ಸಿಎಂ, ಡಿಸಿಎಂ ಹುದ್ದೆ ಕೇಳೋರ ನಾಯಕತ್ವದಲ್ಲಿ ಎಲೆಕ್ಷನ್‌ ಗೆಲ್ಲಲಿ: ಡಿ.ಕೆ. ಸುರೇಶ್‌

By Kannadaprabha News  |  First Published Jun 30, 2024, 8:58 AM IST

ಈಗ ಉಪಮುಖ್ಯಮಂತ್ರಿ ಸ್ಥಾನ ಬೇಕು ಎಂದಾದರೆ ಈಗ ಮಾತನಾಡುತ್ತಿರುವವರು ಅವರದ್ದೇ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿ. ಜನರು ಅದಕ್ಕೂ ತೀರ್ಪು ನೀಡುತ್ತಾರೆ. ಸರ್ಕಾರ ರಚನೆಯಷ್ಟು ಸ್ಥಾನ ಬಂದರೆ ಡಿಸಿಎಂ ಅಲ್ಲದೆ ಸಿಎಂ ಕೂಡ ಆಗಲಿ: ಮಾಜಿ ಸಂಸದ ಡಿ.ಕೆ. ಸುರೇಶ್‌ 


ಬೆಂಗಳೂರು(ಜೂ.30):  ‘ಅಧಿಕಾರದ ಆಸೆಯಿದ್ದವರು ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸಿ, ಪಕ್ಷವನ್ನು ಅಧಿಕಾರಕ್ಕೆ ತಂದು ಸಿಎಂ ಮತ್ತು ಡಿಸಿಎಂ ಆಗಲಿ. ಇಲ್ಲದಿದ್ದರೆ ಜನರು ನೀಡಿರುವ ಅವಕಾಶವನ್ನು ಬಳಸಿ ಅಭಿವೃದ್ಧಿ ಪರ ಆಡಳಿತ ನಡೆಸುವತ್ತ ಗಮನಹರಿಸಲಿ’ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ‘ಈಗ ಉಪಮುಖ್ಯಮಂತ್ರಿ ಸ್ಥಾನ ಬೇಕು ಎಂದಾದರೆ ಈಗ ಮಾತನಾಡುತ್ತಿರುವವರು ಅವರದ್ದೇ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿ. ಜನರು ಅದಕ್ಕೂ ತೀರ್ಪು ನೀಡುತ್ತಾರೆ. ಸರ್ಕಾರ ರಚನೆಯಷ್ಟು ಸ್ಥಾನ ಬಂದರೆ ಡಿಸಿಎಂ ಅಲ್ಲದೆ ಸಿಎಂ ಕೂಡ ಆಗಲಿ. ಹಿಂದೆ ರಾಮಕೃಷ್ಣ ಹೆಗಡೆ ಅವರು ಸ್ಥಾನಗಳು ಕಡಿಮೆ ಬಂದಾಗ ಸರ್ಕಾರವನ್ನು ವಿಸರ್ಜಿಸಿ ಚುನಾವಣೆಗೆ ಹೋಗಿದ್ದರು. ಈಗಲೂ ಹಾಗೆಯೇ ಮಾಡಿ, ಚುನಾವಣೆ ನಡೆಸಿ ಸರ್ಕಾರ ರಚಿಸಿಕೊಳ್ಳಲಿ’ ಎಂದು ಡಿ.ಕೆ. ಸುರೇಶ್‌ ಹೇಳಿದರು.

Latest Videos

undefined

ನಾನು ಸೋತಿರಬಹುದು, ಸತ್ತಿಲ್ಲ, ಸೋಲನ್ನು ಸವಾಲಾಗಿ ಸ್ವೀಕರಿಸುವೆ: ಡಿ.ಕೆ. ಸುರೇಶ್

ಸಿಎಂ ಎಲ್ಲರನ್ನೂ ಡಿಸಿಎಂ ಮಾಡಲಿ:

‘ಶಾಸಕರು ಕ್ಷೇತ್ರದ ಅಭಿವೃದ್ಧಿಗೆ, ಸಚಿವರು ರಾಜ್ಯದ ಅಭಿವೃದ್ದಿಗೆ ಕೆಲಸ ಮಾಡಲಿದೆ. ಪ್ರತಿನಿತ್ಯ ಇಲ್ಲಸಲ್ಲದ ಮಾತುಗಳನ್ನಾಡುವುದನ್ನು ಬಿಡಲಿ. ಎಲ್ಲ 35 ಸಚಿವರನ್ನೂ ಉಪಮುಖ್ಯಮಂತ್ರಿಗಳನ್ನಾಗಿ ಮಾಡಲು ಮುಖ್ಯಮಂತ್ರಿಗಳಿಗೆ ಪರಮಾಧಿಕಾರವಿದೆ. ಅದಕ್ಕೆ ಯಾವುದೇ ಅಡೆತಡೆಯಿಲ್ಲ. ಉಪಮುಖ್ಯಮಂತ್ರಿ ಹುದ್ದೆಗೆ ಸಂವಿಧಾನ ಮಾನ್ಯತೆಯೂ ಇಲ್ಲ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಲಿ’ ಎಂದು ಡಿ.ಕೆ. ಸುರೇಶ್‌ ಹೇಳಿದರು.

ಕ್ಷೇತ್ರ ಮತ್ತು ರಾಜ್ಯದ ಅಭಿವೃದ್ಧಿ, ಉತ್ತಮ ಆಡಳಿತ ನಡೆಸುವ ಭರವಸೆ ನೀಡಿ ಚುನಾವಣೆ ಎದುರಿಸಲಾಗಿತ್ತು. ಅಲ್ಲದೆ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರಿಗೆ ಚುನಾವಣೆ ನಾಯಕತ್ವ ವಹಿಸಲಾಗಿತ್ತು. ಅವರ ಹೋರಾಟ, ಓಡಾಟ ಮಾಡಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸಿದ್ದರ ಫಲವಾಗಿ ಕಾಂಗ್ರೆಸ್‌ಗೆ ಜನರು ಅಧಿಕಾರ ನೀಡಿದ್ದಾರೆ.

ಸ್ವಾಮೀಜಿ ಮಾತನಾಡಬಾರದೇಕೆ?: ಡಿಕೆಸು

ಡಿ.ಕೆ. ಶಿವಕುಮಾರ್‌ ಅವರನ್ನು ಸಿಎಂ ಆಗಿಸಲು ಚಂದ್ರಶೇಖರ ಸ್ವಾಮೀಜಿ ಅವರು ಕಾಂಗ್ರೆಸ್‌ ಹೈಕಮಾಂಡ್‌ಗೆ ಪತ್ರ ಬರೆಯುತ್ತೇನೆ ಎಂದಿರುವ ಬಗ್ಗೆ ಪ್ರತಿಕ್ರಿಯಿಸಿ, ಅದು ಸ್ವಾಮೀಜಿ ಅವರ ವೈಯಕ್ತಿಕ ಅಭಿಪ್ರಾಯ. ಸಮಾಜದ ಅಭಿಪ್ರಾಯವನ್ನು ಅವರು ತಿಳಿಸಿದ್ದಾರೆ. ಅದರ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಬೇರೆಯವರು ಆ ಬಗ್ಗೆ ಮಾತನಾಡಬಹುದು ಎಂದಾದರೆ, ಸ್ವಾಮೀಜಿ ಮಾತನಾಡಬಾರದಾ? ಎಂದು ಪ್ರಶ್ನಿಸಿದರು. ಲಿಂಗಾಯತ ಸ್ವಾಮೀಜಿಗಳು ಲಿಂಗಾಯತರಿಗೆ ಸಿಎಂ ಸ್ಥಾನ ನೀಡಿ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, ಅವಕಾಶವಿದ್ದರೆ ಎಲ್ಲರನ್ನೂ ಸಿಎಂ, ಡಿಸಿಎಂ ಮಾಡಲಿ ಎಂದು ಚುಟುಕಾಗಿ ಹೇಳಿದರು.

click me!