
ಬೆಂಗಳೂರು (ಅ.25): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Former CM Siddaramaiah) ವಿರುದ್ಧದ ಸ್ಟಿಂಗ್ ಆಪರೇಷನ್(Sting Operation) ಷಡ್ಯಂತ್ರದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರೇ ನೇರ ಶಾಮೀಲಾಗಿದ್ದಾರೆ. ಈ ಸಿಂಡಿಕೇಟ್‌ನಲ್ಲಿ ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇದ್ದು, ಅಂಗೈ ಹುಣ್ಣಿಗೆ ಕನ್ನಡಿ ಹುಡುಕುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಚಾಟಿ ಬೀಸಿದ್ದಾರೆ.
ಶುಕ್ರವಾರ ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಡೆದಿರುವ ಸ್ಟಿಂಗ್ ಅನ್ನು ಜೆಡಿಎಸ್ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಹೈಕಮಾಂಡ್‌ಗೆ ವರದಿ ನೀಡಲಾಗಿದೆ ಎಂದು ತಿಳಿದು ಬಂದಿದೆ. ಸ್ಟಿಂಗ್ ಮಾಡಿದ್ದು ಯಾರು, ಅದರ ಮಾಸ್ಟರ್ ಮೈಂಡ್ ಯಾರು, ಅದರ ಕಿಂಗ್‌ಪಿನ್ ಯಾರು, ಶೂಟಿಂಗ್ ಮಾಡುವಾಗ ಖಾಸಗಿ ಸುದ್ದಿವಾಹಿನಿಯ ಮುಖ್ಯಸ್ಥನಿಗೆ ಸಹಕರಿಸಿದ ಕಾಂಗ್ರೆಸ್ ಪಕ್ಷದ ಮಹಿಳಾಮಣಿ ಯಾರು ಎಂಬುದು ಈಗಾಗಲೇ ಜಗಜ್ಜಾಹೀರಾಗಿದೆ.
ಇನ್ನು ಯಾವ ಮುಖ ಇಟ್ಟುಕೊಂಡು ಮುಖ್ಯಮಂತ್ರಿ ದಿಲ್ಲಿ ನಾಯಕರಿಗೆ ವರದಿ ನೀಡುತ್ತಾರೆ ಎಂದು ಖಾರವಾಗಿ ಪ್ರಶ್ನಿಸಿದರು.ಈ ಬಗ್ಗೆ ಅಗತ್ಯವಿದ್ದರೆ ಸಿದ್ದರಾಮಯ್ಯರನ್ನು ಭೇಟಿ ಮಾಡಲು ತಯಾರಿದ್ದೇನೆ. ಅವರು ನಮ್ಮ ಪಕ್ಷದಲ್ಲಿದ್ದವರು. ಅವರನ್ನು ಭೇಟಿ ಮಾಡುವುದಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಅವರು ಪ್ರಶೆಯೊಂದಕ್ಕೆ ಉತ್ತರಿಸಿದರು.
ಸ್ಟಿಂಗ್ ಪಿನ್ ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥ ನ್ಯಾಯಾಲಯದ ಕ್ರಮದಿಂದ ಪಾರು ಮಾಡಲು ಸ್ವತಃ ಸರ್ಕಾರದ ಉನ್ನತ ವ್ಯಕ್ತಿಗಳೇ ಪ್ರಯತ್ನ ಮಾಡುತ್ತಿದ್ದಾರೆ. ಅವನಿಗೆ ಸುಲಭವಾಗಿ ಜಾಮೀನು ಸಿಗುವಂತೆ ಮಾಡಲು ಕೆಲ ಪೊಲೀಸ್ ಅಧಿಕಾರಿಗಳು ಒಳಗೊಳಗೇ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆಯೂ ಈ ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥನನ್ನು ಅನೇಕ ಪ್ರಕರಣಗಳಿಂದ ರಕ್ಷಣೆ ಮಾಡಲಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥನ ಬಳಿ ಇನ್ನೂ ಪ್ರಸಾರವಾಗದ ನೂರಾರು ಸ್ಟಿಂಗ್ ವಿಡಿಯೋಗಳಿವೆ. ಅವುಗಳನ್ನು ಪೊಲೀಸ್ ಅಧಿಕಾರಿಗಳು, ಸಂವಿಧಾನ ಸಂಸ್ಥೆಗಳ ಉನ್ನತ ಹುದ್ದೆಗಳಲ್ಲಿರುವ ಗಣ್ಯರು ಸೇರಿ ವಿವಿಧ ಪ್ರಮುಖರನ್ನು ಬ್ಲ್ಯಾಕ್‌ಮೇಲ್ ಮಾಡಿ ಹಣ ಸುಲಿಗೆಗೆ ಬಳಸಲಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಸಂವಿಧಾನದ ಉನ್ನತ ಗಣ್ಯರಿಗೆ ಸಂಬಂಧಿಸಿದ ವಿಡಿಯೋ ಬಗ್ಗೆ ಕರ್ನಾಟಕ ಹೈಕೋರ್ಟ್‌ನ ಜಾಗೃತಾ ವಿಭಾಗದಲ್ಲಿ ದೂರು ದಾಖಲಾಗಿತ್ತು ಎಂದು ಹೇಳಿದರು.
ಈ ಎಲ್ಲಾ ಆರೋಪಗಳನ್ನು ಎದುರಿಸುತ್ತಿರುವ ಕೆಟ್ಟ ವ್ಯಕ್ತಿಗೆ ಸುಲಭವಾಗಿ ಜಾಮೀನು ದೊರಕುವಂತೆ ಸರ್ಕಾರದ ಒಳಮಟ್ಟದಲ್ಲಿ ಷಡ್ಯಂತ್ರ ನಡೆಯುತ್ತಿದೆ. ಕೆಲ ಅಧಿಕಾರಿಗಳೇ ಇದೇ ದೊಡ್ಡ ಕೆಲಸ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ. ಆ ವ್ಯಕ್ತಿಯನ್ನು ಹೊರಗೆ ಬಿಟ್ಟರೆ ಸ್ಟಿಂಗ್ ಗೆ ಸಂಬಂಧಿಸಿದ ಎಲ್ಲಾ ಸಾಕ್ಷ್ಯಗಳನ್ನು ನಾಶ ಮಾಡುವ ಅಪಾಯವಿದೆ ಎಂದು ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರ ಹೆಸರು ಕೆಡಿಸಲು ಸ್ಟಿಂಗ್ ವಿಷಯ ಎಳೆದು ತರಲಾಗಿದೆ. ಆ ಮೂಲಕ ಅವರ ಗೌರವಕ್ಕೆ ಧಕ್ಕೆ ತರಲು ಯಾಕೆ ಪ್ರಯತ್ನಿಸಿದರು? ಈ ಘಟನೆ 2011ರಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಸಂಬಂಧಿಸಿದ ಮಹಿಳೆಯನ್ನು 2023ರಲ್ಲಿ ಕೂರಿಸಿಕೊಂಡು ಸ್ಟಿಂಗ್ ಕಾರ್ಯಾಚರಣೆ ನಡೆಸಿದ್ದು ಏಕೆ? ವಿಷಯ ಎರಡೂವರೆ ವರ್ಷದಿಂದ ಗೊತ್ತಿದ್ದರೆ ಇಷ್ಟು ಕಾಲ ಏಕೆ ಕ್ರಮ ಕೈಗೊಳ್ಳಲಿಲ್ಲ? ಸ್ಟಿಂಗ್‌ನಲ್ಲಿ ಕಾಂಗ್ರೆಸ್‌ನ ಮಹಿಳಾ ನಾಯಕಿಯೊಬ್ಬರು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ಗೆ ಹತ್ತಿರದ ವ್ಯಕ್ತಿ ಎಂದು ಹೇಳಲಾದವರ ಬಗ್ಗೆ ಉಲ್ಲೇಖವಿದೆ. ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥನ ಜತೆಗಿದ್ದ ಆ ಮಹಿಳೆಯನ್ನು ಬಂಧಿಸಿದ್ದಾರೆಯೇ ಅಥವಾ ವಿಚಾರಣೆಗೆ ಕರೆಸಿದ್ದಾರೆಯೇ ಎನ್ನುವ ಪ್ರಶ್ನೆಗೆ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.
ನಾವು ಸಿದ್ದರಾಮಯ್ಯ ಅವರ ಹೋರಾಟ ನೋಡಿದ್ದೇವೆ. ಆ ಸ್ಟಿಂಗ್ ವ್ಯಕ್ತಿ ಹೆಣ್ಣುಮಗಳನ್ನು ಇರಿಸಿಕೊಂಡು ಈ ಎಪಿಸೋಡ್ ಸೃಷ್ಟಿಸಿದ್ದಾನೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವಲ್ಲಿ ಸಿದ್ದರಾಮಯ್ಯ ಅವರದೂ ಪಾಲಿದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳನ್ನು ಬಳಸಿಕೊಂಡು ಬೇರೆ ವ್ಯಕ್ತಿ ಸಿಲುಕಿಸಲು ಏನೆಲ್ಲಾ ನಡೆಸಿದ್ದಾರೆ ಎಂಬುದು ಗೊತ್ತಿದೆ. ಇದಕ್ಕೆ ಬೆಲೆ ತೆರಬೇಕಾಗುತ್ತದೆ. ಕಾಂಗ್ರೆಸ್‌ನ ಯಾರೊಬ್ಬರೂ ಸ್ಟಿಂಗ್ ಬಗ್ಗೆ ಚಕಾರ ಎತ್ತುತ್ತಿಲ್ಲ. ಏನಾಗಿದೆ ನಿಮಗೆ? ಇನ್ನೆಷ್ಟು ದಿನ ಮೌನವಾಗಿ ಇರುತ್ತೀರಾ? ಕಾಂಗ್ರೆಸ್‌ನ ಶಾಸಕರೇ ಮತ್ತು ಮಂತ್ರಿಗಳೇ ಮುಂದಿನ ಚುನಾವಣೆಯಲ್ಲಿ ನೀವು ಶಾಶ್ವತವಾಗಿ ಮೌನಕ್ಕೆ ಶರಣಾಗುತ್ತೀರಿ ನೆನಪಿಟ್ಟುಕೊಳ್ಳಿ ಎಂದು ಎಚ್.ಡಿ.ಕುಮಾರಸ್ವಾಮಿ ಎಚ್ಚರಿಸಿದರು.
ಸ್ಟಿಂಗ್ ಬಗ್ಗೆ ಸಚಿವ ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆಯಲ್ಲಿ ಸಂಶಯವಿಲ್ಲ. ಇದರಲ್ಲಿ ಹುಡುಗಾಟಿಕೆ ಏನಿಲ್ಲ. ಸಿದ್ದರಾಮಯ್ಯ ಅವರ ಇಮೇಜ್ ಹಾಳು ಮಾಡುವುದರಲ್ಲಿ ಹಾಲಿ ಮುಖ್ಯಮಂತ್ರಿ ಭಾಗಿಯಾಗಿದ್ದಾರೆ ಎಂಬುದು ಇಂದಲ್ಲ, ನಾಳೆ ಹೊರಗೆ ಬರುತ್ತದೆ. ಸ್ಟಿಂಗ್ ಮಾಡಿದ ವ್ಯಕ್ತಿಯನ್ನು ಹದ್ದುಬಸ್ತಿನಲ್ಲಿ ಇಡಲಿಲ್ಲವೆಂದರೆ ಮುಖ್ಯಮಂತ್ರಿಗಳ ರಾಜಕೀಯ ಭವಿಷ್ಯವನ್ನು ಆ ವ್ಯಕ್ತಿಯೇ ಹಾಳು ಮಾಡುತ್ತಾನೆ ಎಂದು ಕುಮಾರಸ್ವಾಮಿ ಭವಿಷ್ಯ ನುಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.