ಬಳ್ಳಾರಿ ಗ್ರಾಮೀಣದಲ್ಲಿ ದೋಸ್ತಿಗಳ ನಡುವೆ ಕುಸ್ತಿ: ಕಾಂಗ್ರೆಸ್‌ನಿಂದ ಶಾಸಕ ನಾಗೇಂದ್ರಗೆ ಟಿಕೆಟ್‌

Published : Mar 27, 2023, 10:15 AM IST
ಬಳ್ಳಾರಿ ಗ್ರಾಮೀಣದಲ್ಲಿ ದೋಸ್ತಿಗಳ ನಡುವೆ ಕುಸ್ತಿ: ಕಾಂಗ್ರೆಸ್‌ನಿಂದ ಶಾಸಕ ನಾಗೇಂದ್ರಗೆ ಟಿಕೆಟ್‌

ಸಾರಾಂಶ

ಈ ಬಾರಿ ತಾವು ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಘೋಷಣೆ ಮಾಡಿದ ಬಳಿಕ ಈ ಕ್ಷೇತ್ರ ಹೈವೋಲ್ಟೇಜ್‌ ಕದನಕ್ಕೆ ಸಾಕ್ಷಿಯಾಗಿದೆ. 

ಕೆ.ಎಂ. ಮಂಜುನಾಥ್‌

ಬಳ್ಳಾರಿ (ಮಾ.27): ಈ ಬಾರಿ ತಾವು ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಘೋಷಣೆ ಮಾಡಿದ ಬಳಿಕ ಈ ಕ್ಷೇತ್ರ ಹೈವೋಲ್ಟೇಜ್‌ ಕದನಕ್ಕೆ ಸಾಕ್ಷಿಯಾಗಿದೆ. 2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ಅಸ್ವಿತ್ವಕ್ಕೆ ಬಂದ ಈ ಕ್ಷೇತ್ರದ ಮತದಾರರು ಪಕ್ಷಕ್ಕಿಂತ ವ್ಯಕ್ತಿಗೆ ಹೆಚ್ಚು ಮನ್ನಣೆ ನೀಡಿದ್ದಾರೆ. ಇದು ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಕ್ಷೇತ್ರ. ಒಂದು ಕಾಲದಲ್ಲಿ ಜಿಲ್ಲೆಯಲ್ಲಿ ಕಮಲ ಅರಳಿಸಲು ಒಂದುಗೂಡಿ ಕೆಲಸ ಮಾಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹಾಗೂ ಗ್ರಾಮೀಣ ಕ್ಷೇತ್ರದ ಹಾಲಿ ಕಾಂಗ್ರೆಸ್‌ ಶಾಸಕ ಬಿ.ನಾಗೇಂದ್ರ, ಈ ಬಾರಿ ಚುನಾವಣಾ ಅಖಾಡದ ಸ್ಪರ್ಧಿಗಳು.

ಶ್ರೀರಾಮುಲು ಹಾಗೂ ನಾಗೇಂದ್ರ, ಒಂದು ಕಾಲದಲ್ಲಿ ಆಪ್ತ ಗೆಳೆಯರು. ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆಗೊಳ್ಳಲು ಈ ಇಬ್ಬರು ಸೇರಿ ಕೆಲಸ ಮಾಡಿದವರು. ಮಾಜಿ ಸಚಿವ ಜನಾರ್ದನ ರೆಡ್ಡಿ ಗರಡಿಯಲ್ಲಿಯೇ ಇಬ್ಬರೂ ಪಳಗಿದವರು. 2008ರಲ್ಲಿ ಕೂಡ್ಲಿಗಿಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ನಾಗೇಂದ್ರ ಗೆಲುವು ಪಡೆದರು. 2013ರಲ್ಲಿ ಕೂಡ್ಲಿಗಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಗೇಂದ್ರ ಗೆದ್ದರು. 2018ರಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿ ಜಯ ದಾಖಲಿಸಿದರು.

ಚಿತ್ರದುರ್ಗ‌ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ: ಸಚಿವ ಶ್ರೀರಾಮುಲು ವಿರುದ್ಧ ಬಿಜೆಪಿ ಮುಖಂಡರ ಆಕ್ರೋಶ

ಈ ಕ್ಷೇತ್ರದಿಂದ ಮೊದಲ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿ.ಶ್ರೀರಾಮುಲು ಗೆಲುವು ಸಾಧಿಸಿದರು. ಬಳಿಕ, ಬಿಜೆಪಿಯಿಂದ ಮುನಿಸಿಕೊಂಡು ಸ್ವಂತ ಪಕ್ಷ ಬಿಎಸ್‌ಆರ್‌ ಕಾಂಗ್ರೆಸ್‌ ಸ್ಥಾಪಿಸಿ 2013ರಲ್ಲಿ ಮತ್ತೆ ಇದೇ ಕ್ಷೇತ್ರದಿಂದ ಸ್ಪರ್ಧಿಸಿದರು. ಆಗಲೂ ಅವರಿಗೆ ಗೆಲುವು ಒಲಿಯಿತು. ಕಳೆದ ಚುನಾವಣೆಯಲ್ಲಿ ಗ್ರಾಮೀಣ ಕ್ಷೇತ್ರದಿಂದ ದೂರ ಉಳಿದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದಿಂದ ಶ್ರೀರಾಮುಲು ಸ್ಪರ್ಧಿಸಿ ಗೆಲುವು ಪಡೆದರೆ, ಈ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಅಖಾಡಕ್ಕಿಳಿದ ಬಿ.ನಾಗೇಂದ್ರ ಅವರು ಬಿಜೆಪಿ ಅಭ್ಯರ್ಥಿ ವಿರುದ್ಧ ಜಯ ದಾಖಲಿಸಿದರು.

ಹಾಲಿ ಶಾಸಕ ನಾಗೇಂದ್ರಗೆ ಈ ಬಾರಿಯೂ ಕಾಂಗ್ರೆಸ್‌, ಟಿಕೆಟ್‌ ನೀಡಿದೆ. ಇನ್ನು, ಬಿಜೆಪಿಯಲ್ಲಿ ಸಚಿವ ಶ್ರೀರಾಮುಲು ಹೊರತುಪಡಿಸಿದರೆ ಸ್ಪರ್ಧಿಸಲು ಆಸ್ಥೆ ವಹಿಸಿದ ಆಕಾಂಕ್ಷಿಗಳು ಈವರೆಗೆ ಕಂಡು ಬಂದಿಲ್ಲ. ಕೊನೆ ಗಳಿಗೆಯಲ್ಲಿ ಜೆಡಿಎಸ್‌ ಇಲ್ಲಿ ಸ್ಪರ್ಧಿಸಿದರೂ ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬಂತಾಗುತ್ತದೆ ಎಂದು ಕ್ಷೇತ್ರದ ಮತದಾರರೇ ಮಾತನಾಡುತ್ತಿದ್ದಾರೆ. ಈವರೆಗೆ ಗ್ರಾಮೀಣ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್‌ ಸಂಘಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿಲ್ಲ. ಹೀಗಾಗಿ, ಈ ಬಾರಿಯೂ ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿ ನಡುವೆ ನೇರ ಸ್ಪರ್ಧೆ ನಡೆಯುವುದು ಖಚಿತ. ನಾಗೇಂದ್ರ ಹಾಗೂ ಶ್ರೀರಾಮುಲು ಇಬ್ಬರೂ ಕ್ಷೇತ್ರದಲ್ಲಿ ಬಿಗಿ ಹಿಡಿತ ಹೊಂದಿದ್ದು, ಯಾರು ಗೆದ್ದರೂ ಕೆಲವೇ ಮತಗಳ ಅಂತರದಲ್ಲಿ ಮಾತ್ರ ಎಂಬ ಮಾತು ಕ್ಷೇತ್ರದಲ್ಲೀಗ ಚಾಲ್ತಿಯಲ್ಲಿದೆ.

ಕ್ಷೇತ್ರದ ಹಿನ್ನಲೆ: 2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ಅಸ್ತಿತ್ವಕ್ಕೆ ಬಂದ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಈವರೆಗೆ ಮೂರು ಚುನಾವಣೆಗಳನ್ನು ಕಂಡಿದೆ. 2008ರಲ್ಲಿ ಬಿಜೆಪಿಯಿಂದ ಶ್ರೀರಾಮುಲು, 2013ರಲ್ಲಿ ಬಿಎಸ್‌ಆರ್‌ ಕಾಂಗ್ರೆಸ್‌ನಿಂದ ಶ್ರೀರಾಮುಲು, 2018ರಲ್ಲಿ ಕಾಂಗ್ರೆಸ್‌ನಿಂದ ಬಿ. ನಾಗೇಂದ್ರ ಗೆಲುವು ಸಾಧಿಸಿದ್ದಾರೆ.

ಕೇಂದ್ರದಿಂದ ಹೈದರಾಬಾದ್‌ ಮುಕ್ತಿ ದಿನಾಚರಣೆ: ಅಮಿತ್‌ ಶಾ

ಜಾತಿ ಲೆಕ್ಕಾಚಾರ: ಕ್ಷೇತ್ರದಲ್ಲಿ ಒಟ್ಟು 2,31,666 ಮತದಾರರಿದ್ದಾರೆ. ಆ ಪೈಕಿ, ಪರಿಶಿಷ್ಟ ಪಂಗಡದವರು 71 ಸಾವಿರ, ಪರಿಶಿಷ್ಟ ಜಾತಿಯವರು 36 ಸಾವಿರ, ಲಿಂಗಾಯತರು 32 ಸಾವಿರ, ಮುಸ್ಲಿಮರು 46 ಸಾವಿರ ಹಾಗೂ ಇತರ ಸಮುದಾಯದವರು 44 ಸಾವಿರ ಇದ್ದಾರೆ. ಅಹಿಂದ ಮತಗಳೇ ಇಲ್ಲಿ ನಿರ್ಣಾಯಕ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೆ.ಎಸ್. ಈಶ್ವರಪ್ಪ ಬಿಜೆಪಿ ವಾಪಸಾತಿ, ನನ್ನ ಮನಸ್ಸಲ್ಲೂ ಇದೆ ಬಸನಗೌಡ ಯತ್ನಾಳ್ ಮನಸ್ಸಲ್ಲೂ ಇದೆ ಅಂದ್ರು!
ಚಾಮರಾಜ ಕ್ಷೇತ್ರಕ್ಕೆ ಉಪಕಾರ ಮಾಡದಿದ್ದರೂ ಪರವಾಗಿಲ್ಲ, ಉಪದ್ರ ನೀಡುವ ಜನಪ್ರತಿನಿಧಿ ಬೇಡ, ನಾನು ಆಕ್ಷಾಂಕ್ಷಿ:ಪ್ರತಾಪ್ ಸಿಂಹ