ಮುಡಾ ಹಗರಣದ ಬಗ್ಗೆ ಬಿಜೆಪಿ-ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆ ಇಂದು ಕೊನೆಗೊಂಡಿದೆ. ಮೈಸೂರಿನ ಮಹರಾಜ ಕಾಲೇಜು ಆವರಣದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ, ಡಿಕೆ ಶಿವಕುಮಾರ್ ಮೇಲೆ ಭಾರೀ ವಾಗ್ದಾಳಿ ನಡೆಸಿದ್ದಾರೆ.
ಮೈಸೂರು (ಆ.10): ಮುಡಾ ಹಗರಣದ ಕುರಿತಾಗಿ ಬಿಜೆಪಿ ಹಾಗೂ ಜೆಡಿಎಸ್ ನಡೆಸಿದ ಪಾದಯಾತ್ರೆ ಶನಿವಾರ ಮುಕ್ತಾಯವಾಗಿದೆ. ಮೈಸೂರಿನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಅದರಲ್ಲೂ ಎಚ್‌ಡಿ ಕುಮಾರಸ್ವಾಮಿ ಮೇಲೆ ವೈಯಕ್ತಿಕ ವಾಗ್ದಾಳಿ ನಡೆಸಿದ್ದ ಡಿಕೆ ಶಿವಕುಮಾರ್ ಅವರ ಜಾತಕವನ್ನು ಕುಮಾರಸ್ವಾಮಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. 'ನನ್ನ ಮಗನ ರಾಜಕೀಯ ಜೀವನಕ್ಕಾಗಿ ಅಣ್ಣನ ಮಗನನನ್ನ ಜೈಲಿಗೆ ಕಳಿಸಿದ್ದೇನೆ ಎಂದು ನೀವು ನನ್ನ ಮೇಲೆ ಆರೋಪ ಮಾಡಿದ್ದೀರಿ. ಆದರೆ, ಯಾವ ಎಸ್‌ಎಂ ಕೃಷ್ಣ, ಕೊತ್ವಾಲನ ಜೊತೆ ಜೀವನ ಮಾಡಿಕೊಂಡಿದ್ದ ನಿಮಗೆ ರಾಜಕೀಯ ಜೀವನ ಕೊಟ್ಟಿದ್ದರೋ, ರಾಜಕೀಯದಲ್ಲಿ ಬೆಳೆಸಿದ್ದೀರೋ ಅವರ ಮನೆಯನ್ನೇ ಹಾಳು ಮಾಡಿದ್ದೀರಿ. ಅವರ ಅಳಿಯ ಸಿದ್ದಾರ್ಥ ಆತ್ಮಹತ್ಯೆ ಗೆ ಕಾರಣ ಆಗಿದ್ದು ಯಾರು ಶಿವಕುಮಾರ್ ಅವರೇ..? ಅವರ ಆತ್ಮಹತ್ಯೆಗೆ ಕಾರಣ ಯಾರು ಅನ್ನೋದನ್ನ ಜನಗಳ ಮುಂದೆ ಇಡ್ತೀರಾ ಶಿವಕುಮಾರ್ ಅವರೇ.. ಎಂದು ಎಚ್‌ಡಿಕೆ ಪ್ರಶ್ನೆ ಮಾಡುವ ಮೂಲಕ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಆತ್ಮಹತ್ಯೆಗೆ ಡಿಕೆ ಶಿವಕುಮಾರ್ ಅವರೇ ಕಾರಣ ಎಂದು ಹೇಳಿದ್ದಾರೆ.
ಇಂದು ಬೆಳಗ್ಗೆ ನಿಮ್ಮ ಸ್ನೇಹಿತರೇ ಒಬ್ಬರು ನನಗೆ ಕಾಲ್ ಮಾಡಿದ್ದರು. ಸರ್ ನಿಮಗೆ ಒಂದು ವಿಷ್ಯ ಗೊತ್ತಿಲ್ಲ. ಬೆಂಗಳೂರಿನಲ್ಲಿ ಜೇಡರಹಳ್ಳಿ ಅಂತಾ ಒಂದು ಊರಿದೆ. ಡಿಕೆಶಿ ಅವರ ಸ್ನೇಹಿತ ವಾಸು ಅಂತಾ ಒಬ್ಬನಿದ್ದ. ಇಬ್ಬರೂ ರಾತ್ರಿ ರಸ್ತೆಯಲ್ಲಿ ಹೋಗುವಾಗ ಮ್ಯಾನ್‌ಹೋಲ್ ಮುಚ್ಚಳಗಳನ್ನ ಕದ್ದು ಅದನ್ನು ಗುಜರಿ ಅಂಗಡಿಗೆ ಹಾಕಿ ಜೀವನ ಮಾಡುತ್ತಿದ್ದ ಶಿವಕುಮಾರ್, ಇಂದು ಕುಮಾರಸ್ವಾಮಿ ಹಾಗೂ ದೇವೇಗೌಡರ ಬಗ್ಗೆ ಮಾತನಾಡುತ್ತಿದ್ದಾರೆ. ನನಗೆ ಇದನ್ನು ಕೇಳಿಯೇ ಆಶ್ಚರ್ಯವಾಯಿತು. ಇವರಿಗೆ ನನ್ನ ಬಗ್ಗೆ, ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ. ನಿನ್ನೆ ಇಲ್ಲಿಂದಲೇ ನಿಖಿಲ್ ಕುಮಾರಸ್ವಾಮಿಗೆ ಪ್ರಶ್ನೆ ಮಾಡಿದ್ದೀರಿ. ರಾಜಕೀಯದಲ್ಲಿ ನಾನಿದ್ದಾಗ ನೀನು ಹುಟ್ಟೇ ಇರಲಿಲ್ಲ ಎಂದು ಹೇಳಿದ್ದೀರಿ. ಈಗ ನಾನು ಕೇಳುತ್ತಿದ್ದೇನೆ. ದೇವೇಗೌಡರು, ಮೊದಲ ಬಾರಿಗೆ ಶಾಸಕರಾಗಿ ಕಾವೇರಿ ನೀರಿನ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದಾಗ ನೀವು ಹುಟ್ಟಿದ್ದರಾ? ಎಂದು ಖಡಕ್ ಆಗಿ ಪ್ರಶ್ನೆ ಮಾಡಿದ್ದಾರೆ.
ಅದರ ಬೆನ್ನಲ್ಲಿಯೇ ದೇವೇಗೌಡರ ಆಸ್ತಿಯ ಬಗ್ಗೆ ಮಾತನಾಡಿದ್ದ ಡಿಕೆ ಶಿವಕುಮಾರ್‌ಗೆ ಪ್ರಶ್ನಿಸಿದ ಎಚ್‌ಡಿಕೆ, ನೀವು ಇಂದು ದೇವೇಗೌಡರ ಆಸ್ತಿ ಕೇಳುತ್ತಿದ್ದೀರಿ. ದೇವೇಗೌಡರು ರಾಜಕಾರಣಕ್ಕೆ ಬರೋದಕ್ಕೆ ಮುಂದೆ ಇಂಜಿನಿಯರ್ ಆಗಿದ್ದರು. ಡಿಪ್ಲೋಮಾ ಪದವೀಧರ. ಆದರೆ, ನಿಮ್ಮ ತಂದೆ ಏನ್ ಮಾಡ್ತಾ ಇದ್ರು ಅಂತಾ ಹೇಳ್ತೀರಾ? ಸಿಡಿ ಶಿವು ವಿಚಾರ ಬಿಡಿ. ನಿಮ್ಮ ತಂದೆ ಕೆಂಪೇಗೌಡರು ಹಳ್ಳಿಯಲ್ಲಿ ಕೂಲಿಯಾಳು ಕೆಲಸ ಮಾಡುತ್ತಿದ್ದರು. ನಿಮ್ಮ ಆಸ್ತಿ ಇಷ್ಟು ಹೇಗಾಯಿತು ಅನ್ನೋದನ್ನ ಪ್ರಶ್ನೆ ಮಾಡ್ತಿದ್ದೇನೆ. ಈಗ ದೇವೇಗೌಡರ ಆಸ್ತಿಯ ಬಗ್ಗೆ ಯಾವ ನಾಲಗೆಯಲ್ಲಿ ಕೇಳ್ತೀರಿ? ಎಂದು ಪ್ರಶ್ನೆ ಮಾಡಿದ್ದಾರೆ.
'ಗಂಡಸ್ತನದ ರಾಜಕೀಯ ಮಾಡಿ..' ಡಿಕೆಶಿ-ಎಚ್‌ಡಿಕೆ ನಡುವೆ ನಾನಾ ನೀನಾ ಟಾಕ್ಫೈಟ್!
ರೇವಣ್ಣನ ಇಬ್ಬರೂ ಮಕ್ಕಳನ್ನ ಜೈಲಿಗೆ ಹಾಕಿದ್ದೀರಿ. ಅವನ ಹೆಂಡ್ತಿಯ ಮೇಲೆ ಸೃಷ್ಟಿ ಮಾಡಿದ ಕೇಸ್ ಹಾಕ್ತೀರಿ. ಇಲ್ಲಿ ಹೈಕೋರ್ಟ್ ಜಾಮೀನು ಕೊಟ್ಟರೆ, ಸುಪ್ರೀಂ ಕೋರ್ಟ್‌ನಲ್ಲಿ ಕಪಿಲ್ ಸಿಬಲ್‌ಗೆ 20-30 ಲಕ್ಷ ಫೀಸ್ ಕೊಟ್ಟು ಜಾಮೀನು ಕ್ಯಾನ್ಸಲ್ ಮಾಡಲು ಹೋರಾಟ ಮಾಡ್ತಿದ್ದೀರಿ. ಒಟ್ಟಾರೆಯಾಗಿ ಆಕೆಯನ್ನ ಜೈಲಿಗೆ ಕಳಿಸಲೇಬೇಕು ಎಂದು ಪಣ ತೊಟ್ಟಂತೆ ವರ್ತನೆ ಮಾಡ್ತಾ ಇದ್ದೀರಿ. ಇಂಥ ಕುತಂತ್ರಿಗಳನ್ನ ನಮ್ಮ ಜನ ನಂಬಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ.
ಕಲ್ಲು ಪ್ರಕೃತಿ, ಕಡಿದರೆ ಆಕೃತಿ; ಈ ಬಂಡೆ ಸಿದ್ದರಾಮಯ್ಯ ಜೊತೆಗಿದೆ: ಡಿಸಿಎಂ ಡಿ.ಕೆ. ಶಿವಕುಮಾರ್!