
ಬೆಂಗಳೂರು (ಜೂ.25): ವಿಧಾನ ಪರಿಷತ್ ಟಿಕೆಟ್ ಕೈತಪ್ಪಿದ್ದರಿಂದ ಕಾಂಗ್ರೆಸ್ ನಾಯಕತ್ವದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಸಚಿವ ಎಂ.ಆರ್.ಸೀತಾರಾಂ, ಪಕ್ಷ ತೊರೆಯುವ ಸೂಚನೆ ನೀಡಿದ್ದಾರೆ. ಶುಕ್ರವಾರ ಅರಮನೆ ಮೈದಾನದಲ್ಲಿ ಬಲಿಜ ಸಮುದಾಯದ ಮುಖಂಡರು ಸೇರಿದಂತೆ ಬೆಂಬಲಿಗರ ಬೃಹತ್ ಸಮಾಲೋಚನಾ ಸಭೆ ನಡೆಸಿದ ವೇಳೆ ಕಾಂಗ್ರೆಸ್ ನಾಯಕತ್ವದ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ ಅವರು, ಮುಂದಿನ ರಾಜಕೀಯ ನಡೆ ಬಗ್ಗೆ ಸಭೆಯ ಅಭಿಪ್ರಾಯ ಕೋರಿದರು. ಇದೇ ವೇದಿಕೆಯನ್ನು ಕಾಂಗ್ರೆಸ್ ವಿರುದ್ಧ ಟೀಕೆಗೆ ಬಳಸಿಕೊಂಡಿದ್ದು, ಪರೋಕ್ಷವಾಗಿ ಪಕ್ಷ ತೊರೆಯುವ ಇಂಗಿತವನ್ನೂ ರವಾನಿಸಿದಂತಾಯಿತು.
ಸಭೆಯ ನಂತರ ಮಾತನಾಡಿದ ಸೀತಾರಾಂ, ಕಾಂಗ್ರೆಸ್‌ನಿಂದ ನನಗೆ ಬೇರೆ ಬೇರೆ ಹಂತದಲ್ಲಿ 4 ಬಾರಿ ಅನ್ಯಾಯವಾಗಿದೆ. ಪಕ್ಷದ ಚುಕ್ಕಾಣಿ ಹಿಡಿದವರು ಮನುಷ್ಯತ್ವ, ಮಾನವೀಯತೆ ಇಟ್ಟುಕೊಳ್ಳಬೇಕು. ಬೇಸರಗೊಂಡವರ ಜೊತೆ ಮಾತನಾಡಬೇಕು. ಆದರೆ, ಪರಿಷತ್ ಟಿಕೆಟ್ ಕೈತಪ್ಪಿ ತಿಂಗಳಾದರೂ ಸೌಜನ್ಯಕ್ಕೂ ಯಾರೂ ಮಾತನಾಡಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಹುಮತ ಸರ್ಕಾರವನ್ನೂ ಬಿಜೆಪಿ ಉಳಿಸಲ್ಲ: ಎಚ್.ಡಿ.ಕುಮಾರಸ್ವಾಮಿ
ನಿರ್ಧಾರ ಇಷ್ಟವಾಗುತ್ತದೆ: ಸಿದ್ದರಾಮಯ್ಯ ನನ್ನನ್ನು ಈ ಹಿಂದೆ ಸಚಿವನನ್ನಾಗಿ ಮಾಡಿದ್ದು, ಎರಡು ವರ್ಷ ಸೇವೆ ಸಲ್ಲಿಸಿದ್ದೇನೆ. ಸಚಿವನಾಗಿದ್ದಾಗ ಸರ್ಕಾರದ ಹಣದಲ್ಲಿ ಕಾಫಿ, ಟೀ ಸಹ ಕುಡಿದಿಲ್ಲ. ಹೀಗೆ ಕೆಲಸ ಮಾಡಿದ ನನ್ನನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಹೀಗಾಗಿ ಒಂದು ತಿಂಗಳು ಯೋಚನೆ ಮಾಡಿ ಈ ಸಭೆ ನಡೆಸಿದ್ದೇನೆ. ಮುಖಂಡರು, ಪ್ರೀತಿ ಪಾತ್ರರ ಜೊತೆ ಇನ್ನೂ ಮಾತನಾಡಬೇಕಿದೆ. ಮುಂದಿನ ತಿಂಗಳು ನಿರ್ಧಾರ ಪ್ರಕಟಿಸುತ್ತೇನೆ. ನನ್ನ ನಿರ್ಧಾರ ಬಹುತೇಕರಿಗೆ ಇಷ್ಟವಾಗಲಿದೆ ಎಂದು ಮಾರ್ಮಿಕವಾಗಿ ನುಡಿದರು.
2009ರಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ನನಗೆ ಬಿ ಫಾರಂ ತಪ್ಪಿಸಲಾಯಿತು. ವೀರಪ್ಪ ಮೊಯ್ಲಿಯವರು ದೆಹಲಿಯಿಂದ ಹೈಜಂಪ್, ಲಾಂಗ್ ಜಂಪ್ ಮಾಡಿಕೊಂಡು ಬಂದು ಸ್ಪರ್ಧೆ ಮಾಡಿದರು. ಮುಂದಿನ ಚುನಾವಣೆಯಲ್ಲಿ ನಿಮಗೇ ಟಿಕೆಟ್ ನೀಡುತ್ತೇವೆ ಎಂದು ಮೊಯ್ಲಿ ಆಗ ಹೇಳಿದ್ದರು. ಆದರೆ ಪುನಃ ಅವರೇ ಸ್ಪರ್ಧಿಸಿ ಪರಾಭವಗೊಂಡರು ಎಂದು ಹಳೆಯದನ್ನು ಸ್ಮರಿಸಿ ಅಸಮಾಧಾನ ವ್ಯಕ್ತಪಡಿಸಿದರು.
ಪಕ್ಷಾಂತರಿಗಳು 10 ವರ್ಷ ಚುನಾವಣೆಗೆ ನಿಲ್ಲಬಾರದು: ಸಿದ್ದು
ಒಂದೇ ವರ್ಷದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ತೆಗೆದು ಪುತ್ರ ರಕ್ಷಾ ರಾಮಯ್ಯ ಅವರಿಗೂ ಅನ್ಯಾಯ ಮಾಡಲಾಗಿದೆ. ನನಗೆ ಅಸಮಾಧಾನ ಆಗಿದೆ ಎಂದು ಇದಾದ ಐದು ತಿಂಗಳಲ್ಲಿ ಸಮಾಧಾನಪಡಿಸಲು ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿದರು ಎಂದು ಟೀಕಿಸಿದರು. ಮಲ್ಲೇಶ್ವರ, ಚಿಕ್ಕಬಳ್ಳಾಪುರ ಮತ್ತಿತರ ವಿಧಾನ ಸಭಾ ಕ್ಷೇತ್ರಗಳಿಂದ ಸಾವಿರಾರು ಸಂಖ್ಯೆಯಲ್ಲಿ ಅರಮನೆ ಮೈದಾನಕ್ಕೆ ಆಗಮಿಸಿದ್ದ ಸ್ವಪಕ್ಷದ ಮುಖಂಡರು, ಕಾರ್ಯಕರ್ತರು, ಬಲಿಜ ಸಮುದಾಯದವರು, ‘ಮುಂದೆ ಕೈಗೊಳ್ಳುವ ನಿಮ್ಮ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ’ ಎಂದು ಸಾಮೂಹಿಕವಾಗಿ ಎದ್ದು ನಿಂತು ಚಪ್ಪಾಳೆ ತಟ್ಟಿಸೀತಾರಾಂ ಅವರಿಗೆ ಒಕ್ಕೊರಲಿನ ಬೆಂಬಲ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.