ಕೇಂದ್ರ ಮತ್ತು ರಾಜ್ಯದಲ್ಲಿ ನಾವೇ ಬಲಿಷ್ಠರು, ಡಬಲ್ ಎಂಜಿನ್ ಸರ್ಕಾರ ಎಂದವರನ್ನು ಕಿತ್ತೆಸೆದು ಮತ್ತೆ ಕಾಂಗ್ರೆಸ್‌ಗೆ ಆಶೀರ್ವಾದ ಮಾಡಿದ್ದೀರಿ. ಯಾವುದೇ ಕಾರಣಕ್ಕೂ ಮಾತು ತಪ್ಪದೇ ಎಲ್ಲಾ ಐದು ಗ್ಯಾರಂಟಿ ಯೋಜನೆಗಳನ್ನು ಈಡೇರಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ.
ಬೆಂಗಳೂರು (ಜೂ.12): ಕೇಂದ್ರ ಮತ್ತು ರಾಜ್ಯದಲ್ಲಿ ನಾವೇ ಬಲಿಷ್ಠರು, ಡಬಲ್ ಎಂಜಿನ್ ಸರ್ಕಾರ ಎಂದವರನ್ನು ಕಿತ್ತೆಸೆದು ಮತ್ತೆ ಕಾಂಗ್ರೆಸ್‌ಗೆ ಆಶೀರ್ವಾದ ಮಾಡಿದ್ದೀರಿ. ಯಾವುದೇ ಕಾರಣಕ್ಕೂ ಮಾತು ತಪ್ಪದೇ ಎಲ್ಲಾ ಐದು ಗ್ಯಾರಂಟಿ ಯೋಜನೆಗಳನ್ನು ಈಡೇರಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ. ಭಾನುವಾರ ವಿಧಾನಸೌಧದ ಪೂರ್ವದ್ವಾರದ ಮುಂಭಾಗ ಆಯೋಜಿಸಿದ್ದ ಶಕ್ತಿ ಯೋಜನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಕ್ತಿ ಯೋಜನೆ ಮಹಿಳೆಯರಿಗೆ ಶಕ್ತಿ ತುಂಬುವ ಯೋಜನೆ ಹೆಣ್ಣು ಶಕ್ತಿಯ ಪ್ರತಿರೂಪ ಎಂದು ಈ ಶಕ್ತಿ ಯೋಜನೆ ಜಾರಿಗೆ ತಂದಿದ್ದೇವೆ. ಮಹಿಳೆಯರು ರಾಜ್ಯದ ಎಲ್ಲಿಗೆ ಬೇಕಾದರೂ ಶೂನ್ಯ ದರದ ಟಿಕೆಟ್ ಪಡೆದು ಪ್ರಯಾಣಿಸಬಹುದು ಎಂದರು.
‘ದೀಪಂಜ್ಯೋತಿ ಕರಂಜ್ಯೋತಿ ಆರೋಗ್ಯ ಧನ ಸಂಪದಂ’ ಎಂದು ಹೇಳಿ ದೀಪವನ್ನು ಬೆಳಗಿಸುವುದರ ಮೂಲಕ ಈ ರಾಜ್ಯದ ಅಂಧಕಾರವನ್ನು ತೊಲಗಿಸುವ ಕೆಲಸಕ್ಕೆ ಮುನ್ನುಡಿ ಬರೆದಿದ್ದೇವೆ. ಪರಿಶುದ್ಧವಾದ ಆಡಳಿತ ನೀಡಲು ನಾವು ಸನ್ನದ್ದರಾಗಿದ್ದೇವೆ. ವಿರೋಧ ಪಕ್ಷಗಳು ನಾನಾ ರೀತಿಯಲ್ಲಿ ಟೀಕೆ ಮಾಡುತ್ತಿವೆ. ನಮಗೆ ಆ ಟೀಕೆಗಳಿಗೆಲ್ಲ ಉತ್ತರ ಕೊಡುವುದಕ್ಕೆ ಸಮಯವಿಲ್ಲ, ನಮ್ಮ ಕೈಲಿ ಆಗೋದು ಇಲ್ಲ. ಏಕೆಂದರೆ ಉತ್ತಮ ಆಡಳಿತದ ಭವಿಷ್ಯ ನಮ್ಮ ಮುಂದಿದೆ, ಉತ್ತರ ಕೊಡುತ್ತಾ ಹೋದರೆ ಕೆಲಸ ಮಾಡೋಕೆ ಸಮಯವೇ ಇರುವುದಿಲ್ಲ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತನ್ನು ವಿರೋಧಪಕ್ಷಗಳು ನೆನಪಿಟ್ಟುಕೊಳ್ಳಬೇಕು ಎಂದು ಹೇಳಿದರು.
10 ವರ್ಷ ಮಹಿಳೆಯರಿಗೆ ಉಚಿತ ಪ್ರಯಾಣ: ಸಚಿವ ರಾಮಲಿಂಗಾರೆಡ್ಡಿ
ಮ.ಪ್ರ. ಸ್ಕೀಂ ನಮ್ಮ ಕಾಪಿ: ಬಿಜೆಪಿಯವರು ಕಾಂಗ್ರೆಸ್ ನಾಯಕರಿಗೆ ಕಣ್ಣಿಲ್ಲ, ಕಿವಿಯಿಲ್ಲ ಎಂದುಕೊಂಡಿದ್ದಾರೆ. ನಮ್ಮ ರಾಷ್ಟ್ರೀಯ ನಾಯಕಿಯಾದ ಪ್ರಿಯಾಂಕ ಗಾಂಧಿ ಅವರು ಜನವರಿ 15ನೇ ತಾರೀಖಿನಂದು ನಾ ನಾಯಕಿ ಕಾರ್ಯಕ್ರಮದಲ್ಲಿ ಗೃಹಲಕ್ಷ್ಮೀ ಯೋಜನೆ ಘೋಷಣೆ ಮಾಡಿದ್ದರು. ಇದೇ ಯೋಜನೆಯನ್ನು ಮಧ್ಯಪ್ರದೇಶದಲ್ಲಿ ಬಿಜೆಪಿಯವರು ಕಾಪಿ ಮಾಡಿ ಮಹಿಳೆಯರಿಗೆ 1 ಸಾವಿರ ಕೊಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ. ಆದರೆ ಇಲ್ಲಿ 2 ಸಾವಿರ ಕೊಟ್ಟರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಕೂಗಾಡುತ್ತಿದ್ದಾರೆ. ಡಬಲ್ ಎಂಜಿನ್ ಅಲ್ಲ. ಡಬಲ್ ನಿಲುವಿನ ಪಕ್ಷ ಎಂದರೆ ಬಿಜೆಪಿ ಎಂದರು.
ಶಕ್ತಿ ಇಲ್ಲದ ಅಶಕ್ತ ಜನರಿಗೆ ಶಕ್ತಿ ಕೊಡಬೇಕು ಎನ್ನುವುದು ನಮ್ಮ ಧ್ಯೇಯ: ಸಿದ್ದರಾಮಯ್ಯ
ಒಂದು ದೇಶ ಅರ್ಥ ಆಗಬೇಕು ಅಂದರೆ ಆ ದೇಶದ ಮಹಿಳೆಯರ ಸ್ಥಿತಿಗತಿ ಹೇಗಿದೆ ಎಂದು ತಿಳಿದುಕೊಂಡರೆ ಸಾಕು. ನಮ್ಮ ರಾಜ್ಯದ ಮಹಿಳೆಯರ ಸ್ಥಿತಿ ಉತ್ತಮಗೊಳಿಸಲು ರಾಜ್ಯ ಸರ್ಕಾರ ಟೊಂಕಕಟ್ಟಿನಿಂತಿದೆ. ಕಾಂಗ್ರೆಸ್ ಚುನಾವಣೆ ಹೊತ್ತಿನಲ್ಲಿ ಘೊಷಣೆ ಮಾಡಿದ ಗ್ಯಾರಂಟಿಗಳಲ್ಲಿ ಇದು ಕೊನೆಯ ಗ್ಯಾರಂಟಿ. ಇದನ್ನು ರಾಹುಲ್ ಗಾಂಧಿ ಅವರು ಮಂಗಳೂರಿನಲ್ಲಿ ಘೋಷಿಸಿದ್ದರು. ಇದೇ ಗ್ಯಾರಂಟಿಯನ್ನ ಮೊಟ್ಟಮೊದಲನೆಯದಾಗಿ ನಮ್ಮ ರಾಜ್ಯದ ಮಹಿಳೆಯರ ಅನುಕೂಲಕ್ಕೆ ಜಾರಿಗೆ ತಂದಿದ್ದೇವೆ ಎಂದು ತಿಳಿಸಿದರು.