ಮುಂದಿನ ಬಜೆಟ್ ಮಂಡಿಸೋರು ಸಿಎಂ ಡಿ.ಕೆ. ಶಿವಕುಮಾರ್! ರಾಜಕೀಯ ಕಿಚ್ಚು ಹತ್ತಿಸಿದ ಕೈ ಮುಖಂಡ ಸಚಿನ್ ಮೀಗಾ ಪೋಸ್ಟ್!

Published : Mar 06, 2026, 04:34 PM IST
Congress Leader Sachin Meega

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸಿದ ಬೆನ್ನಲ್ಲೇ, ಮುಂದಿನ ಬಜೆಟ್ ಅನ್ನು ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಮಂಡಿಸಲಿದ್ದಾರೆ ಎಂದು ಅವರ ಆಪ್ತ ಸಚಿನ್ ಮೀಗಾ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್, ಕಾಂಗ್ರೆಸ್ ಪಕ್ಷದೊಳಗಿನ ಅಧಿಕಾರ ಹಂಚಿಕೆ ಒಪ್ಪಂದದ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ.

ಚಿಕ್ಕಮಗಳೂರು (ಮಾ.06): ರಾಜ್ಯ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ಬಜೆಟ್ ಮಂಡಿಸಿ ದಾಖಲೆ ಬರೆದ ಬೆನ್ನಲ್ಲೇ, ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಳಗೆ 'ಕುರ್ಚಿ' ಬದಲಾವಣೆಯ ಮಹತ್ವದ ಚರ್ಚೆ ಮುನ್ನೆಲೆಗೆ ಬಂದಿದೆ. ಮುಂದಿನ ಬಜೆಟ್ ಅನ್ನು ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಮಂಡಿಸಲಿದ್ದಾರೆ ಎಂಬ ಅವರ ಆಪ್ತರ ಪೋಸ್ಟ್ ಈಗ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಸಚಿನ್ ಮೀಗಾ ಪೋಸ್ಟ್‌ನಲ್ಲೇನಿದೆ?

ಕಾಂಗ್ರೆಸ್ ಪಕ್ಷದ ಕಿಸಾನ್ ಘಟಕದ ರಾಜ್ಯಾಧ್ಯಕ್ಷ ಹಾಗೂ ಡಿಕೆ ಶಿವಕುಮಾರ್ ಅವರ ಪರಮಾಪ್ತ ಸಚಿನ್ ಮೀಗಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಒಂದು ಈಗ ಕಾಂಗ್ರೆಸ್ ಹೈಕಮಾಂಡ್ ವರೆಗೂ ನಡುಕ ಹುಟ್ಟಿಸುವಂತಿದೆ. 'ಈ ಬಾರಿ (2026-27) ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಿದ್ದಾರೆ. ಆದರೆ ಮುಂದಿನ 2027-28ನೇ ಸಾಲಿನ ಬಜೆಟ್ ಅನ್ನು ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಗಳಾಗಿ ಮಂಡಿಸುತ್ತಾರೆ' ಎಂದು ಬರೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೆ, 'ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಜನಸಾಮಾನ್ಯರ ಹಾಗೂ ರೈತ ಪರವಾದ ಬೃಹತ್ ಬಜೆಟ್ ಮಂಡನೆ ಮಾಡಲಿದ್ದಾರೆ' ಎಂಬ ಸಂದೇಶ ನೀಡುವ ಮೂಲಕ ಮುಂದಿನ ಸಿಎಂ ಡಿಕೆಶಿ ಎಂಬ ಗಟ್ಟಿ ಧ್ವನಿಯನ್ನು ಅವರು ಹೊರಹಾಕಿದ್ದಾರೆ.

ಬಜೆಟ್ ಮುಗಿದ ಬೆನ್ನಲ್ಲೇ ಕುರ್ಚಿ ಫೈಟ್?

ಸಾಮಾನ್ಯವಾಗಿ ಬಜೆಟ್ ಮಂಡನೆಯ ನಂತರ ಸರ್ಕಾರದ ಯೋಜನೆಗಳ ಬಗ್ಗೆ ಚರ್ಚೆಯಾಗಬೇಕಿತ್ತು. ಆದರೆ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆಯ (Power Sharing) ಸೂತ್ರದ ಬಗ್ಗೆ ಮತ್ತೆ ಗುಸುಗುಸು ಶುರುವಾಗಿದೆ. ಸಿದ್ದರಾಮಯ್ಯ ಅವರು ಎರಡೂವರೆ ವರ್ಷ ಪೂರೈಸಿದ ನಂತರ ಡಿಕೆ ಶಿವಕುಮಾರ್ ಅವರಿಗೆ ಅಧಿಕಾರ ಬಿಟ್ಟುಕೊಡಲಿದ್ದಾರೆ ಎಂಬ ಒಪ್ಪಂದದ ಮಾತುಗಳು ಆರಂಭದಿಂದಲೂ ಕೇಳಿಬರುತ್ತಿವೆ. ಸಚಿನ್ ಮೀಗಾ ಅವರ ಈ ಪೋಸ್ಟ್ ಆ 'ಒಪ್ಪಂದ' ಜಾರಿಯಾಗುವ ಸಮಯ ಹತ್ತಿರ ಬಂದಿದೆ ಎಂಬ ಮುನ್ಸೂಚನೆಯೇ ಎಂಬ ಪ್ರಶ್ನೆ ಮೂಡಿದೆ.

ಡಿಕೆಶಿ ಆಪ್ತರ ರಣತಂತ್ರ?

ಸಚಿನ್ ಮೀಗಾ ಅವರು ಕೇವಲ ಕಿಸಾನ್ ಘಟಕದ ಅಧ್ಯಕ್ಷರಷ್ಟೇ ಅಲ್ಲದೆ, ಡಿಕೆ ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಅವರ ಈ ಪೋಸ್ಟ್ ಆಕಸ್ಮಿಕವಾಗಿ ಬಂದಿದ್ದಲ್ಲ, ಬದಲಿಗೆ ಪಕ್ಷದೊಳಗೆ ಡಿಕೆಶಿ ಪರವಾದ ಅಲೆ ಸೃಷ್ಟಿಸಲು ಮಾಡಲಾದ ಯೋಜಿತ ತಂತ್ರ ಎಂಬ ಚರ್ಚೆಗಳು ನಡೆಯುತ್ತಿವೆ. ಬಜೆಟ್‌ನಲ್ಲಿ ಸಿದ್ದರಾಮಯ್ಯ ಅವರು ಭರ್ಜರಿ ಕೊಡುಗೆಗಳನ್ನು ನೀಡಿ ಜನಪ್ರಿಯತೆ ಗಳಿಸುತ್ತಿರುವ ಹೊತ್ತಿನಲ್ಲೇ, ಡಿಕೆಶಿ ಬಣ ಈ ರೀತಿಯ ಪೋಸ್ಟ್ ಮಾಡುವ ಮೂಲಕ ತಮ್ಮ ನಾಯಕನೂ ರೇಸ್‌ನಲ್ಲಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಹೊರಟಿದೆ.

ರಾಜಕೀಯ ಕಿಚ್ಚು ಮತ್ತು ವಿಪಕ್ಷಗಳ ಟೀಕೆ:

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಕಾಲೆಳೆಯಲು ಶುರುಮಾಡಿವೆ. 'ಕಾಂಗ್ರೆಸ್‌ನಲ್ಲಿ ಜನಪರ ಆಡಳಿತಕ್ಕಿಂತ ಕುರ್ಚಿ ಕಿತ್ತಾಟವೇ ಹೆಚ್ಚಾಗಿದೆ. ಬಜೆಟ್ ಹಂಚಿಕೆಗಿಂತ ಅಧಿಕಾರ ಹಂಚಿಕೆಯಲ್ಲೇ ಇವರು ಬ್ಯುಸಿಯಾಗಿದ್ದಾರೆ' ಎಂದು ವಿಪಕ್ಷಗಳು ಟೀಕಿಸಿವೆ.

ಸದ್ಯಕ್ಕೆ ಸಚಿನ್ ಮೀಗಾ ಅವರ ಈ ಪೋಸ್ಟ್ ಕಾಂಗ್ರೆಸ್ ಒಳಗಿನ ಶೀತಲ ಸಮರವನ್ನು ಬೀದಿಗೆ ತಂದಿದ್ದು, ಸಿದ್ದರಾಮಯ್ಯ ಬಣ ಇದಕ್ಕೆ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದು ಕುತೂಹಲಕಾರಿಯಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಗಾಳಿ ಜೋರಾಗಿ ಬೀಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

AAP vs BJP: ಕೇಜ್ರಿವಾಲ್‌ಗೆ ಬಿಜೆಪಿ ಹೆದರಿದೆಯಾ? ವಿಚಾರಣೆ ಲೈವ್ ಮಾಡಿ: ಸ್ಪೀಕರ್‌ಗೆ ಅತಿಶಿ ಸವಾಲು
Congress Dinner Politics: ಕೈ ನಾಯಕರಿಂದ ಡಿನ್ನರ್ ಪಾಲಿಟಿಕ್ಸ್: ಡಿಕೆಶಿ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಭರ್ಜರಿ ಔತಣಕೂಟ?