ಕುಮಾರಸ್ವಾಮಿ ಹುಟ್ಟಿದ್ದು ಹಾಸನ, ರಾಜಕೀಯ ಮಾಡಿದ್ದು ರಾಮನಗರ; ಮಂಡ್ಯ ನಮ್ಮ ಭೂಮಿ ಅಂದ್ರೆ ಹೇಗೆ? ಚಲುವರಾಯಸ್ವಾಮಿ

By Sathish Kumar KHFirst Published Mar 29, 2024, 7:59 PM IST
Highlights

ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಹುಟ್ಟಿದ್ದು ಹಾಸನ. ರಾಜಕೀಯವಾಗಿ ಬೆಳೆದಿದ್ದು ರಾಮನಗರ. ಆದರೆ, ಈಗ ಮಂಡ್ಯಕ್ಕೆ ಬಂದು ಇದು ನಮ್ಮ ಭೂಮಿ ಅಂತಾರೆ. ಇಲ್ಲಿನ ಜನರು ಭಾವನೆಗಳಿಗೆ ಕೆರಳಿ ಮತ ಹಾಕಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.

ಮಂಡ್ಯ (ಮಾ.29): ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಹುಟ್ಡಿದ್ದು ಹಾಸನ. ರಾಜಕೀಯವಾಗಿ ಬೆಳೆದಿದ್ದು ರಾಮನಗರ. ಅವರ ಪತ್ನಿ ಅನಿತಾ ಕುಮಾರಸ್ವಾಮಿ ಮಧುಗಿರಿಯಲ್ಲಿ ಸ್ಪರ್ಧಿಸಿದಾಗ ಇದು ನಮ್ಮ ಭೂಮಿ ಅಂದ್ರು. ಈಗ ಮಂಡ್ಯಗೆ ಬಂದು‌ ಇದು ನಮ್ಮ ಭೂಮಿ ಅಂತಾರೆ. ಆದ್ರೆ ಮಂಡ್ಯದ ಜನರು ಭಾವನೆಗಳಿಗೆ ಕೆರಳಿ ಮತ ಹಾಕಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.

ಮಂಡ್ಯ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,  ಈ ಚುನಾವಣೆಯನ್ನು ಯಾರು ಯಾವ ರೀತಿ ಬೇಕಾದ್ರು ಮಾತಾಡಬಹುದು. ನಾವು ನಮ್ಮ ಅಭಿವೃದ್ಧಿ, ನಮ್ಮ ಗ್ಯಾರಂಟಿ ಯೋಜನೆ‌ ಇಟ್ಟುಕೊಂಡು ಚುನಾವಣೆ ಮಾಡ್ತಾ ಇದ್ದೀವಿ. ಇದು ಚಲುವರಾಯಸ್ವಾಮಿ, ಕುಮಾರಸ್ವಾಮಿ ಅವರ ನಡುವಿನ ಚುನಾವಣೆ ಅಲ್ಲ. ಇದು ನಮ್ಮ ಅಭಿವೃದ್ಧಿಯ ಚುನಾವಣೆಯಾಗಿದೆ. ಕುಮಾರಸ್ವಾಮಿ ಅವರು ಹುಟ್ಡಿದ್ದು ಹಾಸನ. ರಾಜಕೀಯವಾಗಿ ಬೆಳೆದಿದ್ದು ರಾಮನಗರ. ಅನಿತಾ ಕುಮಾರಸ್ವಾಮಿ ಅವರು ಮಧುಗಿರಿಯಲ್ಲಿ ನಿಂತಾಗ ಇದು ನಮ್ಮ ಭೂಮಿ ಎಂದರು. ಆದರೆ, ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ದರು. ಅದು ಎಷ್ಟು ದಿನ ಇದ್ರು ಯಾಕೆ ಅಂತಾ ಅವರೇ ಹೇಳಲಿ. ಈಗ ಮಂಡ್ಯಗೆ ಬಂದು‌ ಇದು ನಮ್ಮ ಭೂಮಿ ಅಂತಾರೆ ಎಂದು ಟೀಕೆ ಮಾಡಿದರು.

ರಾಜ್ಯದ ಮುಖ್ಯಮಂತ್ರಿಗಳು ಜ್ಯೋತಿಷ್ಯ ಹೇಳೋಕೆ ಶುರು ಮಾಡಿದ್ದಾರೆ: ಎಚ್ಡಿಕೆ ವ್ಯಂಗ್ಯ

ನಾವು ಮಂಡ್ಯ ಬಿಟ್ಟು ಎಲ್ಲೂ ಹೋಗಿಲ್ಲ. ಮಂಡ್ಯದಲ್ಲೇ ಹುಟ್ಟಿದ್ದು, ಮಂಡ್ಯದಲ್ಲೇ ಸಾಯೋದು. ಮಂಡ್ಯ ಜನರು ಭಾವನಾತ್ಮಕ ಜೀವಿಗಳು. ಭಾವನೆಗಳಿಗೆ ಕೆರಳಿ ಮತ ಹಾಕಲ್ಲ ಇಲ್ಲಿನ ಜನ. ಕೋಮು ವಿಚಾರಕ್ಕೆ ಪ್ರಯೋಧನೆ ಆಗಿ ಮತ ಹಾಕಲ್ಲ. ಮಂಡ್ಯದವರಿಗೆ ನಮ್ಮವರು ಎನ್ನಿಸಿದವರಿಗೆ ಮತ ಹಾಕುತ್ತಾರೆ. ಸ್ಟಾರ್ ಚಂದ್ರು ಮಂಡ್ಯ‌ ಮಣ್ಣಿನ ಮನೆಯವರು. ಮಂಡ್ಯ ಜನರು ಸ್ಟಾರ್ ಚಂದ್ರು ಅವರ ಕೈ ಹಿಡಿಯುತ್ತಾರೆ. ಕುಮಾರಸ್ವಾಮಿ ಅವರು ರಾಜ್ಯದ ನಾಯಕರು. ಚಂದ್ರು ಅವರಿಗೂ ಕುಮಾರಸ್ವಾಮಿ ಅವರಿಗೂ ಹೋಲಿಕೆ ಮಾಡೋಕೆ ಆಗಲ್ಲ. ಇನ್ನು ಮಂಡ್ಯದ ಬಗ್ಗೆ ಕುಮಾರಸ್ವಾಮಿ ಅವರಿಗಿಂತಲೂ ಹೆಚ್ಚು ಭಾವನೆ ನಮಗೆ ಇದೆ. ನಮ್ಮ ಭೂಮಿ ಇದೆ ಅದಕ್ಕೆ ನಮಗೆ ಹೆಚ್ಚು ಭಾವನೆಯಿದೆ. ನಾನು ಹುಟ್ಟಿದ್ದು, ಬೆಳೆದಿದ್ದು, ವ್ಯಾಪಾರ-ವಹಿವಾಟು, ರಾಜಕೀಯ ಎಲ್ಲಾ ಮಂಡ್ಯದಲ್ಲೇ. ಕುಮಾರಸ್ವಾಮಿ ಅವರಿಗಿಂತಲೂ ಹೆಚ್ಚು ಭಾವನಾತ್ಮಕತೆ ನಮಗೆ ಇದೆ ಎಂದು ಹೇಳಿದರು.

ಕೋವಿಡ್ ಸಂಕಷ್ಟದಲ್ಲಿ ಎಚ್‌ಡಿಕೆ ಕುಟುಂಬ ಎಲ್ಲಿ ಹೋಗಿತ್ತು: ಡಿ.ಕೆ.ಶಿವಕುಮಾರ್

ಕುಮಾರಸ್ವಾಮಿ ಅವರು ಬಂದರು ಎಂದು ನಾವು ವೇಗ ಜಾಸ್ತಿ ಮಾಡಿಲ್ಲ. ಯಾರು ಅಭ್ಯರ್ಥಿಯಾದ್ರು ನಮ್ಮ ವೇಗ ಇಷ್ಟೇ ಇರುತ್ತೆ. ಸತ್ಯ ಹಾಗೂ‌ ಧರ್ಮಕ್ಕೆ ಗೆಲುವು. ಕುಮಾರಸ್ವಾಮಿ ಅವರ ಬಳಿಯೇ ಸತ್ಯ ಇದೆ ಅಂದುಕೊಂಡಿದ್ದಾರೆ. ನಮ್ಮ ಬಳಿಯೂ ಸಹ ಧರ್ಮ ಇದೆ. ಮಂಡ್ಯಗೆ ಸಿದ್ದರಾಮಯ್ಯ ಅವರ ಸರ್ಕಾರ ಅಭಿವೃದ್ಧಿ ಕೆಲಸ ಮಾಡಿದೆ. ಕುಮಾರಸ್ವಾಮಿ ಅವರ ಧರ್ಮ ಯಾವುದು ಗೊತ್ತಿಲ್ಲ. ಅವರದ್ದು ಬಿಜೆಪಿ ಧರ್ಮ ಇರಬೇಕು. ನಾರಾಯಣಗೌಡ ಅವರು ಮೊದಲು ಬರ್ತೀನಿ ಅಂತಾ ಹೇಳಿದ್ದರು. ಅವರ ಬೆಂಬಲಿಗರು ನಮ್ಮ ಜೊತೆ ಟಚ್ ಅಲ್ಲಿ‌ ಇದ್ದರು. ಅದೇ ಕಾರಣಕ್ಕೆ ಕಾಂಗ್ರೆಸ್‌ಗೆ ಬರ್ತಾರೆ ಅಂತಾ ಹೇಳಿದ್ದೆ. ಈಗ ನಾರಾಯಣಗೌಡ ಬಿಜೆಪಿ ಗಾಳಕ್ಕೋ, ಜೆಡಿಎಸ್ ಗಾಳಕ್ಕೋ ಬಿದ್ದಿದ್ದಾರೋ ಗೊತ್ತಿಲ್ಲ. ಅವರನ್ನು ತಿರಸ್ಕಾರ ಮಾಡಿದ ಜೆಡಿಎಸ್ ಜೊತೆ ಹೋಗ್ತೀನಿ ಅಂದ್ರೆ ನನಗೆ ಗೊತ್ತಿಲ್ಲ ಎಂದು ತಿಳಿಸಿದರು.

click me!