಕೋಟ್ಯಂತರ ರು. ಭ್ರಷ್ಟಾಚಾರ ನಡೆದಿದೆ. ವರ್ಗಾವಣೆ ಮಾಡಲು ಲಂಚಕ್ಕೆ ಬೇಡಿಕೆಯಿಡಲಾಗಿದೆ ಎಂದು ಆರೋಪಿಸುತ್ತಲೇ ಬರುತ್ತಿದ್ದೀರಿ. ಅದರ ದಾಖಲೆಗಳಿವೆ ಎಂದು ಮಾಧ್ಯಮಗಳಲ್ಲಿ ಪೆನ್‌ಡ್ರೈವ್ ಪ್ರದರ್ಶಿಸುತ್ತೀರಿ. ಸುಮ್ಮನೇ ತೇಜೋವಧೆ ಮಾಡುವ ಕೆಲಸ ಮಾಡಬೇಡಿ. ಇಂಧನ ಇಲಾಖೆಯಲ್ಲಿ ವರ್ಗಾವಣೆ ದಂಧೆ ಎಂದು ಹೇಳುತ್ತೀರಿ.
ಸುಮ್ಮನೆ ಪೆನ್‌ಡ್ರೈವ್ ತೋರಿಸಬೇಡಿ, ಸಾಕ್ಷಿ ಕೊಡಿ: ಎಚ್‌ಡಿಕೆ ವಿರುದ್ಧ ಹರಿಹಾಯ್ದ ಸಚಿವ ಕೆ.ಜೆ.ಜಾರ್ಜ್
ಸಾಕ್ಷಿ ಇದ್ದರೆ ಸರ್ಕಾರಕ್ಕೆ ನೀಡಿ. ಸುಮ್ಮನೇ ಆರೋಪ ಮಾಡಬೇಡಿ. ಸರ್ಕಾರ ತನಿಖೆಗೆ ಸಿದ್ಧವಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅದಕ್ಕೆ ಧ್ವನಿಗೂಡಿಸಿದ ಸಚಿವ ಎಂ.ಬಿ. ಪಾಟೀಲ್, ಪೆನ್‌ಡ್ರೈವ್‌ನಲ್ಲಿ ಸಾಕ್ಷಿ ಇದ್ದರೆ ಅದನ್ನು ಸರ್ಕಾರಕ್ಕೆ ನೀಡಿ. ಸಾಕ್ಷಿಯನ್ನು ಮರೆಮಾಚುವುದೂ ಅಪರಾಧವಾಗುತ್ತದೆ ಎಂದು ಹೇಳಿದರು. ಸಚಿವ ಚೆಲುವರಾಯ ಸ್ವಾಮಿ ಕೂಡ ಪೆನ್‌ಡ್ರೈವ್ ಬಗ್ಗೆ ಪ್ರಸ್ತಾಪಿಸಿದ್ದು, ಕುಮಾರಸ್ವಾಮಿ ಅವರು ಚುನಾವಣೆ ಸೋಲಿನಿಂದ ಹತಾಶರಾಗಿದ್ದಾರೆ. ಸೋಲು-ಗೆಲುವು ಸಾಮಾನ್ಯ. ಸುಮ್ಮನೆ ಯಾರ ಬಗ್ಗೆಯಾದರೂ ಲಘುವಾಗಿ ಮಾತನಾಡುವುದು. ಯಾರನ್ನೇ ಆದರೂ ತೇಜೋವಧೆ ಮಾಡುವುದನ್ನು ಅವರು ಬಿಡಬೇಕು. ಸಣ್ಣ ಅವಕಾಶ ಸಿಕ್ಕಾಗ ರಾಜೀನಾಮೆ ಕೇಳುತ್ತಾರೆ. ಪೆನ್‌ಡ್ರೈವ್ ಇದೆ, ವೀಡಿಯೋ ಇದೆ ಎಂದು ಹೇಳುವುದನ್ನು ಬಿಟ್ಟುಬಿಡಿ. ಜನರಿಗೆ ಒಳ್ಳೆಯ ಕೆಲಸ ಮಾಡಿ ಆಗ ಎಲ್ಲರೂ ಬೆಂಬಲಿಸುತ್ತಾರೆ ಎಂದರು.