ನುಡಿದಂತೆ ನಡೆಯೋದು ಕಾಂಗ್ರೆಸ್‌ ಜಾಯಮಾನ: ಎಂ.ಬಿ.ಪಾಟೀಲ

By Girish Goudar  |  First Published Apr 12, 2023, 1:21 PM IST

ಸುಳ್ಳು ಹೇಳುವುದು, ಪೊಳ್ಳು ಭರವಸೆಗಳನ್ನು ನೀಡುವುದು ನನಗೆ ಗೊತ್ತಿಲ್ಲ. ಆಡಿದ ಮಾತುಗಳನ್ನು ಪಾಲಿಸುತ್ತೇನೆ. ನೀಡಿದ ಭರವಸೆಗಳನ್ನು ಈಡೇರಿಸುತ್ತೇನೆ. ಜನಸಾಮಾನ್ಯರು, ರೈತರು, ಯುವಕರು, ಮಹಿಳೆಯರು ಸೇರಿದಂತೆ ಎಲ್ಲ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಈ ಮೂಲಕ ಮತದಾರರ ಋುಣ ತೀರಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದೇನೆ: ಎಂ.ಬಿ.ಪಾಟೀಲ 


ವಿಜಯಪುರ(ಏ.12): ನುಡಿದಂತೆ ನಡೆಯುವುದು, ಕೊಟ್ಟಭರವಸೆಗಳನ್ನು ಈಡೇರಿಸುವುದು ನಮ್ಮ ಜಾಯಮಾನವಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು. ಬಬಲೇಶ್ವರ ತಾಲೂಕಿನ ಬಬಲಾದಿ, ಕೆಂಗಲಗುತ್ತಿ, ಖಿಲಾರಹಟ್ಟಿ, ಕಾಖಂಡಕಿ ಮತ್ತು ಅಗಸನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದ ಅವರು ಗ್ರಾಮಸ್ಥರೊಂದಿಗೆ ಮಾತನಾಡಿದರು.

ಸುಳ್ಳು ಹೇಳುವುದು, ಪೊಳ್ಳು ಭರವಸೆಗಳನ್ನು ನೀಡುವುದು ನನಗೆ ಗೊತ್ತಿಲ್ಲ. ಆಡಿದ ಮಾತುಗಳನ್ನು ಪಾಲಿಸುತ್ತೇನೆ. ನೀಡಿದ ಭರವಸೆಗಳನ್ನು ಈಡೇರಿಸುತ್ತೇನೆ. ಜನಸಾಮಾನ್ಯರು, ರೈತರು, ಯುವಕರು, ಮಹಿಳೆಯರು ಸೇರಿದಂತೆ ಎಲ್ಲ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಈ ಮೂಲಕ ಮತದಾರರ ಋುಣ ತೀರಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದೇನೆ. ಬಬಲಾದಿ ಶ್ರೀ ಸದಾಶಿವ ಮುತ್ಯಾನ ಆಶೀರ್ವಾದ ನನ್ನ ಮೇಲಿದೆ. ಮತಕ್ಷೇತ್ರದ ಜನರ ಸಂಪೂರ್ಣ ಬೆಂಬಲವೂ ನನಗಿದೆ. ಹೀಗಾಗಿ, ಎಲ್ಲ ಅಭಿವೃದ್ಧಿ ಕಾರ್ಯಗಳು ಯಶಸ್ವಿಯಾಗುತ್ತಿವೆ ಎಂದು ಅವರು ಹೇಳಿದರು.

Latest Videos

undefined

Karnataka Assembly Elections 2023: ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟ..!

ಕೆಬಿಜೆಎನ್‌ಎಲ್‌ ಭೂಸ್ವಾ​ಧೀನ ಪರಿಹಾರದಲ್ಲಿ ವಿಜಯಪುರ ಜಿಲ್ಲೆ ರೈತರಿಗೆ ಅನ್ಯಾಯವಾಗಿದೆ. ಮಾರ್ಗಸೂಚಿ ಬೆಲೆಯಲ್ಲಿ ತಾರತಮ್ಯ ಮಾಡಲಾಗಿದ್ದು, ಕನ್ಸೆಂಟ್‌ ಹೆಸರಿನಲ್ಲಿ ಜಿಲ್ಲೆಯ ರೈತರು ಒಪ್ಪಿಗೆ ನೀಡಿದರೆ ಮೂರ್ಖರಾಗಬೇಕಾಗುತ್ತದೆ. ಈ ಅನ್ಯಾಯದ ಕುರಿತು ನಾನು ಸಿಎಂ ಬೊಮ್ಮಾಯಿ ಎದುರಿನಲ್ಲಿಯೇ ಆಕ್ಷೇಪ ವ್ಯಕ್ತಪಡಿಸಿದ್ದೇನೆ. ಕಾಂಗ್ರೆಸ್‌ ಸರಕಾರ ಅಧಿ​ಕಾರಕ್ಕೆ ಬಂದ ನಂತರ ಈ ತಾರತಮ್ಯವನ್ನು ಹೋಗಲಾಡಿಸಿ ನ್ಯಾಯ ಒದಗಿಸುತ್ತೇವೆ ಎಂದರು.

ಕಾಂಗ್ರೆಸ್‌ ಅ​ಧಿಕಾರಕ್ಕೆ ಬಂದ ನಂತರ ಪ್ರತಿ ವರ್ಷ 40 ಸಾವಿರ ಕೋಟಿಯಂತೆ ಐದು ವರ್ಷಗಳಲ್ಲಿ .2 ಲಕ್ಷ ಕೋಟಿ ವೆಚ್ಚ ಮಾಡಿ ಕರ್ನಾಟಕದ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಮೂಲಕ ರೈತರಿಗಾಗಿ ಹೊಸ ಯೋಜನೆಗಳನ್ನು ರೂಪಿಸುತ್ತೇವೆ ಎಂದು ಹೇಳಿದರು.

ಸೀಮೆಎಣ್ಣೆ ಹೊರೆಯನ್ನು ತಪ್ಪಿಸಲು ಕೇಂದ್ರ ಸರಕಾರ ಬಡವರಿಗೆ ಅಡುಗೆ ಅನಿಲ ಒಲೆಗಳನ್ನು ಉಚಿತವಾಗಿ ನೀಡಿತು. ಆದರೆ, ಈಗ ಗ್ಯಾಸ್‌ ಸಿಲಿಂಡರ್‌ ಬೆಲೆಯನ್ನು ಮೂರು ಪಟ್ಟು ಹೆಚ್ಚಿಸಿ ಬಡವರ ಸಂಕಷ್ಟದ ಗಾಯದ ಮೇಲೆ ಬರೆ ಎಳೆದಿದೆ. ಇದರಿಂದ ಬಡವರು ಮನೆಯಲ್ಲಿ ಅಡುಗೆ ಮಾಡಲು ಕೂಡ ಹೆಚ್ಚಿನ ಬೆಲೆ ತೆರಬೇಕಾಗಿದೆ ಎಂದು ಹೇಳಿದರು.

ಡಬಲ್‌ ಎಂಜಿನ್‌ ಸರ್ಕಾರದಲ್ಲಿ ಬಡವರಿಗಿಲ್ಲ ಮನೆ: ಎಂ.ಬಿ.ಪಾಟೀಲ

ಡಬಲ್‌ ಎಂಜಿನ್‌ ಸರಕಾರದಲ್ಲಿ ಬಿಜೆಪಿ ನಾಯಕರು ನೀಡಿದ ಶೇ 10ರಷ್ಟು ಭರವಸೆಗಳೂ ಈಡೇರಿಲ್ಲ. ಆದರೆ, ಕಾಂಗ್ರೆಸ್‌ ಸರಕಾರದಲ್ಲಿ ನಾವು ನೀಡಿದ ಶೇ 95 ರಷ್ಟು ಭರವಸೆ ಮತ್ತು ಯಾವುದೇ ಪ್ರಸ್ತಾವ ಮಾಡದ 30 ಹೊಸ ಭರವಸೆಗಳನ್ನು ಈಡೇರಿಸಿದ್ದೇವೆ. ನಾವು ಅಧಿ​ಕಾರಕ್ಕೆ ಬಂದ ನಂತರ ಬೆಲೆ ಏರಿಕೆ, ನಿರುದ್ಯೋಗ ಮತ್ತು ಸಂಕಷ್ಟದಲ್ಲಿರುವ ಜನರಿಗೆ ಆರ್ಥಿಕ ಹೊರೆ ಕಡಿಮೆ ಮಾಡಲು ಗೃಹಲಕ್ಷ್ಮೇ, ಅನ್ನಭಾಗ್ಯ, ಯುವನಿ​ಧಿ ಗ್ಯಾರಂಟಿ ಸ್ಕೀಂ ಗಳನ್ನು ಜಾರಿಗೆ ತರುತ್ತೇವೆ. ಈ ಮೂಲಕ ಕೊಟ್ಟ ಮಾತನ್ನು ಪಾಲಿಸುತ್ತೇವೆ ಎಂದು ಎಂ.ಬಿ.ಪಾಟೀಲ ಹೇಳಿದರು. ಈ ಸಂದರ್ಭದಲ್ಲಿ ಬಬಲಾದಿ, ಕೆಂಗಲಗುತ್ತಿ, ಖಿಲಾರಹಟ್ಟಿ, ಕಾಖಂಡಕಿ, ಅಗಸನಹಳ್ಳಿ ಗ್ರಾಮಸ್ಥರು ಇದ್ದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!