
ತುಮಕೂರು(ಜೂ.11): ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ವಿರುದ್ಧ ಗುಬ್ಬಿ ಶಾಸಕ ಶ್ರೀನಿವಾಸ್ ತಿರುಗಿ ಬಿದ್ದಿದ್ದಾರೆ.
ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಗೆ ಏಕವಚನದಲ್ಲೇ ಮಾತನಾಡಿ ಓಪನ್ ಚಾಲೆಂಜ್ ಹಾಕಿದ್ದಾರೆ. ಕುಮಾರಸ್ವಾಮಿ ಏನು ಉತ್ತಮನಾ?. ಯಾವುದರಲ್ಲಿ ಅವನು ಉತ್ತಮ, ಬೆಳಗ್ಗೆ ಒಂದು ಹೇಳ್ತಾನೆ, ಮಧ್ಯಾಹ್ನ ಒಂದು ಹೇಳ್ತಾನೆ, ಸಂಜೆ ಒಂದು ಹೇಳ್ತಾನೆ. ನಾನು ಮತ ಹಾಕುವಾಗ ಕ್ಲಿಯರ್ 3 ರಿಂದ 4 ನಿಮಿಷ ಪೇಪರ್ ಇಟ್ಕೊಂಡು ತೊರ್ಸಿದಿನಿ. ಅವಾಗ ನೋಡ್ಬೇಕಿತ್ತು. ಅವನೇನು ಕತ್ತೆ ಕಾಯ್ತಿದ್ದನಾ? ತೆಗಿ ಹೆಬ್ಬಟ್ಟನ್ನ ಅನ್ನಬೇಕಿತ್ತು. ನಾನು ಸರಿಯಾಗಿಯೇ ಪೇಪರ್ ತೊರ್ಸಿದಿನಿ. ಅವನು ಎಜುಕೇಟೆಡ್ ಅಲ್ವಾ? ಹೆಬ್ಬೆಟ್ಟನ್ನ ಮುಚ್ಚಿಕೊಂಡಿದಿಯಾ, ಪುಲ್ ಪೇಪರ್ ತೊರ್ಸಯ್ಯ ಅನ್ನಬೇಕಿತ್ತು. ಇವರ ಮನೆಯವರೇ ನಾಟಕ ಮಾಡ್ಕೊಂಡು ನನ್ನನ್ನ ಮುಗಿಸ್ಬೇಕು ಅಂತ ಅವರ ಹಿತೈಸಿಗಳಿಂದ ಕ್ರಾಸ್ ವೋಟ್ ಮಾಡ್ಸಿ, ನನ್ನ ಮೇಲೆ ಗೂಬೆ ಕುರ್ಸೋ ಕೆಲಸ ಮಾಡಿದ್ದಾರೆ ಅಂತ ಕಿಡಿ ಕಾರಿದ್ದಾರೆ.
ನನಗೂ ಕುಮಾರಸ್ವಾಮಿಗೂ ಆಗಲ್ಲ. ನನ್ನ ವಿರುದ್ಧ ಬೇರೆ ಅಭ್ಯರ್ಥಿ ಹಾಕಿ ಬೇರೆ ರೀತಿ ಕಸರತ್ತು ಮಾಡಿದ್ದಾರೆ. ನನ್ನನ್ನ ಸೋಲಿಸ್ಲೇಬೇಕು ಅಂತ ಸಂಚು ರೂಪಿಸಿದ್ದಾರೆ. ನನ್ನ ಮೇಲೆ ಮಾಡಿರುವ ಷಡ್ಯಂತ್ರ ಇದಾಗಿದೆ. ಇದೇ ಕುಮಾರಸ್ವಾಮಿ ಕ್ರಾಸ್ ವೋಟ್ ಮಾಡ್ಸಿ ಅದನ್ನ ನನ್ನ ಮೇಲೆ ಹಾಕ್ತಿದ್ದಾನೆ. ಅವರಿಗೆ ಗೊತ್ತು ನಮ್ಮ ಅಭ್ಯರ್ಥಿ ಗೆಲ್ಲಲ್ಲ ಅಂತ. ಯಾವ್ದೋ ಬೇರೆ ಕ್ರಾಸ್ ವೋಟ್ ಮಾಡ್ಸಿ ಈ ರೀತಿಯಾಗಿ ಮಾಡಿದ್ದಾನೆ. ಅವನ ಯೋಗ್ಯತೆಗೆ ಯಾರು ವೋಟ್ ಹಾಕಲ್ಲ ಅಂತಾನೂ ಗೊತ್ತಿದೆ. ನನ್ನ ತೇಜೊವಧೆ ಮಾಡೋಕೆ ಈ ರೀತಿಯಾಗಿ ಮಾಡಿದ್ದಾನೆ. ನಾನು ಇವನಿಗೆ ಹೆದರಿಕೊಂಡು, ಬೇರೆ ಅವರಿಗೆ ಹೆದರಿಕೊಂಡು ಯಾರಿಗೂ ನಾನು ಕಚ್ಚೆ ಕಟ್ಟಲ್ಲ. ಯಾರಿಗೂ ಕೇರ್ ಮಾಡಲ್ಲ. ನಾನು ನನ್ನ ಸ್ವಾಭಿಮಾನ ಹಾಗೂ ನನ್ನ ಮನಸಾಕ್ಷಿ ವಿರುದ್ಧ ಯಾವತ್ತು ಹೊಗಲ್ಲ. ಇವರು ಇದೆಲ್ಲಾ ನಾಟಕ ಮಾಡ್ತಿದ್ದಾರೆ ಅಂತ ಎಚ್‌ಡಿಕೆ ವಿರುದ್ಧ ಹರಿಹಾಯ್ದಿದ್ದಾರೆ.
ಅಡ್ಡ ಮತದಾನ: ಗುಬ್ಬಿ ಶಾಸಕ ಶ್ರೀನಿವಾಸ್ ಕೈಲಾಸ ಸಮಾರಾಧನೆ ಫೋಟೋ ವೈರಲ್..!
ಕುಮಾರಸ್ವಾಮಿ ಒಬ್ಬ ದೊಡ್ಡ ನಾಟಕಕಾರ
ಕುಮಾರಸ್ವಾಮಿ ಒಬ್ಬ ದೊಡ್ಡ ನಾಟಕಕಾರ, ಒಂತರ ಉಸರವಳ್ಳಿ ಇದ್ದ ಹಾಗೆ, ಅವನೊಬ್ಬನೆ ಸತ್ಯ ಹರಿಶ್ಚಂದ್ರ ಅವನೊಬ್ಬನೆ ಸರ್ವಜ್ಞ ಅಂತ ತಿಳ್ಕೊಂಡಿದ್ದಾನೆ. ಅವನಿಗಿಂತ ಒಳ್ಳೆಯ ವ್ಯಕ್ತಿತ್ವ ತಿಳಿದುಕೊಂಡಿರೋರು ಇದ್ದಾರೆ. ನನ್ನ ವಿರುದ್ಧ ಪ್ರತಿಭಟನೆ ಮಾಡ್ತಾರಂತೆ ಮಾಡ್ಲಿ, ಅವನ ಹಡಗು ಮುಳುಗ್ತಾ ಇದಿಯಲ್ಲ. ಅದಕ್ಕೋಸ್ಕರ ಈ ರೀತಿಯಾಗಿ ಆಡ್ತಾ ಅವ್ನೆ ಕುಮಾರಸ್ವಾಮಿ. ಯಾವನ್ ಬರ್ತಾನೆ ಬರ್ಲಿ ಮನೆ ಮುತ್ತಿಗೆ ಹಾಕೋಕೆ. ಅವನೇ ಬರ್ಲಿ ತಾಕತ್ ಇದ್ರೆ. ಅದ್ಯಾವನು ಬರ್ತಾನೆ ಮನೆ ಹತ್ರ ಬರ್ಲಿ ನಾನು ಅದಕ್ಕೆ ಎಲ್ಲೂ ಹೋಗ್ದೆ ಮನೇಲಿ ಕಾಯ್ತಿದಿನಿ. ಕುಮಾರಸ್ವಾಮಿಗೆ ತಾಕತ್ ಇದ್ರೆ ನನ್ನ ಕ್ಷೇತ್ರದಲ್ಲಿ ನಿಂತು ನನ್ನ ವಿರುದ್ಧ ಗೆದ್ದು ತೋರಿಸಲಿ. ನಾನು ಅವನಿಗೆ ಓಪನ್ ಚಾಲಿಜಿಂಗ್ ಮಾಡ್ತಿನಿ. ನಾನು ಯಾವ ಪಕ್ಷದಿಂದಲಾದ್ರು ನಿಂತು ತೊರಿಸ್ತಿನಿ. ಅವನದು ಪಕ್ಷ ಇದೆಯಲ್ಲ ಅದರಿಂದಲೇ ನಿಂತು ಗೆದ್ದು ತೋರಿಸಲಿ ಅಂತ ಬಹಿರಂಗವಾಗಿಯೇ ಸವಾಲ್ ಹಾಕಿದ್ದಾರೆ.
ಯಾಕೆ ಇನ್ನೊಬ್ಬರನ್ನ ತೇಜೋವಧೆ ಮಾಡ್ಬೇಕು. ಇವನ ಪಕ್ಷ ಕಟ್ಕಂಡು ನನಗೆ ಏನಾಗ್ಬೇಕು. ಆಗ್ಲೆ ನನ್ನ ವಿರುದ್ಧ ಬೇರೆ ಅಭ್ಯರ್ಥಿಯನ್ನ ಹಾಕಿದ ಮೇಲೆ ಅವನ ಪಕ್ಷ ಕಟ್ಕೋಂಡು ಏನಾಗ್ಬೇಕು. ನಾವು, ಜಿಟಿ ದೇವೆಗೌಡರು, ಅರಸಿಕೇರೆ ಶಾಸಕ ಶಿವಲಿಂಗೆಗೌಡರು, ಶ್ರೀನಿವಾಸ್ ಗೌಡ ಎಲ್ಲ ಸೆರ್ಕೋಂಡು ಮಿಟಿಂಗ್ ಮಾಡಿದ್ವಿ, ಶ್ರೀನಿವಾಸ್ ಗೌಡ ನಾನು ಕಾಂಗ್ರೆಸ್‌ಗೆ ವೋಟ್ ಹಾಕ್ತಿನಿ ಅಂದ್ರು. ನಾವು ಬೇಡ ಅಂದ್ವಿ, ನಮ್ಮ ಪಕ್ಷ ಬಿ ಫಾರಂ ಕೊಟ್ಟಿದೆ ಪಕ್ಷಕ್ಕೆ ದ್ರೋಹ ಮಾಡೋದು ಬೇಡ ಅಂತ ಜೆಡಿಎಸ್ ಗೆ ವೋಟ್ ಹಾಕಿದಿವಿ. ಅದನ್ನ ತಿರುಚಿಸುವ ಕೆಲಸ ಮಾಡ್ತಿದ್ದಾನಲ್ಲ ಕುಮಾರಸ್ವಾಮಿ. ಇವ್ನಗೆ ಏನ್ ಹೇಳ್ಬೇಕು, ನಾಚಿಕೆ ಮಾನ ಮರ್ಯಾದೆ ಇಲ್ಲ. ಗಳಿಗೆಗೆ ಒಂದು ಗಂಟೆಗೆ ಒಂದು ಹೇಳ್ಕಂಡು, ಇವನನ್ನ ಯಾರಾದ್ರು ಲೀಡರ್ ಅಂತಾರೇನ್ರಿ ರಾಜಕಾರಣ ಮಾಡೋಕೆ ಬರುತ್ತಾ ಅವನಿಗೆ ಅಂತ ಖಾರವಾಗಿ ಕಿಡಿ ಕಾರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.