
ಬೆಂಗಳೂರು (ಸೆ.05): ಕೇಂದ್ರ ಸರ್ಕಾರದ ಜಿಎಸ್‌ಟಿ ಕಡಿತ ನಿರ್ಧಾರದಿಂದ ರಾಜ್ಯಕ್ಕೆ ಸುಮಾರು 70 ಸಾವಿರ ಕೋಟಿ ರು. ನಷ್ಟವಾಗಬಹುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಜಿಎಸ್‌ಟಿ ಕಡಿತ ಮಾಡಿರುವುದು ಸ್ವಾಗತಾರ್ಹ. ಕೆಲ ಅಗತ್ಯ ವಸ್ತುಗಳಿಗೆ ಶೇ.0 ಅಥವಾ ಶೇ.5 ಜಿಎಸ್ಟಿ ಮಾಡಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಕೆಲ ವಸ್ತುಗಳ ಮೇಲಿನ ಜಿಎಸ್ಟಿ ದರಗಳು ಹೆಚ್ಚೇ ಇವೆ. ಸಾಮಾನ್ಯ ಜನರಿಗೆ ತಲುಪುವ ಪದಾರ್ಥಗಳಿಗೆ ಕಡಿಮೆ ಜಿಎಸ್‌ಟಿ ಇರಬೇಕು ಅಥವಾ ಇರಬಾರದು. ಅಂತಹ ಪದಾರ್ಥಗಳಿಗೂ ಹೆಚ್ಚು ಜಿಎಸ್‌ಟಿ ಹಾಕಿದ್ದರು.
ಬಹುಶಃ ಕೇಂದ್ರ ಸರ್ಕಾರಕ್ಕೆ ಈಗ ಸಾಮಾನ್ಯ ಜನರ ಸಮಸ್ಯೆ ಮನವರಿಕೆಯಾಗಿರಬೇಕು ಎಂದರು. ಜಿಎಸ್‌ಟಿ ಸರಳೀಕರಣ ಮಾಡಬೇಕು ಎಂಬುದು ಕಾಂಗ್ರೆಸ್ ಪಕ್ಷದ ಆಗ್ರಹವೂ ಆಗಿತ್ತು. ಕಳೆದ ಕೆಲ ವರ್ಷಗಳಿಂದ ಜಿಎಸ್‌ಟಿ ಕಡಿತ ಮಾಡುವಂತೆ ನಾವು ಒತ್ತಾಯಿಸುತ್ತಲೇ ಬಂದಿದ್ದೆವು ಎಂದರು. ಇದೀಗ ಕೇಂದ್ರ ಸರ್ಕಾರ ಜಿಎಸ್‌ಟಿ ಸರಳೀಕರಣ ನಿರ್ಧಾರ ಮಾಡಿರುವುದನ್ನು ಸ್ವಾಗತಿಸುತ್ತೇವೆ. ಸಾಮಾನ್ಯವಾಗಿ ತೆರಿಗೆ ಕಡಿಮೆ ಮಾಡಿದಾಗ ನಷ್ಟ ಆಗುತ್ತದೆ. ಕೇಂದ್ರದಂತೆ ರಾಜ್ಯಕ್ಕೂ ನಷ್ಟವಾಗಿದ್ದು, ಅದಕ್ಕೆ ಪರ್‍ಯಾಯ ದಾರಿ ಹುಡುಕಬೇಕು. ಜೊತೆಗೆ ರಾಜ್ಯಗಳಿಗೆ ಅನುದಾನ ಹಂಚಿಕೆ ಹಾಗೂ ಅನಗತ್ಯ ಖರ್ಚುಗಳ ಬಗ್ಗೆ ನಿಗಾ ವಹಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಲಿ ಎಂದು ಹೇಳಿದರು.
ಪೊಲೀಸ್ ಅಧಿಕಾರಿಗಳ ಸಭೆ: ಪರಮೇಶ್ವರ್ ಅವರು ಮಂಗಳೂರು ನಗರಕ್ಕೆ ಭೇಟಿ ನೀಡಿ ಕಮಿಷನರ್ ಕಚೇರಿಯಲ್ಲಿ ಅವಿಭಜಿತ ದ.ಕ. ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಜಿಲ್ಲೆಯ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಸಭೆ ನಡೆಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದಿರುವ ಪ್ರಮುಖ ಘಟನೆಗಳಾದ ಧರ್ಮಸ್ಥಳ ಪ್ರಕರಣ, ಹಬ್ಬಗಳಿಗೆ ಹಾಕಲಾದ ಸಮಯ ಮಿತಿ ನಿರ್ಬಂಧದ ಬಗ್ಗೆ ವಿಧಾನಸಭೆಯಲ್ಲಿ ನಡೆದ ಚರ್ಚೆ ಹಾಗೂ ಅದರ ಪರಿಹಾರದ ಕ್ರಮಗಳು, ದಕ್ಷಿಣ ಕನ್ನಡ, ಕಮಿಷನರೇಟ್, ಉಡುಪಿ ಜಿಲ್ಲೆಗಳ ಕಾನೂನು ಸುವ್ಯವಸ್ಥೆ, ವಿಶೇಷ ಕಾರ್ಯಪಡೆಯ ಕಾರ್ಯಾಚರಣೆಗಳು, ಡ್ರಗ್ಸ್ ಜಾಲದ ವಿರುದ್ಧ ಪೊಲೀಸರು ಕೈಗೊಂಡಿರುವ ಕಾರ್ಯಾಚರಣೆಗಳು, ಕೆಂಪು ಕಲ್ಲು ಮತ್ತು ಮರಳುಗಾರಿಕೆ ವಿಚಾರಗಳ ಕುರಿತು ಪೊಲೀಸ್ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದುಕೊಂಡರು.
ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮತ್ತು ಕೈಗೊಳ್ಳಬೇಕಾದ ನಿರ್ಧಾರಗಳ ಬಗ್ಗೆ ಕೆಲವೊಂದು ನಿರ್ದೇಶನಗಳನ್ನು ನೀಡಿದರು. ಜಿಲ್ಲೆಯಲ್ಲಿ ಶಾಂತಿ ನೆಲೆಸುವ ನಿಟ್ಟಿನಲ್ಲಿ ಕೈಗೊಳ್ಳುವ ನಿರ್ಧಾರಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಅಧಿಕಾರಿಗಳಿಗೆ ತಿಳಿಸಿದರು. ಸಭೆಯಲ್ಲಿ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ನಗರ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಮಿಥುನ್ ಎಚ್.ಎನ್., ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ರವಿಶಂಕರ್ ಮತ್ತಿತರರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.