
ಬೆಂಗಳೂರು (ಮಾ.06): ಹದಿನಾರು ಬಜೆಟ್‌ಗಳನ್ನು ಮಂಡಿಸಿ ಹದಿನೇಳನೇ ಬಜೆಟ್ ಮಂಡಿಸಲು ಹೊರಟಿರುವ ಭೂಪರು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಬೆಂಗಳೂರಿನ ಕೊಳಚೆ ನೀರು ಹರಿಸಿದರು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ. ಪಕ್ಷದ ಕಚೇರಿಯಲ್ಲಿ ಮಾಲೂರು ವಿಧಾನಸಭಾ ಕ್ಷೇತ್ರದ ಹಿರಿಯ ಮುಖಂಡ ಹಾಗೂ ಪರಾಜಿತ ಅಭ್ಯರ್ಥಿ ಹೂಡಿ ವಿಜಯಕುಮಾರ್ ಅವರ ಪಕ್ಷ ಸೇರ್ಪಡೆ ಹಾಗೂ ಅವರ ನೇತೃತ್ವದ ಸ್ವಾಭಿಮಾನಿ ಜನತಾ ಪಕ್ಷದ ವಿಲೀನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಗೌಡರು ಮಾತನಾಡಿದರು.
ನದಿ ನೀರು ಕೊಡುತ್ತೇವೆ ಎಂದಿದ್ದರು. ಆದರೆ ರಾಜಧಾನಿಯ ಕೊಚ್ಚೆ ನೀರನ್ನು ಆ ಎರಡು ಜಿಲ್ಲೆಗಳ ಜನರಿಗೆ ಕೊಟ್ಟಿದ್ದಾರೆ. ಒಂದು ಕಾಲದಲ್ಲಿ ಕೋಲಾರದ ಟೊಮ್ಯಾಟೊ ಎಂದರೆ ಜಗತ್ತಿಗೇ ಪ್ರಸಿದ್ಧಿ. ಆದರೆ, ಈಗ ಅದನ್ನು ತಿನ್ನಬೇಡಿ ಎಂದು ಎಲ್ಲರೂ ಹೇಳುತ್ತಿದ್ದಾರೆ. ಇದಕ್ಕೆ ಆ ಗಲೀಜು ನೀರು ಮತ್ತು ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ದೂರಿದರು. ನಾನು ಈ ರಾಜ್ಯದ ಮುಖ್ಯಮಂತ್ರಿ ಆಗುವುದಕ್ಕೆ ಮೊದಲು ಖಖಾನೆ ಖಾಲಿ ಮಾಡಿದ್ದರು. ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಕೋಲ್ಕತಾದ ಫಿಯರ್ ಲೆಸ್ ಕಂಪನಿಯಿಂದ 200 ಕೋಟಿ ರು. ಸಾಲ ತಂದಿದ್ದರು. ಅಂಥ ಸಂದರ್ಭದಲ್ಲಿ ನಾನು ಈ ರಾಜ್ಯವನ್ನು ಹೇಗೆ ನಡೆಸಿರಬೇಕು ಎಂಬುದನ್ನು ಊಹೆ ಮಾಡಿಕೊಳ್ಳಿ ಎಂದು ಹೇಳಿದರು.
ಅವತ್ತು ಇವತ್ತಿನ ಮುಖ್ಯಮಂತ್ರಿಗಳನ್ನು ನನ್ನ ಸಂಪುಟದಲ್ಲಿ ಹಣಕಾಸು ಮಂತ್ರಿ ಆಗಿದ್ದರು. ಎಲ್ಲವೂ ಅವರಿಗೂ ಗೊತ್ತಿದೆ. ಧರ್ಮಸಿಂಗ್ ಅವರು ಹಣಕಾಸು ಖಾತೆ ಮಾತ್ರ ಕೊಟ್ಟು ಅಬಕಾರಿ ಖಾತೆ ಕೊಡಲಿಲ್ಲ ಎಂಬ ಕಾರಣಕ್ಕೆ ಈ ಮಹಾನುಭಾವರು ಮುನಿಸಿಕೊಂಡಿದ್ದರು ಎಂದು ಹೇಳಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಪಂಚರತ್ನ ಎಂಬ ಅತ್ಯುತ್ತಮ ಯೋಜನೆಗಳನ್ನು ಘೋಷಿಸಿದ್ದರು. ಉಚಿತ ಮನೆ, ಉಚಿತ ಶಿಕ್ಷಣ, ಉಚಿತ ಆರೋಗ್ಯ, ಉದ್ಯೋಗದ ಭರವಸೆ ನೀಡಿದ್ದರು. ಕಾಂಗ್ರೆಸ್ ನವರು ಕೊನೇ ಘಳಿಗೆಯಲ್ಲಿ ಗ್ಯಾರಂಟಿ, ಫ್ರೀ ಫ್ರೀ ಎಂದರು. ಜನ ಮಾರು ಹೋದರು. ಈಗ ನೋಡಿದರೆ ಗ್ಯಾರಂಟಿಗಳು ಬೊಕ್ಕಸಕ್ಕೆ ಹೊರೆ ಆಗುತ್ತವೆ ಎಂದು ಬೊಬ್ಬೆ ಹಾಕುತ್ತಿದ್ದಾರೆ ಎಂದು ಮಾಜಿ ಪ್ರಧಾನಿಗಳು ವ್ಯಂಗ್ಯವಾಡಿದರು.
ಜೆಡಿಎಸ್ ಬಲಿಷ್ಟವಾಗಿದೆ. ನಾವು ಎನ್‌ಡಿಎ ಮೈತ್ರಿ ಕೂಟದಲ್ಲಿದ್ದೇವೆ. ಮೈತ್ರಿ ಉಳಿಸಿಕೊಳ್ಳುತ್ತೇವೆ ಹಾಗೂ ಪಕ್ಷವನ್ನು ಕೂಡ ಕಟ್ಟುತ್ತೇವೆ. ಅದಕ್ಕೆ ಮಾಲೂರು ಮುಖಂಡರ ಸೇರ್ಪಡೆ ಒಂದು ಆರಂಭವಷ್ಟೇ ಎಂದು ದೇವೇಗೌಡರು ಹೇಳಿದರು. ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ, ಕೋರ್ ಕಮಿಟಿ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ, ಕೋಲಾರ ಸಂಸದ ಮಲ್ಲೇಶ್ ಬಾಬು, ಶಾಸಕ ಮತ್ತು ಕೋಲಾರ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟ ಶಿವಾರೆಡ್ಡಿ, ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹೂಡಿ ವಿಜಯಕುಮಾರ್ ಅವರು ತಮ್ಮ ಸ್ವಾಭಿಮಾನಿ ಜನತಾ ಪಕ್ಷವನ್ನು ಜೆಡಿಎಸ್‌ನಲ್ಲಿ ವಿಲೀನ ಮಾಡಿದರಲ್ಲದೆ, ಅವರ ಪಕ್ಷದ ನೂರಾರು ಮುಖಂಡರು, ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಯಾದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.