ಈ ಬಾರಿ ಮಳೆ ಚೆನ್ನಾಗಿ ಆಗಿದೆ. ಮಳೆ ಶುಭ ಸೂಚನೆ. ಕಾಂಗ್ರೆಸ್ ಬಂದಾಗ ಬರಗಾಲ ಶುರುವಾಗಿತ್ತು. ಮೋದಿಯವರ ಸರ್ಕಾರ ಬಂದ ಕೂಡಲೇ ಮಳೆ ಶುರುವಾಗಿದೆ: ಸಂಸದ ಬಸವರಾಜ ಬೊಮ್ಮಾಯಿ
ಹಾವೇರಿ(ಜೂ.14): ನನ್ನ ಶಾಸಕ ಸ್ಥಾನಕ್ಕೆ ಜೂ. 17 ರಂದು ರಾಜೀನಾಮೆ ನೀಡಲಿದ್ದೇನೆ. ಬಳಿಕ ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ಪ್ರಕ್ರಿಯೆ ಶುರುವಾಗಲಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ಶಿಗ್ಗಾಂವಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಉಪ ಚುನಾವಣೆಯಲ್ಲಿ ಪಕ್ಷ ಸಮೀಕ್ಷೆ ನಡೆಸಿ ಜನಾಭಿಪ್ರಾಯ ಯಾರ ಪರ ಇದೆಯೋ ಅವರಿಗೆ ಪಕ್ಷ ಟಿಕೆಟ್ ನೀಡಲಿದೆ. ನಮ್ಮಲ್ಲೂ ಅನೇಕ ಸಮರ್ಥ ಅಭ್ಯರ್ಥಿಗಳಿದ್ದಾರೆ. ಖಂಡಿತವಾಗಿ ಶಿಗ್ಗಾಂವಿ ಉಪಚುನಾವಣೆಯಲ್ಲಿ ಗೆಲ್ಲಲಿದ್ದೇವೆ ಎಂದು ಹೇಳಿದರು.
ದರ್ಶನ್ ಪ್ರಕರಣ: ಸೆಲೆಬ್ರಿಟಿ ಆಗಲಿ, ಯಾರೇ ಆಗಲಿ, ಕಾನೂನು ಕೈಗೆ ತೆಗೆದುಕೊಳ್ಳುವುದೇ ಅಪರಾಧ, ಬೊಮ್ಮಾಯಿ
100 ದಿನದ ಕಾರ್ಯಕ್ರಮ:
ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ 100 ದಿನದ ಕಾರ್ಯಕ್ರಮ ಘೋಷಣೆ ಮಾಡಿ, ಅನುಷ್ಠಾನ ಮಾಡಲು ತೀರ್ಮಾನಿಸಲಾಗಿದೆ. ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಮೈತ್ರಿ ಪಕ್ಷಗಳಿಗೆ ಹಾಗೂ ಆ ಪಕ್ಷಗಳಲ್ಲಿ ಅನುಭವ ಇರುವ ನಾಯಕರಿಗೆ ಆದ್ಯತೆ ಕೊಡುವ ಅಗತ್ಯ ಇತ್ತು. ಅಲ್ಲದೇ, ಹಿಂದಿನ ಸರ್ಕಾರದಲ್ಲಿ ಕೆಲಸ ಮಾಡಿದ ಪ್ರಮುಖರೆಲ್ಲರಿಗೂ ಸಚಿವರನ್ನಾಗಿ ಮುಂದುವರೆಸಲಾಗಿದೆ. ಹೀಗಾಗಿ ನನಗೆ ಸಚಿವ ಸ್ಥಾನ ತಪ್ಪಿರಬಹುದು. ನನಗೆ ಅನುಭವವಿರುವುದರಿಂದ ಸಂಸದನಾಗಿಯೂ ಅತಿ ಹೆಚ್ಚು ಅಭಿವೃದ್ಧಿ ಕೆಲಸ ಮಾಡುವೆ ಎಂದರು.
ಕೃಷಿ ಇಲಾಖೆ ರೈತ ವಿರೋಧಿ:
ಈ ಬಾರಿ ಮಳೆ ಚೆನ್ನಾಗಿ ಆಗಿದೆ. ಮಳೆ ಶುಭ ಸೂಚನೆ. ಕಾಂಗ್ರೆಸ್ ಬಂದಾಗ ಬರಗಾಲ ಶುರುವಾಗಿತ್ತು. ಮೋದಿಯವರ ಸರ್ಕಾರ ಬಂದ ಕೂಡಲೇ ಮಳೆ ಶುರುವಾಗಿದೆ. ರಾಜ್ಯ ಸರ್ಕಾರ ರೈತರಿಗೆ ಬೀಜ-ಗೊಬ್ಬರ ವ್ಯವಸ್ಥೆ ಮಾಡಿಲ್ಲ. ರೈತರಿಗೆ ಬೇಕಾಗಿರುವ ಗೊಬ್ಬರ ಬಿಟ್ಟು ತಮ್ಮ ಹತ್ತಿರ ಇರುವ ಗೊಬ್ಬರ ತೆಗೆದುಕೊಂಡು ಹೋಗುವಂತೆ ಹೇಳುತ್ತಿದ್ದಾರೆ. ಕೃಷಿ ಇಲಾಖೆ ರೈತರ ವಿರೋಧಿ ಆಗಿದೆ. ಸೊಸೈಟಿಗಳಲ್ಲಿ ಗೊಬ್ಬರ ಇಲ್ಲ ವ್ಯಾಪಾರಸ್ಥರ ಬಳಿ ಗೊಬ್ಬರ ಇದೆ. ಹೆಚ್ಚಿನ ದರಕ್ಕೆ ಗೊಬ್ಬರ ಮಾರುತ್ತಿದ್ದಾರೆ. ಆದರೆ, ಅಧಿಕಾರಿಗಳು ಎಲ್ಲಿಯೂ ದಾಳಿ ಮಾಡಿಲ್ಲ. ಹಾವೇರಿ ಜಿಲ್ಲೆಯಲ್ಲಿ ಕೃಷಿ ಇಲಾಖೆ ಮುಂಗಾರು ಹಿಂಗಾಮ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಕೇಂದ್ರ ಮಂತ್ರಿಗಿರಿ ಕೈ ತಪ್ಪಿದ್ದಕ್ಕೆ ಬೇಸರ ಇಲ್ಲ: ಹಾವೇರಿ ಸಂಸದ ಬೊಮ್ಮಾಯಿ
ಸರ್ಕಾರ ಆರ್ಥಿಕವಾಗಿ ದಿವಾಳಿ:
ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಹದಿನೈದು ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ. ಆದರೆ, ಒಂದೇ ವರ್ಷದಲ್ಲಿ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಫಲಾನುಭವಿಗಳಿಗೆ ಸರಿಯಾಗಿ ಯೋಜನೆಗಳು ತಲುಪುತ್ತಿಲ್ಲ. ಫಲಾನುಭವಿಗಳಾಗದವರಿಗೆ ಯಾವುದೇ ಪ್ರಯೋಜನ ಆಗಿಲ್ಲ. ಎರಡೂ ವರ್ಗದವರು ಶೀಘ್ರವೇ ಸರ್ಕಾರದ ವಿರುದ್ಧ ತಿರುಗಿ ಬೀಳಲಿದ್ದಾರೆ ಎಂದು ಹೇಳಿದರು.
ಶಿಗ್ಗಾಂವಿಯಲ್ಲಿ ನಡೆಯುತ್ತಿರುವ ಎನ್‌ಕೆಎಸ್‌ಆರ್‌ಟಿಸಿ ಡಿಪೋ ಹಾಗೂ ತರಬೇತಿ ಕೇಂದ್ರ, ಮೆಟ್ರಿಕ್ ನಂತರದ ಬಾಲಕಿಯರ ಸರ್ಕಾರಿ ವಸತಿ ನಿಲಯ, ವಕೀಲರ ಸಂಘ, ಪ್ರವಾಸಿ ಮಂದಿರ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿವೆ. ಈ ಸರ್ಕಾರದಲ್ಲಿ ಹಣ ಇಲ್ಲದ ಕಾರಣ ಎಲ್ಲ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಸ್ಥಗಿತವಾಗಿದೆ ಎಂದು ಆರೋಪಿಸಿದರು.