ಕುಟುಂಬ ರಾಜಕಾರಣದ ಟೀಕಾಸ್ತ್ರ ತಪ್ಪಿಸಿಕೊಳ್ಳಲು ಹಾಸನದ ಜೆಡಿಎಸ್ ಟಿಕೆಟ್ ಹಂಚಿಕೆಗೆ ಎಚ್.ಡಿ. ಕುಮಾರಸ್ವಾಮಿ ನಾಳೆ ಕರೆದಿದ್ದ ಸಭೆ ಕೊನೇ ಕ್ಷಣದಲ್ಲಿ ರದ್ದಾಗಿದೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ತಿಳಿಸಿದ್ದಾರೆ.
ಹಾಸನ (ಫೆ.25): ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರ ಕುಟುಂಬ ರಾಜಕಾರಣದ ಬಗ್ಗೆ ವಿಪಕ್ಷಗಳು ಟೀಕೆ ಮಾಡುತ್ತಿರುವ ಬೆನ್ನಲ್ಲೇ ಟಿಕೆಟ್ ಹಂಚಿಕೆ ವಿಚಾರದಲ್ಲಿ ತೀವ್ರ ಗೊಂದಲಕ್ಕೆ ಒಳಗಾಗಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ನಾಳೆ ಹಾಸನದ ಪ್ರಮುಖರೊಂದಿಗೆ ಚರ್ಚೆ ಮಾಡಲು ಸಭೆಯನ್ನು ಕರೆದಿದ್ದರು. ಆದರೆ, ಈ ಸಭೆಯನ್ನು ರದ್ದುಗೊಳಿಸಲಾಗಿದೆ ಎಂದು ಟಿಕೆಟ್ ಆಕಾಂಕ್ಷಿ ಮಾಜಿ ಸಚಿವ ಎಚ್.ಡಿ. ರೇವಣ್ಣ ತಿಳಿಸಿದ್ದಾರೆ.
ರಾಜ್ಯದ ಏಕೈಕ ಪ್ರಭಲ ಪ್ರಾದೇಶಿಕ ಪಕಗ್ಷವಾಗಿರುವ ಜೆಡಿಎಸ್‌ನಲ್ಲಿ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರ ಕುಟುಂಬ ಸದಸ್ಯರೇ ತುಂಬಿ ತುಳುಕುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಈ ವಿಚಾರ ಕಾಂಗ್ರೆಸ್, ಬಿಜೆಪಿಗೂ ಟೀಕೆ ಮಾಡಲು ಅಸ್ತ್ರವಾಗಿದೆ. ಈಗ ಹಾಸನದಿಂದ ಭವಾನಿ ರೇವಣ್ಣ (ದೇವೇಗೌಡರ ಹಿರಿಯ ಸೊಸೆ) ಕೂಡ ಜೆಡಿಎಸ್ ಟಿಕೆಟ್‌ಗೆ ಲಾಭಿ ನಡೆಸಿದ್ದು ತಾನೇ ಅಭ್ಯರ್ಥಿ ಎಂದು ಹೇಳಿದ್ದರು. ಆದರೆ, ಟಿಕೆಟ್ ನೀಡಲು ಮಾಜಿ ಸಿಎಂ ಕುಮಾರಸ್ವಾಮಿ ನಿರಾಕರಿಸಿದ್ದರು. ಆದರೆ, ಪಟ್ಟು ಬಿಡದೇ ರೇವಣ್ಣ ಕುಟುಂಬದ ಎಲ್ಲ ಸದಸ್ಯರು ಹಾಸನ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಾ ಟಿಕೆಟ್‌ಗೆ ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಹಾಸನ ಜಿಲ್ಲೆಯ ಪ್ರಮುಖರೊಂದಿಗೆ ಸಭೆ ನಡೆಸಿ ಟಿಕೆಟ್ ನೀಡುವ ವಿಚಾರವಾಗಿ ತೀರ್ಮಾನ ಕೈಗೊಳ್ಳಲು ಮುಂದಾಗಿದ್ದರು. ಆದರೆ, ಇದ್ದಕ್ಕಿದ್ದ ಹಾಗೆ ಈ ಸಭೆ ರದ್ದಾಗಿದೆ ಎಂದು ರೇವಣ್ಣ ತಿಳಿಸಿದ್ದಾರೆ.
undefined
ಕೊನೇ ಕ್ಷಣದಲ್ಲಿ ಸಭೆ ರದ್ದು: ಇಂದು ಬೆಳಗ್ಗೆ ಹಾಸನದಿಂದ ತಾನೇ ಸ್ಪರ್ಧೆ ಮಾಡುವುದಾಗಿ ಬಿಜೆಪಿಗೆ ಸವಾಲು ಹಾಕಿದ್ ಎಚ್.ಡಿ. ರೇವಣ್ಣ ಅವರು ಕುಮಾರಸ್ವಾಮಿಯ ಹೇಳಿಕೆಗೆ ವಿರೋಧವಾಗಿ ತಾನೇ ಅಭ್ಯರ್ಥಿ ಎಂದು ಹೇಳಿಕೊಂಡಂತೆ ಆಗಿತ್ತು. ಆದರೆ, ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ (ಸ್ವರೂಪ್) ನೀಡುವುದಾಗಿ ಕುಮಾರಸ್ವಾಮಿ ತಿಳಿಸಿದ್ದರು. ಆದರೆ, ಕಳೆದೊಂದು ತಿಂಗಳಿಂದ ನಿರಂತರ ಜಟಾಪಟಿ ನಡೆಯುತ್ತಿದ್ದು, ನಾಳೆ ಕುಮಾರಸ್ವಾಮಿ ಟಿಕೆಟ್ ಆಕಾಂಕ್ಷಿಗಳಾದ ಸ್ವರೂಪ್, ಎಚ್.ಡಿ. ರೇವಣ್ಣ ಹಾಗೂ ಭವಾನಿ ರೇವಣ್ಣ ಅವರನ್ನು ದೂರವಿಟ್ಟು ನಾಳೆ ಸಂಜೆ 4 ಗಂಟೆಗೆ ಬೆಂಗಳೂರಿನಲ್ಲಿ ಸಭೆ ನಡೆಸಲು ಮುಂದಾಗಿದ್ದರು. ಆದರೆ, ಈಗ ಕೊನೇ ಕ್ಷಣದಲ್ಲಿ ಸಭೆ ರದ್ದುಗೊಳಿಸಲಾಗಿದೆ.
ಕುಮಾರಸ್ವಾಮಿಗೆ ನಿಲ್ಲದ ತಲೆಬಿಸಿ: ಕಳೆದೊಂದು ತಿಂಗಳಿಂದ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರದಲ್ಲಿ ಭಾರಿ ಗೊಂದಲ ಶುರುವಾಗಿದೆ. ಕಳೆದ 2 ವರ್ಷಗಳ ಹಿಂದೆಯೇ ಜೆಡಿಎಸ್ ಟಿಕೆಟ್ ಅನ್ನು ಪಕ್ಷದ ಕಾರ್ಯಕರ್ತರಾದ ಸ್ವರೂಪ್ ಅವರಿಗೆ ಕೊಡಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ತೀರ್ಮಾನಿಸಿದ್ದರು. ಈ ಮೂಲಕ ಮುಂಬರುವ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಲ್ಲಿ ಅವರ ಮಗ ಕುಮಾರಸ್ವಾಮಿ, ಸೊಸೆ ಅನಿತಾ ಕುಮಾರಸ್ವಾಮಿ, ಹಿರಿಯ ಮಗ ಎಚ್.ಡಿ. ರೇವಣ್ಣ, ಮೊಮ್ಮಕ್ಕಳಾದ ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಸೇರಿ ಎಲ್ಲರೂ ರಾಜಕೀಯದಲ್ಲಿ ಧುಮುಕಿದ್ದಾರೆ. ಈಗ ಭವಾನಿ ರೇವಣ್ಣ ಅವರು ಕೂಡ ಶಾಸಕಿಯಾಗುವ ಮಹದಾಸೆಯಿಂದ ಹಾಸನದಿಂದ ಜೆಡಿಎಸ್ ಟಿಕೆಟ್ ಬೇಕೆಂದು ಹಠ ಹಿಡಿದಿದ್ದಾರೆ.
ಹಾಸನದಲ್ಲಿ ಭವಾನಿಗೆ ಟಕೆಟ್ ಸಿಗೋದು ಡೌಟು: ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಡ್ತೀನಿ ಎಂದ ಕುಮಾರಸ್ವಾಮಿ
ಗಂಟೆಗೊಮ್ಮೆ ಕರೆ ಮಾಡಿ ಮಾಹಿತಿ ಸಂಗ್ರಹ: ಮಾಜಿ ಸಿಎಂ ಕುಮಾರಸ್ವಾಮಿ ಅವರು ಚಿಕ್ಕಮಗಳೂರಿನಲ್ಲಿ ಪಂಚರತ್ನ ರಥಯಾತ್ರೆಯಲ್ಲಿ ಭಾಗವಹಿಸಲು ಹೋಗಿದ್ದಾರೆ. ಆದರೆ, ಹಾಸನ ಟಿಕೆಟ್ ವಿಚಾರದ ಬಗ್ಗೆ ಕುಟುಂಬದಲ್ಲಿ ಸ್ವಂತ ಸಹೋದರ ರೇವಣ್ಣ ಹಾಗೂ ಅವರ ಕುಟುಂಬ ಸದಸ್ಯರನ್ನು ಎದುರು ಹಾಕಿಕೊಳ್ಳಲಾಗದೇ ಪರದಾಡುತ್ತಿದ್ದಾರೆ. ಜೊತೆಗೆ, ಕುಟುಂಬದೊಂದಿಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲೂ ಚಿಂತನೆ ನಡೆಸಿದ್ದರು. ಇನ್ನು ಹಾಸನದಲ್ಲಿ ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರವಾಗಿ ಪ್ರತಿಗಂಟೆಗೊಮ್ಮೆ ಕರೆ ಮಾಡಿ ಕಾರ್ಯಕರ್ತರು ಹಾಗೂ ಮುಖಂಡರಿಮದ ಮಾಹಿತಿ ಪಡೆಯುತ್ತಿದ್ದಾರೆ.