T20 ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್-ಐರ್ಲ್ಯಾಂಡ್ ಟೀಮ್‌ಗಳಿಗೆ ಹಾಲಿನ ಪ್ರಾಯೋಜಕತ್ವ ಏತಕ್ಕೆ?: ಸಿಎಂಗೆ ಸುರೇಶ್ ಕುಮಾರ್ ಪತ್ರ!

By Govindaraj S  |  First Published Jun 26, 2024, 11:33 PM IST

ಕೆಎಂಎಫ್ ಈಗ ಹಾಲಿನ ನಡೆಯುತ್ತಿರುವ T20 ವಿಶ್ವಕಪ್ ಪಂದ್ಯಾವಳಿಯಲ್ಲಿ ಸ್ಕಾಟ್ಲಂಡ್ ಮತ್ತು ಐರ್ಲ್ಯಾಂಡ್ ದೇಶಗಳ ಕ್ರಿಕೆಟ್ ತಂಡಗಳಿಗೆ ಪ್ರಾಯೋಜಕತ್ವ ನೀಡಲು ಮುಂದಾಗಿರುವುದು ಏತಕ್ಕೆ? ಈ ಪ್ರಾಯೋಜಕತ್ವದಿಂದ ಹೈನುಗಾರಿಕೆ ಕಾರ್ಯಕ್ರಮ ಮಾಡುತ್ತಿರುವ ರೈತರಿಗೆ ಏನು ಉಪಯೋಗ ಎಂದು ಸಿಎಂಗೆ ಎಸ್‌.ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.
 


ಬೆಂಗಳೂರು (ಜೂ.26): ರಾಜ್ಯಾದ್ಯಂತ ನಂದಿನಿ ಹಾಲಿನ ಬೆಲೆ ಪ್ರತಿ ಲೀಟರ್​ಗೆ 2 ರೂಪಾಯಿ ಹೆಚ್ಚಿಸಲಾಗಿದೆ. 1 ಲೀಟರ್, ಅರ್ಧ ಲೀಟರ್ ಹಾಲಿನೊಂದಿಗೆ 50 ಎಂಎಲ್ ಹೆಚ್ಚುವರಿ‌ ಹಾಲು ನೀಡಲು ನಿರ್ಧರಿಸಲಾಗಿದೆ. ಪರಿಷ್ಕೃತ ದರ ಇಂದಿನಿಂದ ಜಾರಿಗೆ ಬಂದಿದೆ. ಈ ಕುರಿತು ಮಾಜಿ ಸಚಿವ ಎಸ್‌.ಸುರೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಏನಿದೆ?
ಮಾನ್ಯ ಶ್ರೀ ಸಿದ್ದರಾಮಯ್ಯನವರೇ...ನಮಸ್ಕಾರ. 

Tap to resize

Latest Videos

* ಕೆಎಂಎಫ್ ವತಿಯಿಂದ ಹಾಲಿನ ದರವನ್ನು ಪ್ರತಿ 500 ml ಗೆ ₹ 2 ಹೆಚ್ಚಿಸುವ ನಿರ್ಧಾರ ಮಾಧ್ಯಮಗಳ ಮೂಲಕ ತಿಳಿದು ಬಂದಿದೆ. ಈ ₹ 2 /- ಬದಲಿಗೆ 50 ML ಹಾಲನ್ನು ಅಧಿಕವಾಗಿ ಕೊಡಲಾಗುವುದೆಂದು ತಿಳಿಸಲಾಗಿದೆ. ಮುಖ್ಯಮಂತ್ರಿಗಳಾದ ತಾವೂ ಸಹ ಕೆಎಂಎಫ್ ನ ಈ ಪರೋಕ್ಷ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡು "ಬೆಲೆ ಏರಿಕೆ ಆಗಿಲ್ಲ"  ಎಂಬುದನ್ನು ಘೋಷಿಸಿದ್ದೀರಿ. 

* ಯಾವುದೇ ಗ್ರಾಹಕ 50 ML ಹಾಲು ಹೆಚ್ಚುವರಿ ಬೇಕೆಂದು ಕೇಳಿರಲಿಲ್ಲ. ಯಾರಿಗಾದರೂ ಇದು ಅಗತ್ಯವೆಂದು ತಿಳಿದು ಬಂದಿಲ್ಲ. ಆದರೂ ಈ ಘೋಷಣೆ ಆಗಿದೆ. 

* ಹೈನುಗಾರಿಕೆ ಕಾಯಕದಲ್ಲಿರುವ ರೈತರಿಗೆ ಹಾಲು ಹೆಚ್ಚು ಉತ್ಪಾದನೆ ಆಗುತ್ತಿರುವ ಈ ಸಮಯದಲ್ಲಿ ಹೆಚ್ಚಿನ ಬೆಂಬಲ ಬೆಲೆ ಸಿಗಬೇಕು ಎಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳುತ್ತೇವೆ. ಆದರೆ ಹೇಗೆ? 

ಕಿರಿಯ ವಯಸ್ಸಿನಲ್ಲಿ ಜನಸೇವೆ ಮಾಡುವ ಅವಕಾಶ ನನಗೆ ದೊರಕಿದೆ: ಸಂಸದೆ ಪ್ರಿಯಾಂಕಾ ಜಾರಕಿಹೊಳಿ

* 2023 ಜುಲೈ ತಿಂಗಳಲ್ಲಿ ಕೆಎಂಎಫ್ ರಾಜ್ಯ ಸರ್ಕಾರದ ಹಸಿರು ನಿಶಾನೆಯೊಂದಿಗೆ ಪ್ರತಿ ಲೀಟರ್ ಹಾಲಿಗೆ ₹3 ಹೆಚ್ಚಳ ಮಾಡಿತ್ತು. ಆಗಲೂ ಸಹ " ಇದು ಮೂರು ರೂಪಾಯಿ ದರ ಏರಿಕೆಯಲ್ಲ,   ಬದಲಿಗೆ 50ml ಹಾಲನ್ನು ಅಧಿಕವಾಗಿ ಕೊಡಲಾಗುವುದು" ಎಂದು ಹೇಳಲಾಗಿತ್ತು. ಆದರೆ ಕೆಲವೇ ತಿಂಗಳುಗಳ ನಂತರ ಆ 50 ml ಹೆಚ್ಚುವರಿ ಹಾಲು ಎಲ್ಲಿ ಮಾಯವಾಯಿತು ಯಾರಿಗೂ ಗೊತ್ತಿಲ್ಲ. (ಮಾಧ್ಯಮಗಳಲ್ಲಿ ಪ್ರಕಟ ವಾಗಿರುವ ಮಾಹಿತಿ) ಆ 50 ml ಮತ್ತು ಇವಾಗಿನ 50 ml ಸೇರಿದರೆ 600 ml ಹಾಲು ದೊರಕಬೇಕಲ್ಲವೇ? 

* ಮೇ 1, 2023 ರಂದು ಕಾಂಗ್ರೆಸ್ ನಾಯಕ ಶ್ರೀ ರಾಹುಲ್ ಗಾಂಧಿ ರವರು ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಚುನಾವಣಾ ಸಭೆಯಲ್ಲಿ ಮಾತನಾಡುತ್ತಾ ಹಾಲಿಗೆ ಸಬ್ಸಿಡಿಯನ್ನು ಪ್ರತಿ ಲೀಟರ್ ಗೆ ₹ 2 ರಷ್ಟು ಹೆಚ್ಚಿಸುವುದಾಗಿ ಘೋಷಿಸಿದ್ದರು. ಆದರೆ ಆಗ ಮತದಾರರಾಗಿದ್ದ ಜನತೆಗೆ ಗೊತ್ತಾಗಲಿಲ್ಲ, ಈ ಹೆಚ್ಚುವರಿ ಎರಡು ರೂಪಾಯಿಯನ್ನು ಗ್ರಾಹಕರಾದ ತಾವೇ ಹೊರಬೇಕಾಗುತ್ತದೆ ಎಂದು. 

* ಮುಖ್ಯಮಂತ್ರಿಗಳೇ, ತಮಗೆ ತಿಳಿದಿರುವಂತೆ ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿರುವ ಲಕ್ಷಾಂತರ ಮಕ್ಕಳು ಮತ್ತು ಮಹಿಳೆಯರಿಗೆ ಹಾಲು ಸುಲಭವಾಗಿ ಪ್ರೋಟೀನ್ ಒದಗಿಸುವ ಒಂದು ಆಹಾರ ಮೂಲ. ಆದರೆ ಒಂದೇ ವರ್ಷದಲ್ಲಿ ಎರಡು ಬಾರಿ ಹಾಲಿನ ದರವನ್ನು ಏರಿಸುವ ಮೂಲಕ ತಾವು ಬಡ ಗ್ರಾಹಕರ ಅದರಲ್ಲಿಯೂ ವಿಶೇಷವಾಗಿ ಕುಟುಂಬಗಳ ಕೊಳ್ಳುವಿಕೆಯ ಶಕ್ತಿಗೆ ಪೆಟ್ಟು ನೀಡುತ್ತಿದ್ದೀರಿ ಮತ್ತು ಅಗತ್ಯವಿರುವ ಪ್ರೋಟೀನ್ ಮೂಲವನ್ನು ನಿರಾಕರಿಸುತ್ತಿದ್ದೀರಿ. 

* ಕೆಎಂಎಫ್ ಆರ್ಥಿಕವಾಗಿ ದುರ್ಬಲವಾಗಿದ್ದರೆ ಈ ಏರಿಕೆಯನ್ನು ಸಮರ್ಥಿಸಿಕೊಳ್ಳಬಹುದಿತ್ತು. ಆದರೆ ಇದೇ ಕೆಎಂಎಫ್ ಈಗ ಹಾಲಿನ ನಡೆಯುತ್ತಿರುವ T20 ವಿಶ್ವಕಪ್ ಪಂದ್ಯಾವಳಿಯಲ್ಲಿ ಸ್ಕಾಟ್ಲಂಡ್ ಮತ್ತು ಐರ್ಲ್ಯಾಂಡ್ ದೇಶಗಳ ಕ್ರಿಕೆಟ್ ತಂಡಗಳಿಗೆ ಪ್ರಾಯೋಜಕತ್ವ ನೀಡಲು ಮುಂದಾಗಿರುವುದು ಏತಕ್ಕೆ? ಈ ಪ್ರಾಯೋಜಕತ್ವದಿಂದ ಹೈನುಗಾರಿಕೆ ಕಾರ್ಯಕ್ರಮ ಮಾಡುತ್ತಿರುವ ರೈತರಿಗೆ ಏನು ಉಪಯೋಗ? ಇದರಿಂದ ಸರ್ಕಾರಕ್ಕೆ ಯಾವ ರೀತಿ ಅನುಕೂಲವಾಗುತ್ತದೆ? ಇದರಿಂದ ನಮ್ಮ ರಾಜ್ಯದ ಹೈನುಗಾರಿಕೆಗೆ ಯಾವ ರೀತಿ ಪ್ರಯೋಜನವಾಗುತ್ತದೆ? ಇದರ ಬದಲು ಇದೇ ಹಣವನ್ನು ರೈತರಿಗೆ ವರ್ಗಾವಣೆ ಮಾಡಬಹುದಿತ್ತಲ್ಲವೇ? ಈ ಪ್ರಾಯೋಜಕತ್ವದಿಂದ ಯಾರಿಗೆ ಲಾಭವಾಗುತ್ತದೆ? 

* ಸರ್ಕಾರ ಪೆಟ್ರೋಲ್, ಡೀಸೆಲ್, ಇದೀಗ ಹಾಲು, ಮುಂದೆ ಕುಡಿಯುವ ನೀರು, ಈಗಾಗಲೇ ವಿದ್ಯುತ್ ದರ... ಈ ರೀತಿ ಎಲ್ಲಾ ಅವಶ್ಯಕತೆ ವಸ್ತುಗಳ ದರವನ್ನು ಏರಿಸುವ ಬದಲು ವೆಚ್ಚವನ್ನು ಕಡಿಮೆ ಮಾಡುವ ಕಡೆ ಏಕೆ ಗಮನ ಕೊಡುತ್ತಿಲ್ಲ? 

* "ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜೊತೆಗೆ ಮಲ್ಲಿಗೆ ಹೂವು" ಎಂಬ ಗಾದೆಯಂತೆ ಇಲ್ಲಿ ಬೆಲೆ ಏರಿಕೆ ಮಾಡಿ, ಬೇರೆ ದೇಶಗಳ ಕ್ರಿಕೆಟ್ ತಂಡಗಳಿಗೆ ಪ್ರಾಯೋಜಕತ್ವ ನೀಡಿ, ಸಾಮಾನ್ಯ ನಾಗರಿಕರ ಮೇಲೆ ಹೊಡೆತ ಕೊಡುವ ಬದಲು, ನಿಮ್ಮ ಪಕ್ಷದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳನ್ನು ರದ್ದು ಮಾಡಿ, ಅನಗತ್ಯ ಹೊರೆಯನ್ನು ಇಳಿಸಿ ರೈತರ ಸಹಾಯಕ್ಕೆ ಬರಬಹುದಲ್ಲವೇ? 

ಇಂಚಗೇರಿ ಸಾಂಪ್ರದಾಯದ ನಿಂಬಾಳ ಆಶ್ರಮದಲ್ಲಿ RSS ಮೋಹನ್‌ ಭಾಗವತ್‌ ವಾಸ್ತವ್ಯ: ಕಾರಣವೇನು?

* ಮಾನ್ಯರೇ. ನಿಮ್ಮ ಗ್ಯಾರೆಂಟಿ ಸಮಿತಿಗಳು, ನಿಮ್ಮ ರಾಜಕೀಯ ಸಲಹೆಗಾರರು, ನಿಮ್ಮ ರಾಜಕೀಯ ಕಾರ್ಯದರ್ಶಿಗಳು... ಇವೆಲ್ಲಾ ರಾಜ್ಯದ ಜನತೆಯ ಮೇಲೆ ಒಂದು ಹೊರೆ. ಇವರಿಗೆ ನೀಡಲಾಗುತ್ತಿರುವ ಭಾರಿ ಮೊತ್ತದ ವೇತನವನ್ನು ಕೊನೆಗೊಳಿಸಿ, ಹೈನುಗಾರಿಕೆ ಕಾಯಕದಲ್ಲಿ ತೊಡಗಿರುವ ನಮ್ಮ ನೇಗಿಲ ಯೋಗಿಗಳ ಸಹಾಯಕ್ಕೆ ದಯವಿಟ್ಟು ಬರಬೇಕೆಂದು ಆಗ್ರಹಿಸುತ್ತೇನೆ. ಮಹಿಳೆಯರ ಮತ್ತು ಮಕ್ಕಳ ಹಿತ ದೃಷ್ಟಿಯಿಂದ ಈ ಹಾಲಿನ ದರದ ಏರಿಕೆಯ ಪ್ರಸ್ತಾವನೆಯನ್ನು ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸುತ್ತಿದ್ದೇನೆ ಎಂದು ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

click me!