
ಕುಕನೂರು (ಮೇ.28): ಗ್ಯಾರಂಟಿಗಳಲ್ಲಿ ಅನರ್ಹ ಫಲಾನುಭವಿಗಳಿಗೂ ಯೋಜನೆಯ ಲಾಭ ಹೋಗುತ್ತಿದೆ. ಈ ಕುರಿತು ರಾಜ್ಯಾದ್ಯಂತ ತನಿಖೆ ಮಾಡಿಸಿ ಜುಲೈನಿಂದ ಅನರ್ಹರಿಗೆ ಗ್ಯಾರಂಟಿ ಲಾಭ ತಲುಪದಂತೆ ಕಡಿವಾಣ ಹಾಕಲಾಗುವುದು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ. ಮಂಗಳವಾರ ಕುಕನೂರು, ಯಲಬುರ್ಗಾ ತಾಲೂಕಿನ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಒಂದು ವಿಧಾನಸಭಾ ಕ್ಷೇತ್ರಕ್ಕೆ ವರ್ಷಕ್ಕೆ ಗ್ಯಾರಂಟಿ ಯೋಜನೆಯಡಿ ಅಂದಾಜು ₹250 ಕೋಟಿ ಹಣ ನೀಡುತ್ತಿದ್ದು, ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪಿವೆ.
ಆದರೆ, ಅರ್ಹ ಅಲ್ಲದವರಿಗೂ ಸಹ ಯೋಜನೆ ಲಾಭ ಸಿಗುತ್ತಿದೆ. ಈ ಬಗ್ಗೆ ರಾಜ್ಯಮಟ್ಟದಲ್ಲಿ ಅಧಿಕಾರಿಗಳ ತಂಡ ರಚಿಸಿ ತನಿಖೆ ಮಾಡಲು ಮುಖ್ಯಮಂತ್ರಿಗೆ ತಿಳಿಸಲಾಗುವುದು ಎಂದರು. ಮನೆ ಬಾಡಿಗೆ ನೀಡಿದ್ದರೂ ಅವರಿಗೆ ಉಚಿತ ಗೃಹಜ್ಯೋತಿ ಯೋಜನೆ ದೊರೆಯುತ್ತಿದೆ. ಟ್ಯಾಕ್ಸ್, ಜಿಎಸ್‌ಟಿ ಹೊಂದಿದ ಕುಟುಂಬದ ಸದಸ್ಯರಿಗೂ ಗೃಹಲಕ್ಷ್ಮಿ ಹಣ ನೀಡುತ್ತಿದ್ದು, ಅನ್ನಭಾಗ್ಯದಲ್ಲಿ ಪಡಿತರ ಕಾರ್ಡ್‌ಗಳ ವ್ಯತ್ಯಾಸ ಗೋಚರಿಸಿದೆ. ಈ ಕುರಿತು ತನಿಖೆ ಮಾಡಿಸಲಾಗುವುದು ಎಂದು ಹೇಳಿದರು.
ಹಣದ ಬದಲು ಆಹಾರ ಧಾನ್ಯ ಕಿಟ್: ಅನ್ನಭಾಗ್ಯ ಯೋಜನೆಯಲ್ಲಿ 10 ಕೆ.ಜಿ ಪಡಿತರ ಧಾನ್ಯದಲ್ಲಿ 5 ಕೆ.ಜಿ ಅಕ್ಕಿ ಜತೆಗೆ 5 ಕೆ.ಜಿ ಪಡಿತರದ ಹಣ (₹150) ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತಿತ್ತು. ಆದರೆ, ಹಣ ನೀಡುವ ಬದಲು ತೊಗರಿ ಬೇಳೆ, ಕೊಬ್ಬರಿ ಎಣ್ಣೆ, ಸಕ್ಕರೆ, ಜೋಳ ಹೀಗೆ ಆಹಾರನದ ಕಿಟ್ ಮಾಡಿ ವಿತರಿಸುವ ಯೋಚನೆ ಇದೆ. ಇದನ್ನು ರಾಜ್ಯ ಮಟ್ಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ರಾಯರಡ್ಡಿ ತಿಳಿಸಿದರು.
ಬೀಜ, ಗೊಬ್ಬರದ ಕೊರತೆ ಆಗದು: ಯಲಬುರ್ಗಾ ಕ್ಷೇತ್ರದಲ್ಲಿ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರದ ಕೊರೆತ ಆಗದು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ಯಲಬುರ್ಗಾ ಸಹಾಯಕ ಕೃಷಿ ಇಲಾಖೆ ವತಿಯಿಂದ ಮುಂಗಾರು ಹಂಗಾಮಿನ ಬೀಜ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರ ರೈತರಿಗೆ ಬಿತ್ತನೆಗೆ ಅವಶ್ಯವಾಗಿರುವ ಬೀಜ, ಗೊಬ್ಬರದ ಪೂರೈಕೆ ಮಾಡುತ್ತಿದೆ. ರೈತ ಸಂಪರ್ಕ ಕೇಂದ್ರ ಮೂಲಕ ರಿಯಾಯಿತಿ ದರದಲ್ಲಿ ಬೀಜ, ಗೊಬ್ಬರ ವಿತರಿಸುತ್ತಿದೆ. ಬೇಡಿಕೆಗೆ ತಕ್ಕಷ್ಟು ಪೂರೈಕೆ ಮಾಡಲಾಗುತ್ತಿದೆ. ಉತ್ತಮ ಮಳೆ ಸುರಿದಿದ್ದು ರೈತರು ಉತ್ತಮ ಬೆಳೆ ಬೆಳೆಯಬೇಕು. ರೈತ ವರ್ಗಕ್ಕೆ ಅಗತ್ಯವಾಗಿರುವ ಅನುಕೂಲಗಳನ್ನು ಸರ್ಕಾರ ಕಲ್ಪಿಸುತ್ತಿದೆ ಎಂದರು.
ಯಲಬುರ್ಗಾ ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ ಮಾತನಾಡಿ, ಯಲಬುರ್ಗಾ, ಕುಕನೂರು ತಾಲೂಕಿನ ಒಟ್ಟು 3.16 ಲಕ್ಷ ಎಕರೆ ಸಾಗುವಳಿ ಭೂಮಿಯಲ್ಲಿ 2.19 ಲಕ್ಷ ಎಕರೆ ಮುಂಗಾರು ಬಿತ್ತನೆ ಗುರಿ ಹೊಂದಲಾಗಿದೆ. ಒಟ್ಟು 8 ಕಡೆ ಬೀಜ ಮಾರಾಟ ಕೇಂದ್ರ ತೆರಯಲಾಗಿದೆ. ಬೇಡಿಕೆಗೆ ತಕ್ಕಷ್ಟು ಬೀಜಗಳನ್ನು ರೈತರಿಗೆ ನೀಡಲು ತರಿಸಲಾಗಿದೆ ಎಂದು ಮಾಹಿತಿ ನೀಡಿದರು. ಕುಕನೂರು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಾದ ಬಸವರಾಜ ತೇರಿನ, ಸಿದ್ರಾಮರೆಡ್ಡಿ, ಶಿವಾನಂದ ಮಳಗಿ, ಗೂಳಪ್ಪ ಕೋಳಜಿ, ಪ್ರಮುಖರಾದ ಹನುಮಂತಗೌಡ ಚಂಡೂರು, ಸಿದ್ದಯ್ಯ ಕಳ್ಳಿಮಠ, ಸಂಗಮೇಶ ಗುತ್ತಿ, ಪಪಂ ಸದಸ್ಯರಾದ ಸಿರಾಜ ಕರಮುಡಿ, ರಾಮಣ್ಣ ಬಂಕದಮನಿ, ಮಹೇಶ ಗಾವರಾಳ, ನಿಂಗಪ್ಪ ಗೊರ್ಲೆಕೊಪ್ಪ ಇತರರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.