ಪಂಚ ಯೋಜನೆಗಳನ್ನು ಮುಂದಿಟ್ಟುಕೊಂಡು ಸಾಗುತ್ತಿರುವ ಪಂಚ ರತ್ನ ಯಾತ್ರೆ ಗುರುವಾರ ತುಮಕೂರು ಜಿಲ್ಲೆ ಪ್ರವೇಶಿಸಿದ್ದು ಭವ್ಯ ಸ್ವಾಗತ ದೊರೆಯಿತು.
ತುಮಕೂರು (ಡಿ.01): ಪಂಚ ಯೋಜನೆಗಳನ್ನು ಮುಂದಿಟ್ಟುಕೊಂಡು ಸಾಗುತ್ತಿರುವ ಪಂಚ ರತ್ನ ಯಾತ್ರೆ ಗುರುವಾರ ತುಮಕೂರು ಜಿಲ್ಲೆ ಪ್ರವೇಶಿಸಿದ್ದು ಭವ್ಯ ಸ್ವಾಗತ ದೊರೆಯಿತು. ನಗರದ ಹೊರವಲಯದ ಜಾಸ್‌ಟೋಲ್ ಬಳಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಪಂಚರತ್ನ ಯಾತ್ರೆ ಆಗಮಿಸುತ್ತಿದ್ದಂತೆ ಜಿಲ್ಲಾ ಜೆಡಿಎಸ್ ಕಾರ್ಯಕರ್ತರು ಅಭೂತ ಪೂರ್ವ ಸ್ವಾಗತ ನೀಡಿದರು. ಅಲ್ಲಿಂದ ನೇರವಾಗಿ ಯಾತ್ರೆ ಸಿದ್ಧಗಂಗಾ ಮಠಕ್ಕೆ ತೆರಳಿತು. ಅಲ್ಲಿ ಡಾ. ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ನಾಯಕರು ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.
ಅಲ್ಲಿಂದ ಪಂಚರತ್ನ ರಥಯಾತ್ರೆ ಕ್ಯಾತ್ಸಂದ್ರ, ಬಟವಾಡಿ, ಗಂಗೋತ್ರಿ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಪಕ್ಷ ಕೈಗೊಂಡಿರುವ ಪಂಚರತ್ನ ಯೋಜನೆಗಳನ್ನು ಜನರ ಮುಂದಿಟ್ಟು, ಈ ಯೋಜನೆಗಳ ಅನುಷ್ಠಾನವಾಗಬೇಕಾದರೆ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಸ್ಪಷ್ಟಬಹುಮತದೊಂದಿಗೆ ಅಧಿಕಾರಕ್ಕೆ ತರುವಂತೆ ಮನವಿ ಮಾಡಲಾಯಿತು.
Pancharatna Rathayatra: ದೊಡ್ಡಬಳ್ಳಾಪುರ ಗೆಲ್ಲೋದೆ ನಮ್ಮ ಗುರಿ: ಎಚ್.ಡಿ.ಕುಮಾರಸ್ವಾಮಿ
ಕ್ಯಾತ್ಸಂದ್ರದ ಸಂತೆಮೈದಾನಕ್ಕೆ ರಥಯಾತ್ರೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ರಾಜ್ಯದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಯೋಜನೆ, ವಸತಿ ಇಲ್ಲದವರಿಗೆ ಸರ್ಕಾರದಿಂದಲೇ ವಸತಿ ಕಟ್ಟಿಸಿಕೊಂಡುವ ಯೋಜನೆ, ಪ್ರತಿಯೊಂದು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಸುಸಜ್ಜಿತ ಹೈಟೆಕ್ ಆಸ್ಪತ್ರೆ ನಿರ್ಮಾಣದ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ನಮ್ಮ ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಹಲವಾರು ಹಳ್ಳಿಗಳಲ್ಲಿ ಬಸ್ ಸೌಲಭ್ಯವಿಲ್ಲ. ವಿದ್ಯಾರ್ಥಿಗಳಿಗಾಗಿ ಜಾರಿಗೊಳಿಸಿದ್ದ ಸೈಕಲ್ ವಿತರಣೆಯನ್ನು ನಿಲ್ಲಿಸಲಾಗಿದೆ. ಈ ಎಲ್ಲದರ ಬಗ್ಗೆಯೂ ಅಸಮಾಧಾನ ಇದೆ ಎಂದರು.
ಕ್ಯಾತ್ಸಂದ್ರ ಸಂತೆಮೈದಾನದಿಂದ ಬಟವಾಡಿ ಸರ್ಕಲ್‌ಗೆ ರಥಯಾತ್ರೆ ತೆರಳಿದ ಸಂದರ್ಭದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡಲಾಗುವುದು. ಮಹಿಳೆಯರ ಆರ್ಥಿಕ ಸಬಲತೆಗೂ ಒತ್ತು ನೀಡುವುದು ನಮ್ಮ ಪಕ್ಷದ ಗುರಿಯಾಗಿದೆ. ರಾಜ್ಯದ 6 ಸಾವಿರ ಗ್ರಾಮ ಪಂಚಾಯ್ತಿಗಳಲ್ಲೂ ಸರ್ಕಾರಿ ಶಾಲೆಗಳು ನಿರ್ಮಾಣವಾಗಿ ಉಚಿತವಾಗಿ ತಾರತಮ್ಯವಿಲ್ಲದೆ ಶಿಕ್ಷಣ ಸಿಗಬೇಕು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಬಿಪಿಎಲ್ ಕುಟುಂಬದ ಆರೋಗ್ಯ ಸೇವೆಗೆ ಸರ್ಕಾರದಿಂದಲೇ ಹಣ: ಕೋವಿಡ್ ಸಂದರ್ಭದಲ್ಲಿ ಹಾಸಿಗೆಯಿಲ್ಲ, ವೆಂಟಿಲೇಟರ್ ಇಲ್ಲ ಎಂದು ಜನರನ್ನು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲಾಯಿತು. ಈ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ 3 ಮಂದಿ ತಜ್ಞ ವೈದ್ಯರು, 30 ಸಿಬ್ಬಂದಿಯೊಂದಿಗೆ 30 ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಾಣದ ಗುರಿ ಹೊಂದಲಾಗಿದೆ. ಅಲ್ಲದೆ ವೈದ್ಯರಿಗೆ ತಗುಲುವ ವೆಚ್ಚವನ್ನು ಸಹ ಭರಿಸಲು ನಿರ್ಧರಿಸಲಾಗಿದೆ. ಬಿಪಿಎಲ್ ಕಾರ್ಡ್‌ದಾರ ಕುಟುಂಬಗಳ ಆರೋಗ್ಯ ಸೇವೆಗೆ ಸರ್ಕಾರದಿಂದಲೇ ಹಣ ಪಾವತಿಸಬೇಕು. ಯಾವುದೇ ಕಾರಣಕ್ಕೂ ಬಡವರು ಮನೆಮಠ, ಆಸ್ತಿಪಾಸ್ತಿ ಮಾರುವಂತಾಗಬಾರದು. ಇದು ನಮ್ಮ ಪಕ್ಷದ ಧ್ಯೇಯವಾಗಿದೆ. ಬಿಜೆಪಿ ಪಕ್ಷಕ್ಕೆ ಮತ ಹಾಕುವವರು ಇದನ್ನೆಲ್ಲ ಅರ್ಥ ಮಾಡಿಕೊಳ್ಳಬೇಕು. ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದವರ ಆರೋಗ್ಯ ಸೇವೆಗೆ 40 ಲಕ್ಷ ರು.ಗಳ ವಿಮೆ ಮಾಡಿಸಿ ಸರ್ಕಾರದಿಂದಲೇ ಆರೋಗ್ಯ ಸೇವೆಗೆ ಹಣ ಭರಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದರು.
ನಂತರ ನಗರದ ವಿವಿಧೆಡೆ ಸಂಚರಿಸಿದ ಪಂಚರತ್ನ ರಥಯಾತ್ರೆಯಲ್ಲಿ ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ. ಆಂಜಿನಪ್ಪ, ಮಾಜಿ ಸಚಿವ ಡಿ. ನಾಗರಾಜಯ್ಯ, ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ, ಸುರೇಶ್‌ಬಾಬು, ಜೆಡಿಎಸ್ ಮುಖಂಡರಾದ ಗೋವಿಂದರಾಜು, ಬೆಳ್ಳಿ ಲೋಕೇಶ್, ಉಪಮೇಯರ್ ನರಸಿಂಹಮೂರ್ತಿ, ಶಶಿಕಲಾ ಗಂಗಹನುಮಯ್ಯ, ಟಿ.ಆರ್. ನಾಗರಾಜು ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ಜೆಡಿಎಸ್ ಸ್ವತಂತ್ರ ಸರ್ಕಾರಕ್ಕೆ ಅವಕಾಶ ಕೊಡಿ: ಎಚ್.ಡಿ.ಕುಮಾರಸ್ವಾಮಿ
ಪಂಚರತ್ನ ಯಾತ್ರೆ ಹೈಲೆಟ್ಸ್
* ಜೆಡಿಎಸ್ ಅಧಿಕಾರಕ್ಕೆ ಬಂದರೆ ಸರ್ಕಾರದಿಂದಲೇ ಬಿಪಿಎಲ್ ಕುಟುಂಬದ ಆರೋಗ್ಯ ಸೇವೆಗೆ 40 ಲಕ್ಷ ರು. ವಿಮೆ
* ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ
* ಗ್ರಾಪಂಗಳ ವ್ಯಾಪ್ತಿಯಲ್ಲಿ ಮೂವರು ತಜ್ಞ ವೈದ್ಯರು, 30 ಸಿಬ್ಬಂದಿಯೊಂದಿಗೆ 30 ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಾಣದ ಗುರಿ
* ಪ್ರತಿಯೊಂದು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸುಸಜ್ಜಿತ ಹೈಟೆಕ್ ಆಸ್ಪತ್ರೆ ನಿರ್ಮಾಣ