Loksabha Elections 2024: ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್‌ ಶೆಟ್ಟರ್‌ಗೋ, ಬೊಮ್ಮಾಯಿಗೋ?

By Kannadaprabha News  |  First Published Mar 11, 2024, 9:44 AM IST

ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಅಥವಾ ಬಸವರಾಜ ಬೊಮ್ಮಾಯಿ ಪೈಕಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. 


ಬೆಂಗಳೂರು (ಮಾ.11): ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಅಥವಾ ಬಸವರಾಜ ಬೊಮ್ಮಾಯಿ ಪೈಕಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ವೀರಶೈವ ಲಿಂಗಾಯತ ಸಮುದಾಯದ ಆನಂದಸ್ವಾಮಿ ಗಡ್ಡದೇವರಮಠ ಅವರ ಹೆಸರು ಘೋಷಣೆಯಾದ ಬೆನ್ನಲ್ಲೇ ಬಿಜೆಪಿ ಪಾಳೆಯದ ಲೆಕ್ಕಾಚಾರದಲ್ಲಿ ಬದಲಾವಣೆ ಕಂಡು ಬಂದಿದೆ. ಅದರ ಪರಿಣಾಮವೇ ಕುರುಬ ಸಮುದಾಯದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಪುತ್ರ ಕಾಂತೇಶ್ ಅವರ ಬದಲು ಲಿಂಗಾಯತರನ್ನೇ ಕಣಕ್ಕಿಳಿಸುವ ಬಗ್ಗೆ ಬಿಜೆಪಿ ನಾಯಕರು ಗಂಭೀರ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ತೊರೆದು ಬಿಜೆಪಿಗೆ ವಾಪಸಾಗಿರುವ ಜಗದೀಶ್ ಶೆಟ್ಟರ್ ಅವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿನಿಧಿಸುತ್ತಿರುವ ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಆದರೆ, ಪ್ರಹ್ಲಾದ್ ಜೋಶಿ ಅವರನ್ನು ‘ಡಿಸ್ಟರ್ಬ್’ ಮಾಡಲು ಇಷ್ಟಪಡದ ಬಿಜೆಪಿ ವರಿಷ್ಠರು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಶೆಟ್ಟರ್ ಅವರನ್ನು ಕಣಕ್ಕಿಳಿಯುವಂತೆ ಸಲಹೆ ನೀಡಿದೆ. ಆರಂಭದಲ್ಲಿ ಬೆಳಗಾವಿ ಬಗ್ಗೆ ತುಸು ಒಲವು ಹೊಂದಿದ್ದ ಶೆಟ್ಟರ್ ಅವರಿಗೆ ಬಳಿಕ ಅದು ಸುಲಭದ ಕ್ಷೇತ್ರವಲ್ಲ ಎಂಬುದು ಮನವರಿಕೆಯಾಗಿದೆ. ಹೀಗಾಗಿಯೇ ಬೆಳಗಾವಿ ಕ್ಷೇತ್ರದ ಟಿಕೆಟ್‌ ಬೇಡ ಎಂಬ ಸಂದೇಶವನ್ನು ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.

Tap to resize

Latest Videos

ಕಾಂತೇಶ್‌ ಟಿಕೆಟ್‌ಗಾಗಿ ಈಶ್ವರಪ್ಪ ನನ್ನ ಜೊತೆ ದೆಹಲಿಗೆ ಬರಲಿ: ಬಿ.ಎಸ್‌.ಯಡಿಯೂರಪ್ಪ

ಇದೇ ವೇಳೆ ಬಿಜೆಪಿ ವರಿಷ್ಠರು ಹಾವೇರಿ ಕ್ಷೇತ್ರದಿಂದ ಬಸವರಾಜ ಬೊಮ್ಮಾಯಿ ಅವರನ್ನು ಕಣಕ್ಕಿಳಿಸುವ ಉದ್ದೇಶದಿಂದ ಸೂಚನೆಯನ್ನೂ ನೀಡಿದ್ದರು. ಬೊಮ್ಮಾಯಿ ಅವರಿಗೆ ಲೋಕಸಭೆ ಪ್ರವೇಶಿಸುವ ಬಗ್ಗೆ ಅಷ್ಟಾಗಿ ಆಸಕ್ತಿ ಇದ್ದಂತಿಲ್ಲ. ಆದರೆ, ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಬಳಿಕ ಬೊಮ್ಮಾಯಿ ಅವರೇ ಸೂಕ್ತ ಅಭ್ಯರ್ಥಿಯಾಗಬಲ್ಲರು ಎಂಬ ಉದ್ದೇಶದಿಂದ ವರಿಷ್ಠರು ಒತ್ತಾಯ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ನಡುವೆ ಬೆಳಗಾವಿ ಕ್ಷೇತ್ರದಿಂದ ಜಗದೀಶ್ ಶೆಟ್ಟರ್‌ ಅವರು ಹಿಂದೆ ಸರಿಯುವ ನಿಲುವು ವ್ಯಕ್ತಪಡಿಸುತ್ತಿದ್ದಂತೆಯೇ ಅವರನ್ನು ಪಕ್ಷಕ್ಕೆ ವಾಪಸ್ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಹಾವೇರಿಯಿಂದ ಶೆಟ್ಟರ್ ಅವರನ್ನು ಕಣಕ್ಕಿಳಿಸುವ ನಿರ್ಧಾರ ಮಾಡಿದರು. 

ಸರ್ಕಾರ ಬೀಳಿಸೋಕೆ ಶಾಸಕರಿಗೆ ಬಿಜೆಪಿಯವರಿಂದ ತಲಾ 50 ಕೋಟಿ ಆಮಿಷ: ಡಿಕೆಶಿ ಆರೋಪ

ಇದೀಗ ಹಾವೇರಿಯಿಂದ ವರಿಷ್ಠರು ಬೊಮ್ಮಾಯಿ ಅವರ ಹೆಸರನ್ನು ಪ್ರಸ್ತಾಪ ಮಾಡಿದರೆ, ಯಡಿಯೂರಪ್ಪ ಅವರು ಶೆಟ್ಟರ್ ಅವರ ಹೆಸರನ್ನು ಮುಂದಿಟ್ಟಿದ್ದಾರೆ. ಅಂತಿಮವಾಗಿ ಸೋಮವಾರ ದೆಹಲಿಯಲ್ಲಿ ನಡೆಯಲಿರುವ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಇವರಿಬ್ಬರ ಪೈಕಿ ಯಾರಿಗೆ ಟಿಕೆಟ್ ನೀಡುವ ನಿರ್ಧಾರ ಕೈಗೊಳ್ಳುವುದು ಎಂಬುದನ್ನು ಕಾದು ನೋಡಬೇಕು. ಇವರಿಬ್ಬರನ್ನು ಹೊರತುಪಡಿಸಿ ಹೊಸ ಮುಖಕ್ಕೆ ಅವಕಾಶ ನೀಡುವುದೇ ಎಂಬ ಕುತೂಹಲವೂ ಮೂಡಿದೆ.

click me!