‘ರಾಜ್ಯ ಸರ್ಕಾರದಿಂದ ಮೀಸಲಾತಿ ವಿಚಾರದಲ್ಲಿ ಸ್ವಾಮೀಜಿಗಳಿಗೆ ಬೆದರಿಕೆ ಹಾಕುವ ಪ್ರಯತ್ನ ನಡೆದಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು (ಮಾ.27): ‘ರಾಜ್ಯ ಸರ್ಕಾರದಿಂದ ಮೀಸಲಾತಿ ವಿಚಾರದಲ್ಲಿ ಸ್ವಾಮೀಜಿಗಳಿಗೆ ಬೆದರಿಕೆ ಹಾಕುವ ಪ್ರಯತ್ನ ನಡೆದಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಡಾ.ನಿರ್ಮಲಾನಂದ ಸ್ವಾಮೀಜಿ ಅವರಿಗೆ ಸರ್ಕಾರದಿಂದ 20-25 ಬಾರಿ ಕರೆ ಮಾಡಿ ಇದನ್ನು ಒಪ್ಪಿಕೊಳ್ಳಿ ಎನ್ನುತ್ತಿದ್ದಾರೆ. ಈ ಮೂಲಕ ಸರ್ಕಾರವು ಸ್ವಾಮೀಜಿಗಳಿಗೆ ಬೆದರಿಕೆ ಹಾಕುವ ಕೆಲಸ ಮಾಡುತ್ತಿದೆ ಎಂದು ದೂರಿದರು.
ಲಿಂಗಾಯತ, ಒಕ್ಕಲಿಗರು ಭಿಕ್ಷುಕರೇ?: ಆರ್.ಅಶೋಕ್ ಅವರಿಗೆ ಮೀಸಲಾತಿ ಹೆಚ್ಚಳ ವಿಚಾರವಾಗಿ ಒಕ್ಕಲಿಗರು ಕೊಟ್ಟಮನವಿಯಲ್ಲಿ ಎಷ್ಟು ಮೀಸಲಾತಿಗೆ ಬೇಡಿಕೆ ಇಡಲಾಗಿತ್ತು? ನಮ್ಮ ಮನವಿ ಪಡೆಯುವಾಗ ಇದನ್ನು ಹೇಗೆ ಜಾರಿಗೊಳಿಸುತ್ತೇವೆ ಎಂದು ಅಶೋಕ್ ಹೇಳಿದ್ದರು? ಈಗ ಅಲ್ಪಸಂಖ್ಯಾತರಿಂದ ಕಸಿದು ನಮಗೆ ಭಿಕ್ಷೆ ಹಾಕಿದರೆ ಅದನ್ನು ಸ್ವೀಕರಿಸಲು ಲಿಂಗಾಯತರು ಹಾಗೂ ಒಕ್ಕಲಿಗರು ಭಿಕ್ಷುಕರೇ ಎಂದು ಪ್ರಶ್ನಿಸಿದರು. ಅಲ್ಪಸಂಖ್ಯಾತ ಸಮುದಾಯದವರು ನಮ್ಮ ಜನರಲ್ಲವೇ? ಇವರು ಅಧಿಕಾರ ಸ್ವೀಕಾರ ಮಾಡುವಾಗ ಏನೆಂದು ಪ್ರಮಾಣ ವಚನ ಸ್ವೀಕರಿಸಿದ್ದರು. ಮೀಸಲಾತಿ ಪರಿಷ್ಕರಣೆ ಹೆಸರಿನಲ್ಲಿ ಜಾತಿ-ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ದ್ವೇಷ ಸೃಷ್ಟಿಸುವ ಕೆಲಸ ಯಾಕೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಸಿ.ಟಿ.ರವಿ ವಿರುದ್ಧ ಮಾನನಷ್ಟ ಕೇಸ್ ಹಾಕುವೆ: ಡಿ.ಕೆ.ಶಿವಕುಮಾರ್
ಸರ್ಕಾರ ವಜಾಗೊಳಿಸಿ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಮೀಸಲಾತಿಯ ಅಸಾಂವಿಧಾನಿಕ ಪರಿಷ್ಕರಣೆ ಈ ನಾಡಿಗೆ ಎಸಗಿರುವ ದ್ರೋಹ. ಹೀಗಾಗಿ ಕೂಡಲೇ ರಾಜ್ಯ ಸರ್ಕಾರವನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು. ಬಿಜೆಪಿ ಸರ್ಕಾರ ಮೀಸಲಾತಿ ವಿಚಾರವಾಗಿ ಗೊಂದಲ ಸೃಷ್ಟಿಮಾಡಿ, ಸೇಡಿನ ರಾಜಕಾರಣ ಮಾಡಿ ಜನರನ್ನು ಧರ್ಮ, ಜಾತಿ ಆಧಾರದ ಮೇಲೆ ವಿಭಜನೆ ಮಾಡಲು ಮುಂದಾಗಿದೆ. ಜನರಿಗೆ ತಪ್ಪು ಮಾಹಿತಿ ನೀಡಿ ಮೋಸ ಮಾಡುವ ಪ್ರಯತ್ನವನ್ನು ಮಾಡಿದೆ. ಮೀಸಲಾತಿಯ ಹೊಸ ವರ್ಗೀಕರಣ ಮಾಡುವ ಮೂಲಕ ಬಿಜೆಪಿ ಸರ್ಕಾರ ನಾಡಿಗೆ ದ್ರೋಹ ಎಸಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣಾ ಗಿಮಿಕ್‌ಗಾಗಿ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳದ ನಾಟಕ ಮಾಡುತ್ತಿದ್ದಾರೆ. ಒಕ್ಕಲಿಗ, ಲಿಂಗಾಯತ ಮೀಸಲಾತಿ ಹೆಚ್ಚಳಕ್ಕೆ ಸಂವಿಧಾನಬಾಹಿರವಾಗಿ ಮುಸ್ಲಿಮರ ಮೀಸಲಾತಿ ರದ್ದುಪಡಿಸಿದ್ದಾರೆ. ಇದು ಜಾತಿ ಹಾಗೂ ಧರ್ಮಗಳ ನಡುವೆ ದ್ವೇಷ ಹುಟ್ಟಿಸುವ ಮೂಲಕ ಚುನಾವಣೆಯಲ್ಲಿ ಲಾಭ ಪಡೆಯುವ ಯತ್ನ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೇ 1995ರಿಂದ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲಾಗಿದೆ. ಇದನ್ನು ರದ್ದು ಮಾಡಿ ಎಂದು ಈವರೆಗೆ ಯಾವುದೇ ನ್ಯಾಯಾಲಯದ ತೀರ್ಪು ಬಂದಿಲ್ಲ, ಯಾವ ಸಮಿತಿಯ ವರದಿಗಳು ಬಂದಿಲ್ಲ. ಹೀಗಿರುವಾಗ ರಾಜ್ಯ ಸರ್ಕಾರ ಯಾಕೆ ಮುಸ್ಲಿಮರ ಮೀಸಲಾತಿ ರದ್ದು ಮಾಡಿದೆ. ಇದು ದ್ವೇಷದ ರಾಜಕಾರಣ ಎಂದರು.
ಬಳ್ಳಾರಿ ಗ್ರಾಮೀಣದಲ್ಲಿ ದೋಸ್ತಿಗಳ ನಡುವೆ ಕುಸ್ತಿ: ಕಾಂಗ್ರೆಸ್‌ನಿಂದ ಶಾಸಕ ನಾಗೇಂದ್ರಗೆ ಟಿಕೆಟ್
9ನೇ ಶೆಡ್ಯೂಲ್‌ಗೆ ಸೇರಿಸದೆ ಗಿಮಿಕ್: ಇನ್ನು ಒಕ್ಕಲಿಗರು ತಮ್ಮ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ 12% ಮೀಸಲಾತಿ ಕೇಳಿದ್ದರು, ಲಿಂಗಾಯತರು 15% ಮೀಸಲಾತಿ ಜತೆಗೆ ತಮ್ಮನ್ನು 2ಎ ಗೆ ಸೇರಿಸುವಂತೆ ಕೇಳಿದ್ದರು. 1992ರಲ್ಲಿ ಇಂದಿರಾ ಸಹಾನಿ ಪ್ರಕರಣದಲ್ಲಿ 9 ಮಂದಿ ನ್ಯಾಯಮೂರ್ತಿಗಳ ಪೀಠವು ಒಟ್ಟು ಮೀಸಲಾತಿ 50% ಮೀರಬಾರದು ಎಂದು ಹೇಳಿತ್ತು. ರಾಜ್ಯದಲ್ಲಿ ಈಗ ಮೀಸಲಾತಿ 50% ಇದೆ, ನ್ಯಾಯಾಲಯದ ಈ ತೀರ್ಪನ್ನು ಬದಲಾವಣೆ ಮಾಡಬೇಕಾದರೆ ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸಬೇಕು. ಇದ್ಯಾವುದನ್ನೂ ಮಾಡದೆ ಚುನಾವಣೆಗಾಗಿ ಗಿಮಿಕ್ ಮಾಡುತ್ತಿದ್ದಾರೆ ಎಂದು ದೂರಿದರು.