
ಬೆಂಗಳೂರು (ನ.05): ರಾಜ್ಯ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳ ಜಾರಿಗೆ ಸ್ವಲ್ಪ ಹಣಕಾಸಿನ ಸಮಸ್ಯೆ ಇದೆ. ಆದರೆ ಯಾವುದೇ ಯೋಜನೆ ನಿಲ್ಲಿಸುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದ ಬಗ್ಗೆ ಬಿ.ಎಸ್.ಯಡಿಯೂರಪ್ಪ ಅವರು ಗಡುವು ನೀಡಿರುವ ಬಗ್ಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ‘ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಲು ಅವರಿಗೆ ಸ್ವಾತಂತ್ರ್ಯ ಇದೆ. ನಾವು ಅವರ ಹೇಳಿಕೆಗಳನ್ನು ನಿರ್ಲಕ್ಷ್ಯ ಮಾಡುವುದಿಲ್ಲ. ಆದರೆ ಅನಗತ್ಯ ಟೀಕೆಗಳು ಬೇಡ. ಈಗ 5 ಗ್ಯಾರಂಟಿ ಯೋಜನೆಗಳಲ್ಲಿ ಯಾವುದನ್ನೂ ನಾವು ನಿಲ್ಲಿಸಿಲ್ಲ. ಸ್ವಲ್ಪ ಹಣಕಾಸು ಸಮಸ್ಯೆಯಾಗಿರುವುದರಿಂದ ಕೆಲವೊಂದು ಹೆಚ್ಚು ಕಡಿಮೆ ಆಗುತ್ತವೆ. ಆದರೆ ಯಾವುದೇ ಗ್ಯಾರಂಟಿಯನ್ನೂ ನಿಲ್ಲಿಸಿಲ್ಲ, ನಿಲ್ಲಿಸಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಖಾಲಿ ಇರುವ ಹುದ್ದೆ ಶೀಘ್ರ ಭರ್ತಿ: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಇನ್ನೆರಡು ವರ್ಷದಲ್ಲಿ ಭರ್ತಿ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು. ನಗರದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ನೂತನವಾಗಿ ನಿರ್ಮಿಸಲಾಗಿರುವ ಪೊಲೀಸ್ ವಸತಿ ಸಮುಚ್ಛಯ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ. ಮುಖ್ಯಮಂತ್ರಿಗಳು ಸಹ ಇದಕ್ಕೆ ಪೂರಕವಾಗಿ ಸ್ಪಂದಿಸಿದ್ದಾರೆ ಎಂದರು.
ಸಿದ್ದರಾಮಯ್ಯಗೆ ಸುಳ್ಳು ಹೇಳುವುದರಲ್ಲಿ ನೊಬೆಲ್ ಪ್ರಶಸ್ತಿ ನೀಡಬೇಕು: ಕೆ.ಎಸ್.ಈಶ್ವರಪ್ಪ
ಪ್ರತಿ ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಹಾಗಾಗಿ, ಖಾಲಿ ಹುದ್ದೆ ಭರ್ತಿ ಮಾಡುವುದು ಅಗತ್ಯವಿದೆ ಎಂದು ಹೇಳಿದರು. 545 ಜನ ಸಬ್‌ಇನ್‌ಸ್ಪೆಕ್ಟರ್ ನೇಮಕಾತಿ ಮಾಡುವ ವೇಳೆ ಏನೆಲ್ಲಾ ನಡೆದಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ. 1 ಸಾವಿರಕ್ಕೂ ಅಧಿಕ ಸಬ್‌ಇನ್‌ಸ್ಪೆಕ್ಟರ್ ಹುದ್ದೆಗಳು ಖಾಲಿ ಉಳಿದಿವೆ. ಇಲಾಖೆಯಲ್ಲಿ ಈ ಹುದ್ದೆಗಳಿಗೆ ಬಡ್ತಿ ಕೊಡಲು ಅವಕಾಶವಿದ್ದು, 600 ಜನ ಸಹಾಯಕ ಸಬ್‌ಇನ್‌ಸ್ಪೆಕ್ಟರ್‌ಗಳಿಗೆ ಇನ್‌ಸ್ಪೆಕ್ಟರ್‌ಗಳಾಗಿ ಬಡ್ತಿ ನೀಡಲಾಗಿದೆ. ಈಗಾಗಲೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದರು. ಕಳೆದ ಬಾರಿ 12ಸಾವಿರ ಪೊಲೀಸರಿಗೆ ಬಡ್ತಿ ಕೊಟ್ಟಿದ್ದೇವೆ. ಈ ಬಾರಿಯೂ ಎಎಸ್‌ಐ ಹುದ್ದೆಯಿಂದ ಪಿಎಸ್‌ಐ ಹುದ್ದೆಗೆ ಮೊದಲನೇ ಹಂತದಲ್ಲಿ ಬಡ್ತಿ ನೀಡಲಾಗಿದೆ ಎಂದು ತಿಳಿಸಿದರು.
ಸಿದ್ದು ನಾನೇ ಸಿಎಂ ಎಂದು ಹೇಳಿರುವುದು ಸತ್ಯ: ಸಚಿವ ಆರ್.ಬಿ.ತಿಮ್ಮಾಪೂರ
ಪ್ರತಿ ಜಿಲ್ಲೆಗೆ ಇಬ್ಬರು ಎಎಸ್ಪಿ: ರಾಜ್ಯದಲ್ಲಿ 30 ಅಡಿಷನಲ್ ಎಸ್ಪಿ ಹುದ್ದೆಗೆ ಬಡ್ತಿ ನೀಡಲಾಗಿದೆ. ಪ್ರತಿ ಜಿಲ್ಲೆಗೆ ಇಬ್ಬರು ಅಡಿಷನಲ್ ಎಸ್ಪಿ ನೇಮಿಸಲು ತೀರ್ಮಾನಿಸಲಾಗಿದೆ. ಅಪರಾಧ ವಿಭಾಗಕ್ಕೆ ಒಬ್ಬರು, ಕಾನೂನು ಸುವ್ಯವಸ್ಥೆ ವಿಭಾಗಕ್ಕೆ ಒಬ್ಬರು ಸೇರಿ ಒಂದು ಜಿಲ್ಲೆಗೆ ಇಬ್ಬರು ಅಡಿಷನಲ್ ಎಸ್ಪಿ ನೇಮಕ ಮಾಡುವ ಸಂಬಂಧ ಈಗಾಗಲೇ ಆದೇಶ ಮಾಡಲಾಗಿದೆ ಎಂದರು. ಸಾಮಾನ್ಯವಾಗಿ ಜಿಲ್ಲೆಗಳಲ್ಲಿ ಓರ್ವ ಎಸ್ಪಿ ಹಾಗೂ ಓರ್ವ ಎಎಸ್ಪಿ ಇರುತ್ತಾರೆ. ಅಪರಾಧ ಹಾಗೂ ಕಾನೂನು ಸುವ್ಯವಸ್ಥೆ ವಿಭಾಗ ಎರಡನ್ನೂ ಒಬ್ಬ ಎಎಸ್ಪಿಯೇ ನೋಡಿಕೊಳ್ಳುತ್ತಾರೆ. ಇನ್ನು ಮುಂದೆ ಜಿಲ್ಲೆಗಳಲ್ಲಿ ಇಬ್ಬರು ಅಡಿಷನಲ್ ಎಸ್ಪಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದರು. ಕಳೆದ ಬಾರಿ ನಾನು, ಗೃಹ ಸಚಿವನಾಗಿದ್ದಾಗ 21ಸಾವಿರ ಪೊಲೀಸರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಆದರೆ, ಕಳೆದ ೪ ವರ್ಷದಿಂದ ಸರ್ಕಾರ ಪೊಲೀಸರ ನೇಮಕಾತಿ ಪ್ರಕ್ರಿಯೆ ಕೈಗೆತ್ತಿಕೊಂಡಿಲ್ಲ. ಈ ಪರಿಣಾಮ ರಾಜ್ಯದಲ್ಲಿ ೨೦ ಸಾವಿರ ಹುದ್ದೆಗಳು ಖಾಲಿ ಇವೆ. ವರ್ಷಕ್ಕೆ ೪ ಸಾವಿರ ಮಂದಿ ಪೊಲೀಸರು ನಿವೃತ್ತರಾಗುತ್ತಾರೆ. ಈ ಹುದ್ದೆಗಳನ್ನಾದರೂ ತುಂಬುವ ಅವಶ್ಯಕತೆ ಇದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.