ರಾಜ್ಯಸಭೆಗೆ ಗೌಡ, ಖರ್ಗೆ, ಕಡಾಡಿ, ಗಸ್ತಿ ಆಯ್ಕೆ ಖಚಿತ!

By Kannadaprabha NewsFirst Published Jun 11, 2020, 7:50 AM IST
Highlights

ರಾಜ್ಯಸಭೆಗೆ ಗೌಡ, ಖರ್ಗೆ, ಕಡಾಡಿ, ಗಸ್ತಿ ಅವಿರೋಧ ಆಯ್ಕೆ ಅಂತಿ​ಮ- ನಾಳೆ ಅಧಿ​ಕೃತ ಘೋಷಣೆ| ಪಕ್ಷೇತರ ಅಭ್ಯರ್ಥಿ ನಾಮಪತ್ರ ತಿರಸ್ಕೃತ

ಬೆಂಗಳೂರು(ಜೂ.11): ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಗೆ ಸಲ್ಲಿಕೆಯಾದ ಐದು ನಾಮಪತ್ರಗಳ ಪರಿಶೀಲನೆ ನಡೆಸಲಾಗಿದ್ದು, ಪಕ್ಷೇತರ ಅಭ್ಯರ್ಥಿಯನ್ನು ಹೊರತುಪಡಿಸಿ ಇನ್ನುಳಿದ ನಾಲ್ಕು ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿದೆ.

ಹೀಗಾಗಿ ಪಕ್ಷೇತರ ಅಭ್ಯರ್ಥಿಯ ನಾಮಪತ್ರ ತಿರಸ್ಕೃತವಾಗಿದೆ. ತನ್ಮೂಲಕ ಉಳಿದ ನಾಲ್ಕು ಮಂದಿ ಅಭ್ಯರ್ಥಿಗಳಾದ ಜೆಡಿಎಸ್‌ ಅಭ್ಯರ್ಥಿ ಎಚ್‌.ಡಿ.ದೇವೇಗೌಡ, ಕಾಂಗ್ರೆಸ್‌ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ಅಭ್ಯರ್ಥಿ ಈರಣ್ಣ ಕಡಾಡಿ ಮತ್ತು ಅಶೋಕ್‌ ಗಸ್ತಿ ಅವರ ಅವಿರೋಧ ಆಯ್ಕೆ ಖಚಿತವಾದಂತಾಗಿದೆ.

ರಾಜ್ಯಸಭಾ ಎಲೆಕ್ಷನ್: ಬಿಜೆಪಿ ಅಭ್ಯರ್ಥಿಗಳು ಒಬ್ರು ಕೋಟ್ಯಾಧಿಪತಿ, ಇನ್ನೊಬ್ರು ಲಕ್ಷಾಧಿಪತಿ

ರಾಜ್ಯಸಭೆ ಚುನಾವಣಾಧಿಕಾರಿಯಾಗಿರುವ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ನೇತೃತ್ವದಲ್ಲಿ ನಾಮಪತ್ರಗಳ ಪರಿಶೀಲನೆ ನಡೆಸಲಾಯಿತು. ಸೂಚಕರು ಸಹಿ ಮಾಡದ ಕಾರಣ ಮತ್ತು ಹೊಸ ಮಾದರಿಯ ಫಾರಂ-26 ನೀಡದೆ ಹಳೆಯ ಮಾದರಿಯ ಫಾರಂ ನೀಡಿದ ಕಾರಣ ಪಕ್ಷೇತರ ಅಭ್ಯರ್ಥಿ ಸಂಗಮೇಶ್‌ ಚಿಕ್ಕನರಗುಂದ ನಾಮಪತ್ರ ತಿರಸ್ಕೃತಗೊಂಡಿದೆ. ಜೆಡಿಎಸ್‌ ಅಭ್ಯರ್ಥಿ ಎಚ್‌.ಡಿ.ದೇವೇಗೌಡ, ಕಾಂಗ್ರೆಸ್‌ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ಅಭ್ಯರ್ಥಿ ಈರಣ್ಣ ಕಡಾಡಿ, ಅಶೋಕ್‌ ಗಸ್ತಿ ನಾಮಪತ್ರಗಳು ಕ್ರಮಬದ್ಧವಾಗಿದೆ ಎಂದು ಚುನಾವಣಾಧಿಕಾರಿ ವಿಶಾಲಾಕ್ಷಿ ತಿಳಿಸಿದ್ದಾರೆ.

ಬಿಜೆಪಿಯ ಇಬ್ಬರು, ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ತಲಾ ಒಬ್ಬ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು, ನಾಲ್ವರೂ ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದೆ. ಚುನಾವಣಾಧಿಕಾರಿಗಳು ಅಧಿಕೃತವಾಗಿ ಘೋಷಣೆ ಮಾಡುವುದು ಮಾತ್ರ ಬಾಕಿ ಇದೆ. ನಾಮಪತ್ರ ವಾಪಸ್‌ ಪಡೆಯಲು ಜೂ.12ರವರೆಗೆ ಕಾಲಾವಕಾಶ ಇದೆ. ಅಂದೇ ಅವಿರೋಧ ಆಯ್ಕೆ ಕುರಿತು ಪ್ರಕಟವಾಗಲಿದೆ.

click me!