ಮೋದಿ ಹೆಸರು ಹೇಳಿ ಎಚ್‌ಡಿಕೆ 1000 ಕೋಟಿ ಸಂಗ್ರಹ: ಸಚಿವ ಚಲುವರಾಯಸ್ವಾಮಿ ಆರೋಪ

By Kannadaprabha News  |  First Published Nov 11, 2024, 6:03 AM IST

ಮಹಾರಾಷ್ಟ್ರ, ಜಾರ್ಖಂಡ್‌ ವಿಧಾನಸಭೆ ಚುನಾವಣೆ ಹಾಗೂ ಕರ್ನಾಟಕದ ಉಪ ಚುನಾವಣೆಗಳಿಗೆ ಮೋದಿ ಅವರ ಹೆಸರಿನಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಉಕ್ಕು ಕಂಪನಿಗಳಿಂದ ಒಂದು ಸಾವಿರ ಕೋಟಿ ರು. ಸಂಗ್ರಹಿಸಿದ್ದಾರೆ ಎಂದು ಚಲುವರಾಯಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. 


ಬೆಂಗಳೂರು (ನ.11): ಮಹಾರಾಷ್ಟ್ರ, ಜಾರ್ಖಂಡ್‌ ವಿಧಾನಸಭೆ ಚುನಾವಣೆ ಹಾಗೂ ಕರ್ನಾಟಕದ ಉಪ ಚುನಾವಣೆಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಉಕ್ಕು ಕಂಪನಿಗಳಿಂದ ಒಂದು ಸಾವಿರ ಕೋಟಿ ರು. ಸಂಗ್ರಹಿಸಿದ್ದಾರೆ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಇದು ದೇಶದ ಬಹು ದೊಡ್ಡ ಹಗರಣವಾಗಿದ್ದು, ಜಾರಿ ನಿರ್ದೇಶನಾಲಯ (ಇ.ಡಿ.) ಮುಂತಾದ ತನಿಖಾ ಸಂಸ್ಥೆಗಳು ತನಿಖೆ ನಡೆಸಬೇಕು. ಚುನಾವಣಾ ಆಯೋಗ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಮಹಾರಾಷ್ಟ್ರ, ಜಾರ್ಖಂಡ್‌ ವಿಧಾನಸಭೆ ಚುನಾವಣೆಗಳನ್ನು ಶತಾಯಗತಾಯ ಗೆಲ್ಲಬೇಕು ಎಂದು ಬಿಜೆಪಿ ಮಿತ್ರ ಪಕ್ಷಗಳು ವಾಮ ಮಾರ್ಗ ಹಿಡಿದಿವೆ. ಅಲ್ಲಿ ಹಣದ ಹೊಳೆಯನ್ನೇ ಹರಿಸಲು ಎಲ್ಲ ತಯಾರಿ ನಡೆಸಿಕೊಂಡಿವೆ. ಕರ್ನಾಟಕದ ಉಪ ಚುನಾವಣೆಯಲ್ಲಿ ಮುಖ್ಯವಾಗಿ ಚನ್ನಪಟ್ಟಣದಲ್ಲಿ ಸೋಲಿನ ಭೀತಿ ಹೊಂದಿರುವ ಬಿಜೆಪಿ ಇಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಹಣ ಸುರಿಯಲು ಮುಂದಾಗಿದೆ’ ಎಂದು ಆಪಾದಿಸಿದ್ದಾರೆ. ಈ ಚುನಾವಣೆಗಳ ಜವಾಬ್ದಾರಿ ಹೊತ್ತಿರುವ ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕೆಗಳ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಭಾರತದ ವಿವಿಧೆಡೆ ಮತ್ತು ರಾಜ್ಯದ ಉಕ್ಕು ಕಂಪನಿಗಳಿಂದ ಒಂದು ಸಾವಿರ ಕೋಟಿ ರು.ಗಳಿಗೂ ಹೆಚ್ಚು ಹಣವನ್ನು ಸಂಗ್ರಹ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

Latest Videos

undefined

ಉದ್ಯಮಿಗಳಿಂದಲೇ ಮಾಹಿತಿ: ಉಕ್ಕಿನ ಕೈಗಾರಿಕೆಗಳಿಂದ ಹಣ ಸಂಗ್ರಹಿಸಿರುವ ಬಗ್ಗೆ ತಮಗೆ ಆಂತರಿಕ ಮಾಹಿತಿ ಜತೆಗೆ ಉಕ್ಕಿನ ಕೈಗಾರಿಕೆ ಉದ್ಯಮಿಗಳೂ ಈ ಕುರಿತು ಮಾಹಿತಿ ನೀಡಿದ್ದಾರೆ. ಇದು ರಾಷ್ಟ್ರದ ಬಹು ದೊಡ್ಡ ಹಗರಣ. ಮಹಾರಾಷ್ಟ್ರ, ಕರ್ನಾಟಕ, ಗೋವಾದಲ್ಲಿ ಆಪರೇಷನ್‌ ಮಾಡಿ ಎಕ್ಸ್‌ಪರ್ಟ್ ಆಗಿರುವ ಬಿಜೆಪಿಯು ಚುನಾವಣೆಯ ಪಾವಿತ್ರ್ಯತೆಯನ್ನು ಕೆಡಿಸಲು ಹೊರಟಿದೆ ಎಂದು ಚಲುವರಾಯಸ್ವಾಮಿ ಆರೋಪಿಸಿದ್ದಾರೆ.

ಅಘಾಡಿಯಿಂದ ಸ್ತ್ರೀಯರಿಗೆ ₹3000, ಫ್ರೀ ಬಸ್‌ ಪ್ರಯಾಣ: ಪ್ರಣಾಳಿಕೆ ಬಿಡುಗಡೆ

ಬಿಜೆಪಿ ತಂತ್ರ ಫಲಿಸದು: ಹಿಂದೆಯೂ ತಮಗೆ ದೇಣಿಗೆ ನೀಡದ ಕಂಪನಿಗಳ ವಿರುದ್ಧ ಇ.ಡಿ., ಐಟಿ ಮುಂತಾದ ತನಿಖಾ ಸಂಸ್ಥೆಗಳಿಂದ ದಾಳಿ ಮಾಡಿ ಹೆದರಿಸುವ ತಂತ್ರವನ್ನು ಬಿಜೆಪಿ ಮುಂದುವರಿಸಿದೆ. ವಿವಿಧ ಕಂಪನಿಗಳಿಂದ ಚುನಾವಣಾ ಬಾಂಡ್‌ ಹೆಸರಲ್ಲಿ 1,751 ಕೋಟಿ ರು.ಗಳನ್ನು ಪಡೆದುಕೊಂಡಿತ್ತು. ಇದು ರಾಷ್ಟ್ರದ ಅತಿ ದೊಡ್ಡ ಹಗರಣ. ಕುಮಾರಸ್ವಾಮಿ ಅವರ ವಿರುದ್ಧ ಅಕ್ರಮ ಗಣಿಗಾರಿಕೆ ಕಿಕ್‌ ಬ್ಯಾಕ್‌ ಆರೋಪವೂ ಕೇಳಿ ಬಂದಿತ್ತು. ಅವುಗಳನ್ನೆಲ್ಲ ವ್ಯವಸ್ಥಿತವಾಗಿ ಮುಚ್ಚಿ ಹಾಕಿರುವ ಬಿಜೆಪಿ ಈಗ ಕಂಪನಿಗಳಿಂದ ಮತ್ತೆ ದೊಡ್ಡ ಪ್ರಮಾಣದಲ್ಲಿ ಹಣ ವಸೂಲಿ ಮಾಡಲು ತಂತ್ರ ರೂಪಿಸಿದೆ. ಆದರೆ, ಈ ಬಾರಿ ಅವರ ತಂತ್ರ ಫಲಿಸದು ಎಂದು ಹೇಳಿದ್ದಾರೆ.

click me!