ಕಾಂಗ್ರೆಸ್ ತೊರೆದು ಬಿಜೆಪಿ ಹಿಡಿದಿದ್ದ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆಗೆ ರಾಜ್ಯ ಸರ್ಕಾರದ ಗಿಫ್ಟ್/ ಕೊನೆಗೂ ಹುದ್ದೆ ನೀಡಿದ ಸರ್ಕಾರ/ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಕ
ಬೆಂಗಳೂರು(ನ. 23) ಕಳೆದ ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಉಡುಪಿ-ಚಿಕ್ಕಮಗಳೂರು ಮಾಜಿ ಸಂಸದ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಅವರಿಗೆ ಕೊನೆಗೂ ರಾಜ್ಯ ಸರ್ಕಾರ ಗಿಫ್ಟ್ ನೀಡಿದೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ಹೆಗ್ಡೆ ಅವರನ್ನು ನೇಮಕ ಮಾಡಲಾಗಿದೆ.
ಹೆಗ್ಡೆ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಜಯಪ್ರಕಾಶ್ ಅವರಿಗೆ ಉಡುಪಿ-ಚಿಕ್ಕಮಗಳೂರು ಸಂಸದ ಸ್ಥಾನಕ್ಕೆ ಟಿಕೆಟ್ ನೀಡಲಾಗುತ್ತದೆ ಎಂಬ ನಿರೀಕ್ಷೆಗಳಿದ್ದವು. ಆದರೆ ಬದಲಾದ ರಾಜಕಾರಣದಲ್ಲಿ ಶೋಭಾ ಕರಂದ್ಲಾಜೆ ಟಿಕೆಟ್ ಪಡೆದುಕೊಂಡು ಗೆದ್ದು ಬಂದಿದ್ದರು.
'ಇಲ್ಲಿಯೂ ಬಿಜೆಪಿಗೆ ಸಿಗಲಿದೆ ಆಶೀರ್ವಾದ'
ಜಯಪ್ರಕಾಶ್ ಹೆಗ್ಡೆ ಅವರು ಸಚಿವರಾಗಿ, ಶಾಸಕರಾಗಿ, ಸಂಸದರಾಗಿ ರಾಜ್ಯ ರಾಜಕಾರಣದ ಜೊತೆ ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದ ಪ್ರಭಾವಿ ರಾಜಕಾರಣಿ. ಅದ್ರಲ್ಲೂ ಕರಾವಳಿ ಹಾಗೂ ಮಲೆನಾಡು ಎರಡು ಭಾಗದಲ್ಲಿಯೂ ತನ್ನದೇ ಅಭಿಮಾನಿ ಬಳಗ ಹೊಂದಿದ್ದಾರೆ. ಜೆಎಚ್ ಪಟೇಲ್ ಮುಖ್ಯಮಂತ್ರಿಯಾದ ಸಂದರ್ಭದಲ್ಲಿಯೂ ಗೆದ್ದು ಶಾಸಕರಾಗಿ ಸಚಿವರಾಗಿದ್ದರು.
ಕಾಂಗ್ರೆಸ್ ತೊರೆದು ಕಮಲ ಹಿಡಿದು ಹೆಗ್ಡೆ ತಪ್ಪು ಮಾಡಿದ್ರಾ? ಎಂದು ಅಭಿಮಾನಿಗಳು, ಬೆಂಬಲಿಗರು ಪ್ರಶ್ನೆ ಮಾಡಿದ್ದರು. ಕೊನೆಗೂ ರಾಜ್ಯ ಸರ್ಕಾರ ಅವರಿಗೆ ಒಂದು ಹುದ್ದೆ ನೀಡಿದೆ.