ಕನಕಪುರವನ್ನು ಬೆಂಗಳೂರಿಗೆ ಸೇರಿಸಿದರೆ ತಾವು ಬೆಂಗಳೂರಿನವರು ಎಂದು ಹೇಳಿಕೊಳ್ಳಬಹುದು ಎನ್ನುವ ಆಲೋಚನೆ ಅವರದ್ದಾಗಿರಬಹುದು. ಕನಕಪುರವನ್ನು ಬೆಂಗಳೂರಿಗೆ ಸೇರಿಸಿದರೆ ಆಸ್ತಿಯ ಮೌಲ್ಯ ಹತ್ತುಪಟ್ಟು ಹೆಚ್ಚಾಗಲಿದೆ ಎನ್ನುವ ಮೂಲಕ ನಿಮ್ಮ ಕೃಷಿ ಭೂಮಿಯನ್ನು ಮಾರಿಕೊಳ್ಳುವಂತೆ ಪರೋಕ್ಷವಾಗಿ ರೈತರಿಗೆ ಕರೆ ನೀಡಿದ್ದಾರೆ. ಕನಕಪುರವನ್ನು ಕನಕಪುರವಾಗಿ ಅಭಿವೃದ್ಧಿಪಡಿಸಲಾಗದ ಡಿ.ಕೆ. ಶಿವಕುಮಾರ್ ಅವರಿಗೆ ಈ ಆಲೋಚನೆ ಬಂದಿರುವುದು ಹಾಸ್ಯಾಸ್ಪದ ಎಂದ ಅಶ್ವತ್ಥ ನಾರಾಯಣ
ರಾಮನಗರ(ಅ.27): ಬೆಂಗಳೂರಿಗೂ ತಮಗೂ ಏನು ಸಂಬಂಧ ಎಂದು ಕೇಳಿದಾಗಲೆಲ್ಲ ಉತ್ತರಿಸಲಾಗದೇ ತಡಬಡಿಸುತ್ತಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಬೆಂಗಳೂರಿನ ಜತೆ ಸಂಬಂಧ ಕಲ್ಪಿಸಿಕೊಳ್ಳಲು ಶಾರ್ಟ್‌ಕಟ್ ಮಾರ್ಗ ಅನುಸರಿಸಿದಂತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕನಕಪುರವನ್ನು ಬೆಂಗಳೂರಿಗೆ ಸೇರಿಸಿದರೆ ತಾವು ಬೆಂಗಳೂರಿನವರು ಎಂದು ಹೇಳಿಕೊಳ್ಳಬಹುದು ಎನ್ನುವ ಆಲೋಚನೆ ಅವರದ್ದಾಗಿರಬಹುದು. ಕನಕಪುರವನ್ನು ಬೆಂಗಳೂರಿಗೆ ಸೇರಿಸಿದರೆ ಆಸ್ತಿಯ ಮೌಲ್ಯ ಹತ್ತುಪಟ್ಟು ಹೆಚ್ಚಾಗಲಿದೆ ಎನ್ನುವ ಮೂಲಕ ನಿಮ್ಮ ಕೃಷಿ ಭೂಮಿಯನ್ನು ಮಾರಿಕೊಳ್ಳುವಂತೆ ಪರೋಕ್ಷವಾಗಿ ರೈತರಿಗೆ ಕರೆ ನೀಡಿದ್ದಾರೆ. ಕನಕಪುರವನ್ನು ಕನಕಪುರವಾಗಿ ಅಭಿವೃದ್ಧಿಪಡಿಸಲಾಗದ ಡಿ.ಕೆ. ಶಿವಕುಮಾರ್ ಅವರಿಗೆ ಈ ಆಲೋಚನೆ ಬಂದಿರುವುದು ಹಾಸ್ಯಾಸ್ಪದ ಎಂದಿದ್ದಾರೆ.
ಹಿಟ್ ಅಂಡ್ ರನ್ ಬೇಡ, ಅಸೆಂಬ್ಲೀಲಿ ಚರ್ಚಿಸೋಣ: ಎಚ್‌ಡಿಕೆಗೆ ಡಿಕೆಶಿ ತಿರುಗೇಟು
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬೆಂಗಳೂರಿಂದ ಕನಕಪುರ ಮಾರ್ಗವಾಗಿ ದಿಂಡಿಗಲ್ಲಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಅಗಲೀಕರಣವಾಗಿತ್ತಿದ್ದು, ಕನಕಪುರದ ಆರ್ಥಿಕ ಚಟುವಟಿಕೆಗೆ ವೇಗ ಸಿಗಲಿದೆ. ಜಲ ಜೀವನ್ ಮಿಷನ್ ಅಡಿ ರಾಮನಗರದ ಮನೆ ಮನೆಗೂ ಕುಡಿಯುವ ನೀರು ಸೌಲಭ್ಯ ಕಲ್ಪಿಸಿದ್ದೇವೆ.
ಪ್ರಧಾನಿಗಳ ನಾಯಕತ್ವದಲ್ಲಿ ಬೆಂಗಳೂರು ಸ್ಯಾಟಲೈಟ್ ಟೌನ್‌ಶಿಪ್ ರಿಂಗ್ ರೋಡ್ ನಿರ್ಮಾಣವಾಗುತ್ತಿದೆ. ಸಬ್ ಅರ್ಬನ್ ರೈಲು ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.ಕನಕಪುರದ ಜನತೆಯ ಜೀವನ ಮಟ್ಟ ಸುಧಾರಿಸಲು ಅಭಿವೃದ್ಧಿಯ ಮಾರ್ಗ ಹಿಡಿಯುವುದನ್ನು ಬಿಟ್ಟು ಈ ರೀತಿಯ ಅಡ್ಡ ಮಾರ್ಗ ಹಿಡಿದರೆ ಕಬ್ಬಾಳಮ್ಮ ಮೆಚ್ಚುವಳೇ? ನಮ್ಮ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯ ಸುಧಾರಣೆಗೆ ಆದ್ಯತೆ ನೀಡಿದ್ದೇವೆ. ಕನಕಪುರವನ್ನು ಬೆಂಗಳೂರಿಗೆ ಸೇರಿಸುವುದರಿಂದ ಭೂಮಿಯ ಮೌಲ್ಯ ಹೆಚ್ಚಾಗುತ್ತದೆ ಎಂಬ ಕಪೋಲ ಕಲ್ಪಿತ ಆಲೋಚನೆಯನ್ನು ಮುಗ್ಧ ಜನರ ತಲೆಯಲ್ಲಿ ತುಂಬಿ ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ. ಬದಲಾಗಿ ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಸಲಹೆ ನೀಡಿದ್ದಾರೆ.
ಕೆಂಗಲ್ ಹನುಮಂತಯ್ಯ, ಶಿವಕುಮಾರ ಸ್ವಾಮೀಜಿಗಳು, ಬಾಲಗಂಗಾಧರನಾಥ ಸ್ವಾಮೀಜಿಯವರು ಜನಿಸಿದ ಪುಣ್ಯ ಭೂಮಿಯಲ್ಲಿ ಸೇವೆ ಮಾಡುವ ಸದವಕಾಶವನ್ನು ಈ ಭಾಗದ ಜನತೆ ತಮಗೆ ಕಲ್ಪಿಸಿದ್ದಾರೆ. ಆದರೆ, ನಾವು ರಾಮನಗರದವರೇ ಅಲ್ಲ ಎನ್ನುವ ನಿಮ್ಮ ಮಾತನ್ನು ರಾಮದೇವರ ಬೆಟ್ಟದ ಮೇಲಿರುವ ಆ ಶ್ರೀರಾಮಚಂದ್ರನು ಮೆಚ್ಚುವನೇ? ಎಂದು ಅಶ್ವತ್ಥ ನಾರಾಯಣ ಪ್ರಶ್ನಿಸಿದ್ದಾರೆ.