ಮಧುಬಂಗಾರಪ್ಪ ಜತೆಗೆ ಡಾ.ರಾಜ್​ಕುಮಾರ್ ಹಿರಿ ಸೊಸೆ ಕಾಂಗ್ರೆಸ್‌ಗೆ...!

By Suvarna NewsFirst Published Mar 12, 2021, 4:33 PM IST
Highlights

ಮಧು ಬಂಗಾರಪ್ಪ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವುದು ಪಕ್ಕಾ ಆಗಿದೆ. ಇವರ ಜೊತೆ ಡಾ.ರಾಜ್​ಕುಮಾರ್ ಹಿರಿ ಸೊಸೆ ಕೂಡ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು, (ಮಾ. 12): ಶಿವಮೊಗ್ಗದ ಸೊರಬ ಕ್ಷೇತ್ರದ ಮಾಜಿ ಶಾಸಕ, ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದರು.

ಇಂದು (ಶುಕ್ರವಾರ) ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಶುಕ್ರವಾರ ಬೆಳಗ್ಗೆ ಭೇಟಿ ಮಾಡಿ, ಕಾಂಗ್ರೆಸ್ ಸೇರ್ಪಡೆ ಸಂಬಂಧ ಸಮಾಲೋಚನೆ ನಡೆಸಿದರು.

ಸದ್ಯ ಜೆಡಿಎಸ್ ಪಕ್ಷದ ಕಾರ್ಯಾಧ್ಯಕ್ಷರಾಗಿರುವ ಮಧು ಬಂಗಾರಪ್ಪ ಅವರು ಕಾಂಗ್ರೆಸ್ ಸೇರ್ಪಡೆ ಕುರಿತು ಕೆಪಿಸಿಸಿ ಅಧ್ಯಕ್ಷರ ಜತೆ ಮಾತುಕತೆ ನಡೆಸಿದರು. ಮಧು ಬಂಗಾರಪ್ಪ ಗುರುವಾರವಷ್ಟೇ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದರು. ಇನ್ನು ಮಧುಬಂಗಾರಪ್ಪನವರ ಜೊತೆ ಗೀತಾ ಶಿವರಾಜ್ ಕುಮಾರ್‌ ಸಹ ಕಾಂಗ್ರೆಸ್ ಸೇರಲಿದ್ದಾರೆ ಎಂದು ತಿಳಿದುಬಂದಿದೆ.

ಸಿದ್ದು ಭೇಟಿ ಮಾಡಿದ ಮಧು,  ದಳಕ್ಕೆ ಗುಡ್ ಬೈ, ಕಾಂಗ್ರೆಸ್‌ಗೆ ಜೈ ಜೈ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಧುಬಂಗಾರಪ್ಪ, ತಮ್ಮ ಸಹೋದರಿ ಗೀತಾ ಶಿವರಾಜ್‍ಕುಮಾರ್ ಅವರು ಕೂಡ ಕಾಂಗ್ರೆಸ್‍ಗೆ ಸೇರಲು ಸಿದ್ದರಿದ್ದಾರೆ. ಅಂತಿಮ ಸುತ್ತಿನ ಚರ್ಚೆಯ ಬಳಿಕ ಅಧಿಕೃತವಾಗಿ ಪ್ರಕಟಣೆ ಮಾಡುವುದಾಗಿ ಸ್ಪಷ್ಟಪಡಿಸಿದರು.

ಒಂದು ವರ್ಷ ಕಾಲ ನಿರ್ಧಾರ ತೆಗೆದುಕೊಳ್ಳಲು ಸಾಕಷ್ಟು ಯೋಚಿಸಿದ್ದೇನೆ. ನಿನ್ನೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೇನೆ. ಇಂದು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ನಿನ್ನೆಯಿಂದಲೇ ಕಾಂಗ್ರೆಸ್ ಕಾರ್ಯಕರ್ತನಾಗಿ ಕೆಲಸ ಆರಂಭಿಸಿದ್ದೇನೆ. ಯಾರಾದರು ಗೊಂದಲದಲ್ಲಿ ನೀವೀಗಾ ಯಾವ ಪಕ್ಷದಲ್ಲಿದ್ದೀರಿ ಎಂದು ಪ್ರಶ್ನೆ ಮಾಡಿದರೆ ನನಗೆ ಮುಜುಗರವಾಗುತ್ತದೆ ಎಂದು ಹೇಳಿದರು.

ತಮ್ಮ ಸಹೋದರಿ ಗೀತಾ ಶಿವರಾಜ್‍ಕುಮಾರ್ ಅವರ ಜತೆಯೂ ಮಾತುಕತೆ ನಡೆಸಿದ್ದೇನೆ. ಅವರು ಕಾಂಗ್ರೆಸ್ ಸೇರ್ಪಡೆ ಯಾಗಲು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಹೇಳುತ್ತಿದ್ದಂತೆ ಮಧ್ಯ ಪ್ರವೇಶ ಮಾಡಿದ ಡಿ.ಕೆ.ಶಿವಕುಮಾರ್, ಗೀತಾ ಶಿವರಾಜ್‍ಕುಮಾರ್ ಅವರು ಅತ್ಯಂತ ಗೌರವಾನ್ವಿತ ಹೆಣ್ಣುಮಗಳು.

ನಾವು ಅವರನ್ನು ತುಂಬಾ ಗೌರವದಿಂದಲೇ ನಡೆಸಿಕೊಳ್ಳಬೇಕು. ಎಲ್ಲಾ ಚರ್ಚೆಗಳು ಪೂರ್ಣಗೊಂಡ ನಂತರ ಅಂತಿಮ ಹಂತದಲ್ಲಿ ಅಕೃತ ಪ್ರಕಟಣೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರ ಪತ್ನಿ ಗೀತಾ ಅವರು ಈ ಮೊದಲು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಚುನಾವಣೆ ಬಳಿಕ ಅವರು ರಾಜಕೀಯವಾಗಿ ಕಾಣಿಸಿಕೊಳ್ಳದೆ ತಟಸ್ಥವಾಗಿ ಉಳಿದಿದ್ದರು. ಈಗ ಮಧುಬಂಗಾರಪ್ಪ ಅವರ ಹೇಳಿಕೆಯ ಪ್ರಕಾರ ಗೀತಾ ಶಿವರಾಜ್‍ಕುಮಾರ್ ಅವರು ಕಾಂಗ್ರೆಸ್‍ನತ್ತ ಮುಖ ಮಾಡಿದ್ದಾರೆ ಎಂಬ ಮಾಹಿತಿ ಇದೆ.

click me!