ಹಾಲುಮತಶ್ರೀಗೆ ಅಗೌರವ: ತಪ್ಪು ಮಾಡಿಲ್ಲ, ಕ್ಷಮೆ ಕೇಳಲ್ಲ: ಮಾಧುಸ್ವಾಮಿ ಪಟ್ಟು!

By Web DeskFirst Published Nov 20, 2019, 7:59 AM IST
Highlights

ಸಚಿವ ಮಾಧುಸ್ವಾಮಿಗೆ ಸಿಎಂ ತರಾಟೆ| ಹಾಲುಮತಶ್ರೀಗೆ ಅಗೌರವ ವಿವಾದ| ಚುನಾವಣಾ ಸಮಯದಲ್ಲಿ ಬೇಕಿತ್ತಾ?| ಸ್ಪಷ್ಟನೆ ನೀಡಿ: ಸಿಎಂ ಸೂಚನೆ| ತಪ್ಪು ಮಾಡಿಲ್ಲ, ಕ್ಷಮೆ ಕೇಳಲ್ಲ: ಮಾಧುಸ್ವಾಮಿ

ಬೆಂಗಳೂರು[ನ.20]: ಹಾಲುಮತದ ಸ್ವಾಮೀಜಿಗೆ ಅಗೌರವ ತೋರಿದ್ದಾರೆ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಚುನಾವಣಾ ಸಮಯದಲ್ಲಿ ಇಂಥ ವಿವಾದಗಳು ಬೇಕಾಗಿರಲಿಲ್ಲ. ಇಂಥವನ್ನು ಅಲ್ಲಲ್ಲೇ ಶಮನಗೊಳ್ಳುವಂತೆ ನೋಡಿಕೊಳ್ಳಬೇಕು. ಮೇಲಾಗಿ ಯಾವುದೇ ಸಮುದಾಯ ಅಥವಾ ಸ್ವಾಮೀಜಿಗಳಿರಲಿ, ಅವರಿಗೆ ಅಗೌರವದಿಂದ ಮಾತನಾಡುವುದನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ. ಮೊದಲು ಈ ವಿವಾದಕ್ಕೆ ಸ್ಪಷ್ಟೀಕರಣ ಕೊಡಿ ಎಂದು ಸೂಚಿಸಿದರು ಎನ್ನಲಾಗಿದೆ.

ಕನಕ ಶ್ರೀಗಳಿಗೆ ಮಾಧುಸ್ವಾಮಿ ಅವಹೇಳನ: ಬೈ ಎಲೆಕ್ಷನ್ ಹೊತ್ತಲ್ಲಿ ಭುಗಿಲೆದ್ದ ಆಕ್ರೋಶ

ಏತನ್ಮಧ್ಯೆ, ‘ನಾನು ಯಾವುದೇ ಸ್ವಾಮೀಜಿ ವಿರುದ್ಧ ಏಕವಚನದಲ್ಲಿ ಮಾತನಾಡಿಲ್ಲ. ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ’ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನಕ ವೃತ್ತ ಎಂದು ನಾಮಕರಣ ಮಾಡುವುದಕ್ಕೆ ನನ್ನ ತಕರಾರು ಇಲ್ಲ. ಯಾವುದೇ ಸ್ವಾಮೀಜಿ ಇರಲಿ, ನಾನು ಎಲ್ಲರನ್ನೂ ಗೌರವದಿಂದ ನೋಡುವವನು. ಸ್ವಾಮೀಜಿಗಳನ್ನು ಏಕವಚನದಲ್ಲಿ ಮಾತನಾಡಿಸಿಲ್ಲ. ಚರ್ಚೆ ಕೊನೆಯಲ್ಲಿ ಒರಟಾಗಿ ಮಾತಾಡಿದ್ದೆ ಅಷ್ಟೇ. ಬಸವಣ್ಣನವರ ಹೆಸರು ಇಡಿ ಅಂದಾಗ ನಿಮ್ಮ ಉಪಕಾರ ಬೇಡ ಅಂತ ಹೇಳಿದ್ದೆ. ಅದನ್ನು ಈಗಲೂ ಹೇಳುತ್ತೇನೆ ಎಂದರು.

ಹುಳಿಯಾರ್‌ ಪಟ್ಟಣದಲ್ಲಿ ವಿವಾದಕ್ಕೆ ಒಳಗಾಗಲು ಇಷ್ಟಇಲ್ಲ ಅಂದೆ. ನಾನು ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿಲ್ಲ. ಆದರೂ ಪದೇ ಪದೇ ದೂರವಾಣಿ ಕರೆ ಮಾಡಿ ತುಂಬಾ ಕಿರಿಕಿರಿ ಮಾಡುತ್ತಿದ್ದಾರೆ. ಮನಸ್ಸಿಗೆ ತುಂಬಾ ನೋವಾಗಿದೆ. ಸಿದ್ದಗಂಗಾ ಮಠದ ದಿವಂಗತ ಶಿವಕುಮಾರ ಸ್ವಾಮೀಜಿಗಳನ್ನು ವಿವಾದಕ್ಕೆ ಎಳೆಯುವುದಕ್ಕೆ ಇಷ್ಟವಿಲ್ಲ. ನಾನು ಯಾವುದೇ ಸಮುದಾಯದ ಹೆಸರನ್ನೂ ಪ್ರಸ್ತಾಪ ಮಾಡಿಲ್ಲ ಎಂದು ಸಮಜಾಯಿಷಿ ನೀಡಿದರು.

ಮತ್ತೆ ಉಡಾಫೆ ಮಾತು: ಮಾಧುಸ್ವಾಮಿ ಮಂತ್ರಿ ಆದ್ಮೇಲೆ ಮಾತಿನ ವರಸೆ ಬದಲಾಯ್ತು ಅಲ್ವೇ..?

ನಾನು ಶಿವಕುಮಾರ ಸ್ವಾಮೀಜಿಗಳ ಅಡಿ ಬೆಳೆದವನು. ಕಾವಿ ಹಾಕಿರುವ ಎಲ್ಲಾ ಸ್ವಾಮೀಜಿಗಳಿಗೆ ಗೌರವ ಕೊಡುತ್ತೇನೆ. ನಾನು ಕಾನೂನು ಮೀರಿ ಏನನ್ನೂ ಮಾಡುವುದಿಲ್ಲ. ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ. ನಾನು ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಅಂಗಿ ಬಿಚ್ಚಿ ಒಳಗೆ ಹೋದಾಗ ಕೊರಳಲ್ಲಿ ಕರಡಿಗೆ ಇಲ್ಲದ್ದನ್ನು ನೋಡಿ ಇವನು ವೀರಶೈವನೇ ಅಲ್ಲ ಎಂಬುದಾಗಿ ಕೆಲವರು ಟೀಕೆ ಮಾಡಿದರು ಎಂದೂ ಮಾಧುಸ್ವಾಮಿ ಪ್ರಸ್ತಾಪಿಸಿದರು.

click me!