ದಾವಣಗೆರೆ ಉಪಚುನಾವಣೆ: ಅಲ್ಪಸಂಖ್ಯಾತರು ವರ್ಸಸ್‌ ಸಮರ್ಥ: ಕಾಂಗ್ರೆಸ್‌ ಟಿಕೆಟ್‌ಗಾಗಿ ವಾಗ್ವಾದ, ಯಾರಿಗೆ ಟಿಕೆಟ್?

Kannadaprabha News, Ravi Janekal |   | Kannada Prabha
Published : Mar 18, 2026, 10:45 AM IST
Davanagere By election: Minority vs Samarth Conflict Over Congress Ticket Escalates

ಸಾರಾಂಶ

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕುರಿತ ಸಭೆಯಲ್ಲಿ ತೀವ್ರ ಹೈಡ್ರಾಮಾ ನಡೆದಿದೆ. ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಹಾಗೂ ಎಂಎಲ್ಸಿ ಅಬ್ದುಲ್ ಜಬ್ಬಾರ್ ಬೆಂಬಲಿಗರ ನಡುವೆ ಟಿಕೆಟ್‌ಗಾಗಿ ವಾಗ್ವಾದ ನಡೆದು, ಗದ್ದಲದ ವಾತಾವರಣ ನಿರ್ಮಾಣವಾಯಿತು. 

ದಾವಣಗೆರೆ (ಮಾ.18): ದಾವಣಗೆರೆ ದಕ್ಷಿಣ ಕ್ಷೇತ್ರ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರದ ಕುರಿತಂತೆ ಚುನಾವಣಾ ಉಸ್ತುವಾರಿ ಸಮಿತಿ ಸಭೆಯಲ್ಲಿ ರಾಜ್ಯ ನಾಯಕರ ಸಮಕ್ಷಮ ಹೈಡ್ರಾಮಾ ನಡೆದು, ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಹಾಗೂ ಎಂಎಲ್ಸಿ ಅಬ್ದುಲ್ ಜಬ್ಬಾರ್ ಬೆಂಬಲಿಗರ ಮಧ್ಯೆ ತೀವ್ರ ವಾಗ್ವಾದವಾದ ಘಟನೆ ಮಂಗಳವಾರ ವರದಿಯಾಗಿದೆ.

ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಪಕ್ಷದ ಚುನಾವಣಾ ಉಸ್ತುವಾರಿ ಸಮಿತಿ ಸಭೆ ಎಂಎಲ್ಸಿ ಮಂಜುನಾಥ ಭಂಡಾರಿ ನೇತೃತ್ವದಲ್ಲಿ ನಡೆಯುತ್ತಿತ್ತು. ಸಭೆಯಲ್ಲಿ ಆಕಾಂಕ್ಷಿಗಳು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗುತ್ತಿತ್ತು. ಈ ವೇಳೆ ಎಸ್‌.ಎಸ್‌. ಮಲ್ಲಿಕಾರ್ಜುನ ಹಾಗೂ ಅಬ್ದುಲ್ ಜಬ್ಬಾರ್ ಬೆಂಬಲಿಗರ ಮಧ್ಯೆ ತೀವ್ರ ವಾಗ್ವಾದ ಶುರುವಾಯಿತು.

ಉಪ ಚುನಾವಣೆಗೆ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುವಂತೆ ಒಂದು ಗುಂಪು ಘೋಷಣೆ ಕೂಗಿ ಒತ್ತಾಯಿಸಿದರೆ, ಸಮರ್ಥಗೆ ಟಿಕೆಟ್ ನೀಡುವಂತೆ ಮತ್ತೊಂದು ಗುಂಪು ಘೋಷಣೆ ಕೂಗುತ್ತಿತ್ತು. ತೀವ್ರ ಗಲಾಟೆ, ಗದ್ದಲದ ವಾತಾವರಣ ಏರ್ಪಟ್ಟಿತ್ತು. ಉಭಯ ಕಡೆಯವರು ಪರಸ್ಪರ ರೋಷಾವೇಷದಿಂದ ಘೋಷಣೆ ಕೂಗುವ ಮೂಲಕ ತಮ್ಮವರಿಗೇ ಟಿಕೆಟ್ ನೀಡಬೇಕೆಂಬುದಾಗಿ ಪಟ್ಟುಹಿಡಿದರು.

ಘೋಷಣೆಗಳು ಹೆಚ್ಚಾಗುತ್ತಿದ್ದಂತೆಯೇ ಸಭೆಗೆ ನುಗ್ಗಿದ ನೂರಾರು ಕಾರ್ಯಕರ್ತರು ತೀವ್ರ ಅಸಮಾಧಾನಗೊಂಡು, ಸಭೆಯಲ್ಲಿ ಗದ್ದಲದ ವಾತಾವರಣಕ್ಕೆ ಕಾರಣರಾದರು. ಟಿಕೆಟ್ ಆಕಾಂಕ್ಷಿಗಳು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲು ಮಂಜುನಾಥ ಭಂಡಾರಿ, ಮಾಜಿ ಸಚಿವರಾದ ಎಚ್.ಎಂ. ರೇವಣ್ಣ, ಎಚ್.ಆಂಜನೇಯ ಇತರರು ಬಂದಿದ್ದರು. ಆದರೆ, ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೇ ಇದ್ದುದನ್ನು ಕಂಡ ರೇವಣ್ಣ ಸಹ ಒಂದು ಕ್ಷಣ ತಾಳ್ಮೆ ಕಳೆದುಕೊಂಡು ಜೋರು ಮಾಡಿದರು. ಆದರೆ, ಪರಿಸ್ಥಿತಿ ನಿಯಂತ್ರಣಕ್ಕೆ ಬರಲೇ ಇಲ್ಲ. ಟಿಕೆಟ್‌ ವಿಚಾರವಂತೂ ನೀ ಕೊಡೆ, ನಾ ಬಿಡೆ ಎಂಬಂತಾಗಿತ್ತು.

ಗೆಲ್ಲುವ ಸಾಧ್ಯತೆ ನಿರ್ಧರಿಸಿ ಟಿಕೆಟ್‌ ಕೊಡ್ತೀವಿ:

ಕಡೆಗೆ ಎಚ್.ಎಂ.ರೇವಣ್ಣ ಮಾತನಾಡಿ, ಅಭ್ಯರ್ಥಿಗಳ ಬೇಡಿಕೆಗಳು ಬೇರೆ ಬೇರೆ ರೀತಿ ಇರುತ್ತವೆ. ಎಲ್ಲರಿಗೂ ಟಿಕೆಟ್‌ ಕೇಳುವ ಹಕ್ಕು ಇರುತ್ತದೆ, ಕೇಳುತ್ತಿದ್ದಾರೆ. ನಮಗೆ ಚುನಾವಣೆಯಲ್ಲಿ ಗೆಲ್ಲುವುದು ಮುಖ್ಯ. ಹಾಗಾಗಿಯೇ ಚರ್ಚೆ ಮಾಡುತ್ತೇವೆ. ಯಾರಿಗೆ ಟಿಕೆಟ್ ಕೊಟ್ಟರೆ ಗೆಲ್ಲುತ್ತಾರೆ ಎಂಬುದನ್ನು ನೋಡಿ, ಟಿಕೆಟ್ ಕೊಡುತ್ತೇವೆ. ಇಷ್ಟು ಬೇಗ ಚುನಾವಣೆ ಬರುತ್ತದೆಂದು ನಾವ್ಯಾರೂ ನಿರೀಕ್ಷೆ ಮಾಡಿರಲಿಲ್ಲ. ಮಾ.23ರೊಳಗೆ ಅಭ್ಯರ್ಥಿ ಘೋಷಣೆ ಮಾಡಲೇಬೇಕು, ಮಾಡುತ್ತೇವೆ. ಕಾಂಗ್ರೆಸ್‌ನಲ್ಲಿ ಎಲ್ಲ ವರ್ಗದವರೂ ಟಿಕೆಟ್ ಆಕಾಂಕ್ಷಿಗಳಿರುತ್ತಾರೆ. ನಮ್ಮ ಪಕ್ಷ ಯಾವುದೇ ಒಂದು ಜಾತಿ, ವರ್ಗಕ್ಕೆ ಸೀಮಿತವಲ್ಲ. ಅಲ್ಪಸಂಖ್ಯಾತ ಸಮುದಾಯ ಟಿಕೆಟ್ ಕೇಳುವುದರಲ್ಲಿ ತಪ್ಪೇನೂ ಇಲ್ಲ ಎಂದು ಸಮಾಧಾನಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಮಾಜಿ ಸಚಿವ ಎಚ್.ಆಂಜನೇಯ, ಕೆಪಿಸಿಸಿ ಉಪಾಧ್ಯಕ್ಷ ಮುಜಮ್ಮಿಲ್ ಹುಸೇನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಟಿಕೆಟ್ ಆಕಾಂಕ್ಷಿ ಸಾದಿಕ್ ಪೈಲ್ವಾನ್, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಅಸಗೋಡು ಜಯಸಿಂಹ, ಡಿ.ಬಸವರಾಜ, ಡಿ.ವಿ. ಮಲ್ಲಿಕಾರ್ಜುನ, ಎಸ್.ಮಲ್ಲಿಕಾರ್ಜುನ ಇತರರು ಇದ್ದರು.

ಸಮಿತಿಯಲ್ಲಿದ್ದ ಸಚಿವರಾದ ಜಮೀರ್ ಅಹ್ಮದ್, ಲಕ್ಷ್ಮೀ ಹೆಬ್ಬಾಳ್ಕರ್, ಸಂತೋಷ್ ಲಾಡ್ ಸೇರಿ 16 ಜನರ ಪೈಕಿ ಬಹುತೇಕರು ದಾವಣಗೆರೆಗೆ ಸಭೆಗೆ ಗೈರಾಗಿದ್ದರು.

ಇಂದು ಕೆಪಿಸಿಸಿ ಕಚೇರಿಯಲ್ಲಿ ಸಭೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾ.18ರಂದು ಮಧ್ಯಾಹ್ನ 1 ಗಂಟೆಗೆ ಮತ್ತೊಂದು ಸಭೆ ಮಾಡುತ್ತೇವೆ. ಸಮಿತಿಯ 16 ಸದಸ್ಯರೂ ಸೇರಿ, ಮತ್ತೊಂದು ಸಭೆ ಮಾಡುತ್ತೇವೆ. ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ನೀಡುತ್ತೇವೆ. ಇಂದಿನ ಸಭೆಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿ, ವರದಿ ನೀಡುತ್ತೇವೆ. ಇಂದಿನ ಸಭೆ ಗೊಂದಲದ ಗೂಡಾಗಿರಲಿಲ್ಲ. ಎಲ್ಲರಿಗೂ ಟಿಕೆಟ್ ಕೇಳುವ ಹಕ್ಕು ಇದೆ. ಕೇಳುತ್ತಿದ್ದಾರೆ.

- ಮಂಜುನಾಥ ಭಂಡಾರಿ, ಕಾಂಗ್ರೆಸ್‌ ಎಂಎಲ್ಸಿ.

21ರಂದು ಅಭ್ಯರ್ಥಿ ಆಯ್ಕೆ ದಕ್ಷಿಣ ಟಿಕೆಟ್ ನೀಡುವಂತೆ ಅಲ್ಪಸಂಖ್ಯಾತ ಸಮುದಾಯ ಕೇಳುವುದರಲ್ಲಿ ತಪ್ಪೇನಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ನಾವೆಲ್ಲರೂ ಒಂದೇ ತಾಯಿ ಮಕ್ಕಳ ತರಹ. ಚುನಾವಣೆ ವೇಳೆ ಇಂತಹ ವಾತಾವರಣ ಸಹಜ. ಟಿಕೆಟ್ ನೀಡಿದ ಅಭ್ಯರ್ಥಿಗೆ ಗೆಲ್ಲಿಸಿ ತರುವುದು ಸಂಪ್ರದಾಯ. ಎಲ್ಲರ ಅಭಿಪ್ರಾಯ ಸಂಗ್ರಹಿಸಿ, ಕೆಪಿಸಿಸಿ ಅಧ್ಯಕ್ಷರಿಗೆ ವರದಿ ನೀಡುತ್ತೇವೆ. ಈಗಾಗಲೇ ಹೈಕಮಾಂಡ್ ಆಂತರಿಕ ಸರ್ವೇ ಮಾಡಿರುತ್ತದೆ. ಎಲ್ಲವನ್ನೂ ನೋಡಿಯೇ ಪಕ್ಷ ತೀರ್ಮಾನಿಸುತ್ತದೆ. ಆಗ್ರೆಸ್ಸಿವ್ ಆಗಿ ತಮ್ಮ ಹಕ್ಕು ಮಂಡಿಸುವುದು ಸಹಜ. ನಾಳೆ ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಯಲಿದ್ದು, ಅಂತಿಮ ವರದಿ ನೀಡುತ್ತೇವೆ. ಮಾ.21ರಂದು ಅಭ್ಯರ್ಥಿ ಆಯ್ಕೆಯಾಗಲಿದೆ.

- ಎಚ್.‍‍‍ಆಂಜನೇಯ, ಮಾಜಿ ಸಚಿವ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಾತು ಮಾತಿನಲ್ಲಿಯೂ ದಳಪತಿಗಳಿಗೆ ತಿವಿದು, ಮಹತ್ವದ ಸುಳಿವು ಕೊಟ್ಟ ಶಾಸಕ ಜಿ.ಟಿ.ದೇವೇಗೌಡ
ಮೈಸೂರು ದಳಪತಿಗಳ ಅಂಗಳದಲ್ಲಿ ಸಂಚಲನ; ಹೊಸ ದಾಳ ಉರುಳಿಸಿದ JDS ಶಾಸಕ ಜಿಟಿ ದೇವೇಗೌಡ