ಸಂಸದರಾದ ಡಿ.ವಿ.ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್ ಹಾಗೂ ಮುಂಬೈ ಉತ್ತರ ಸಂಸದ ಗೋಪಾಲ ಶೆಟ್ಟಿ ಈ ಬಾರಿ ಟಿಕೆಟ್ ವಂಚಿತರು. ಗೋಪಾಲ ಶೆಟ್ಟಿ ಅವರು ಪಡುಬಿದ್ರೆಯ ಸಾಂತೂರು ಮೂಲದವರು. ಸಂಸದೆ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಿದರೂ ಅವರ ಕ್ಷೇತ್ರ ಬದಲಾಯಿಸಲಾಗಿದೆ. ಡೀವಿ ಹೊರತುಪಡಿಸಿ ಬೇರೆಲ್ಲರೂ ದಾಖಲೆ ಮತಗಳ ಅಂತರದಿಂದ ಕಳೆದ ಬಾರಿ ಗೆಲವು ಕಂಡಿದ್ದರೂ ಈ ಬಾರಿ ಟಿಕೆಟ್ ಪಡೆಯಲು ಮಾತ್ರ ಸಾಧ್ಯವಾಗಿಲ್ಲ.
ಆತ್ಮಭೂಷಣ್
ಮಂಗಳೂರು(ಮಾ.29): ಕಳೆದ ಲೋಕಸಭಾ ಚುನಾವಣೆಯಲ್ಲಿ ಸಾಧಾರಣ ದಾಖಲೆ ಅಂತರದಲ್ಲಿ ಬಿಜೆಪಿಗೆ ಗೆಲುವು ತಂದುಕೊಟ್ಟ ಕರಾವಳಿ ಮೂಲದ ನಾಲ್ವರು ಸಂಸದರ ಪೈಕಿ ಮೂರು ಮಂದಿ ಈ ಬಾರಿ ಟಿಕೆಟ್ ವಂಚಿತರಾಗಿದ್ದಾರೆ. ಒಬ್ಬ ಸಂಸದರು ಕ್ಷೇತ್ರವನ್ನೇ ಬದಲಾವಣೆ ಮಾಡಲಾಗಿದೆ.
ಸಂಸದರಾದ ಡಿ.ವಿ.ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್ ಹಾಗೂ ಮುಂಬೈ ಉತ್ತರ ಸಂಸದ ಗೋಪಾಲ ಶೆಟ್ಟಿ ಈ ಬಾರಿ ಟಿಕೆಟ್ ವಂಚಿತರು. ಗೋಪಾಲ ಶೆಟ್ಟಿ ಅವರು ಪಡುಬಿದ್ರೆಯ ಸಾಂತೂರು ಮೂಲದವರು. ಸಂಸದೆ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಿದರೂ ಅವರ ಕ್ಷೇತ್ರ ಬದಲಾಯಿಸಲಾಗಿದೆ. ಡೀವಿ ಹೊರತುಪಡಿಸಿ ಬೇರೆಲ್ಲರೂ ದಾಖಲೆ ಮತಗಳ ಅಂತರದಿಂದ ಕಳೆದ ಬಾರಿ ಗೆಲವು ಕಂಡಿದ್ದರೂ ಈ ಬಾರಿ ಟಿಕೆಟ್ ಪಡೆಯಲು ಮಾತ್ರ ಸಾಧ್ಯವಾಗಿಲ್ಲ.
ಚುನಾವಣಾ ರಾಜಕೀಯದಿಂದ ದೂರ ಉಳಿಯುವೆ: ಡಿ.ವಿ.ಸದಾನಂದ ಗೌಡ
ದಾಖಲೆ ಗೆಲವು:
ಬೆಂಗಳೂರು ಉತ್ತರ ಕ್ಷೇತ್ರದಲ್ಲಿ 2019ರಲ್ಲಿ ಎರಡನೇ ಬಾರಿ ಕಣಕ್ಕಿಳಿದ ಡಿ.ವಿ.ಸದಾನಂದ ಗೌಡ 1,47,518 ಮತಗಳ ಅಂತರದಿಂದ ಕಾಂಗ್ರೆಸ್‌ನ ಕೃಷ್ಣ ಬೈರೇ ಗೌಡ ಎದುರು ಜಯಿಸಿದ್ದರು. ಇಲ್ಲಿ ಮತಗಳ ಅಂತರ ಕಡಿಮೆಯಾದರೂ ಬಿಜೆಪಿಗೆ ಗೆಲವು ತಂದುಕೊಟ್ಟಿದ್ದರು. ಅದಕ್ಕೂ ಮೊದಲು ಡೀವಿ ಉಡುಪಿ-ಚಿಕ್ಕಮಗಳೂರು ಹಾಗೂ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದರು. ಇಲ್ಲಿವರೆಗೆ ಸಂಸದರಾಗಿ ಒಟ್ಟು ನಾಲ್ಕು ಅವಧಿ ಪೂರೈಸಿದ್ದಾರೆ. ವಿಧಾನ ಪರಿಷತ್ ಸದಸ್ಯರಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ, ಪಕ್ಷದ ರಾಜ್ಯ ಅಧ್ಯಕ್ಷರಾಗಿಯೂ ಹುದ್ದೆ ನಿರ್ವಹಿಸಿದ್ದಾರೆ. ಇದಕ್ಕೂ ಮೊದಲು ಡೀವಿ ಪುತ್ತೂರಿನಲ್ಲಿ ಎರಡು ಬಾರಿ ಶಾಸಕರಾಗಿದ್ದರು.
ದ.ಕ. ಲೋಕಸಭಾ ಕ್ಷೇತ್ರದಿಂದ 2019ರಲ್ಲಿ ಮೂರನೇ ಬಾರಿ ಸ್ಪರ್ಧಿಸಿದ ನಳಿನ್ ಕುಮಾರ್ ಕಟೀಲ್ ಇಲ್ಲಿ 2,74,621 ದಾಖಲೆ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ವಿರುದ್ಧ ಜಯಗಳಿಸಿದ್ದರು. ಅಲ್ಲದೆ ದ.ಕ. ಲೋಕಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಅವಧಿಗೆ ಅಂದರೆ 15 ವರ್ಷ ಕಾಲ ಸಂಸದರಾದ ದಾಖಲೆ ಬರೆದಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಅವಕಾಶವೂ ಲಭಿಸಿತ್ತು. ಈ ಬಾರಿ ದ.ಕ. ಕ್ಷೇತ್ರಕ್ಕೆ ಕ್ಯಾಪ್ಟನ್ ಬ್ರಿಜೇಶ್ ಚೌಟಗೆ ಟಿಕೆಟ್ ನೀಡಲಾಗಿದೆ
ಗೋಪಾಲ ಶೆಟ್ಟಿ ಅವರು ಮುಂಬೈ ಉತ್ತರದಲ್ಲಿ ಎರಡು ಬಾರಿ ಸಂಸದರಾಗಿದ್ದಾರೆ. 2019ರಲ್ಲಿ ಕಾಂಗ್ರೆಸ್‌ನ ಊರ್ಮಿಳಾ ಮಾತೋಂಡ್ಕರ್ ವಿರುದ್ಧ 4,65,247 ಭಾರಿ ಮತಗಳ ಅಂತರದಿಂದ ಗೆದ್ದಿದ್ದರು. ಅಲ್ಲಿ ಸ್ಥಳೀಯಾಡಳಿತ ಸದಸ್ಯರಾಗಿ, ಶಾಸಕರಾಗಿದ್ದರು. ಮಂಗಳೂರು ಸಮೀಪದ ಪಡುಬಿದ್ರಿ ಮೂಲದ ಗೋಪಾಲ ಶೆಟ್ಟಿ ಅವರಿಗೆ ಈ ಬಾರಿ ಟಿಕೆಟ್ ಸಿಕ್ಕಿಲ್ಲ. ಅವರ ಕ್ಷೇತ್ರದಲ್ಲಿ ಪಿಯೂಷ್ ಗೋಯಲ್‌ಗೆ ಟಿಕೆಟ್ ಲಭಿಸಿದೆ.
ಪ್ರಧಾನಿ ಮೋದಿ ದೈವಾಂಶ ಸಂಭೂತ ಎಲ್ಲವನ್ನೂ ಸರಿ ಮಾಡಲು ಹೊರಟಿದ್ದಾರೆ: ಡಿವಿ ಸದಾನಂದಗೌಡ
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಎರಡನೇ ಬಾರಿ ಸಂಸದೆಯಾಗಿರುವ ಶೋಭಾ ಕರಂದ್ಲಾಜೆಗೆ ಮೂರನೇ ಬಾರಿಗೆ ಇಲ್ಲಿ ಅವಕಾಶ ಸಿಕ್ಕಿಲ್ಲ. ಕ್ಷೇತ್ರದಲ್ಲಿ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರಿಗೆ ಹಾಲಿ ಸಂಸದ ಡಿ.ವಿ.ಸದಾನಂದ ಗೌಡರ ಕ್ಷೇತ್ರವಾದ ಬೆಂಗಳೂರು ಉತ್ತರದಲ್ಲಿ ಟಿಕೆಟ್ ನೀಡಲಾಗಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಕಣಕ್ಕೆ ಇಳಿಸಲಾಗಿದೆ.
ವರಿಷ್ಠರ ಸೂಚನೆ
ಈ ಬಾರಿ ಟಿಕೆಟ್ ವಂಚಿತ ಈ ಮೂವರು ಸಂಸದರಿಗೆ ಮುಂದೇನು ಎಂಬ ಪ್ರಶ್ನೆ ಸದ್ಯ ಪ್ರಶ್ನೆಯಾಗಿಯೇ ಉಳಿದಿದೆ. ಹಾಲಿ ಸಂಸದರು ಸದ್ಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ಕ್ಷೇತ್ರದ ಅಭ್ಯರ್ಥಿಗಳ ಗೆಲವಿಗೆ ಶ್ರಮಿಸಲಿದ್ದಾರೆ. ಈ ಮೂವರ ಕ್ಷೇತ್ರಗಳಲ್ಲಿ ಈ ಬಾರಿ ಹೊಸ ಅಭ್ಯರ್ಥಿಗಳು ಕಣಕ್ಕೆ ಇಳಿದಿರುವುದರಿಂದ ಹಿಂದಿನ ಗೆಲವಿಗಿಂತಲೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಿಕೊಡುವಂತೆ ಪಕ್ಷದ ವರಿಷ್ಠರು ಸೂಚನೆ ನೀಡಿದ್ದಾರೆ. ಮುಂದೆ ಯಾವುದೇ ಅಧಿಕಾರ ನೀಡುವುದಿದ್ದರೂ ಕ್ಷೇತ್ರದಲ್ಲಿ ಅಭ್ಯರ್ಥಿ ಗೆಲ್ಲಿಸಿಕೊಡುವ ಸವಾಲನ್ನು ಇವರು ಎದುರಿಸಲೇ ಬೇಕಾಗಿದೆ.